Aug 29, 2022, 2:21 PM IST
ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಎರಡು ತಿಂಗಳಿನಿಂದ ಧಗಧಗಿಸುತ್ತಿರುವ ರಾಜ್ಯದ ಕರಾವಳಿ ನಗರ ಮಂಗಳೂರನ್ನು ಶಾಂತಗೊಳಿಸಲು ಬಿಜೆಪಿ ಮೋದಿ ಕರೆಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗುರಿ ರೂಪಿಸಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಈ ಮಧ್ಯೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಬಿಜೆಪಿಯ ಬೆಲ್ಟ್ ಎನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಇಡೀ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರೇ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಕಾರ್ಯಕರ್ತರ ಆಕ್ರೋಶದ ಬಿಸಿ ಹೇಗಿತ್ತೆಂದರೆ ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನು ನಡುರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರು ಗಡ ಗಡ ನಡುಗಿಸಿದ್ದರು. ಹೀಗಾಗಿ ಸಿಟ್ಟಿಗೆದ್ದ ಕಾರ್ಯಕರ್ತರ ಸಮಾಧಾನಕ್ಕೆ ಮುಂದಾಗಿರುವ ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ಮುಂದಾಗಿದ್ದಾರೆ. ಜೊತೆಗೆ ಚುನಾವಣೆ ಪೂರ್ವ ಬೃಹತ್ ಸಮಾವೇಶದ ಮೂಲಕ ಜನ ಸೇರಿಸಲು ಮುಂದಾಗಿದ್ದಾರೆ.