Aug 14, 2019, 5:21 PM IST
ಶಿವಮೊಗ್ಗ (ಆ.14) ಬರ್ಮಾದ ರಂಗೂನ್ ಮೂಲದ , ಬ್ರಿಟೀಷರ ಕಾಲದಲ್ಲಿ ಮಿಲಿಟರಿ ಮ್ಯಾನ್ ಆಗಿದ್ದ ಎ.ಸುಬ್ಬನಾಯ್ಡು ರವರ ಪತ್ನಿ ಎ.ಎಸ್.ಗಂಗಮ್ಮ ಎಂಬ ಹಣ್ಣು ಹಣ್ಣು ಅಜ್ಕಿಗೆ ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅವರಿಗೆ 5ಲಕ್ಷ ರೂ ಪರಿಹಾರದ ಜೊತೆಗೆ ಉಚಿತ ಸೈಟ್, ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ..
ಇದೆಲ್ಲ ನಡೆದಿದ್ದು ಸುವರ್ಣ ನ್ಯೂಸ್ ಪರಿಶ್ರಮದಿಂದ. ರಂಗೂನ್ ಮೂಲದವರಾದ ಗಂಗಮ್ಮರಿಗೆ 95 ವರ್ಷ ವಯಸ್ಸು. ಅಂಗವಿಕಲ ಮಗ 45 ರ ಶ್ರೀನಿವಾಸ ಜೊತೆ ಶಿವಮೊಗ್ಗದ ಮಂಜುನಾಥ ಟಾಕೀಸಿನ ಹತ್ತಿರ ಬಾಡಿಗೆ ಮನೆ ಹಿಡಿದು ವಾಸವಾಗಿದ್ದಾರೆ. ಮೊನ್ನೆ ತುಂಗಾ ನದಿಯ ನೆರೆ ಹಾವಳಿಗೆ ಸಿಲುಕಿ ನಲುಗಿದ ಕುಟುಂಬಗಳಲ್ಲಿ ಇದೂ ಒಂದು ಕುಟುಂಬ. ಗಂಗಮ್ಮನಿಗೆ 1 ಸಾವಿರ ರೂ ವೃದ್ಯಾಪ ವೇತನ , ಮಗನಿಗೆ 1200 ರೂ ಅಂಗವಿಕಲ ವೇತನ ಒಟ್ಟು ಸೇರಿ 2200 ರೂ. ಪಡೆದೇ ಬದುಕುತ್ತಿರುವ ಕುಟುಂಬ ಮಗನಿಗೆ 17 ವರ್ಷಗಳ ಹಿಂದೆ ಪ್ಯಾರಲೈಸಿಸ್ ಆಗಿರುವುದರಿಂದ ಮಗನಿಗೆ ಉಣ್ಣಿಸುವ- ತೊಳೆಯುವ ಜವಾಬ್ದಾರಿಯೂ ಈ ಹಣ್ಣು ಹಣ್ಣು ಅಜ್ಜಿಯದೇ.
ಬಾಡಿಗೆ ಸಾವಿರ ರೂಪಾಯಿ, ಕರೆಂಟ್ ಬಿಲ್ ಇನ್ನೂರು, ಎರಡು ಸಾವಿರದಲ್ಲುಳಿದ ಹಣದಲ್ಲಿ ಜೀವನ. ಇಂತಹ ಸಮಯದಲ್ಲೇ ಬಂದೆರಗಿದ್ದು ಪ್ರವಾಹ! ಇದ್ದಿದ್ದನ್ನೂ ಕಿತ್ತುಕೊಂಡುಬಿಟ್ಟಿತ್ತು,
ಗಂಡ ಸುಬ್ಬಾನಾಯ್ಡು ಬ್ರಿಟೀಷ್ ಸೈನ್ಯದಲ್ಲಿದ್ದಾಗ ಈ ಗಂಗಮ್ಮ ದೇಶ- ವಿದೇಶಗಳನ್ನೆಲ್ಲ ಸುತ್ತಿದ್ದಾರೆ. ಗಾಂಧಿಯವರನ್ನು, ನೆಹರೂರವರನ್ನು ನೋಡಿದ ಬಗ್ಗೆ ವಿವರಿಸುತ್ತಾರೆ. ಸುಭಾಷ್ ಚಂದ್ರ ಬೋಸ್ ರವರ ಜೊತೆಗೆ ಬಹಳಷ್ಟು ಬಾರಿ ಮಾತಾಡಿದ್ದರ ಬಗ್ಗೆಯೂ ಹೇಳುತ್ತಾರೆ.
ಜಪಾನ್, ಚೈನಾ ಯುದ್ಧಗಳ ವಿವರ ಕೊಡುತ್ತಾರೆ. ಬಾಂಬ್ ಗಳು ಬಿದ್ದಾಗಲೇ ಕಣ್ಣೀರು ಹಾಕಿರಲಿಲ್ಲ. ಈಗ ಹೀಗಾಗಿದೆ ಎಂದು ಕಣ್ಣೀರು ಸುರಿಸಿ ತನ್ನ ಮಗನ ಸೇವೆಗಾದರೂ ಬದುಕಿರಬೇಕಿದೆ ಎಂದು ಹೇಳುತ್ತಾರೆ. ಗಂಗಮ್ಮರವೊಳಗಿನ ಜೀವ ಪ್ರೀತಿ ಸಣ್ಣದಲ್ಲ. 95 ರ ವಯಸ್ಸಲ್ಲೂ ಓಡಾಡುವ, ಸ್ಪಷ್ಟವಾಗಿ ಮಾತಾಡುವ ಯೋಧನ ಪತ್ನಿ ಗಂಗಮ್ಮ ಎಲ್ಲರಿಗೂ ಸ್ಫೂರ್ತಿದಾಯಕರು..