ಶ್ರುತಿ ನಾಯ್ಡು ವಿಚಾರಗಳು: ಮಕ್ಕಳಿಗೆ ವಿದೇಶದ ಬದಲು ಕಾಡು ತೋರಿಸೋಣ!

By Kannadaprabha News  |  First Published Jun 5, 2020, 9:26 AM IST

ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು ಮಾದರಿ ಹಸಿರು ಉಳಿಸಿ ಅಭಿಯಾನ| ಓಟದ ವೇಗ ಇಳಿಸಿದರೆ’ ಪರಿಸರ ತನ್ನಿಂತಾನೇ ಉಳಿಯುತ್ತದೆ| ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅರಣ್ಯ ಉಳಿಸಲು ಟೊಂಕ ಕಟ್ಟಿನಿಂತ ಶ್ರುತಿ ನಾಯ್ಡು|


ಸಿನಿಮಾ, ಸೀರಿಯಲ್‌ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ಶ್ರುತಿ ನಾಯ್ಡು. ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅವರು ಅರಣ್ಯ ಉಳಿಸಲು ಟೊಂಕ ಕಟ್ಟಿನಿಂತಿರುವುದು ನಿಜಕ್ಕೂ ಅಚ್ಚರಿ. ತಾವೇ ಸ್ವತಃ ಕಾಡು ಸುತ್ತಾಡಿ ಅಲ್ಲಿನ ಸಮಸ್ಯೆ ತಿಳಿದುಕೊಂಡು ಅದಕ್ಕೆ ಪರಿಹಾರ ಒದಗಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪರಿಸರ ಇದ್ದರೆ ನಾವು ನಾಡೂ ಎಲ್ಲವೂ ಎನ್ನುವ ಶ್ರುತಿ ನಾಯ್ಡು ಅವರ ಪರಿಸರ ಪ್ರೇಮದ ಅಪರೂಪದ ಕೆಲಸಗಳ ಕುರಿತು ಮಾತನಾಡಿದ್ದಾರೆ.
ಸಿನಿಮಾ, ಸೀರಿಯಲ್‌ ಕ್ಷೇತ್ರದಲ್ಲಿ ತುಂಬಾ ಬ್ಯುಸಿಯಾಗಿ ಇರುವವರು ನೀವು. ಆದರೂ ಅರಣ್ಯ ರಕ್ಷಣೆಗೆ ಟೊಂಕ ಕಟ್ಟಿನಿಂತಿದ್ದೀರಿ. ಹೇಗೆ ಸಾಧ್ಯ?

ಅರಣ್ಯ, ಕಾಡು, ಪ್ರಕೃತಿ ಇದ್ದರೆ ನಾವು. ಇಲ್ಲದಿದ್ದರೆ ನಾವು ಯಾರೂ ಇರುವುದಿಲ್ಲ ಅನ್ನುವ ಪರಮ ಸತ್ಯವನ್ನು ನಾವು ತಿಳಿದುಕೊಳ್ಳಬೇಕು. ಈಗ ಕೊರೋನಾ ವೈರಸ್ಸು ಬಂದ ನಂತರ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು ಎಂದು ಗೊತ್ತಾಗಿದೆ. ಎಲ್ಲರೂ ಪದೇ ಪದೇ ಅದನ್ನೇ ಹೇಳುತ್ತಿದ್ದಾರೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಹೇಗೆ? ಸಹಜ ರೀತಿಯಲ್ಲಿ ಕೃಷಿ ಮಾಡಬೇಕು. ರಾಸಾಯನಿಕ ಇಲ್ಲದ ಹಣ್ಣು, ತರಕಾರಿ ಬೆಳೆಯಬೇಕು. ಕಾಡು ಉಳಿಸಬೇಕು. ಎಲ್ಲವೂ ಸಹಜವಾಗಿ ಇದ್ದರೆ, ಸಹಜವಾಗಿ ಬೆಳೆದ ಹಣ್ಣು ತರಕಾರಿ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಮ್ಮ ಬದುಕಿನ ಕ್ರಮ ಕೂಡ ಬದಲಾಗುತ್ತದೆ. ಈ ಸತ್ಯವನ್ನು ದೊಡ್ಡವರು ಮೊದಲೇ ತಿಳಿದುಕೊಂಡಿದ್ದರು. ನಾನು ಚಿಕ್ಕಂದಿನಿಂದಲೇ ಕಾಡನ್ನು ಪ್ರೀತಿಸುವ ಸ್ವಭಾವ ಹೊಂದಿದ್ದರಿಂದ ಕಾಡನ್ನು ಉಳಿಸಲು ಶ್ರಮಿಸುತ್ತಿದ್ದೇನೆ. ಕಾಡು ಉಳಿಯಬೇಕು. ಅದರಿಂದ ನಾಡೂ ಉಳಿಯಬೇಕು. ಕಾಡಿನ ಹೋರಾಟಗಾರರ ಬಗ್ಗೆಯೂ ನೀವು ಶ್ರಮ ವಹಿಸುತ್ತಿದ್ದೀರಿ.

Tap to resize

Latest Videos

ಕೊರೋನಾ ವಾರಿಯರ್ಸ್‌ಗೆ ಶ್ರುತಿ ನಾಯ್ಡು ವಿಭಿನ್ನ ಸೆಲ್ಯೂಟ್, ಗುಡ್ ವರ್ಕ್ ಮ್ಯಾಡಮ್

ಕಾಡು ಹೊರಗಿನಿಂದ ನೋಡಿದರೆ ಸುಂದರವಾಗಿ ಕಾಣುತ್ತದೆ. ಹಾಗೆ ಸುಂದರವಾಗಿ ಕಾಣಲು ನೂರಾರು ಮಂದಿ ಶ್ರಮ ವಹಿಸುತ್ತಾರೆ. ಅದು ಯಾರ ಕಣ್ಣಿಗೂ ಕಾಣುವುದಿಲ್ಲ. ನಾನು ಕನ್ನಡಪ್ರಭ-ಸುವರ್ಣ ನ್ಯೂಸ್‌ ಆಯೋಜಿಸಿದ್ದ ‘ಸೇವ್‌ ವೈಲ್ಡ್‌ಲೈಫ್‌’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹತ್ತಾರು ಕಾಡು ಸುತ್ತಿದೆ. ಆಗ ಅಲ್ಲಿ ಅರಣ್ಯ ರಕ್ಷಕರ ಕೆಲಸಗಳನ್ನು ತುಂಬಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅರಣ್ಯದ ಒಳಗೆ ಆ್ಯಂಟಿ ಪೋಚಿಂಗ್‌ ಕ್ಯಾಂಪ್‌ಗಳು ಇರುತ್ತವೆ. ಅಲ್ಲಿ ಇರುವವರು ಹಗಲು ರಾತ್ರಿ ಎನ್ನದೆ ಅರಣ್ಯ ರಕ್ಷಣೆ ಮಾಡುತ್ತಾರೆ. ಕಾಡುಗಳ್ಳರಿಂದ ಕಾಡನ್ನು ರಕ್ಷಣೆ ಮಾಡುವುದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅವರ ಕೆಲಸ. ಈ ಕೆಲಸದಲ್ಲಿ ಅವರಿಗೆ ಎಷ್ಟೋ ಅಪಾಯಗಳು ಎದುರಾಗುತ್ತವೆ. ಪ್ರಾಣಿಗಳು ಅವರ ಮೇಲೆ ಆಕ್ರಮಣ ಮಾಡಿದರೂ ಅವರು ಪ್ರಾಣಿಗಳನ್ನು ಕೊಲ್ಲುವ ಹಾಗಿಲ್ಲ. ಮಳೆ, ಗಾಳಿ, ಚಳಿ, ಬಿಸಿಲು ಇದ್ಯಾವುದಕ್ಕೂ ಅವರು ಗಮನ ಕೊಡದೆ ತಮ್ಮ ಜೀವವನ್ನೇ ಕಾಡಿಗೆ ಅರ್ಪಿಸುತ್ತಾರೆ. ಅಂಥವರಿಗೆ ನಾವು ನೆರವಾಗಬೇಕು. ಅವರಿಗೆ ನೆರವಾದರೆ ಕಾಡು ಉಳಿಯುತ್ತದೆ. ಕಾಡಿನಲ್ಲಿ ಮಿಲಿಟರಿ ಥರ ಕೆಲಸ ಮಾಡುವ ಅವರ ಕಷ್ಟ, ಸಂಕಷ್ಟತಿಳಿದುಕೊಂಡು ಅದನ್ನು ಸಂಬಂಧಪಟ್ಟವರಿಗೆ ತಿಳಿಸಿ ಅವರ ಕಷ್ಟಪರಿಹಾರ ಆಗುವ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಅದರಿಂದ ಅವರು ಮತ್ತಷ್ಟುಉತ್ಸಾಹದಿಂದ ಕೆಲಸ ಮಾಡಿದರೆ ಶ್ರಮ ಸಾರ್ಥಕ.

ನಿಮ್ಮ ಪರಿಸರ ಪ್ರೇಮಕ್ಕೆ ಪ್ರೇರಣೆ ಏನು?

ನನ್ನ ಊರು ಮೈಸೂರು. ಮೊದಲಿನಿಂದಲೂ ಕಾಡಿನ ಸಹವಾಹಸ ಇರುವವಳು ನಾನು. ಚಿಕ್ಕಂದಿನಲ್ಲಿ ರಜೆ ಸಿಕ್ಕರೆ ಸಾಕು ಕಬಿನಿ, ಬಂಡೀಪುರ ಕಾಡಿಗೆ ಹೋಗುತ್ತಿದ್ದೆವು. ಬೆಂಗಳೂರಿಗೆ ಬಂದ ಮೇಲೂ ಅಷ್ಟೇ. ನಾನು ರಜೆ ಸಿಕ್ಕಾಗ ವಿದೇಶ ಪ್ರವಾಸ ಮಾಡುವುದಿಲ್ಲ. ಅದಕ್ಕೆ ಬದಲಾಗಿ ಕಾಡಿಗೆ ಹೋಗುತ್ತೇನೆ. ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಕಾಡು ಒಂದು ನೆಮ್ಮದಿ ನೀಡುವ ತಾಣ. ಏನೇ ಒತ್ತಡ ಇದ್ದರೂ ಕಾಡಿಗೆ ಹೋದರೂ ಸಾಕು ಪರಿಹಾರ ಆಗುತ್ತದೆ. ಹಾಗಾಗಿ ಎಲ್ಲರೂ ರಜೆಯಲ್ಲಿ ಒಮ್ಮೆಯಾದರೂ ಕಾಡಿಗೆ ಹೋಗಬೇಕು. ಮಕ್ಕಳಿಗೆ ಕಾಡು ತೋರಿಸಬೇಕು. ಯಾಕೆ ಕಾಡು ಉಳಿಯಬೇಕು ಅನ್ನುವುದು ಮಕ್ಕಳಿಗೆ ಅರ್ಥ ಮಾಡಿಸಬೇಕು. ಮಕ್ಕಳಿಗೆ ಅರ್ಥವಾದರೆ ಮುಂದಿನ ಪೀಳಿಗೆಯಲ್ಲೂ ಕಾಡು, ಪರಿಸರ ಜೀವಂತವಾಗಿ ಇರುತ್ತದೆ. ನಗರಗಳೇ ಜೀವನ ಎಂದು ಮಕ್ಕಳಿಗೆ ಅನ್ನಿಸಿದರೆ ಬದುಕು ಕಷ್ಟವಾಗುತ್ತದೆ. ನಾನು ಪೋಷಕರನ್ನು ಕೇಳಿಕೊಳ್ಳುವುದಿಷ್ಟೇ, ಮಕ್ಕಳಿಗೆ ಕಾಡು ತೋರಿಸಿ. ವನ್ಯಜೀವಿಗಳ ಪರಿಚಯ ಮಾಡಿಸಿ. ಕಾಡನ್ನು, ವನ್ಯಜೀವಿಗಳನ್ನು ಅವರು ಚೆನ್ನಾಗಿ ನೋಡಿಕೊಳ್ಳಲಿ.

ಜನರಿಗೆ ನೆರವಾಗುವುದೇ ನನಗೆ ಖುಷಿ: ಶ್ರುತಿ ನಾಯ್ಡು

ಪ್ರಕೃತಿ ಉಳಿಸುವ ಕುರಿತಾಗಿ ಜನರನ್ನು ಹೇಗೆ ಪ್ರಭಾವಿಸಬಹುದು?

ಸೇವ್‌ ವೈಲ್ಡ್‌ಲೈಫ್‌ ಕಾರ್ಯಕ್ರಮದ ಮೂಲಕವೂ ಕಾಡಿಗೆ ಹೋಗಿದ್ದಾಗ ಅಲ್ಲಿನ ಬುಡುಕಟ್ಟು ಜನರನ್ನು ಪರಿಚಯ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಅವರು ಮೊದಲು ಕಾಡಲ್ಲಿ ಇದ್ದವರು. ಈಗ ಸರ್ಕಾರ ಅವರಿಗೆ ಕಾಡಂಚಿನ ಹಳ್ಳಿಗಳಲ್ಲಿ ಮನೆ ಮಾಡಿಕೊಟ್ಟಿದೆ. ಆದರೆ ಅವರಿಗೆ ಕಾಡಲ್ಲಿ ಇರುವ ಆಸೆ. ಕಾಡಲ್ಲಿ ಇದ್ದರೆ ಅವರ ಜೀವನ ಅಭಿವೃದ್ಧಿ ಆಗಲ್ಲ ಎಂದರೆ ಅವರಿಗೆ ಅಭಿವೃದ್ಧಿಯೇ ಬೇಕಾಗಿಲ್ಲ ಎನ್ನುತ್ತಾರೆ. ಅಂಥಾ ಮಂದಿಗೆ ಕೂರಿಸಿ ಅವರ ಮಕ್ಕಳ ಜೀವನ, ಕಾಡು ಉಳಿಸುವ ಅನಿವಾರ್ಯತೆ ಮನಮುಟ್ಟುವಂತೆ ಹೇಳಿದಾಗ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಕಾಡಿನ ಬಗ್ಗೆ ನಿಜವಾದ ಮಾಹಿತಿ ಸಿಕ್ಕಿದರೂ ಎಲ್ಲರೂ ಕಾಡನ್ನು ಪ್ರೀತಿಸಲು ಶುರು ಮಾಡುತ್ತಾರೆ. ಅರಿವು ಮೂಡಿಸುವ ಕೆಲಸ ಮಾಡಬೇಕು.

ನೀವು ಜನರನ್ನು ಕಾಡಿನ ಪ್ರೇಮಕ್ಕೆ ಒಳಪಡಿಸಿದ ಹೇಗೆ ಪ್ರೇರೇಪಿಸುತ್ತೀರಿ?

ನಾವು ಕಳೆದ ವರ್ಷ ಎಚ್‌ಡಿ ಕೋಟೆ, ಮಲೆಮಹದೇಶ್ವರ ಬೆಟ್ಟ, ಗುಂಡ್ಲುಪೇಟೆ, ಕೊಳ್ಳೇಗಾಲ ಮುಂತಾದ ಕಡೆಗಳಲ್ಲಿ ಕಾಂಡಚಿನ ಶಾಲೆ, ಕಾಲೇಜುಗಳಿಗೆ ಹೋಗಿದ್ದೆವು. ನಮ್ಮ ಉದ್ದೇಶ ಅಲ್ಲಿನ ಮಕ್ಕಳಿಗೆ ಕಾಡಿನ ಉಪಯುಕ್ತತೆಯ ಕುರಿತು ಅರಿವು ಮೂಡಿಸುವುದು. ಮಕ್ಕಳಿಗೆ ಕಾಡು ಯಾಕೆ ಉಳಿಯಬೇಕು ಎಂದು ಗೊತ್ತಾದರೆ ನಮ್ಮ ಕೆಲಸ ಅರ್ಧ ಮುಗಿದಂತೆ. ಅವರು ಆಮೇಲೆ ನೋಡಿಕೊಳ್ಳುತ್ತಾರೆ. ಕಾಡು ಸ್ವಲ್ಪ ಬದಲಾದರೂ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ. ಈ ವಿಚಾರಗಳನ್ನೆಲ್ಲಾ ಮಕ್ಕಳಿಗೆ ತಿಳಿಸಿದಾಗ ಅವರೇ ಕಾಡು ಉಳಿಸುವ ಮಾತುಗಳನ್ನು ಆಡತೊಡಗಿದರು. ಅದೇ ನಮಗೆ ಸಂತೋಷ ಮತ್ತು ನೆಮ್ಮದಿ ಕೊಡುವ ವಿಚಾರ.

ಕಾಡು ಉಳಿಸಲು, ಪ್ರಕೃತಿ ಚೆನ್ನಾಗಿಟ್ಟುಕೊಳ್ಳಲು ಏನೇನು ಮಾಡಬಹುದು?

ಮೊದಲು ಸಾವಧಾನದಿಂದ ಇರುವುದನ್ನು ಕಲಿಯಬೇಕು. ವೇಗವಾಗಿ ಓಡುವುದನ್ನು ನಿಲ್ಲಿಸಬೇಕು. ಕಾಡಿನಲ್ಲಿ ಹಾದು ಹೋಗುವ ರಸ್ತೆಗಳನ್ನು ಒಮ್ಮೆ ನೋಡಿದರೆ ಗೊತ್ತಾಗುತ್ತದೆ, ಜನ ಎಷ್ಟುಅವಸರದಲ್ಲಿದ್ದಾರೆ ಅಂತ. ಹಾಗಾಗಿ ಆ ರಸ್ತೆಗಳಲ್ಲಿ ನೂರಾರು ಪ್ರಾಣಿಗಳು ಬಲಿಯಾಗುತ್ತವೆ. ಅಲ್ಲದೆ ಹಾರ್ನ್‌ ಹಾಕಿ ಸದ್ದು ಮಾಡುವ ಚಟ ಬೇರೆ ನಮಗೆ. ಅದರಿಂದ ಅಲ್ಲಿ ಇರುವ ಪ್ರಾಣಿಗಳಿಗೆ ಕಷ್ಟವಾಗುತ್ತದೆ ಅನ್ನುವ ಪರಿಜ್ಞಾನ ಕೂಡ ಇಲ್ಲ ಅನೇಕರಿಗೆ. ಅದನ್ನೆಲ್ಲಾ ಮಾಡಬಾರದು. ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ಈ ಅರಣ್ಯ ರಸ್ತೆಗಳಲ್ಲಿ ಒಂದೇ ಒಂದು ಪ್ರಾಣಿಯೂ ಬಲಿಯಾಗಿಲ್ಲ. ಅವುಗಳು ಆರಾಮಾಗಿ ಓಡಾಡಿಕೊಂಡಿವೆ. ಇನ್ನು ಮುಂದೆ ನಾವು ಅದೇ ಥರ ಇರುವಂತೆ ನೋಡಿಕೊಳ್ಳಬೇಕು. ಅದರ ಹೊರತಾಗಿ ಗಿಡ ನೆಡುವುದು, ಸ್ವಾಭಾವಿಕವಾಗಿ ಹಣ್ಣು, ತರಕಾರಿ ಬೆಳೆಯುವುದು ಇನ್ನಿತರ ಕೆಲಸಗಳನ್ನು ಮಾಡಿದರೆ ನಮಗೇ ಒಳ್ಳೆಯದು. ಇವೆಲ್ಲಾ ಪ್ರಕೃತಿ ಚೆನ್ನಾಗಿರುವಂತೆ ನೋಡಿಕೊಳ್ಳುವ ಅತ್ಯಂತ ಸುಲಭದ ಕೆಲಸಗಳು.

ಕಾಡಂಚಿನ ಶಾಲೆಯ ಶಿಕ್ಷಕರ ಖರ್ಚು ನಮ್ಮದು

ಕಾಡಂಚಿನ ಶಾಲೆಗಳಿಗೆ ಭೇಟಿ ಕೊಟ್ಟಾಗ ಮತ್ತೊಂದು ವಿಚಾರ ಗೊತ್ತಾಯಿತು. ಅಲ್ಲಿನ ಶಾಲೆಗಳಿಗೆ ಶಿಕ್ಷಕರು ಸುಲಭವಾಗಿ ಬರುವುದಿಲ್ಲ. ಕಾಡಂಚಿನ ಪ್ರದೇಶವಾದ್ದರಿಂದ ಹೆದರುತ್ತಾರೆ. ಅಲ್ಲದೆ ಅಲ್ಲಿ ಒಳ್ಳೆಯ ಸೌಕರ್ಯಗಳೂ ಸಿಗುವುದಿಲ್ಲ. ಕಷ್ಟಗಳು ಜಾಸ್ತಿ ಎಂಬ ಕಾರಣಕ್ಕೆ ಯಾರೂ ಬರಲಾರರು. ಹಾಗಾಗಿ ವರ್ಷಕ್ಕೆ ಒಬ್ಬ ಕಾಡಂಚಿನ ಶಾಲೆಯ ಶಿಕ್ಷಕರ ಖರ್ಚುವೆಚ್ಚವನ್ನು ನಾವೇ ನೋಡಿಕೊಳ್ಳಲು ತೀರ್ಮಾನಿಸಿದ್ದೇವೆ. ಕಾಡಿನ ಬಗ್ಗೆ ಕಾಳಜಿ, ಆಸಕ್ತಿ, ಕುತೂಹಲ ಇರುವವರು ಬೇಕು. ಅವರು ಮಕ್ಕಳಿಗೂ ಅರಿವು ಮೂಡಿಸಿ ಅರಣ್ಯ ಪ್ರೇಮ ಬೆಳೆಸಬೇಕು. ಅಂಥವರಿಗೆ ನಾವು ಸಂಪೂರ್ಣವಾಗಿ ನೆರವಾಗುತ್ತೇವೆ. ಕಾಡಿಗೆ ಒಳ್ಳೆಯದಾಗಬೇಕು ಅಷ್ಟೆ.

ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

ಬಳ್ಳೇಹಾಡಿಯ ಶಾಲೆ ದತ್ತು ಪಡೆದೆ

ಕಾಂಡಚಿನ ಶಾಲೆಗಳು ಚೆನ್ನಾಗಿದ್ದರೆ ಅಲ್ಲಿನ ಮಕ್ಕಳು ಚೆನ್ನಾಗಿ ಓದಲು ಅನುವಾಗುತ್ತದೆ. ಮಕ್ಕಳು ವಿದ್ಯಾವಂತರಾಗಿ ಮತ್ತಷ್ಟುಮಂದಿಗೆ ವಿದ್ಯೆ ಕಲಿಸಲು ಪ್ರೋತ್ಸಾಹ ನೀಡುತ್ತಾರೆ. ಹಾಗಾಗಿಯೇ ನಾವು ಎಚ್‌ಡಿ ಕೋಟೆಯ ಬಳ್ಳೇಹಾಡಿ ಎಂಬ ಕಾಡಂಚಿನ ಗ್ರಾಮದ ಶಾಲೆಯನ್ನು ದತ್ತು ಪಡೆದುಕೊಂಡು ಅದನ್ನು ನವೀಕರಣಗೊಳಿಸಿದ್ದೇವೆ. ಶಾಲೆ ಉಳಿದರೆ ನಾಡೂ ಉಳಿಯುತ್ತದೆ, ಕಾಡೂ ಉಳಿಯುತ್ತದೆ.

‘ಕಾಡಿನ ಸೈನಿಕರಿಗೆ’ ರೇಷನ್‌ ವಿತರಣೆ

ಕೋರೋನಾದಿಂದಾಗಿ ನಂಜನಗೂಡು ಬಹಳ ದಿನಗಳ ಕಾಲ ಸೀಲ್‌ಡೌನ್‌ ಆಗಿತ್ತು. ಆ ಕಾರಣಕ್ಕೆ ಬಂಡೀಪುರ ಆಸುಪಾಸಿನಲ್ಲಿ ಬುಡುಕಟ್ಟು ಮಂದಿಗೆ ರೇಷನ್‌ ಹೋಗುತ್ತಿರಲಿಲ್ಲ. ಅವರು ಆಹಾರ ಸಿಗದೆ ಒದ್ದಾಡುವ ಹಾಗೆ ಆಗಿತ್ತು. ಅವರಿಗೆ ನಾವು ರೇಷನ್‌ ಒದಗಿಸಿದೆವು. ಈ ಬುಡಕಟ್ಟು ಮಂದಿ ಕಾಡಿನ ಸೈನಿಕರು. ಎಲ್ಲಾದರೂ ಕಾಡಿಗೆ ಬೆಂಕಿ ಬಿದ್ದರೆ ತಕ್ಷಣ ಓಡೋಡಿ ಹೋಗಿ ಬೇರೆಲ್ಲರೂ ಬರುವ ಮೊದಲು ಕಾಡಿನ ಬೆಂಕಿ ನಂದಿಸುವ ಕೆಲಸ ಮಾಡುತ್ತಾರೆ. ಅವರು ಚೆನ್ನಾಗಿದ್ದರೆ ಕಾಡು ಚೆನ್ನಾಗಿರುತ್ತದೆ. ಅಂಥವರ ನೆರವಿಗೆ ಹೋಗುವುದು ಅನಿವಾರ್ಯ ಮತ್ತು ಅವಶ್ಯ.
 

click me!