Koppal: 6 ತಿಂಗಳಿನಿಂದ ಬಡರೋಗಿಗಳಿಗೆ ನೀಡುವ ಪ್ರೋತ್ಸಾಹಧನಕ್ಕೆ ಕೊಕ್ಕೆ

Feb 10, 2022, 10:28 AM IST

ಕೊಪ್ಪಳ (ಫೆ. 10): ಕೊರೋನ ಸೋಂಕು ಅಬ್ಬರ ಆರಂಭವಾದಾಗಿನಿಂದ ಆರೋಗ್ಯ ಕ್ಷೇತ್ರದ ಹೊರತಾದ ಎಲ್ಲ ಯೋಜನೆಗೂ ಅನುದಾನ ಕಡಿಮೆ ಮಾಡಿದೆ. ಆದ್ರೆ, ಇದೀಗ ಸ್ವತಃ ಆರೋಗ್ಯ ಕ್ಷೇತ್ರದಲ್ಲೂ ಹಣ ಕೊರತೆ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕ್ಷಯ ರೋಗ ನಿರ್ಮೂಲನಾ ಯೋಜನೆಯಡಿ ಬಡ ರೋಗಿಗಳಿಗೆ ಸರ್ಕಾರ ನೀಡುವ ಪ್ರೋತ್ಸಾಹಧನಕ್ಕೆ ಕೊಕ್ಕೆ ಬಿದ್ದಿದೆ.

ಕರೋನ ಹರಡುವಿಕೆ ತಡೆಗೆ ಸರ್ಕಾರ ಲಾಕ್ ಡೌನ್ ಮಾಡುತ್ತಿದ್ದು, ಬೊಕ್ಕಸಕ್ಕೆ ನಿರೀಕ್ಷಿತ ಆದಾಯ ಬಂದಿಲ್ಲ. ಮತ್ತೊಂದೆಡೆ ಸೋಂಕಿತರ ಚಿಕಿತ್ಸೆಗೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನವನ್ನ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿದೆ. ಈ ಕಾರಣಕ್ಕೆ ಇತರೇ ಇಲಾಖೆಯ ಯೋಜನೆಗೆ ನೀಡುವ ಅನುದಾನಕ್ಕೆ ಸರ್ಕಾರ ಕೊಕ್ಕೆ ಹಾಕಿದೆ ಎಂಬ ಮಾತುಗಳು ಇತ್ತೀಚೆಗೆ ಸಾಮಾನ್ಯವಾಗಿವೆ.  ಆದ್ರೆ, ಇದೀಗ ಆರೋಗ್ಯ ಇಲಾಖೆಗೆ ಅನುದಾನದ ಕೊರತೆ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿವೆ.

ರಾಷ್ಟ್ರೀಯ ಆರೋಗ್ಯ ಮಿಷನ್ ನಡಿ ಕೆಲಸ ನಿರ್ವಹಿಸುವ ಕ್ಷಯ ರೋಗ ನಿರ್ಮೂಲನಾ ಯೋಜನೆಗೆ ಅನುದಾನದ ಕೊರತೆ ಉಂಟಾಗಿದ್ದು, ಬಡ ಕ್ಷಯ ರೋಗಿಗಳಿಗೆ ಸರ್ಕಾರ ನೀಡುತ್ತಿದ್ದ ಪೌಷ್ಠಿಕ ಆಹಾರಕ್ಕೂ ಕನ್ನ ಬಿದ್ದಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬ ಕ್ಷಯ ರೋಗಿಗೆ ಪ್ರತಿ ತಿಂಗಳಿಗೆ 500 ರೂಪಾಯಿಯಂತೆ 6 ತಿಂಗಳು ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತದೆ. ಕ್ಷಯ ರೋಗಿಗಳೀಗೆ ಚಿಕತ್ಸೆಗಿಂತ ಪೌಷ್ಠಿಕ ಆಹಾರದ ಅಗತ್ಯ ಹೆಚ್ಚಿದ್ದು, ಪೌಷ್ಠಿಕ ಆಹಾರ ಪದಾರ್ಥ ಖರೀದಿಗೆ ಸರ್ಕಾರ ನೀಡುವ ಹಣ ಕಳೆದ 6 ತಿಂಗಳಿನಿಂದ ರೋಗಿಳಿಗೆ ಬಂದಿಲ್ಲವಂತೆ.

 ಕರ್ನಾಟಕ ರಾಜ್ಯದಲ್ಲಿ ಸುಮಾರು 80 ಸಾವಿರ ಬಡ ಕ್ಷಯ ರೋಗಿಗಳಿಗೆ ಸರ್ಕಾರ ಕಳೆದ 6 ತಿಂಗಳಿನಿಂದ ಪೌಷ್ಠಿಕ ಆಹಾರದ ಪ್ರೋತ್ಸಾಹ ಧನ ನೀಡಿಲ್ಲ. ಇನ್ನು ಕೊಪ್ಪಳ ಜಿಲ್ಲೆಯ ಮಟ್ಟಿಗೆ ಅರ್ಹ 2132 ರೋಗಿಗಳಿಗೆ 3681 ಕಂತಿನ ಹಣ ಬಾಕಿ ಇದೆಯಂತೆ. ಅಂದ್ರೆ, ಕೊಪ್ಪಳ ಜಿಲ್ಲೆವೊಂದರಲ್ಲೆ ಸುಮಾರು 42 ಲಕ್ಷ ರೂಪಾಯಿ ಹಣ ಕ್ಷಯ ರೋಗಿಗಳಿಗೆ ಸರ್ಕಾರ ನೀಡಬೇಕಿದೆ. ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಹಣ ಆರೋಗ್ಯ ಸೇವೆಯೂ ಸರ್ಕಾರ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಮಗೆ ಬರಬೇಕಿದ್ದ ಪ್ರೋತ್ಸಾಹ ಧನಕ್ಕಾಗಿ ಕಚೇರಿಗೆ ಎಡ ತಾಕುವ ರೋಗಿಗಳ ಸಂಬಂಧಿಕರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ಕಾರದಿಂದಲೇ ಹಣ ಬಂದಿಲ್ಲ ಎಂಬು ಹೇಳುತ್ತಿದ್ದಾರೆ. ಇನ್ನು ಅಧಿಕಾರಿಗಳು ಮಾತ್ರ, ಪಿಎಫ್ ಎಂಎಸ್ ಎಂಬ ಹೊಸ ಪಾವತಿ ವಿಧಾನದ ಮ್ಯಾಪಿಂಗ್ ನಡೆದಿದೆ ಎಂದು ಸಬೂಬು ನೀಡುತ್ತಿದ್ದಾರೆ.ಹೀಗಾಗಿ ಈ ಕೂಡಲೇ ಸರಕಾರ ಕ್ಷಯರೋಗಿಗಳಿಗೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.