ಉಡುಪಿ ನಾಗರ ಪಂಚಮಿ; ನಾಗರ ಹಾವಿಗೆ ಪೂಜೆ ಸಲ್ಲಿಕೆ, ವಿಡಿಯೋ ವೈರಲ್

Aug 14, 2021, 6:17 PM IST

ಉಡುಪಿ(ಆ. 14) 'ಕಲ್ಲು ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ" ಅನ್ನುವ ವಚನ ಇದೆ. ನಾಗರ ಪಂಚಮಿಯ ದಿನ ನಾಗದೇವರ ಕಲ್ಲಿನ ಮೂರ್ತಿಗಳಿಗೆ ಹಾಲು ಎರೆಯುವುದು ಮಾಮೂಲು. ಕರಾವಳಿ ಭಾಗದಲ್ಲಂತೂ ಪ್ರತಿಯೊಬ್ಬರೂ ತಮ್ಮ ಮೂಲನಾಗನ ಕ್ಷೇತ್ರಗಳಿಗೆ ತೆರಳಿ, ಈ ದಿನ ಕಡ್ಡಾಯವಾಗಿ ಪೂಜೆ ಸಲ್ಲಿಸುತ್ತಾರೆ. ಬದಲಾದ ಕಾಲಘಟ್ಟದಲ್ಲೂ, ನಾಗರ ಪಂಚಮಿಯ ದಿನ ಪ್ರತಿಯೊಬ್ಬರೂ ತಮ್ಮ ತವರು ಊರಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ. 

ನಾಡಿಗೆ ದೊಡ್ಡದು ನಾಗರ ಪಂಚಮಿ.. ಆಚರಣೆ ಮಹತ್ವ

ಕೇವಲ ಕಲ್ಲನಾಗರ ನಿಗೆ ಮಾತ್ರವಲ್ಲದೆ ನಿಜವಾದ ನಾಗನಿಗೂ ಪೂಜೆ ಸಲ್ಲಿಕೆಯಾಗಿದೆ. ಕಾಪು ತಾಲೂಕಿನ ಮಂಜೂರು ಎಂಬಲ್ಲಿ ವಿಶೇಷ ಪೂಜೆ ನಡೆದಿದೆ. ಇಲ್ಲಿನ ಗೋವರ್ಧನ ಭಟ್ ಎಂಬವರು, ಗಾಯಗೊಂಡ ಹಾವುಗಳನ್ನು ಆರೈಕೆ ಮಾಡುವ ವಿಶೇಷ ಹವ್ಯಾಸ ಹೊಂದಿದ್ದಾರೆ. ಈ ಪರಿಸರದಲ್ಲಿ ಎಲ್ಲೇ ಗಾಯಾಳು ನಾಗರ ಹಾವು ಕಂಡುಬಂದರೆ, ಎಲ್ಲರೂ ನೇರವಾಗಿ ಗೋವರ್ಧನ ಭಟ್ಟರಿಗೆ ತಿಳಿಸುತ್ತಾರೆ. ಹಾಗಾಗಿ ಇವರ ಮನೆಯಲ್ಲಿ ಯಾವತ್ತೂ ಗುಣಮುಖವಾದ ಹಾವುಗಳು ಇದ್ದೇ ಇರುತ್ತವೆ. ಈ ಬಾರಿಯೂ ನಾಗರಪಂಚಮಿಯ ದಿನ, ತಾನು ಆರೈಕೆ ಮಾಡಿದ ನಾಗರ ಹಾವುಗಳಿಗೆ ಆರತಿ ಬೆಳಗಿ ಗೋವರ್ಧನ ಭಟ್ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.