Apr 3, 2023, 5:55 PM IST
ಬೆಳಗಾವಿ (ಏ.03): ಯಾವುದೇ ಕಾರಣಕ್ಕೂ ಸರ್ಕಾರದ ಮೀಸಲಾತಿ ಆದೇಶವನ್ನು ಒಪ್ಪೋದಿಲ್ಲ. ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು. ಮುಂದೆ ಸರ್ಕಾರ ಬದಲಾದಾಗ ನಮಗೆ ನ್ಯಾಯ ಸಿಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಕಾರ್ಯಕಾರಣಿ ಸಭೆಯನ್ನು ಮಾಡಿದ ಪಂಚಮಸಾಲಿ ಮುಖಂಡರು ಮಾ. 27 ರಂದು ಸರ್ಕಾರದ ಸುತ್ತೋಲೆ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು. ಮುಂದೆ ಸರ್ಕಾರ ಬದಲಾದಾಗ ನಮಗೆ ನ್ಯಾಯ ಸಿಗುತ್ತದೆ. ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ರು ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಮಾ.27ರಂದು ಒಂದೇ ಬಾರಿಗೆ 2 ಸುತ್ತೋಲೆ ಹೊರಡಿಸಿದ್ದಾರೆ. 2ಡಿ ಮೀಸಲಾತಿಯಲ್ಲಿ 52 ಜಾತಿಗಳಿವೆ ಎಲ್ಲರಿಗೂ ಸೇರಿಸಿ ಘೋಷಣೆ ಮಾಡಿದ್ದಾರೆ ಎಂದರು.
ದುಃಖದಿಂದ ಕಣ್ಣೀರು ಹಾಕಿದ ಸ್ವಾಮೀಜಿ: ಪಂಚಮಸಾಲಿ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಕೇಳಿದ್ದೆವು. ಕೇವಲ 2 ಪರ್ಸೆಂಟ್ ಮೀಸಲಾತಿ ಹೆಚ್ಚಳ ಮಾಡುವ ನಾಟಕ ಮಾಡಿದ್ದಾರೆ. ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವ ಕೆಟ್ಟವರು ಲಿಂಗಾಯತರಲ್ಲ. ಕೆಲವು ರಾಜಕೀಯ ಕುತಂತ್ರಗಳು ನಾಟಕ ಮಾಡಿದ್ದಾರೆ. ವಿಜಯೋತ್ಸವ ಆಚರಣೆ ಮಾಡುತ್ತೇವೆ ಎನ್ನುತ್ತಾರೆ ನಾವಿದನ್ನು ಒಪ್ಪೋದಿಲ್ಲ. ವಿಜಯೋತ್ಸವ ಮಾಡುವುದಿಲ್ಲ ಸ್ವಾಮೀಜಿ ದುಃಖದಿಂದ ಕಣ್ಣೀರು ಹಾಕಿದ್ದಾರೆ. ಅವರಿಗೆ ಸಂತೋಷ ಆಗಿಲ್ಲ ಸ್ವಾಮೀಜಿ ನಮ್ಮ ಜೊತೆ ಇದ್ದಾರೆ ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.