ನಟಿ ಸೋನು ಗೌಡ ವಾರಾಣಸಿಗೆ ಹೋಗಿ ಬಂದಿದ್ದಾರೆ. ಮೂರು ದಿನದ ಕಾಲದ ಕಾಶಿಯಲ್ಲಿ ತಂಗಿ ನಟಿ ನೇಹಾ ಗೌಡ ಅವರೊಂದಿಗೆ ಕಳೆದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಚಿಕ್‌ಪೇಟೆಗಿಂತ ಚಿಕ್ಕ ಚಿಕ್ಕ ಗಲ್ಲಿಗಳು, ಅದೆಷ್ಟೋ ಲೆಕ್ಕ ಮಾಡದಷ್ಟು ದೇವರುಗಳು, ಅವರಿಗೆ ಪೂಜೆ, ಜನ ಜಂಗುಳಿ ಇದ್ದರೂ ಇಡೀ ಪರಿಸರದಲ್ಲೊಂದು ಪ್ರಶಾಂತತೆ. ಒಂದು ಕಡೆ ಪಾಪ ಕಳೆಯಲು, ಪ್ರೀತಿ ಸಿಗಲು, ಬದುಕು ಚೆನ್ನಾಗಿರಲು ಪ್ರಾರ್ಥಿಸುವ ಜನ, ಮತ್ತೊಂದು ಕಡೆ 24 ಗಂಟೆ ಬಿಡುವಿಲ್ಲದಂತೆ ಘಾಟ್‌ಗೆ ಬರುವ ಹೆಣಗಳು, ಒಂದೇ ಫ್ರೇಮಿನಲ್ಲಿ ಬದುಕಿನ ವಿವಿಧ ಚಿತ್ರಗಳು. ಇದು ನನ್ನ ಕಾಶಿ ಯಾತ್ರೆಯ ಹೈಲೈಟ್.
* ಕಾಶಿಗೆ ವಯಸ್ಸಾದ ಮೇಲೆ ಹೋಗೋದು ಅನ್ನೋ ಕಲ್ಪನೆ ಇದೆ. ಆದರೆ ಕಾಶಿಯನ್ನು ಕೈಕಾಲು ಗಟ್ಟಿಯಿರುವಾಗ ಮನಸ್ಸಲ್ಲಿ ಹುಮ್ಮಸ್ಸು ತುಂಬಿಕೊಂಡಿರುವಾಗಲೇ ನೋಡಬೇಕು. ವಯಸ್ಸಾದ ಮೇಲೆ ಇಲ್ಲಿನ ಮೆಟ್ಟಿಲುಗಳನ್ನು ಹತ್ತಿಳಿಯೋದು, ಕಿಲೋಮೀಟರ್‌ಗಟ್ಟಲೆ ನಡೆಯೋದು ಕಷ್ಟ. ಬದುಕು ಎಷ್ಟು ಸುಂದರವಾಗಿದೆ ಅನ್ನೋದನ್ನು ಕಾಶಿ
ನಿಮಗೆ ಅರ್ಥ ಮಾಡಿಸುತ್ತೆ.
* ಇಲ್ಲಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಇಲ್ಲ. ಇಲ್ಲಿ ತೊಟ್ಟ ಬಟ್ಟೆಗಿಂತ ಅಧ್ಯಾತ್ಮ ತುಂಬಿದ ಮನಸ್ಸಿಗೇ ಬೆಲೆ. ಬೀದಿಗಳಲ್ಲಿ ಒಂದು ಕಡೆ ಕುಣಿಯುತ್ತಿರುವ, ಮತ್ತೊಂದು ಕಡೆ ಕೊಳಲು ಊದುತ್ತಿರುವ, ಮಗದೊಂದು ಕಡೆ ಹಾಡುತ್ತಿರುವ ಕಲಾವಿದರ ಗುಂಪು. ಅವರ ವಸ್ತ್ರಗಳಂತೂ ಬಹಳ ಸೊಗಸು. ಇಲ್ಲಿನ ಸಾಂಸ್ಕೃತಿಕ ಬಣ್ಣ ಬಲು ಚಂದ. ಬ್ರದರ್ ರಾಕ್ ಬ್ಯಾಂಡ್‌ನ ಗಾಯಕರಂತೂ ಹಾಡಿನಲ್ಲೇ ಕಳೆದುಹೋಗು ವಂತೆ ಇಡೀ ದಿನ ಶಿವನ ಹಾಡುಗಳನ್ನು ಹಾಡುತ್ತಿರುತ್ತಾರೆ.
* ಕಾಶಿಯ ಗಲ್ಲಿ ಗಲ್ಲಿಗಳಲ್ಲಿನ ತಿಂಡಿಗೆ ಅದ್ಭುತ ರುಚಿ ಇದೆ. ಮಣ್ಣಿನ ಮಡಕೆಯಲ್ಲಿ ಕೊಡುವ ಲಸ್ಸಿ, ಟೆಮ್ಯಾಟೊ ಚಾಟ್, ಲಸ್ಸಿ, ರಸಗುಲ್ಲ, ಜಿಲೇಬಿ ಟೇಸ್‌ಟ್ ಮಾಡಿದೆವು. ಮೊಸರು, ಬೆಣ್ಣೆ ಹಾಕಿರುವ ಒಂದು ತಿಂಡಿಗಂತೂ ಅದ್ಭುತ ರುಚಿ. ಇಲ್ಲಿ ಬಾಂಗು ಅಂದ್ರೆ ರಾಮ ರಸ ಸಿಗುತ್ತೆ. ಏನಾಗಬಹುದೋ ಅನ್ನೋ ಭಯದಲ್ಲಿ ಕುಡಿಯಲಿಲ್ಲ.
ಆಪ್ತರನ್ನು ಕಳೆದುಕೊಂಡೆ, ಬೇರೆಯವರ ನೋಡಿ ಭಯವಾಗುತ್ತಿತ್ತು: ಸೋನು ಗೌಡ* ಬೇರೆಡೆ ಹೆಣ ಸುಡುವ ಕಡೆ ಹೋದರೆ ಒಡೆದ ಹಾಲಿನಂಥಾ ವಾಸನೆ ಇರುತ್ತದೆ. ಆದರೆ ಇಲ್ಲಿ ದಿನದ 24 ಗಂಟೆಗಳ ಕಾಲ ಹೆಣ ಸುಡುತ್ತಲೇ ಇರುತ್ತಾರೆ. ನಾನು ಮಣಿಕರ್ಣಿಕಾ ಘಾಟ್‌ನಲ್ಲಿ ಒಂದಿಷ್ಟು ಹೊತ್ತು ನಿಂತಿದ್ದೆ. ಒಂದು ಚೂರೂ ವಾಸನೆ ಇಲ್ಲ. ಬರ್ನಿಂಗ್ ಈಸ್ ಲರ್ನಿಂಗ್, ಕ್ರಿಮೇಶನ್ ಈಸ್ ನಾಲೆಡ್‌ಜ್ ಎಂಬ ವಿಚಾರ ಇಲ್ಲಿ ಅರ್ಥವಾಯಿತು.
* ಇಲ್ಲೊಬ್ಬರು ಗಾಂಧೀಜಿ ಅನುಯಾಯಿ ಕನ್ನಡಿಗರು ಸಿಕ್ಕಿದ್ದರು. ಅವರಿಂದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಬಗ್ಗೆ ತಿಳಿದುಕೊಂಡು ಶಾಸ್ತ್ರಿಗಳ ತಂದೆಯವರ ಮನೆಗೂ ಭೇಟಿ ನೀಡಿದೆವು. ಅವರ ಸರಳ ಬದುಕಿನ ದರ್ಶನವಾಯಿತು.