ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರೋ ಶಿವರಾಜ್ ಕುಮಾರ್; ಶಿವಣ್ಣ ಮನೆಗೆ ಭೇಟಿ ಕೊಟ್ಟ ನಟ ಸುದೀಪ್

Dec 18, 2024, 3:35 PM IST

ಚಿಕಿತ್ಸೆಗಾಗಿ  ನಟ ಶಿವರಾಜ್ ಕುಮಾರ್ ಅವರು ವಿದೇಶಕ್ಕೆ ತೆರಳುತ್ತಿರುವ ಹಿನ್ನೆಲೆ ನಟ ಕಿಚ್ಚ ಸುದೀಪ್ ಅವರು  ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇಂದು ಶಿವಣ್ಣ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ಶಿವಣ್ಣನ ಆರೋಗ್ಯ ವಿಚಾರಿಸಲು ನಾಗವಾರದ ಮನೆಗೆ ಸುದೀಪ್ ಭೇಟಿ ನೀಡಿದರು. ಕಿಚ್ಚನ ಜೊತೆ ಮಾಜಿ ಸಚಿವ ಬಿ. ಸಿ ಪಾಟೀಲ್ ಕೂಡ ಭೇಟಿ ಕೊಟ್ಟು ಶಿವಣ್ಣ ಕ್ಷೇಮ ವಿಚಾರಿಸಿದ್ದಾರೆ. ಇತ್ತ ನಟ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಪಯಣ ಹಿನ್ನೆಲೆ ಶಿವಣ್ಣ ಮನೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜೆ ಮಾಡಿಸಿದ್ದಾರೆ. ಶಿವಣ್ಣ ಕ್ಷೇಮವಾಗಿ ಬರಲೆಂದು ಅರ್ಚಕರು ಪೂಜೆ ಮಾಡಿಸಿದ್ದಾರೆ.

ಶಿವರಾಜ್‌ ಕುಮಾರ್ ಅವರ ಸಿನಿಮಾದ ಕುರಿತು ಹೇಳುವುದಾದರೆ, ಇವರ  ನಟನೆಯ 'ಭೈರತಿ ರಣಗಲ್' ಸಿನಿಮಾ ಸಾಕಷ್ಟು ಗಳಿಕೆ ಮಾಡಿದೆ. ಈ ಚಿತ್ರವನ್ನು ಶಿವರಾಜ್‌ ಅವರೇ  ನಿರ್ಮಿಸಿದ್ದಾರೆ.   ಈ ಚಿತ್ರದ ಸಂದರ್ಭದಲ್ಲಿ ಅನಾರೋಗ್ಯದ ವಿಷಯವನ್ನು ನಟ ಹೇಳಿದ್ದರು.  ಎಲ್ಲರಂತೆ ನಾನೂ ಮನುಷ್ಯ. ನನಗೂ ತೊಂದರೆ ಆಗಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ.  ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ಭಯ ಆಯ್ತು. ಈಗ ಧೈರ್ಯ ತೆಗೆದುಕೊಂಡಿದ್ದೇನೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಬೇಕು ಎಂದಿದ್ದರು. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಶಿವರಾಜ್​ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಇಂದು ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ ಎಂದು ತಿಳಿದು ಬಂದಿದೆ.