Jan 17, 2022, 10:32 AM IST
ಬೆಂಗಳೂರು (ಜ. 17): ಕೊರೋನಾ 3ನೇ ಅಲೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂಗೆ (Weekend Curfew) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಜನಸಂಚಾರ ಕಡಿಮೆಯಾಗಿತ್ತು.
ಭಾನುವಾರದ ಬಾಡೂಟಕ್ಕೆ ಮಾಂಸದ ಮಾರುಕಟ್ಟೆಗಳಲ್ಲಿ ಜನಸಂದಣಿಯಾಗಿದ್ದು ಬಿಟ್ಟರೆ ಬೇರೆಲ್ಲೂ ದೊಡ್ಡ ಮಟ್ಟದ ಜನಸಂಚಾರ ಕಂಡುಬಂದಿಲ್ಲ. ಮಾತ್ರವಲ್ಲದೆ ಶುಕ್ರವಾರ ರಾತ್ರಿಯಿಂದಲೇ ಅನಾವಶ್ಯಕವಾಗಿ ರಸ್ತೆಗಿಳಿದವರಿಗೆ ಪೊಲೀಸರು ಎಚ್ಚರಿಕೆ, ದಂಡದ ಬಿಸಿ ಮುಟ್ಟಿಸಿದ್ದರ ಫಲ ಭಾನುವಾರದ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಸೋಮವಾರ ಬೆಳಗ್ಗೆ ಕರ್ಫ್ಯೂ ಅಂತ್ಯವಾಗಲಿದ್ದು, ಎಂದಿನಂತೆ ವಹಿವಾಟು ನಡೆಯಲಿದೆ.
ಇನ್ನು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಬಹುತೇಕ ನಗರಗಳಲ್ಲಿ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು. ತುರ್ತು ಹಾಗೂ ಅಗತ್ಯ ಸೇವೆಯ ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳು ಪ್ರಯಾಣಿಕರು ಇಲ್ಲದೆ ಖಾಲಿ ಹೊಡೆದೆವು.