Kodagu News: ಟಾಟಾ ಸಂಸ್ಥೆಯಿಂದ ಕುಗ್ರಾಮದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಹೈಟೆಕ್ ಲ್ಯಾಬ್

Jul 8, 2022, 6:31 PM IST

ಕೊಡಗು (ಜು. 08): ಅದೊಂದು ಕುಗ್ರಾಮ, ಆದ್ರೆ ಇದೀಗ ಆದೇ ಕುಗ್ರಾಮದ ನಿರುದ್ಯೋಗಿ ಯುವಕರು ವಿಶ್ವದರ್ಜೆಯ ಉದ್ಯೋಗಿಗಳಾಗುವತ್ತ ಹೆಜ್ಜೆ ಹಾಕಿದ್ದಾರೆ. ಅದಕ್ಕೆ ಕಾರಣ ಟಾಟಾ ಸಂಸ್ಥೆಯ (Tata) ನೆರವು. ಸಮಾಜ ಸೇವೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿರೋ ಟಾಟಾ ಸಂಸ್ಥೆ ಇದೀಗ ಕೊಡಗಿನ (Kodagu) ಕುಗ್ರಾಮಕ್ಕೆ ನೀಡಿರೋ ಕೊಡುಗೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಕೊಡಗು ಜಿಲ್ಲೆಯ ಸೋಮವಾರಪೇಟೆ (Somavarapete) ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿರುವ ಟಾಟಾ ಸಂಸ್ಥೆ ಭರ್ತಿ 35 ಕೋಟಿ ರೂ ವೆಚ್ಚದಲ್ಲಿ ಅಟೊಮೊಬೈಲ್ ಪ್ರಾಕ್ಟಿಕಲ್ ಲ್ಯಾಬ್ (Automobile Practical Lab) ನಿರ್ಮಾಣ ಮಾಡಿದೆ. 

ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಾಹನಗಳ ಸಂಪೂರ್ಣ ತಂತ್ರಜ್ಞಾವನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಟಾಟಾ ಸಂಸ್ಥೆ ಇಂತಹ ಹಲವು ಲ್ಯಾಬ್‌ಗಳನ್ನು ಆರಂಭಿಸಿದ್ದು ಸ್ವತಃ ತಮ್ಮ ಸಿಬ್ಬಂದಿಯನ್ನೇ ತರಬೇತುದಾರರನ್ನಾಗಿ ನೇಮಿಸಿದೆ.  ಕೇವಲ ಪ್ರಾಯೋಗಿಕ ಲ್ಯಾಬ್‌ಗಳು ಮಾತ್ರವಲ್ಲ, ಈ ತರಬೇತಿ ಸಂಸ್ಥೆಗೆ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್‌ಗಳನ್ನು (Computer Lab) ಕೂಡ ಕೊಡುಗೆಯಾಗಿ ನೀಡಿದೆ. 

ಇದನ್ನೂ ಓದಿ: ಭಾರತದ ಅತೀದೊಡ್ಡ ವಿಮಾನನಿಲ್ದಾಣ, ನೋಯ್ಡಾ ಏರ್ ಪೋರ್ಟ್ ನಿರ್ಮಿಸಲಿರುವ ಟಾಟಾ!

ಒಂದೇ ಬಾರಿ 30 ವಿದ್ಯಾರ್ಥಿಗಳು ಕಲಿಯಬಹುದಾದ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಇಲ್ಲಿದ್ದು ವಿದ್ಯಾರ್ಥಿಗಳು ವಾಹನಗಳ ಡಿಸೈನ್ (Vehicle Design) ಸೇರಿದಂತೆ ಇನ್ನಿತರ ಕಲೆಗಳನ್ನು ಕಲಿಯಬಹುದಾಗಿದೆ. ಇದುವರೆಗೆ ಕೇವಲ ಪುಸ್ತಕಗಳಲ್ಲಿ ಡ್ರಾಯಿಂಗ್ ನೋಡಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇದೀಗ ವಿದೇಶಗಳಲ್ಲಿ ಕಲಿಯುವಂತೆ ಪ್ರಾಯೋಗಿಕವಾಗಿ ಲ್ಯಾಬ್ ಮತ್ತು ಕಂಪ್ಯೂಟರ್‌ಗಳ ಮೂಲಕ ಕಲಿಯಲು ಸಾಧ್ಯವಾಗಿದೆ.

ಈ ಸೌಕರ್ಯದಿಂದಾಗಿ ಈ ಗ್ರಾಮ ಮಾತ್ರವಲ್ಲದೆ ಕೊಡಗಿನ ವಿವಿಧ ಗ್ರಾಮಗಳ ಬಡ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಆಟೊಮೊಬೈಲ್ ಇಂಡಸ್ಟ್ರಿಯನ್ನ ಆಧುನಿಕವಾಗಿ ಕಲಿಯುವಂತಾಗಿದೆ. ಆದ್ರೆ ಈ ಶಾಲೆಯಲ್ಲಿ ಮೂಲ ಸೌಕರ್ಯ ಸಂಪೂರ್ಣ ಗಬ್ಬೆದ್ದು ಹೋಗಿದೆ. ಶಾಲಾ ಆವರಣ ಸ್ವಚ್ಛತೆ ಇಲ್ಲದೆ ಅಸಹ್ಯವಾಗಿದೆ. ಟಾಟಾ ಸಂಸ್ಥೆ ಇಷ್ಟೊಂದು ಕೋಟಿ ವೆ್ಚ್ಚ ಮಾಡಿದ ಸಂದರ್ಭ ತರಬೇತಿ ಸಂಸ್ಥೆ ಸಿಬ್ಬಂದಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಆಧ್ಯತೆ ನೀಡಬೇಕಾಗಿದೆ.