Party Rounds: ಶೆಟ್ಟರ್‌ರನ್ನು ಸೋಲಿಸಲು ಬಿಜೆಪಿ ನಾಯಕರಿಂದ ಹುಬ್ಬಳ್ಳಿಯಲ್ಲಿ ಸೀಕ್ರೆಟ್‌ ಮೀಟಿಂಗ್!

Apr 27, 2023, 8:43 PM IST

ಬೆಂಗಳೂರು (ಏ.27): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಬಿಜೆಪಿ ಬಿಟ್ಟಿರುವುದರಿಂದ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಣತಂತ್ರ ಹೆಣೆದಿದ್ದಾರೆ. ಯಾವುದೇ ಕಾರಣಕ್ಕೂ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್‌ ಗೆಲ್ಲಬಾರದು. ಆ ರೀತಿ ರಣನೀತಿ ರೂಪಿಸಿ. ಕ್ಷೇತ್ರ ಬಿಜೆಪಿ ಬಿಟ್ಟು ಹೋಗದಂತೆ ನೋಡಿಕೊಳ್ಳಿ ಎಂದು ಸ್ಥಳೀಯ ಬಿಜೆಪಿ ಮುಖಂಡರಿಗೆ ಟಾಸ್ಕ್‌ ನೀಡಿದ್ದಾರೆ. ಕ್ಷೇತ್ರ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಜೋಶಿ ಹೆಗಲಿಗೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಪ್ರವಾಸದ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ರಾತ್ರಿಯಷ್ಟೇ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ 170 ಜನ ಮುಖಂಡರ ಸಭೆ ನಡೆಸಿದ್ದ ಶಾ, ಮಂಗಳವಾರ ಬೆಳಗ್ಗೆ ತೇರದಾಳಕ್ಕೆ ತೆರಳುವ ಮುನ್ನ ಮತ್ತೆ ಆಂತರಿಕ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಕೆಲವೇ ಕೆಲ ಪ್ರಮುಖ ಮುಖಂಡರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.