Feb 3, 2022, 1:11 PM IST
ಮಹಾಲಿಂಗಪುರ(ಫೆ.03): ವೈದ್ಯಕೀಯ ವಿಭಾಗದ ಸೂಪರ್ ಸ್ಪೆಷಾಲಿಟಿ ‘ನೀಟ್’ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ರನ್ನಬೆಳಗಲಿಯ ಕೂಲಿಕಾರನ ಮಗ ಡಾ.ಚಿದಾನಂದ ಕಲ್ಲಪ್ಪ ಕುಂಬಾರ ಎರಡು ವಿಷಯಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರನ್ನಬೆಳಗಲಿಯ ಬಡ ಕುಟುಂಬದ ಕಲ್ಲಪ್ಪ- ಕಸ್ತೂರಿ ದಂಪತಿಯ ಪುತ್ರ ಡಾ.ಚಿದಾನಂದ ಕುಂಬಾರ ಅವರು 2021ನೇ ಸಾಲಿನ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಎಂಡಿ ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ 400ಕ್ಕೆ 340 ಅಂಕ ಮತ್ತು ಎಂಡಿ ಹೆಪಟಾಲಜಿಯಲ್ಲಿ 400ಕ್ಕೆ 330 ಅಂಕಗಳಿಸಿ ಈ ಎರಡು ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
Bagalkot: ನೀಟ್ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!
ಡಾ.ಚಿದಾನಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ರನ್ನ ಬೆಳಗಲಿಯಲ್ಲಿ ಮುಗಿಸಿದ್ದಾರೆ. ಕನ್ನಡ ಮಾಧ್ಯಮವೇ ಇವರಿಗೆ ಬುನಾದಿಯಾಗಿದ್ದು, ಕರುನಾಡಿಗೂ ಕೀರ್ತಿ ತಂದಿದ್ದಾರೆ. ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ 806ನೇ ಸ್ಥಾನ ಗಳಿಸಿದ್ದ ಚಿದಾನಂದ, ಹುಬ್ಬಳ್ಳಿ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಎಂಡಿ ಔಷಧ ಪದವಿಯಲ್ಲಿ ದೇಶಕ್ಕೆ 3ನೇ ರ‍್ಯಾಂಕ್ ಪಡೆದುಕೊಂಡಿದ್ದರು. 2 ವರ್ಷದಿಂದ ಹೈದ್ರಾಬಾದ್‌ನ ಗ್ಲೋಬಲ್ ಆಸ್ಪತ್ರೆಯಲ್ಲಿ ವ್ಯೆದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.