Feb 14, 2022, 12:20 PM IST
ಬೆಂಗಳೂರು (ಫೆ. 14): ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ಬುಧವಾರದಿಂದ ರಜೆ ನೀಡಲಾಗಿದ್ದ ಪ್ರೌಢಶಾಲಾ ಹಂತದ 9 ಮತ್ತು 10ನೇ ತರಗತಿಗಳು ಸೋಮವಾರದಿಂದ ರಾಜ್ಯಾದ್ಯಂತ ಪೊಲೀಸ್ ಕಟ್ಟೆಚ್ಚರದೊಂದಿಗೆ ಪುನಾರಂಭಗೊಳ್ಳಲಿವೆ.
ಹಿಜಾಬ್, ಕೇಸರಿ ಶಾಲು ವಿವಾದದಿಂದಾಗಿ ಶಾಲಾ, ಕಾಲೇಜುಗಳು ಬಂದ್ ಆಗಬಾರದು. ಯಾವುದೇ ಮಕ್ಕಳು ಹಿಜಾಬ್, ಕೇಸರಿ ಶಾಲು ಧರಿಸಿ ತರಗತಿಗೆ ಬರಬಾರದು. ನಿಗದಿತ ಸಮವಸ್ತ್ರ ತೊಟ್ಟು ಮಾತ್ರ ಶಾಲೆಗೆ ಬರಬೇಕೆಂಬ ಹೈಕೋರ್ಟ್ ಮಧ್ಯಂತರ ಆದೇಶದಂತೆ ಹಂತ ಹಂತವಾಗಿ ಶಾಲಾ, ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.
ಶಿವಮೊಗ್ಗದಲ್ಲಿ ಹೈಸ್ಕೂಲ್ ಸುತ್ತಮುತ್ತ ಬಂದೋಬಸ್ತ್ ವಹಿಸಲಾಗಿದೆ. 144 ಸೆಕ್ಷನ್ ಜಾರಿಯಲ್ಲಿದೆ. ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಎಂದು ಪೊಲೀಸ್ ಇಲಾಖೆ ತಿಳಿಸಿದೆ.