Feb 17, 2023, 7:00 PM IST
ಬೆಂಗಳೂರು (ಫೆ.17): ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗದ ಬಗ್ಗೆ ಬಜೆಟ್‌ನಲ್ಲಿ ಹೇಳಿಲ್ಲ. ಆದರೆ, ಈಗಾಗಲೇ 7ನೇ ವೇತನ ಆಯೋಗವನ್ನು ಅನುಷ್ಠಾನ ಮಾಡಲಾಗಿದ್ದು, ಇದೇ ವರ್ಷದಿಂದ ಅನುಷ್ಠಾನಕ್ಕೆ ಬರುತ್ತದೆ. ಹಿಂದಿನ ಬಜೆಟ್ ಗಳನ್ನು ನೋಡಿದಾಗ, 6-7 ಪರ್ಸೆಂಟ್ ಮಾತ್ರ ಹೆಚ್ಚಾಗಿರುತ್ತದೆ. ಆದರೆ, ಈ ಸಲ ಶೆ.14 ಜಾಸ್ತಿ ಆಗಿದೆ. ಯಾರೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಬಜೆಟ್ ಮಂಡನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಬಜೆಟ್ ನಲ್ಲಿ ಹೇಳಲು ಆಗಲ್ಲ. ಈಗಾಘಲೇ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಯಾಗಿದ್ದು, ಇದೇ ವರ್ಷ ಅನುಷ್ಠಾನಕ್ಕೆ ಬರಲಿದೆ. ಈಗ 2023-24 ರ ಬಜೆಟ್ ಮಂಡನೆ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಆರ್ಥಿಕ ತಜ್ಞರು ಕರ್ನಾಟಕ ಬಜೆಟ್ ಸಮಾನ್ಯ ವರ್ಷಗಳಂತೆ ಹಳಿಗೆ ಬರಲು 5-6 ವರ್ಷಗಳು ಬೇಕು ಎಂದು ಆರ್ಥಿಕ ತಜ್ಞರು ಹೇಳಿದ್ದರು. ಆದರೆ, ಕೇವಲ ಎರಡೇ ವರ್ಷ ದಲ್ಲಿ ಸುಧಾರಣೆ ಆಗಿದೆ. ನಮ್ಮ ಆರ್ಥಿಕ ಕ್ಷಮತೆಯ ಮೇಲೆ ವಿಶ್ವಾಸ ಬಂದಿದೆ. ಯಾರೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.
ಬಜೆಟ್ ಗಾತ್ರ ಶೇ.14 ಪರ್ಸೆಂಟ್ ಹೆಚ್ಚಳ: ಹಿಂದಿನ ಬಜೆಟ್ ಗಳನ್ನು ನೋಡಿದಾಗ, 6-7 ಪರ್ಸೆಂಟ್ ಮಾತ್ರ ಹೆಚ್ಚಾಗಿರುತ್ತದೆ. ಆದರೆ, ಈ ಸಲ ಶೆ.14 ಜಾಸ್ತಿ ಆಗಿದೆ. ಕಳೆದ ವರ್ಷ 2022-23ಕ್ಕೆ 2,65,720 ಕೋಟಿ ಬಜೆಟ್ ಗಾತ್ರ ಇತ್ತು. ಈ ವರ್ಷ ಸುಮಾರು 43,462 ಕೋಟಿ ರೂ. ಕಳೆದ ಬಾರಿಗಿಂತ ಹೆಚ್ಚಾಗಿದೆ. ಚುನಾವಣಾ ವರ್ಷ ಅಂತಾ ಬೇಜವಾಬ್ದಾರಿ ಯಿಂದ ಏನೂ ಘೋಷಣೆ ಮಾಡಿಲ್ಲ. ಪುಕ್ಕಟೆ ಕೊಡ್ತೀನಿ, ಮಹಿಳೆಯರಿಗೆ ಫ್ರೀ ಕೊಡ್ತೀನಿ ಅಂತಾ ಏನೋ ಘೋಷಣೆ ಮಾಡಬಹುದಿತ್ತು. ಮಾಡೋಕೆ ಸಾಧ್ಯ ಇಲ್ಲದೇ ಇರೋದನ್ನು ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ ಎಂದು ಕಾಂಗ್ರೆಸ್ ಘೋಷಣೆಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.