Jan 19, 2022, 11:26 AM IST
ಬೆಂಗಳೂರು (ಜ. 19): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಬರೋಬ್ಬರಿ 41 ಸಾವಿರಕ್ಕೆ ಏರಿಕೆಯಾಗಿದ್ದು, 20 ಜನರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಪಾಸಿಟಿವಿಟಿ ದರ ಶೇ.22ರಷ್ಟುವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷಕ್ಕೆ ತಲುಪಿದೆ. ರಾಜ್ಯದಲ್ಲಿ ಮಂಗಳವಾರ 41,457 ಮಂದಿ ಸೋಂಕಿತರಾಗಿದ್ದು, 20 ಸೋಂಕಿತರು ಸಾವಿಗೀಡಾಗಿದ್ದಾರೆ. 8,353 ಮಂದಿ ಗುಣಮುಖರಾಗಿದ್ದು, 2,50,381 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಮವಾರ 2.17 ಲಕ್ಷ ಇದ್ದ ಸೋಂಕು ಪರೀಕ್ಷೆಗಳು ಮಂಗಳವಾರ 1.85 ಲಕ್ಷಕ್ಕೆ ಇಳಿಕೆಯಾಗಿದೆ. ಆದರೂ, ಸೋಂಕಿತರ ಸಂಖ್ಯೆ ಬರೋಬ್ಬರಿ 14,301 (ಸೋಮವಾರ 27,156 ಕೇಸ್) ಹೆಚ್ಚಳವಾಗಿವೆ.
ಇದನ್ನೂ ಓದಿ: Covid 19 Crisis: ಕೊರೋನಾ ಪತ್ತೆಹಚ್ಚಲು ತರಬೇತಿ ಪಡೆದ ನಾಯಿಗಳನ್ನು ನಿಯೋಜಿಸಿದ ಅಮೆರಿಕಾ!
ಇನ್ನು ರಾಜಧಾನಿ ಬೆಂಗಳೂರಿನಲ್ಲಿ 25,595 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಂದೇ ದಿನಕ್ಕೆ 10 ಸಾವಿರಕ್ಕೂ ಅಧಿಕ ಮಂದಿಯಲ್ಲಿ (ಸೋಮವಾರ 15,947) ಸೋಂಕು ಹೆಚ್ಚಳವಾಗಿದೆ. 215 ದಿನಗಳಲ್ಲಿಯೇ (ಜೂ.4ನಂತರ) ಅತಿ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಒಂದೇ ದಿನಕ್ಕೆ ರಾಜ್ಯದಲ್ಲಿ ಶೇ.53 ರಷ್ಟು, ಬೆಂಗಳೂರಿನಲ್ಲಿ ಶೇ.64ರಷ್ಟುಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಾ ಸಾಗಿದ್ದು, ಶೇ.22.3ರಷ್ಟುದಾಖಲಾಗಿದೆ. ಅಂದರೆ, ಸೋಂಕು ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.