Nov 28, 2021, 9:29 AM IST
ಕೊಪ್ಪಳ (ನ. 28): ಆನೆಗೊಂದಿ ಪ್ರದೇಶಗಳಲ್ಲಿನ ರಾಮಾಯಣದ (Ramayana) ಕುರುಹುಗಳನ್ನು ಜೀರ್ಣೋದ್ಧಾರದ ನೆಪದಲ್ಲಿ ಧ್ವಂಸಗೊಳಿಸಲಾಗುತ್ತಿದೆ. ಶ್ರೀರಾಮ ಹಾಗೂ ಹನೂಮಂತ ಭೇಟಿಯಾಗಿದ್ದರು ಎನ್ನಲಾದ ಸ್ಥಳ, ಶ್ರೀರಾಮನಿಗಾಗಿ ಶಬರಿ ಕಾಯ್ದ ಶ್ರದ್ಧಾ ಕೇಂದ್ರ, ಶಬರಿ ಗುಹೆ, ಪಂಪಾಸರೋವರ ಸೇರಿದಂತೆ ವಿವಿಧ ಸ್ಮಾರಕಗಳ ಮೇಲೀಗ ಬುಲ್ಡೋಜರ್‌ಗಳು ಓಡಾಡುತ್ತಿವೆ. ಹನುಮನ (ಆಂಜನೇಯ) ಜನ್ಮಸ್ಥಳದ ಬಗ್ಗೆ ತಿರುಪತಿ ಟ್ರಸ್ಟ್ ಕ್ಯಾತೆ ತೆಗೆದಿರುವ ಸಂದರ್ಭದಲ್ಲಿಯೇ ಪುರಾತತ್ವ ಇಲಾಖೆಯು ಈ ಕುರುಹುಗಳನ್ನೆಲ್ಲ ಕೆಡವಿ, ಮರುನಿರ್ಮಾಣಕ್ಕೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಹಂಪಿ-ಆನೆಗೊಂದಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಶ್ರೀ ಮಹಾಲಕ್ಷ್ಮೇ ದೇವಸ್ಥಾನ, ಶಬರಿ ಗುಹೆ, ಶ್ರೀರಾಮನಿಗಾಗಿ ಶಬರಿ ಕಾದ ಸ್ಥಳ ಹಾಗೂ ವಿಶೇಷವಾಗಿ ಪುರಾಣಪ್ರಸಿದ್ಧ ನಾಲ್ಕು ಸರೋವರಗಳಲ್ಲಿ ಒಂದಾದ ಪಂಪಾಸರೋವರ ಇವುಗಳನ್ನು ಜೀರ್ಣೋದ್ಧಾರ ಮಾಡುವ ನೆಪದಲ್ಲಿ ಸಂಪೂರ್ಣ ನಾಶ ಮಾಡಲಾಗುತ್ತಿದೆ.