BIG 3: ವಿದ್ಯಾರ್ಥಿಗಳ ಹಸಿವು ನೀಗಿಸುವ ನೌಕರರ ಹೊಟ್ಟೆಗೆ ಹೊಡೆದ ಅಧಿಕಾರಿಗಳು!

Mar 16, 2023, 8:22 PM IST

ದಾವಣಗೆರೆ (ಮಾ.16): ಅವರೆಲ್ಲಾ ಸಾವಿರಾರು ವಿದ್ಯಾರ್ಥಿಗಳ ಹಸಿವು ನೀಗಿಸುವ ನೌಕರರು. ತಮಗೆ ಎಷ್ಟೇ ಕಷ್ಟ ಇದ್ರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಆಗದಂತೆ ನೋಡಿಕೊಂಡವರು. ಆದ್ರೆ ಇಂತವರ ಬದುಕಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಯಡವಟ್ಟಿನಿಂದ ನಿತ್ಯ ಕಣ್ಣೀರು ಹಾಕುದ್ದಾರೆ. ಅಷ್ಟಕ್ಕೂ ಯಾರದು? ಏನಿದು ಸ್ಟೋರಿ ಅಂತೀರಾ? ನೋಡಿ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರೋ ಇವರೆಲ್ಲಾ ದಾವಣಗೆರೆ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರೋ ಹೊರಗುತ್ತಿಗೆ ಅಡುಗೆ ಸಿಬ್ಬಂದಿಗಳು. ದಾವಣಗೆರೆ ನಗರದ 15 ಕ್ಕು ಹೆಚ್ಚು ಹಾಸ್ಟಲ್‌ಗಳಲ್ಲಿ ಕಾರ್ಯ ನಿರ್ವಹಿಸುವ 600ಕ್ಕು ಹೆಚ್ಚು ಕಾರ್ಮಿಕರಿಗೆ ಕಳೆದ 6 ತಿಂಗಳಿನಿಂದ ವೇತನ ಬಂದಿಲ್ಲ. ಇವರೆಲ್ಲ ಬಿಕೆಆರ್ ಏಜೆನ್ಸಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಈ ಬಗ್ಗೆ ಏಜೆನ್ಸಿಯನ್ನು ಕೇಳಿದ್ರೆ ಇಲಾಖೆಯಿಂದ ಬಿಲ್ ಆಗಿಲ್ಲ ಅಂತಾ ಜಾರಿಕೊಳ್ಳುತ್ತಿದ್ದಾರಂತೆ. ಇನ್ನು ಇಲಾಖೆಯ ಅಧಿಕಾರಿಗಳನ್ನು ಕೇಳಿದ್ರೆ ನೋಡೋಣ ಮಾಡೋಣ ಅನ್ನೋ ಉಡಾಫೆ ಉತ್ತರ ನೀಡ್ತಿದ್ದಾರಂತೆ. ಇದರಿಂದಾಗಿ ಕಾರ್ಮಿಕರ ಪಾಡು ಹೇಳತೀರಾದಾಗಿದೆ. ಇನ್ನು ಇಷ್ಟೆಲ್ಲಾ ಆದ್ರೂ ಕೂಡ ಅಡುಗೆ ಸಿಬ್ಬಂಧಿಗಳು ಮಾತ್ರ ತಮ್ಮ ನಿತ್ಯದ ಕಾರ್ಯವನ್ನ ನಿಲ್ಲಿಸಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಅನ್ನೋ ದೃಷ್ಟೀಯಿಂದ ಬೆಳಗಿನ ಜಾವ 4 ಗಂಟೆಗೆ ತಮ್ಮ ಅಡುಗೆ ಕಾರ್ಯವನ್ನ ಆರಂಭಿಸುತ್ತಾರೆ. ದಿನನಿತ್ಯ 8 ರಿಂದ 12 ತಾಸು ಕೆಲಸ ಮಾಡುವ ಈ  ಹೊರಗುತ್ತಿಗೆ ನೌಕರರಿಗೆ 6 ತಿಂಗಳಿನಿಂದ ಸಂಬಳ ಇಲ್ಲಾ ಅಂದ್ರೆ ನಿಜಕ್ಕೂ ಬೇಸರದ ಸಂಗತಿ ಆಗಿದೆ. ಹೀಗಾಗಿ ಇತ್ತ ಸಂಬಳವು ಇಲ್ಲದೇ, ಕೆಲಸವನ್ನು ಬಿಡಲು ಆಗದೇ ಅತಂತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ದಾವಣಗೆರೆ ನಗರದಲ್ಲಿ 15 ಹಾಸ್ಟಲ್‌ಗಳಲ್ಲಿ ಹೊರಗುತ್ತಿಗೆ ಕಾರ್ಮಿಕರು ಕೆಲಸ ಬಂದ್ ಮಾಡಿದ್ರೆ ಅವತ್ತು ವಿದ್ಯಾರ್ಥಿಗಳು ಉಪವಾಸ ಇರಬೇಕಾಗುತ್ತದೆ. ಸಮಸ್ಯೆ ಬಗೆಹರಿಸಿ ಎಂದು  ಹೋರಾಟ ಕೂಡ ಮಾಡಿ ಈಗಾಗಲೇ ಅಧಿಕಾರವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ. ಏಜೆನ್ಸಿಯ ಕಿರುಕುಳ, ಅಧಿಕಾರಿಗಳ ಆಸಡ್ಡೆಯಿಂದ ಬರುವ ಸಂಬಳಕ್ಕಾಗಿ ಕಣ್ ಕಣ್ ಬಡಿಯುತ್ತಿದ್ದಾರೆ. ಕುಟುಂಬ ನಿರ್ವಹಣೆಗೂ ನಿತ್ಯ ಸಂಕಷ್ಟ ಪಡುತ್ತಿರುವ ಇವರು ದಯಮಾಡಿ ನಮಗೆ ಸಂಬಳ ನೀಡಿ ಬದುಕೋಕೆ ಬಿಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಹಸಿವು ನೀಗಿಸುವ ಇವರ  ಬದುಕು ಮಾತ್ರ ಸಂಬಳವಿಲ್ಲದೆ ಉಪವಾಸ ಕೂರುವಂತಾಗಿದೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇವರಿಗೆ ಸಂಬಳ ನೀಡಿ ನೆಮಮ್ದಿ ಬದುಕು ಕೊಡಿ ಅನ್ನೋದು ಬಿಗ್-3 ಆಗ್ರಹ.