Apr 9, 2022, 10:51 AM IST
ಕೊಡಗು (ಏ. 09): ಹುಲಿ ಸೆರೆಗೆ ಕಾರ್ಯಚರಣೆಯಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು, ಹುಲಿಸೆರೆಗಾಗಿ ಮೂರು ಸಾಕಾನೆಗಳ ಕಸರತ್ತು, ವಾರ ಕಳೆದರೂ ಹುಲಿ ಸೆರೆಹಿಡಿಯದ ಇಲಾಖೆ ವಿರುದ್ದ ಗ್ರಾಮಸ್ಥರ ಆಕ್ರೋಶ. ಇದು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದ ಸದ್ಯದ ಪರಿಸ್ಥಿತಿ.
ವಾರದ ಹಿಂದೆ ಇದೇ ಗ್ರಾಮದಲ್ಲಿ ಕಾರ್ಮಿಕ ಗಣೇಶ್ ಎಂಬಾತನನ್ನು ಹುಲಿ ಕೊಂದು ಹಾಕಿತ್ತು.ಆ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಹಾಗೂ ರೈತ ಸಂಘಟನೆ ಹೆಬ್ಬುಲಿ ಸೆರೆಗಾಗಿ ಮೂರು ದಿನಗಳ ಗಡುವು ನೀಡಿತ್ತು.ಆದರೆ ವಾರ ಕಳೆದರೂ ಹುಲಿ ಮಾತ್ರ ಸೆರೆಸಿಕ್ಕಿಲ್ಲ. ಕಂಡಂಗಾಲ ಗ್ರಾಮದಲ್ಲಿ ಶಿಬಿರ ಹೂಡಿರುವ ಅರಣ್ಯ ಇಲಾಖೆ ತಮ್ಮ ಸಿಬ್ಬಂದಿಗಳನ್ನು ಐದು ತಂಡಗಳಾಗಿ ವಿಂಗಡಣೆ ಮಾಡಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 35 ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ.
ಹುಲಿಯ ಹೆಜ್ಜೆ ಗುರುತು ಪತ್ತೆಯಾಗುವುದರೊಂದಿಗೆ ಒಂದು ದಿನ ಕ್ಯಾಮರಾದಲ್ಲೂ ಹುಲಿಯ ಚಿತ್ರ ಸೆರೆಯಾಗಿತ್ತು.ಆದರೆ ಇದುವರೆಗೂ ಅದನ್ನು ಸೆರೆಹಿಡಿಯಲು ಮಾತ್ರ ಸಾಧ್ಯವಾಗಿಲ್ಲ.ನಮ್ಮ ಪ್ರಯತ್ನವನ್ನು ಮುಂದುವರೆಸಲಾಗುತ್ತಿದ್ದು, ಕಾ ರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಇನ್ನೂ ರುದ್ರಗುಪ್ಪೆ,ಕುಟ್ಟಂದಿ,ಕುಂದಾ ಹಾಗೂ ಸುತ್ತಮತ್ತಲಿನ ಗ್ರಾಮದಲ್ಲಿ ಆತಂಕದ ವಾತಾವರಣವಿದೆ.ಕಾರಣ ಹುಲಿಯ ಹೆಜ್ಜೆ ಗುರುತು ಅಲ್ಲಲ್ಲಿ ಗೋಚರವಾಗುತ್ತಿದೆ.ಕೆಲವು ಕಾರ್ಮಿಕರು ಮತ್ತೆ ಹುಲಿಯನ್ನು ನೋಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕಾರ್ಮಿಕರು ಯಾರೂ ತೋಟದ ಕೆಲಸಕ್ಕೆ ಬರುತ್ತಿಲ್ಲ. ಇನ್ನೂ ವಿದ್ಯಾರ್ಥಿಗಳು ಕೂಡ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಈ ರೀತಿ ಕಾರ್ಯಾಚರಣೆ ನಡೆಸಿದರೆ ಹುಲಿ ಸೆರೆಯಾಗುವುದಿಲ್ಲ.ಅಲ್ಲಲ್ಲಿ ಬೋನು ಇಟ್ಟು ಅದಕ್ಕೆ ಹಂದಿಗಳನ್ನು ಕಟ್ಟಿಹಾಕಿದರೆ ಮಾತ್ರ ಹುಲಿ ಸಿಗಲು ಸಾಧ್ಯ ಎನ್ನುತ್ತಿರುವ ಗ್ರಾಮಸ್ಥರು ಇಲಾಖೆಯ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದೇ ರೀತಿ ಕಾರ್ಯಾಚರಣೆ ನಡೆದರೆ ಮುಂದೆ ತಮ್ಮ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.