ಅದು ಕುಡಿಯುವ ನೀರಿಗಾಗಿ ಆ ಬಯಲು ಸೀಮೆ ಜಿಲ್ಲೆಯಲ್ಲಿ ನಿರ್ಮಾಣ ಮಾಡಿದ ಸ್ವಾತಂತ್ರ್ಯ ನಂತರದ ಮೊದಲ ಜಲಾಶಯ. ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿದ್ದು, ಬಯಲು ಸೀಮೆಯ ಜನರ ಹಾಟ್ ಸ್ಪಾಟ್ ಆಗಿದ್ದು, ತುಂಬಿ ಹರಿಯುತ್ತಿರುವ ಡ್ಯಾಂ ನೋಡಲು ಜನ ಸಾಗರವೇ ಹರಿದು ಬರುತ್ತಿದೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಆ.11): ಅದು ಕುಡಿಯುವ ನೀರಿಗಾಗಿ ಆ ಬಯಲು ಸೀಮೆ ಜಿಲ್ಲೆಯಲ್ಲಿ ನಿರ್ಮಾಣ ಮಾಡಿದ ಸ್ವಾತಂತ್ರ್ಯ ನಂತರದ ಮೊದಲ ಜಲಾಶಯ. ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿದ್ದು, ಬಯಲು ಸೀಮೆಯ ಜನರ ಹಾಟ್ ಸ್ಪಾಟ್ ಆಗಿದ್ದು, ತುಂಬಿ ಹರಿಯುತ್ತಿರುವ ಡ್ಯಾಂ ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ತುಂಬಿ ಹರಿಯುತ್ತಿರುವ ಯರಗೋಳ್ ಬೃಹತ್ ಜಲಾಶಯ, ಜಲಾಶಯವನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಜನರು, ಮತ್ತೊಂದೆಡೆ ಹರಿಯುವ ನೀರಿನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಜನರ ಈ ದೃಶ್ಯಗಳು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಯರಗೋಳ್ ಗ್ರಾಮದ ಬಳಿ.
ಹೌದು! ಯರಗೋಳ್ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿರುವ ಜಲಾಶಯ ನಿರ್ಮಾಣ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಕಳೆದ ಕೆಲವು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಸುರಿದ ಹಿನ್ನೆಲೆ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿದೆ. ಸುಂದರವಾದ ಬೆಟ್ಟಗುಡ್ಡಗಳ ನಡುವೆ ಹರಿದು ತಮಿಳುನಾಡು ಸೇರುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಿ ಕೋಲಾರ, ಮಾಲೂರು, ಹಾಗೂ ಬಂಗಾರಪೇಟೆ ಪಟ್ಟಣಗಳು ಸೇರಿದಂತೆ 45 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು 2006 ರಲ್ಲಿ ರೂಪಿಸಲಾಯಿತು. ಆದರೆ ಕಾಮಗಾರಿ 2008ರಲ್ಲಿ ಆರಂಭವಾಗಿ ಸುಮಾರು 16 ವರ್ಷಗಳ ನಂತರ ಯೋಜನೆ ಪೂರ್ಣವಾಗಿತ್ತು.
ಕೋಲಾರ ಜಿಲ್ಲೆಯಲ್ಲಿ ಮಳೆ ಹಾನಿ; ರೈತರಿಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ
ಸುಮಾರು 315 ಕೋಟಿ ರೂಪಾಯಿಯ ಯೋಜನೆ ಪೂರ್ಣಗೊಂಡ ನಂತರ ಇದೇ ಮೊದಲ ಬಾರಿಗೆ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿದೆ. ಸದ್ಯ ಕೋಲಾರ ಜಿಲ್ಲೆಯಲ್ಲಿ ಇದೇ ಮೊದಲ ಜಲಾಶಯವಾಗಿದ್ದು, ತುಂಬಿ ಹರಿಯುತ್ತಿರುವ ಜಲಾಶಯವನ್ನು ನೋಡಲು ಕೋಲಾರ ಜಿಲ್ಲೆಯ ಸಾವಿರಾರು ಸಂಖ್ಯೆಯಲ್ಲಿ ಜನು ಬರುತ್ತಿದ್ದಾರೆ. ಸುಂದರವಾದ ಹಸಿರು ಬೆಟ್ಟ ಗುಡ್ಡಗಳ ನಡುವೆ ತುಂಬಿ ಹರಿಯುತ್ತಿರುವ ಜಲಾಶಯ ನೋಡುಗರ ಮನ ಸೂರೆಗೊಳ್ಳುವಂತೆ ಮಾಡುತ್ತಿದೆ. ಇಂಥಾದೊಂದು ಸುಂದರ ವಾತಾವರಣ ನೋಡಲು ಬಯಲು ಸೀಮೆಯ ಜನರು ಕರಾವಳಿ ಪ್ರದೇಶಕ್ಕೆ ಹೋಗಬೇಕಿತ್ತು. ಆದರೆ ಬಯಲುಸೀಮೆಯಲ್ಲಿ ಜಲಾಶಯ ನಿರ್ಮಾಣವಾಗಿರೋದಕ್ಕೆ ಸಂತೋಷ ವ್ಯಕ್ತಪಡಿಸುತ್ತಿರುವ ಜನರು ಕುಟುಂಬ ಸಮೇತರಾಗಿ ಬಂದು ನೋಡಿ ಪುಲ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಯರಗೋಳ್ ಡ್ಯಾಂ ಕೋಲಾರ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ ದೂರವಿದ್ದು, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಂತಿದೆ. ಹಾಗಾಗಿ ಕೇವಲ ಕೋಲಾರ ಇಲ್ಲೆಯ ಜನರಷ್ಟೇ ಅಲ್ಲಾ ಗಡಿ ಭಾಗದಿಂದ ಹೊರ ರಾಜ್ಯದ ಜನರು ಕೂಡಾ ಬಂದು ಡ್ಯಾಂ ನೋಡಿ ಖುಷಿ ಪಡುತ್ತಿದ್ದಾರೆ. ಸುಂದರ ವಾತಾವರಣದಲ್ಲಿ ಕುಟುಂಬ ಸಮೇತರಾಗಿ ಬಂದು ಕೆಲ ಸಮಯ ಇಲ್ಲಿ ಕಳೆದು ಖುಷಿಪಟ್ಟು ಹೋಗುತ್ತಿದ್ದಾರೆ. ಆದರೆ ರಾಜ್ಯದ ಗಡಿ ಪ್ರದೇಶವಾಗಿರುವ ಕಾರಣ ಇಲ್ಲಿ ಅಷ್ಟಾಗಿ ಮೂಲಭೂತ ಸೌಲಭ್ಯಗಳಿಲ್ಲ ಹಾಗಾಗಿ ಜಿಲ್ಲಾಡಳಿತ ಡ್ಯಾಂ ಬಳಿಯಲ್ಲಿ ಬಂದು ಹೋಗುವ ಪ್ರವಾಸಿಗರಿಗೆ ಒಂದಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇ ಆದಲ್ಲಿ ಇದು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ.
ಉತ್ತಮ ಮಳೆ ಹಿನ್ನೆಲೆ ಕೋಲಾರ ಯರಗೋಳ್ ಡ್ಯಾಂಗೆ ಬಾಗಿನ ಸಮರ್ಪಣೆ
ಜೊತೆಗೆ ಇದರಿಂದ ಸರ್ಕಾರಕ್ಕೂ ಒಂದಷ್ಟು ಆದಾಯ ಬರುತ್ತದೆ ಹಾಗಾಗಿ ಜಿಲ್ಲಾಡಳಿತ ಡ್ಯಾಂ ಕಾಮಗಾರಿ ಪೂರ್ಣವಾಗುತ್ತಿರುವ ಬೆನ್ನಲ್ಲೇ ಒಂದಷ್ಟು ವ್ಯವಸ್ಥೆಗಳನ್ನು ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಒಂದಷ್ಟು ಅನಾಹುತಗಳು ಸಂಭವಿಸಿದೆ ಅನ್ನೋದನ್ನು ಹೊರತುಪಡಿಸಿದರೆ ಮಳೆಯಿಂದ ಇಂಥಾ ಸುಂದರವಾದ ಅದ್ಬುತ ವಾತಾವರಣಗಳು ಸೃಷ್ಟಿಯಾಗಿದ್ದು, ಜನರು ಮಳೆಯಲ್ಲೂ ಇಂಥ ಅಪರೂಪದ ಕ್ಷಣಗಳನ್ನು ಕಳೆಯುತಿದ್ದಾರೆ. ಇಲ್ಲಿ ಇನ್ನಷ್ಟು ಮೂಲಭೂತ ವ್ಯವಸ್ಥೆಗಳು ಮಾಡಿದ್ದೇ ಆದಲ್ಲಿ ಇದೊಂದು ಪರ್ಮನೆಂಟ್ ಹಾಟ್ ಪಿಕ್ನಿಕ್ ಸ್ಪಾಟ್ ಆಗೋದರಲ್ಲಿ ಅನುಮಾನವಿಲ್ಲ.