Dec 21, 2024, 7:04 PM IST
ಮಂಗಳೂರು (ಡಿ.21): ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿ ಟೂರಿಸಂ ಟಚ್ ಕೊಟ್ಟಿದೆ. ಮಂಗಳೂರಿನ ಪಕ್ಷಿ ನೋಟ ಸವಿಯಲು ಹೆಲಿಕಾಪ್ಟರ್ ನಲ್ಲಿ ಕರಾವಳಿ ದರ್ಶನವಾಗಲಿದೆ. ಡಿ.21ರಿಂದ ಡಿ.31ರವರೆಗೆ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ನಗರದಲ್ಲಿ ಹೆಲಿಕಾಪ್ಟರ್ ಸುತ್ತಾಟ ಇರಲಿದೆ. ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಹೆಲಿ ಟೂರಿಸಂಗೆ ದ.ಕ ಜಿಲ್ಲಾಡಳಿತ ಚಾಲನೆ ದೊರಕಿದೆ. ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರಿಂದ ಹೆಲಿ ಟೂರಿಸಂಗೆ ಚಾಲನೆ ನೀಡಿದ್ದು, ಸ್ವತಃ ಹೆಲಿಕಾಪ್ಟರ್ ನಲ್ಲಿ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ ಮಂಗಳೂರು ಸುತ್ತು ಹಾಕಿದ್ದಾರೆ. ಜೊತೆಗೆ ದ.ಕ ಡಿಸಿ ಮುಲ್ಲೈ ಮುಗಿಲನ್ ಹಾಗೂ ಕಮಿಷನರ್ ಜೊತೆ ಸಿಟಿ ರೌಂಡ್ಸ್ ಹೋಗಿದ್ದಾರೆ. 6 ರಿಂದ 7 ನಿಮಿಷಗಳ ಮಂಗಳೂರು ನಗರದಲ್ಲಿ ಹೆಲಿಕಾಪ್ಟರ್ ರೌಂಡ್ಸ್ ನಡೆದಿದೆ. ಸಾರ್ವಜನಿಕರಿಗೆ ನಗರ ಹಾಗೂ ಕಡಲ ಕಿನಾರೆ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸಲಾಗಿದೆ.