ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಜೈಲಿಗೆ ಹೋಗಿರುವ ಆರೋಪ ಎದುರಿಸುತ್ತಿದ್ದಾರೆ. ಏನಿದು ವಿಷಯ?
ಸದ್ಯ ಬಿಗ್‌ಬಾಸ್‌ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಬಿಗ್‌ಬಾಸ್‌ಗೂ ಮುನ್ನ ಪಾರು ಸೀರಿಯಲ್‌ನ ನಟನೆಯಿಂದ ಮನೆ ಮಾತಾಗಿದ್ದವರು ಈಕೆ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್ ಸುಖಾಂತ್ಯವಾಗಿದೆ. ಇಂಥ ತ್ಯಾಗಮಯ ಪಾತ್ರ ಮಾಡಿದವರು ಮೋಕ್ಷಿತಾ.
ಆದರೆ ಇದೀಗ ನಟಿಯ ಭಯಾನಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಈಕೆ ಮಕ್ಕಳ ಕಳ್ಳಿ ಎನ್ನುವ ವಿಷಯ ಬಹಿರಂಗಗೊಂಡಿದೆ! ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಬಾಲಕಿಯೊಬ್ಬಳನ್ನು ಗೆಳೆಯನ ಜೊತೆಗೂಡಿ ಅಪಹರಣ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪ ಇವರ ಮೇಲಿದೆ. ಬಿ.ಕಾಂ ಮುಗಿಸಿದ ಬಳಿಕ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ ಮೋಕ್ಷಿತಾ ಅವರಿಗೆ ಆಗ ಇಪ್ಪತ್ತು ವರ್ಷ ವಯಸ್ಸು. ತಮ್ಮ ಬಳಿ ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಯನ್ನೇ ಅಪಹರಣ ಮಾಡಿಸಿರುವ ಗಂಭೀರ ಆರೋಪದ ಮೇಲೆ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ ಮೋಕ್ಷಿತಾ. ಎಂಬಿಎ ಪದವೀಧರನಾಗಿಯೂ ನಿರುದ್ಯೋಗಿ ಆಗಿದ್ದ ಅಲೆಮಾರಿ ಗೆಳೆಯನಿಗಾಗಿ ಈ ಖತರ್ನಾಕ್ ಪ್ಲ್ಯಾನ್ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ನಾಗಭೂಷಣ್ ಎನ್ನುವ 26 ವರ್ಷದ ಗೆಳೆಯನ ಮಾತು ಕೇಳಿ ನಟಿ ಹೀಗೆಲ್ಲಾ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ!
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಅಂದಹಾಗೆ ಆಗ ಇವರು ಮೋಕ್ಷಿತಾ ಆಗಿರಲಿಲ್ಲ. ಬದಲಿಗೆ ಇವರ ನಿಜ ಹೆಸರು ಐಶ್ವರ್ಯ. ಈಕೆ ಗೆಳೆಯನ ಜೊತೆಗೂಡಿ ಪವಿತ್ರಾ ಎನ್ನುವ ಬಾಲಕಿಯನ್ನು ಕಿಡ್ನಾಪ್ ಮಾಡಿರುವುದಾಗಿ ತಿಳಿದು ಬಂದಿದೆ. ಇವರ ಬಳಿ ಟ್ಯೂಷನ್‌ಗೆ ಬರುತ್ತಿದ್ದ ಪವಿತ್ರಾಳ ತಂದೆ ಹೋಟೆಲ್ ಉದ್ಯಮಿಯಾಗಿರುವ ಕಾರಣ, ಸಾಕಷ್ಟು ಹಣ ಮಾಡಬಹುದು ಎಂದು ಸಂಚು ರೂಪಿಸಿದ್ದರು. ಅದರಂತೆ ಬಾಲಕಿ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ನಾಗಭೂಷಣ್ ಅವಳನ್ನು ಕಾರಿನೊಳಗೆ ಕಿಡ್ನ್ಯಾಪ್ ಮಾಡಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಹಣಕ್ಕೆ ಬೇಡಿಕೆ ಇಡಲಾಗುತ್ತದೆ.
ಆದರೆ ಈ ವಿಷಯವನ್ನು ಪವಿತ್ರ ಅಪ್ಪ ಪೊಲೀಸರಿಗೆ ತಿಳಿಸುತ್ತಾರೆ. ಪೊಲೀಸರ ಸಲಹೆಯಂತೆ ಬಾಲಕಿ ತಂದೆ ಸುರೇಶ್ ಹಣ ಕೊಡಲು ಒಪ್ಪಿಗೆ ನೀಡಿ ಯಾವ ಸ್ಥಳಕ್ಕೆ ಬರಬೇಕು ಎಂದು ಕೇಳಿದಾಗ ಪೀಣ್ಯದಲ್ಲಿ ಸ್ಥಳ ಗೊತ್ತು ಮಾಡಲಾಗುತ್ತದೆ. ಬಳಿಕ ಸ್ಥಳವನ್ನು ಬದಲಾಯಿಸಲಾಗುತ್ತದೆ. ಆದರೆ ಅವರು ಏನೇ ತಿಪ್ಪರಲಾಗ ಹಾಕಿದರೂ, ಹೊಂಚು ಹಾಕುತ್ತಿದ್ದ ಮೂರು ಪೊಲೀಸ್ ತಂಡಗಳ ಕೈಗೆ ಆತ ಸಿಕ್ಕಿಬೀಳುತ್ತಾನೆ. ಕೊನೆಗೆ ಮೋಕ್ಷಿತಾ ಪೈ ಕೂಡ ಸಿಕ್ಕಿಬೀಳುತ್ತಾಳೆ. ಜೈಲಿಗೂ ಹೋಗಿ ಬಂದಿದ್ದಾರೆ. ಇಷ್ಟೆಲ್ಲಾ ಆರೋಪಗಳು ಸದ್ಯ ನಟಿಯ ಮೇಲೆ ಇದ್ದು, ಅದಕ್ಕೆ ಅವರು ಏನು ಸ್ಪಷ್ಟನೆ ಕೊಡುತ್ತಾರೆ ಎನ್ನುವುದನ್ನು ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದ ಮೇಲೆ ನೋಡಬೇಕು. 2017ರಲ್ಲಿ ಐಶ್ವರ್ಯ ಮೇಲಿದ್ದ ಕೇಸ್ ವಿವಿಧ ಕಾರಣಗಳಿಂದ ಖುಲಾಸೆ ಆಗಿದೆ ಎಂದೂ ತಿಳಿದುಬಂದಿದೆ. ಅಂದಹಾಗೆ ಮೋಕ್ಷಿತಾ ಅವರಿಗೆ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಇದರಿಂದ ಮೋಕ್ಷಿತಾ ಬಗ್ಗೆ ಕಂಬನಿ ಮಿಡಿದವರೇ ಹೆಚ್ಚು. ಆದರೆ ಈಗ?