ಹಿಜಾಬ್‌ ವಿವಾದ ಮಧ್ಯೆ SSLC ಪರೀಕ್ಷೆ: ಹೈಕೋರ್ಟ್ ತೀರ್ಪಿಗೆ ತಲೆಬಾಗಿದ ವಿದ್ಯಾರ್ಥಿ, ಪೋಷಕರು!

Mar 29, 2022, 1:18 PM IST

ಬೆಂಗಳೂರು (ಮಾ. 29): ತಾರಕಕ್ಕೇರಿದ್ದ ಹಿಜಾಬ್‌ ವಿವಾದದ ನಡುವೆಯೂ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರದಿಂದ ರಾಜ್ಯಾದ್ಯಂತ ಶುಭಾರಂಭಗೊಂಡಿದೆ. 3444 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ 8,48,405 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಿಜಾಬ್‌ಗಿಂತ ಶಿಕ್ಷಣ ಮುಖ್ಯ ಎಂದು ಮನನ ಮಾಡಿಕೊಂಡ ಬಹುತೇಕ ವಿದ್ಯಾರ್ಥಿಗಳು ಹಿಜಾಬ್‌ ತೆಗೆದಿಟ್ಟು ಪರೀಕ್ಷಾ ಕೊಠಡಿಗಳಿಗೆ ಪ್ರವೇಶಿಸಿದ್ದಾರೆ.

ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದು ಪರೀಕ್ಷೆಗೆ ಹಾಜರಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು. ಆದರೆ ಭವಿಷ್ಯ ಮುಖ್ಯ. ಶಿಕ್ಷಣ ಮೊದಲು ಎಂಬ ನಿರ್ಧಾರಕ್ಕೆ ಬಂದ ವಿದ್ಯಾರ್ಥಿನಿಯರು ಹಿಜಾಬ್‌ ಕಳಚಿಟ್ಟು ಪರೀಕ್ಷೆ ಬರೆದಿದ್ದಾರೆ. ಕೆಲವರು ಮನೆಯಲ್ಲೇ ಹಿಜಾಬ್‌ ಬಿಟ್ಟು ಬಂದಿದ್ದರೆ ಇನ್ನು ಕೆಲವರು ಪರೀಕ್ಷಾ ಕೇಂದ್ರಗಳ ಬಳಿ, ವಿಶೇಷವಾಗಿ ವ್ಯವಸ್ಥೆ ಮಾಡಿದ್ದ ಕೊಠಡಿಗಳಲ್ಲಿ ಹಿಜಾಬ್‌ ಕಳಚಿಟ್ಟು ಪರೀಕ್ಷೆಗೆ ಹಾಜರಾದರು.

ಇದನ್ನೂ ಓದಿSSLC ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು

ಎಲ್ಲಿಯೂ ಗೊಂದಲ, ದೊಡ್ಡ ಪ್ರಮಾಣದ ಪರೀಕ್ಷಾ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ. ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಸಿಹಿ ತಿನಿಸು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಪರೀಕ್ಷೆ ಎದುರಿಸದೇ ಇದ್ದ ವಿದ್ಯಾರ್ಥಿಗಳು ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ವಿದ್ಯಾರ್ಥಿ ಸ್ನೇಹಿಯಾಗಿ ಪ್ರಶ್ನೆ ಪತ್ರಿಕೆ ರೂಪಿಸಿದ್ದು ಬಹು ಆಯ್ಕೆ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿತ್ತು. ಆದ್ದರಿಂದ ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು ಕಂಡುಬಂತು.