Dec 18, 2021, 10:33 AM IST
ಉತ್ತರ ಕನ್ನಡ (ಡಿ. 18): ಮುಂಡಗೋಡು (Mundagodu) ತಾಲೂಕಿನ ಮಳಗಿ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ನಿಲಯದಲ್ಲಿ (Hostel) ರಾತ್ರಿಯಾಗುತ್ತಿದ್ದಂತೇ ಇಪ್ಪತ್ತೈದಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಮಲಗಿ ಬೆಳಗಾಗುತ್ತಿದ್ದಂತೇ ತಮ್ಮ ಟ್ರಂಕ್ ಹಾಗೂ ಬ್ಯಾಗ್‌ಗಳನ್ನು ಒಂದಡೆ ಜಮಾಯಿಸಿ ಅಲ್ಲಿಯೇ ಶೌಚ ಮುಗಿಸಿ ಅದೇ ಕೊಠಡಿಯಲ್ಲಿ (Room) ಪಾಠ ಕಲಿಯಬೇಕಾದ ದುಸ್ಥಿತಿ ಇದೆ. ಬಾಲಕರ ಪರಿಸ್ಥಿತಿಯಂತೂ ಇನ್ನಷ್ಟು ಶೋಚನೀಯ. ದೇವಸ್ಥಾನದ (Temple) ಸಭಾ ಭವನದಲ್ಲಿ ಮಲಗಿ ಒಂದು ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಬರಬೇಕಾದ ಪರಿಸ್ಥಿತಿ.
ಕಳೆದ ಐದು ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆ ಬಾಡಿಗೆ ಕಟ್ಟಡ ಪಡೆದು ವಸತಿ ಶಾಲೆ ಪ್ರಾರಂಭಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಇದೀಗ ಚಿಕ್ಕ ಕೊಠಡಿಯಲ್ಲಿ ರಾತ್ರಿ ಮಲಗಿದರೆ ಬೆಳಗ್ಗೆ ಅದೇ ಕೊಠಡಿ ಶಾಲೆಯಾಗಿ ಬದಲಾಗುತ್ತದೆ. ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ಕೂಡಾ ನೆಲದಲ್ಲೇ ಕುಳ್ಳಿರಿಸಿ ಪಾಠ ಮಾಡಬೇಕಾದ ಸ್ಥಿತಿ ಇಲ್ಲಿದ್ದು, ಇಲ್ಲಿನ ಮಕ್ಕಳು ಮುಜುಗರ ಪಟ್ಟುಕೊಂಡು ಪಾಠ ಕೇಳುವ ಪರಿಸ್ಥಿತಿಯಿದೆ. ಇಲ್ಲಿನ ಪರಿಸ್ಥಿಯಿಂದ ಬೇಸತ್ತು ಈ ಬಾರಿ 55 ವಿದ್ಯಾರ್ಥಿಗಳು ಶಾಲೆ ಬಿಟ್ಟು ಬೇರೆಡೆ ತೆರಳಿದ್ದಾರೆ.
ಈ ವಸತಿ ಶಾಲೆಯಲ್ಲಿ ಆರರಿಂದ ಹತ್ತನೇ ತರಗತಿವರೆಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಸ್ಥಳದ ಅಭಾವದಿಂದ ಪಕ್ಕದಲ್ಲೇ ಇರುವ ಚಿಕ್ಕ ಮನೆಯನ್ನು ಬಾಡಿಗೆ ಪಡೆದು ಆರರಿಂದ ಏಳನೇ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಹುಡುಗರಿಗೆ ದೇವಸ್ಥಾನದ ಸಭಾಭವನವೇ ಹಾಸ್ಟಲ್ ಆಗಿದ್ದು, ಇಲ್ಲಿಯೇ ತಂಗಿ ಒಂದು ಕಿಲೊಮೀಟರ್ ಸಂಚರಿಸಿ ವಸತಿ ನಿಲಯಕ್ಕೆ ತೆರಳಿ ಪಾಠ ಕೇಳಬೇಕಿದೆ. ಇಲಾಖೆ ಈ ಮಕ್ಕಳಿಗೆ ಬೇಕಾದ ಯಾವುದೇ ವ್ಯವಸ್ಥೆ ಕಲ್ಪಿಸದೇ ವಿದ್ಯಾರ್ಥಿಗಳನ್ನು ಶೋಚನೀಯವಾಗಿ ನಡೆಸಿಕೊಂಡಿದೆ. ಈ ಕಾರಣದಿಂದ ತಮಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಸರಕಾರದಲ್ಲಿ ಮನವಿ ಮಾಡಿದ್ದಾರೆ.