ಡಬ್ಬಿಂಗ್‌ ಸೀರಿಯಲ್‌ಗಳಲ್ಲಿ ಕನ್ನಡ ಬಲ್ಲವರಿಗೆ ಏನು ಕೆಲಸ ಗೊತ್ತೇ?

By Suvarna News  |  First Published Jun 19, 2020, 1:45 PM IST

ಕೊರೋನಾ ಕರುಣಿಸಿದ ಅಸಂಖ್ಯಾತ ಭಾಗ್ಯಗಳಲ್ಲಿ ಡಬ್ಬಿಂಗ್‌ ಭಾಗ್ಯವೂ ಒಂದು. ಅಲ್ಲಿಯ ತನಕ ಡಬ್ಬಿಂಗ್‌ ಸೀರಿಯಲ್ಲುಗಳನ್ನು ಪ್ರಸಾರ ಮಾಡುವುದಕ್ಕೆ ಕೊಂಚ ಹಿಂಜರಿಯುತ್ತಿದ್ದ ಚಾನಲ್ಲುಗಳು, ಅನಿವಾರ್ಯತೆಯ ಸುಳಿಗೆ ಸಿಕ್ಕಿ ಡಬ್ಬಿಂಗಿಗೆ ಮೊರೆ ಹೋದವು. 


ಅದರಿಂದಾದ ನೇರ ಪರಿಣಾಮ ಎಂದರೆ ಕನ್ನಡಮ್ಮನ ಸ್ವಂತ ಮಕ್ಕಳಾದ ಕನ್ನಡ ಸೀರಿಯಲ್ಲುಗಳು ಸಪ್ಪೆಯಾಗಿಯೂ ಪೇಲವವಾಗಿಯೂ ಕಾಣಲು ಆರಂಭಿಸಿದ್ದು. ಡಬ್ಬಿಂಗ್‌ ಹೇಗಿರುತ್ತೋ ಏನೋ ಎಂಬ ಗುಮಾನಿಯಲ್ಲಿದ್ದ ಪ್ರೇಕ್ಷಕರು ಪರಭಾಷಾ ಸೀರಿಯಲ್ಲುಗಳು ಇಷ್ಟುಅದ್ದೂರಿಯಾಗಿ ಬರುತ್ತವಲ್ಲ ಅಂತ ಆನಂದಾಶ್ಚರ್ಯದಿಂದ ನೋಡತೊಡಗಿದರು.

ಅಂತೂ ಡಬ್ಬಿಂಗ್‌ ಬಂದಾಯಿತು. ಡಬ್ಬಿಂಗ್‌ ಬರುತ್ತಿದ್ದಂತೆ ಕೆಲವರು ಕೆಲಸ ಕಳಕೊಳ್ಳುತ್ತಾರೆ, ಕೆಲವರಿಗೆ ಕೆಲಸ ಸಿಗುತ್ತದೆ. ಬರಹಗಾರಿಗೆ ಮತ್ತು ಕಂಠದಾನ ಕಲಾವಿದರಿಗೆ ಅನುಕೂಲ ಆಗುತ್ತದೆ ಎಂಬಿತ್ಯಾದಿ ವಾದಗಳು ಡಬ್ಬಿಂಗ್‌ ಪರ-ವಿರೋಧದ ಚರ್ಚೆಯಲ್ಲಿ ಕೇಳಿಬರುತ್ತಿದ್ದವು. ಇದೀಗ ಬಹುತೇಕ ಎಲ್ಲಾ ಚಾನಲ್ಲುಗಳೂ ಡಬ್ಬಿಂಗ್‌ ಸೀರಿಯಲ್ಲು ಶುರುಮಾಡಿವೆ. ಅಲ್ಲಿ ನಿರ್ದೇಶಕ, ಚಿತ್ರಕತೆಗಾರ, ನಟ, ಸಂಕಲನಕಾರ, ಸಂಗೀತ ನಿರ್ದೇಶಕ, ಕಲಾ ನಿರ್ದೇಶಕ, ಸಹ ನಿರ್ದೇಶಕ, ಮ್ಯಾನೇಜರ್‌, ಸಂಕಲನಕಾರ- ಮುಂತಾದ ಕೆಲಸ ಮಾಡಿಕೊಂಡು ಇರುವವರಿಗೆ ಕೆಲಸ ಇಲ್ಲ. ಅಲ್ಲಿ ಬೇಕಾಗಿರುವುದು ಕಂಠದಾನ ಕಲಾವಿದ ಮತ್ತು ಅವರಿಗೆ ಸಂಭಾಷಣೆಯನ್ನು ಅಚ್ಚುಕಟ್ಟಾಗಿ ಅನುವಾದ ಮಾಡಿಕೊಡುವ ಭಾಷಾಂತರ ಸಂಭಾಷಣಾಕಾರರು.

Tap to resize

Latest Videos

ಇದನ್ನಿಟ್ಟುಕೊಂಡು, ಹೊಸ ಮಾದರಿಯ ಕುರಿತು ಒಂದು ರಿಯಾಲಿಟಿ ಚೆಕ್‌ ಮಾಡಿದಾಗ, ಈ ಹೊಸ ವಿದ್ಯೆಯ ಹಲವು ವರಸೆಗಳು ಗೊತ್ತಾದವು. ತಮ್ಮ ಹೊಸ ಬಗೆಯ ವೃತ್ತಿಯ ಕಷ್ಟಸುಖಗಳ ಕುರಿತು, ಅವರವರೇ ಹೇಳಿಕೊಂಡಿದ್ದಾರೆ, ಕೇಳಿ:

ಸೆಕ್ಷನ್‌ 1

ಬರಹಗಾರನ ಸುಖ-ದುಃಖ

ಮಹಾಭಾರತ ಕನ್ನಡಕ್ಕೆ ತರುವ ಪ್ರಕ್ರಿಯೆ ಖುಷಿ ಕೊಟ್ಟಿದೆ

ನಾನು ಎರಡು ದಶಕಗಳ ಕಾಲ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ‘ಗಾಂಧಿ ಸ್ಮೈಲ್ಸ್‌’, ‘ಪರಪಂಚ’ ಎಂಬೆರಡು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಎಲ್ಲಕ್ಕಿಂತ ಮೊದಲು ನಾನೊಬ್ಬ ಓದುಗ. ಬರಹಗಾರ.

ಕ್ರಿಶ್‌ ಜೋಶಿ

(ನಿರ್ದೇಶಕ, ಸುವರ್ಣ ವಾಹಿನಿಯ ಮಹಾಭಾರತ ಧಾರಾವಾಹಿ ಬರಹಗಾರ)

ಈ ‘ಮಹಾಭಾರತ’ ಧಾರಾವಾಹಿಗೆ ಬರೆಯುವ ಮೊದಲು ಕೂಡ ಅನೇಕ ಅನುವಾದಗಳನ್ನು ಮಾಡಿದ್ದೇನೆ. ಆದರೆ ಹಿಂದಿಯ ಧಾರಾವಾಹಿಯನ್ನು ಕನ್ನಡಕ್ಕೆ ತರುತ್ತಿರುವುದು ಇದೇ ಮೊದಲು.

ಹಿಂದಿಯನ್ನು ಕನ್ನಡಕ್ಕೆ ಭಾಷಾಂತರಿಸುವುದು ಸ್ವಲ್ಪ ಸವಾಲಿನ ಕೆಲಸವೇ ಸರಿ. ಹಿಂದಿ ವಾಕ್ಯ ಎಲ್ಲಿ ಮುಗಿಯುತ್ತದೋ ಕನ್ನಡ ಅಲ್ಲಿಂದ ಆರಂಭವಾಗುತ್ತದೆ. ಆಪ್‌ ಕಾ ನಾಮ್‌ ಕ್ಯಾ ಹೈ ಎಂದು ಹಿಂದಿಯಲ್ಲಿ ಇದ್ದರೆ ನಿಮ್ಮ ಹೆಸರೇನು ಎಂದು ಕನ್ನಡದಲ್ಲಿ ಇರುತ್ತದೆ. ಹಾಗಾಗಿ ಲಿಪ್‌ ಸಿಂಕ್‌ ಗಮನದಲ್ಲಿ ಇಟ್ಟುಕೊಂಡು ನಾವು ಕನ್ನಡ ಸಂಭಾಷಣೆ ಬರೆಯಬೇಕು. ಅಲ್ಲಿ ಇದ್ದಂತೆ ಇಲ್ಲೂ ಬರೆದರೆ ಆಗುವುದಿಲ್ಲ. ಅಲ್ಲಿನ ಮಾತುಗಳಿಗೆ ಸಂಬಂಧಪಟ್ಟಮಾತುಗಳೇ ಕನ್ನಡದಲ್ಲೂ ಇರುತ್ತವೆ. ಅದನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಲಿನ ಮಾತುಗಳಿಗೆ ತಕ್ಕ ಕನ್ನಡ ಗಾದೆಗಳನ್ನು ಬಳಸುತ್ತಿದ್ದೇನೆ.

ನಾವು ಕನ್ನಡಕ್ಕೆ ತರುವಾಗ ಅಲ್ಲಿನ ವಿಚಾರಕ್ಕೆ, ಆ ಬರಹಗಾರರಿಗೆ ಗೌರವ ಕೊಡುವುದು ಅವಶ್ಯ. ನಾವು ನಮಗೆ ಮನಸ್ಸಿಗೆ ಬಂದಂತೆ ಬರೆಯಲು ಆಗುವುದಿಲ್ಲ. ಅಲ್ಲಿ ಕಂತ್‌ ವಿದ್ಯೆ ಅಂತ ಇತ್ತು. ಕಂತ್‌ ವಿದ್ಯೆ ಎಂದರೆ ಏನು ಅಂತ ನಾನು ಸುಮಾರು ಜನರ ಬಳಿ ಕೇಳಿದ ನಂತರ ಗೊತ್ತಾಯಿತು, ಅದು ಈಟಿ ವಿದ್ಯೆ ಅಂತ. ನಮ್ಮದು ಪೌರಾಣಿಕ ಧಾರಾವಾಹಿ ಆದ್ದರಿಂದ ಸ್ವಲ್ಪ ಪುರಾಣದಲ್ಲಿದ್ದ ಪದಗಳನ್ನೂ ಬಳಸುತ್ತಿದ್ದೇನೆ. ಜನರಿಗೆ ಇಷ್ಟಆಗಿದೆ ಅಂತ ಭಾವಿಸುತ್ತೇನೆ.

ಮಾಮೂಲಿ ಅನುವಾದಕ್ಕಿಂತ ಭಿನ್ನ

ಗಾಯತ್ರಿ ಎಚ್‌ ಎನ್‌

(ಲೇಖಕಿ, ಕಲರ್ಸ್‌ ಕನ್ನಡ ವಾಹಿನಿಯ ನಾಗಕನ್ನಿಕಾ, ಅಶೋಕ ಧಾರಾವಾಹಿಗಳ ಬರಹಗಾರ್ತಿ)

ಹಿಂದಿ ಮತ್ತು ಕನ್ನಡದ ಪದ ಬಳಕೆ, ವಾಕ್ಯ ರಚನೆ ಬೇರೆ ಬೇರೆ ರೀತಿಯೇ ಇದೆ. ಲಿಪ್‌ ಸಿಂಕಿಂಗ್‌ಗೆ ಒತ್ತು ಕೊಟ್ಟರೆ ಕೇಳುಗನಿಗೆ ಅದು ಹಾರ್ಡ್‌ ಆಗಿ ಕೇಳುತ್ತದೆ. ಹಾಗಾಗಿ ನಾನು ಅರ್ಥಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಸಹಜವಾಗಿ ಎಲ್ಲಾ ಅನುವಾದಕರೂ ಇದನ್ನೇ ಮಾಡುತ್ತಿದ್ದಾರೆ. ಇದು ಕನ್ನಡಕ್ಕೆ ಹೊಸ ಬಗೆಯ ಪ್ರಯೋಗ ಆಗಿರುವುದರಿಂದ ನಮ್ಮದು ಅನುವಾದ ಎಂದು ಪರಿಗಣನೆ ಮಾಡುತ್ತಿದ್ದಾರೆ.

ಇದು ಮಾಮೂಲಿಯಾಗಿ ಮಾಡುವ ಅನುವಾದದ ರೀತಿ ಇರುವುದಿಲ್ಲ. ಲಿಪ್‌ ಸಿಂಕಿಂಗ್‌ಗೆ ಹೆಚ್ಚು ಒತ್ತು ಕೊಡದೇ ಇದ್ದರೂ ಅದನ್ನೂ ಪರಿಗಣನೆ ಮಾಡುತ್ತೇವೆ. ಇದರ ಜೊತೆಗೆ ಸಂಭಾಷಣೆಯನ್ನೂ ಬರೆಯುತ್ತೇವೆ. ಇದು ತುಸು ಕಷ್ಟದ ಕೆಲಸ. ಆದರೆ ಅದಕ್ಕೆ ತಕ್ಕಷ್ಟುಸಂಭಾವನೆ ಸಿಕ್ಕುತ್ತಿಲ್ಲ. ಇಂತಹ ಸಮಯದಲ್ಲಿ ಇದು ಹೊಸ ದಾರಿ. ಪ್ರಾರಂಭದ ಹಂತವಾದ್ದರಿಂದ ಇದು ಸಾಗುತ್ತಿದೆ. ಮುಂದೆ ಹೇಗಾಗುತ್ತದೋ ನೋಡಬೇಕು.

ನಮಗೆ ಮಾಮೂಲಿಯಂತೆ ಎಪಿಸೋಡ್‌ ಲೆಕ್ಕದಲ್ಲಿಯೇ ಪೇಮೆಂಟ್‌ ಮಾಡುತ್ತಿದ್ದಾರೆ. ನಾನು ಈಗ ನಾಗಕನ್ನಿಕಾ, ಅಶೋಕ ಸೀರಿಯಲ್‌ಗಳಿಗೆ ಬರೆಯುತ್ತಿದ್ದೇನೆ. ಇವು ಎಲ್ಲರಿಗೂ ಗೊತ್ತಿರುವ ಕತೆ, ಫ್ಯಾಂಟಸಿ ಆಗಿರುವುದರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ನಾವು ಅನುವಾದ ಮಾಡುವಾಗ ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಾಡುತ್ತೇವೆ.

ಹಿಂದಿಯಲ್ಲಿ ಜಗತ್ತಿಗೆ ಸಂಸಾರ್‌ ಎನ್ನುತ್ತಾರೆ. ನಾವು ಅದನ್ನೇ ಇಲ್ಲಿ ಬಳಕೆ ಮಾಡುವುದಕ್ಕೆ ಆಗುವುದಿಲ್ಲ. ಪದಶಃ ಅರ್ಥಗಳನ್ನು ನೋಡದೇ ಅದರ ಭಾವಾರ್ಥ, ಸಂದರ್ಭ ಎನ್ನವನ್ನೂ ನೋಡಿಕೊಂಡು ಅನುವಾದ ಮಾಡುತ್ತೇವೆ. ಎರಡೂ ಭಾಷೆಗಳು ಚೆನ್ನಾಗಿ ಗೊತ್ತಿದ್ದರೆ, ಭಾಷೆಯ ಒಳನೋಟಗಳು ಗೊತ್ತಿದ್ದರೆ ಅನುವಾದ ಸುಲಭವಾಗುತ್ತದೆ ಮತ್ತು ಅರ್ಥವತ್ತಾಗುತ್ತದೆ. ನಾವು ಹೀಗೆ ಮಾಡಿಕೊಟ್ಟಅನುವಾದವನ್ನು ಚಾನೆಲ್‌ನವರು ಚೆಕ್‌ ಮಾಡುತ್ತಾರೆ. ಸಣ್ಣ ಪುಟ್ಟಬದಲಾವಣೆಗಳನ್ನು ಸೂಚಿಸುತ್ತಾರೆ, ಅಥವಾ ಅವರೇ ಮಾಡಿಕೊಳ್ಳುತ್ತಾರೆ. ಇದೊಂದು ಟೀಮ್‌ ವರ್ಕ್ ಆಗಿರುವುದರಿಂದ ಎಲ್ಲರೂ ಚೆಕ್‌ ಮಾಡುತ್ತಾರೆ, ಚಾನೆಲ್‌ನವರು ಮಾನಿಟರ್‌ ಮಾಡುತ್ತಾರೆ.

ಇದೊಂದು ಕಿಟಕಿಯಾಗಬೇಕಷ್ಟೇ

ಪ್ರೀತಿ ನಾಗರಾಜ್‌

(ಲೇಖಕಿ, ಸಂಭಾಷಣಾಕಾರ್ತಿ)

ಕರ್ತೃ, ಕ್ರಿಯೆ, ಕರ್ಮಗಳಲ್ಲಿ ಹಿಂದಿ, ಕನ್ನಡದಲ್ಲಿ ಭಿನ್ನತೆ ಇದೆ. ನಾನು ಅನುವಾದ ಮಾಡುವಾಗ ಕನ್ನಡ ಚೆನ್ನಾಗಿ ಮೂಡಿ ಬರಬೇಕು ಎನ್ನುವುದಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಲಿಪ್‌ ಸಿಂಕಿಂಗ್‌ ಎರಡನೇಯದು. ನೋಡುಗನಿಗೆ ಇದು ಹಿಂದಿಯಿಂದ ಡಬ್‌ ಆಗುತ್ತಿರುವ ಸೀರಿಯಲ್‌ ಎನ್ನುವುದು ಮೊದಲೇ ಗೊತ್ತಿರುವುದರಿಂದ ಅದು ಸಮಸ್ಯೆ ಆಗುವುದಿಲ್ಲ. ಅಲ್ಲದೇ ಹಿಂದಿಯವರು ಸೀರಿಯಲ್‌ ಮಾಡುವಾಗ ಅದು ನಾಲ್ಕಾರು ಭಾಷೆಗೆ ಡಬ್‌ ಆಗುತ್ತದೆ ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಪೂರಕವಾಗಿಯೂ ಕೆಲಸ ಮಾಡುತ್ತಾರೆ.

ಸಂಭಾವನೆಯ ವಿಚಾರಕ್ಕೆ ಬಂದರೆ ಇದು ಕಡಿಮೆಯೇ. ಆದರೆ ಈ ದುರಿತ ಕಾಲದಲ್ಲಿ ಏನೂ ಇಲ್ಲ ಎನ್ನುವುದಕ್ಕಿಂತ ಏನೋ ಒಂದು ಇದೆ ಎನ್ನುವಷ್ಟುಇದೆ. ಅನುವಾದ, ಸಂಭಾಷಣೆ ಎರಡನ್ನೂ ನಾವು ಒಟ್ಟಾಗಿ ಮಾಡುತ್ತೇವೆ. ಇದು ಸದ್ಯಕ್ಕೆ ಓಕೆ. ಆದರೆ ಮುಂದೆ ಇದೇ ಆಗಬಾರದು. ಇದರಿಂದ ನಮ್ಮ ಸ್ಥಳೀಯ ಕಲಾವಿದರಿಗೆ ಕಷ್ಟವಾಗುತ್ತದೆ. ಇದು ನಮ್ಮ ಪಾಲಿಗೆ ಸಣ್ಣ ಕಿಟಿಕಿಯಾಗಬೇಕು ಅಷ್ಟೆ. ಹಿಂದಿಯ ಒಂದು ಕಂಟೆಂಟ್‌ ಅನ್ನು ನಾವು ಕನ್ನಡಕ್ಕೆ ತಂದಿದ್ದೀವಿ ಎನ್ನುವುದು ಆಗಬೇಕೇ ಹೊರತು, ಎಲ್ಲವನ್ನೂ ಅಲ್ಲಿಂದಲೇ ತರುತ್ತೇವೆ ಎನ್ನುವಂತೆ ಆಗಬಾರದು.

ನಾವು ಒಂದು ಗಂಟೆಯ ಕಂಟೆಂಟ್‌ ಬರೆಯಬೇಕು ಎಂದಾಗ ಎರಡು ಮೂರು ಪ್ರಾಸೆಸ್‌ಗಳು ಒಟ್ಟಿಗೆ ಸಾಗುತ್ತವೆ. ಹಿಂದಿಯ ಸೀರಿಯಲ್‌ ಕೇಳುತ್ತಾ, ನೋಡುತ್ತಾ ಅದನ್ನು ಅರ್ಥವತ್ತಾಗಿ ಕನ್ನಡಕ್ಕೆ ತರಬೇಕು. ಅಲ್ಲಿ 30 ಸೆಕೆಂಡ್‌ನಲ್ಲಿ ಡೈಲಾಗ್‌ ಹೇಳಿದ್ದಾರೆ ಎಂದರೆ ನಮ್ಮಲ್ಲಿಯೂ ಅಷ್ಟೇ ಸಮಯದಲ್ಲಿ ಡೈಲಾಗ್‌ ಹೇಳುವಂತಹ ಪದಗಳ ಬಳಕೆ ಮಾಡಬೇಕು. ಅದೂ ಅರ್ಥ ಕೆಡದ ರೀತಿಯಲ್ಲಿ. ನೋಡಿದವರಿಗೆ ಇದು ನಮ್ಮದು ಎನ್ನಿಸಬೇಕು.

ಚಾನೆಲ್‌ಗಳು ನಮಗೆ ಅನುವಾದದ ವಿಚಾರದಲ್ಲಿ ಸ್ವತಂತ್ರ ಕೊಟ್ಟಿವೆ. ಕೆಲವು ಬದಲಾವಣೆಗಳನ್ನು ಅವರು ಮೊದಲೇ ಹೇಳಿರುತ್ತಾರೆ. ಅದಕ್ಕೆ ತಕ್ಕಂತೆ ನಾವು ಅನುವಾದ ಮಾಡಿರುತ್ತೇವೆ. ನಾವು ಸಾಕಷ್ಟುಎಚ್ಚರ ಇಟ್ಟುಕೊಂಡೇ ಅನುವಾದ ಮಾಡಿರುತ್ತೇವೆ. ಕಡೆಗೆ ಚಾನೆಲ್‌ನವರೇ ಜವಾಬ್ದಾರರಾಗಿರುವುದರಿಂದ ಅಲ್ಲಿನ ಒಂದು ಟೀಮ್‌ ಇದನ್ನು ಚೆಕ್‌ ಮಾಡುತ್ತಾರೆ. ಕಡೆಗೆ ಇದು ಡಬ್ಬಿಂಗ್‌ಗೆ ಹೋಗುತ್ತದೆ.

ನಾವು ಒಂದು ಗಂಟೆಯ ಅನುವಾದ ಮಾಡಬೇಕು ಎಂದರೆ ಅದಕ್ಕೆ ಕನಿಷ್ಟನಾಲ್ಕು ಗಂಟೆಯ ವಿನಿಯೋಗವನ್ನಂತೂ ಮಾಡಬೇಕಾಗುತ್ತದೆ.

ನಾನು ಮಾತಿನಲ್ಲಿ ದ್ರೌಪದಿ

-ಸ್ಪರ್ಶಾ ಆರ್‌ ಕೆ

ದಿನಕ್ಕೆ ಹತ್ತು ಎಪಿಸೋಡ್‌ ಡಬ್‌ ಮಾಡುತ್ತೇನೆ. ನನ್ನ ಡಬ್ಬಿಂಗ್‌ ಕೆಲಸ ಶುರುವಾಗಿ ಈಗಿನ್ನೂ ಮೂರು ದಿನ ಆಗಿದೆಯಷ್ಟೇ, ಆಗಲೇ ದ್ರೌಪದಿ ಪಾತ್ರಕ್ಕೆ 30 ಎಪಿಸೋಡ್‌ಗೆ ಡಬ್ಬಿಂಗ್‌ ಕೆಲಸ ಮುಗಿಸಿರುವೆ. ನಮಗೆಲ್ಲಾ ಎಪಿಸೋಡ್‌ಗೆ ಇಂತಿಷ್ಟುಅಂತ ಸಂಭಾವನೆ ಕೊಡುತ್ತಾರೆ, ದಿನದ ಲೆಕ್ಕವಲ್ಲ. ನಾನು ದ್ರೌಪದಿ ಪಾತ್ರಕ್ಕಷ್ಟೇ ಡಬ್ಬಿಂಗ್‌ ಮಾಡೋದು. ಬೇರೆ ಭಾಷೆಯಲ್ಲಿ ಕಲಾವಿದರು ಮಾತಾಡಿರುತ್ತಾರೆ. ಅದನ್ನು ಕನ್ನಡಕ್ಕೆ ಡಬ್‌ ಮಾಡುವಾಗ ಕೆಲವೊಂದು ಸಣ್ಣಪುಟ್ಟಮಾರ್ಪಾಡು ಮಾಡಲೇಬೇಕಾಗುತ್ತೆ. ನಮ್ಮ ಮುಂದೆ ಅನುವಾದಿಸಿದ ಸಂಭಾಷಣೆ ಇರುತ್ತದೆ. ಅದರಲ್ಲಿ ಸಣ್ಣಪುಟ್ಟಬದಲಾವಣೆ ಮಾಡಲೇಬೇಕಾಗುತ್ತದೆ. ಆದರೆ ಹೆಚ್ಚಿನಂಶ ಬರಹದಲ್ಲಿರುವುದನ್ನೇ ಮಾತಾಡುತ್ತೇವೆ. ಈ ಕೆಲಸದಲ್ಲಿ ಅಂಥ ದೊಡ್ಡ ಸಂಭಾವನೆಯೇನೂ ಇಲ್ಲ. ಬಹುಶಃ ಮುಂದೆ ಹೆಚ್ಚಾಗಬಹುದು.

ಮತ್ತೊಬ್ಬರಿಗೆ ದನಿಯಾದದ್ದು ಇದೇ ಮೊದಲು

- ದೇವು ರೂಪಾಂತರ

ಇದೊಂದು ಹೊಸ ಅನುಭವ. ಮತ್ತೊಬ್ಬರ ಪಾತ್ರಕ್ಕೆ ಎಂದೂ ಧ್ವನಿ ನೀಡಿರಲಿಲ್ಲ ನಾನು. ಸಿನಿಮಾಗಳಲ್ಲಿ ನನ್ನ ಪಾತ್ರಕ್ಕೆ ನಾನೇ ಧ್ವನಿ ನೀಡುತ್ತಿದ್ದೆ ಅನ್ನೋದು ಬಿಟ್ಟರೆ ಈ ಥರದ ಡಬ್ಬಿಂಗ್‌ ನನಗೆ ಮೊದಲ ಅನುಭವ.

ನಾನಿಲ್ಲಿ ಕೃಷ್ಣನ ಪಾತ್ರಕ್ಕೆ ಮಾತ್ರ ಡಬ್ಬಿಂಗ್‌ ಮಾಡುತ್ತಿರುವೆ. ಸದ್ಯ ನಾನು ದಿನಕ್ಕೆ ಮೂರ್ನಾಲ್ಕು ಎಪಿಸೋಡ್‌ ಡಬ್ಬಿಂಗ್‌ ಮಾಡುತ್ತೀನಿ. ಮೂಲ ಬೇರೆ ಭಾಷೆಯದ್ದಾದ ಕಾರಣ ಲಿಪ್‌ ಸಿಂಕ್‌ ಮಾಡೋದು ಸಮಸ್ಯೆ. ಕನ್ನಡದ ಪದಕ್ಕೂ ಹಿಂದಿಯ ಪದಕ್ಕೂ ವ್ಯತ್ಯಾಸ ಇದ್ದೇ ಇರುತ್ತೆ. ಅದನ್ನು ಸರಿದೂಗಿಸೋದು ಚಾಲೆಂಜಿಂಗ್‌. ಇದು ಡಬ್ಬಿಂಗ್‌ ಸೀರಿಯಲ್‌ ಆಗಿರುವ ಕಾರಣ ಡಬ್ಬಿಂಗ್‌ ಕಲಾವಿದರು ಧ್ವನಿ ನೀಡುವಾಗ ಸ್ಪಲ್ಪ ಬದಲಾವಣೆ ಮಾಡಲೇ ಬೇಕಾಗುತ್ತದೆ. ಇದಕ್ಕೆ ಡೈರೆಕ್ಟ​ರ್‍ಸ್ ಇರುತ್ತಾರೆ. ಅವರು ಗೈಡ್‌ ಮಾಡುತ್ತಾರೆ.

ಡಬ್ಬಿಂಗ್‌ ಕಲಾವಿದರಿಗೆಂದೇ ಒಂದು ಸಂಭಾವನೆ ನಿಗದಿ ಮಾಡಿರುತ್ತಾರೆ. ಅದರ ವಿವರಗಳು ನನ್ನಲ್ಲೇ ಇರಲಿ.

ಮೊದಲು ಡಬ್ಬಿಂಗ್‌ ಮಾಡಿದಾಗ ಎರಡೂವರೆ ವರ್ಷ

ಆಶಾ

ನಾನು ಈ ಹಿಂದೆ ‘ಬಾಳು ಜೇನು’ ಸಿನಿಮಾದಲ್ಲಿ ಆರತಿ ಮಗುವಿನ ಪಾತ್ರಕ್ಕೆ ಡಬ್‌ ಮಾಡಿದ್ದೆ. ಮೂಲತಃ ಡಬ್ಬಿಂಗ್‌ ಕಲಾವಿದೆ. ಕಳೆದ ನಲವತ್ತೆಂಟು ವರ್ಷದಿಂದ ಡಬ್ಬಿಂಗ್‌ ಕ್ಷೇತ್ರದಲ್ಲಿರುವೆ. ಮೊದಲು ಡಬ್ಬಿಂಗ್‌ ಮಾಡಿದಾಗ ನಾನು ಎರಡೂವರೆ ವರ್ಷದ ಮಗು. ಹೀಗಾಗಿ ದಿನಕ್ಕೆ ಹತ್ತು ಎಪಿಸೋಡ್‌ ಮಾಡೋದೂ ಕಷ್ಟಅಲ್ಲ. ಹೀಗೆ ಡಬ್ಬಿಂಗ್‌ ಮಾಡಿದಾಗ ಒಂದು ಎಪಿಸೋಡಿಗೆ ಇಂತಿಷ್ಟುಅಂತ ಸಂಭಾವನೆ ಕೊಡುತ್ತಾರೆ. ಹೆಚ್ಚಾಗಿ ಅನುವಾದ ಮಾಡಿರುವ ಸ್ಕಿ್ರಪ್ಟ್‌ ಇಟ್ಟುಕೊಂಡೇ ಮಾತಾಡುತ್ತೇನೆ.

ನಾನೇ ಆ ರಾಧೆಯ ಸಿರಿಕಂಠ!

ಅಶಿಕಾ

ಅತ್ಯಂತ ಜನಪ್ರಿಯವಾಗಿರುವ ರಾಧಾಕೃಷ್ಣ ಸೀರಿಯಲ್ಲಿನ ರಾಧೆಯ ಮಾತಿಗೆ ದನಿಯಾದದ್ದು ಸಂತೋಷ. ಇದೊಂದು ಹೊಸ ಅನುಭವ. ಬೆಳಗ್ಗೆಯಿಂದ ಸಂಜೆ ತನಕ ಮಾತಾಡುತ್ತಲೇ ಇರಬೇಕು. ಐದರಿಂದ ಏಳು ಎಪಿಸೋಡಿಗೆ ದನಿಯಾಗುತ್ತೇನೆ ನಾನು. ಮಾತು ಕಮ್ಮಿ ಇದ್ದಾಗ ಹೆಚ್ಚು ಕಂತುಗಳು ಸಾಗುತ್ತವೆ. ನನಗೆ ಕಂತುಗಳ ಲೆಕ್ಕದಲ್ಲಿ ಸಂಭಾವನೆ ಕೊಡುತ್ತಾರೆ. ದಿನದ ಲೆಕ್ಕದಲ್ಲಿ ಪಡೆಯುವವರೂ ಇದ್ದಾರೆ.

ಇದು ನನಗಿಷ್ಟಯಾಕೆಂದರೆ ಹಿಂದಿಯಲ್ಲಿ ರಾಧಾಕೃಷ್ಣ ಸೀರಿಯಲ್‌ ನೋಡಿದ್ದೆ, ಬಹಳ ಇಷ್ಟವಾಗಿತ್ತು. ಕನಸಲ್ಲೂ ಅಂದುಕೊಂಡಿರಲಿಲ್ಲ. ನಾನು ರಾಧೆ ಪಾತ್ರಕ್ಕೆ ಧ್ವನಿಯಾಗುತ್ತೀನಿ ಅಂತ. ನನಗೆ ಹಿಂದಿ ಸಲೀಸು. ಕನ್ನಡ ಭಾಷಾ ಜ್ಞಾನವೂ ಚೆನ್ನಾಗಿದೆ. ಹೀಗಾಗಿ ಎಷ್ಟೋ ಸಲ ಪದಗಳನ್ನು ನಾನೇ ಹೆÜಣೆಯೋದಿದೆ. ಜೊತೆಗೆ ಸ್ಕಿ್ರಪ್ಟ್‌ ಇರುತ್ತೆ.

ನಾನು ರಾಧೆಯ ಕೃಷ್ಣನ ಕೊರಳು

-ನಿಪುಣ್‌ ಕೆ.,

ಡಬ್ಬಿಂಗ್‌ ನನಗೆ ಹೊಸದೇನಲ್ಲ. ಚಿಂಟೂ ಟಿವಿಯ ಕಾರ್ಟೂನ್‌ ಪಾತ್ರಗಳಿಗೆ ಧ್ವನಿ ನೀಡುವಾಗ ನಾವೇ ಹಿಂದಿ ಅಥವಾ ಇಂಗ್ಲೀಷ್‌ನಿಂದ ಅನುವಾದಿಸಿಕೊಂಡು ಧ್ವನಿ ನೀಡುತ್ತಿದ್ದೆವು. ಆದರೆ ರಾಧಾಕೃಷ್ಣ ಧಾರಾವಾಹಿಯಲ್ಲಿ ಸ್ಕಿ್ರಪ್ಟ್‌ ಇಟ್ಟುಕೊಂಡೇ ಧ್ವನಿ ನೀಡುತ್ತೇವೆ. ಸೀರಿಯಲ್‌ನಲ್ಲಿ ಕೃಷ್ಣನೇ ಹೆಚ್ಚು ಕಾಣಿಸಿಕೊಳ್ಳುವುದರಿಂದ ಹೆಚ್ಚು ಡೈಲಾಗ್‌ಗಳಿರುತ್ತವೆ. ಹೀಗಾಗಿ ದಿನಕ್ಕೆ ನಾಲ್ಕು ಎಪಿಸೋಡ್‌ನಷ್ಟುಮಾಡಲಿಕ್ಕಾಗುತ್ತೆ. ನನಗೆ ಇಲ್ಲಿ ಪಾತ್ರದ ಜೊತೆಗೆ ಇತರ ಜವಾಬ್ದಾರಿಗಳೂ ಇರುವ ಕಾರಣ ತಿಂಗಳಿಗೆ ಸಂಭಾವನೆ ಇರುತ್ತೆ.

ಕೃಷ್ಣನ ಪಾತ್ರದ ವ್ಯಾಪ್ತಿ ದೊಡ್ಡದಿರುವ ಕಾರಣ ಒಂದು ಪಾತ್ರಕ್ಕಷ್ಟೇ ಧ್ವನಿ ನೀಡುತ್ತೇನೆ. ನಾನು ಮಿಮಿಕ್ರಿ ಕಲಾವಿದನೂ ಆಗಿರುವ ಕಾರಣ ಹಿಂದೆ ಬೇರೆ ಸೀರಿಯಲ್‌ಗಳಿಗೆ ಡಬ್ಬಿಂಗ್‌ ಮಾಡುವಾಗ ಹೀರೋ ಪಾತ್ರದ ಜೊತೆಗೆ ಇತರೆ ಪಾತ್ರಗಳಿಗೂ ಧ್ವನಿ ನೀಡುತ್ತಿದ್ದೆ. ಇದು ಪೌರಾಣಿಕ ಪಾತ್ರ, ಹೆಚ್ಚು ತೂಕವಿರುವ ಪಾತ್ರವಾದ ಕಾರಣ ಅಂಥಾ ಪ್ರಯೋಗ ಮಾಡಿಲ್ಲ.

click me!