ಶಿರಹಟ್ಟಿಯಲ್ಲಿ ಜನಸಂಕಲ್ಪ ಯಾತ್ರೆ: ಕಾಂಗ್ರೆಸ್‌ಗೆ ನಾಚಿಕೆ ಆಗ್ಬೇಕು ಎಂದ ಸಿಎಂ!

Nov 8, 2022, 6:18 PM IST

ಗದಗ (ನ.8): ಗದಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿಯಾಗಿ ಜನಸಂಕಲ್ಪ ಯಾತ್ರೆ ನಡೆದಿದೆ. ಶಿರಹಟ್ಟಿಯಲ್ಲಿ ಮಂಗಳವಾರ ನಡೆದ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ರಾಜಕೀಯ ಜೀವನದ ಅನುಭವದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಯಾವುದೇ ಸಮಾವೇಶಕ್ಕೆ ಇಷ್ಟು ಜನ ಸೇರಿರಲಿಲ್ಲ. ನಿಮ್ಮ ಸ್ಪಂದನೆಗೆ ನಾವು ಆಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಇಡೀ ದೇಶದ ಪ್ರತಿ ಹಳ್ಳಿ ಹಳ್ಳಿಗೂ ವಿದ್ಯುತ್‌ ಸಂಪರ್ಕವನ್ನು ನೀಡಬೇಕು ಎನ್ನುವ ಸಂಕಲ್ಪವನ್ನು ಯಾರಾದರೂ ಮಾಡಿದ್ದರೆ ಅದು ನರೇಂದ್ರ ಮೋದಿ ಮಾತ್ರ. ಇಂದು ಗ್ರಾಮೀಣ ಪ್ರದೇಶದ ಪ್ರತಿ ಮನೆಮನೆಗೆ ಕುಡಿಯುವ ನೀರನ್ನು ಜಲ ಜೀವನ್‌ ಮಿಷನ್‌ ಯೋಜನೆಯ ಅಡಿಯಲ್ಲಿ ನೀಡಲಾಗಿದೆ. 

ಜಾರಕಿಹೊಳಿ ಹಿಂದೂ ಹೇಳಿಕೆಯನ್ನು ಖಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ 27 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷ ಮತ್ತೆ 25 ಲಕ್ಷ ಮನೆಗಳಿಗೆ ಸಂಪರ್ಕ ನೀಡಲಿದ್ದೇವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಸಂಪರ್ಕ ನೀಡುವ ಯೋಜನೆಯನ್ನು ಹಿಂದಿನ ಯಾವ ಪ್ರಧಾನಿ ಕೂಡ ಮಾಡಿರಲಿಲ್ಲ. ಕಳೆದ 50 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ಗೆ ದೇಶದ ಪ್ರತಿ ಮನೆ ಮನೆಗೆ ನೀರು ಕೊಡಲು ಸಾಧ್ಯವಾಗದೇ ಇರೋದು ನಾಚಿಕೆಗೇಡಿನ ವಿಚಾರ ಎಂದು ಬೊಮ್ಮಾಯಿ ಹೇಳಿದ್ದಾರೆ.