Save Jatayu: ಹದ್ದುಗಳ ಸಂರಕ್ಷಕನಿಗೆ ಬ್ರಿಟಿಪ್ ಗೌರವ

By Kannadaprabha News  |  First Published Jun 19, 2022, 10:26 AM IST

ಕಾಡಿನ ಪೌರಕಾರ್ಮಿಕರು ಎಂದೇ ಕರೆಸಿಕೊಳ್ಳುವ ರಣಹದ್ದುಗಳು ಕಣ್ಮರೆಯಾಗುತ್ತಿವೆ. ಪರಿಸರ ಸ್ವಚ್ಛವಾಗಿಡುತ್ತಲೇ, ಮನುಷ್ಯನನ್ನು ರೋಗರುಜಿನಗಳಿಂದ ಕಾಪಾಡುತ್ತಿದ್ದ ರಣಹದ್ದುಗಳು ಅಳಿವಿನ ಅಂಚು ತಲುಪಿವೆ. ಪಶುಗಳ ದೇಹದಲ್ಲಿರುವ ಡೈಕ್ಲೋಫೆನ್ಯಾಕ್‌ ಎಂಬ ಔಷಧಿಯೇ ರಣಹದ್ದುಗಳ ಅಕಾಲಿಕ ಮರಣಕ್ಕೆ ಕಾರಣ ಎನ್ನುವುದು ಪತ್ತೆಯಾಗಿದೆ. ಈಗ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದರೆ ರಣಹದ್ದುಗಳ ಸಂತತಿ ಅಳಿಯಲಿದೆ.


ವಿನೋದಕುಮಾರ್‌ ಬಿ ನಾಯ್ಕ್‌

ರಣಹದ್ದುಗಳನ್ನು ಸಾಮಾನ್ಯವಾಗಿ ನೋಡಿದಾಕ್ಷಣ ಭಯ ಉಂಟಾಗುತ್ತದೆ. ಅದರ ಉದ್ದನೆಯ ಕೊಕ್ಕು, ಬೋಳು ಕುತ್ತಿಗೆ, ವಿಶಾಲವಾದ ರೆಕ್ಕೆ ಹಾಗೂ ಚಾಕುವಿನಂತೆ ಚೂಪಾಗಿರುವ ಕಾಲಿನ ಉಗುರುಗಳನ್ನು ನೋಡಿ ಭಯ ಬೀಳುವವರೇ ಹೆಚ್ಚು. ದಶಕಗಳ ಹಿಂದೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ನೂರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತಿದ್ದ ರಣಹದ್ದುಗಳು ಈಗ ಹುಡುಕಿದರೂ ಸಿಗುತ್ತಿಲ್ಲ. ರಣಹದ್ದುಗಳು ಕಣ್ಮರೆಯಾಗುತ್ತಿರುವ ವೇಗ ನೋಡಿ ವಿಜ್ಞಾನಿಗಳೇ ಬೆಚ್ಚಿ ಬೀಳುತ್ತಿದ್ದಾರೆ. ರಣಹದ್ದುಗಳು ಅಳಿವಿನ ಅಂಚಿಗೆ ಬಂದು ನಿಂತಿವೆ.

Tap to resize

Latest Videos

undefined

ರಣಹದ್ದುಗಳು ಅತ್ಯಂತ ವಿಶೇಷ ಪಕ್ಷಿಗಳು. ಭಾರತದಲ್ಲಿ 9 ಜಾತಿ ರಣಹದ್ದುಗಳಿವೆ. ಈ ಪೈಕಿ ಕರ್ನಾಟಕದಲ್ಲಿ ಓರಿಯಂಟಲ್‌ ವೈಟ್‌ ಬ್ಯಾಕ್‌ಡ್‌ ರಣಹದ್ದು(ಅಂದಾಜು ಸಂಖ್ಯೆ-6 ರಿಂದ 8 ಸಾವಿರ), ಲಾಂಗ್‌ ಬಿಲ್‌ಡ್‌ ರಣಹದ್ದು(ಅಂದಾಜು ಸಂಖ್ಯೆ-30 ರಿಂದ 30500), ರೆಡ್‌ ಹೆಡೆಡ್‌ ರಣಹದ್ದು(ಅಂದಾಜು ಸಂಖ್ಯೆ-2500 ರಿಂದ 10 ಸಾವಿರ) ಹಾಗೂ ಈಜಿಪ್ಷಿಯನ್‌ ರಣಹದ್ದು(ಅಂದಾಜು ಸಂಖ್ಯೆ-50 ಸಾವಿರ) ಎನ್ನುವ 4 ಜಾತಿಯ ರಣಹದ್ದುಗಳು ಕಂಡು ಬರುತ್ತವೆ. ಗುಂಪು ಗುಂಪಾಗಿ ಹಾರಾಡುತ್ತಾ ಆಹಾರ ಹುಡುಕುವ ಈ ಪಕ್ಷಿಗಳನ್ನು ಕಾಡಿನ ಪೌರಕಾರ್ಮಿಕರು ಎಂದು ಕರೆಯುತ್ತಾರೆ. ಕಾಡನ್ನು ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಸಹ ಈ ರಣಹದ್ದುಗಳ ಪಾತ್ರ ಬಹಳ ಮುಖ್ಯ. ಸತ್ತ, ಕೊಳೆತ ಪ್ರಾಣಿಗಳ ಮಾಂಸವೇ ಈ ರಣಹದ್ದುಗಳ ಪ್ರಮುಖ ಆಹಾರ. ಸತ್ತ ಹಾಗೂ ಕೊಳೆತ ಮಾಂಸವನ್ನು ತಿನ್ನುವ ಮೂಲಕ ಅವುಗಳಿಂದ ಜನರಿಗೆ ಹರಡಬಹುದಾದ ಅಂತ್ರಾಕ್ಸ್‌ ಮುಂತಾದ ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ಯಶಸ್ವಿಯಾಗಿ ಇವುಗಳು ನಿಯಂತ್ರಿಸುತ್ತವೆ.

ಕಾರಣವೇನು?

25 - 30 ವರ್ಷಗಳ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಈ ರಣಹದ್ದುಗಳು ಕಾಣಸಿಗುತ್ತಿದ್ದವು. ಅವುಗಳಿಗೆ ಆಹಾರದ ಲಭ್ಯತೆಯೂ ಭರ್ಜರಿಯಾಗಿತ್ತು. ಸತ್ತ ಜಾನುವಾರುಗಳನ್ನು ಹಳ್ಳಿಗಳ ಕಡೆ ಬಯಲಿನಲ್ಲಿ ಬಿಸಾಡುತ್ತಿದ್ದರು. ಈ ಹದ್ದುಗಳು ಬೇಟೆಯಾಡಿ ತಮ್ಮ ಆಹಾರ ಸಂಪಾದನೆ ಮಾಡುವುದಿಲ್ಲ. ಸತ್ತ ಪ್ರಾಣಿಗಳೇ ಇವುಗಳ ಪ್ರಮುಖ ಆಹಾರ. ಆದರೆ, 1990ರ ದಶಕದಿಂದ ಈಚೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಡೈಕ್ಲೊಫೆನಾಕ್‌ ಎನ್ನುವ ನೋವು ನಿವಾರಕ ಔಷಧದ ಬಳಕೆ ರಣಹದ್ದುಗಳಿಗೆ ಮಾರಕವಾಯಿತು. ಸತ್ತ ಜಾನುವಾರುಗಳನ್ನು ಹಳ್ಳಿಗಳ ಕಡೆ ಬಯಲಿನಲ್ಲಿ ಬಿಸಾಡುತ್ತಿದ್ದರು. ಜಾನುವಾರುವಿನ ಕಳೇಬರದಲ್ಲಿ ಈ ಅಪಾಯಕಾರಿ ಡೈಕ್ಲೊಫೆನಾಕ್‌ ಔಷಧಿಯ ಅಂಶ ಇರುತ್ತಿತ್ತು. ಅಪಾಯಕಾರಿ ಔಷಧ ಮಿ]ತ ಮಾಂಸ ತಿನ್ನುತ್ತಿದ್ದಂತೆಯೇ ರಣಹದ್ದುವಿನ ದೇಹಕ್ಕೂ ವಿಷ ಪ್ರಸರಣವಾಗಿ ಕಿಡ್ನಿ ವೈಫಲ್ಯಗೊಂಡು ಒಂದೆರಡು ದಿನಗಳಲ್ಲಿ ರಣಹದ್ದು ಸಾಯುತ್ತಿದ್ದವು. ಜಾನುವಾರುಗಳಿಗೆ ನೋವು ನಿವಾರಕವಾಗಿ ಈ ಔಷಧವನ್ನು ಅಗಾಧ ಪ್ರಮಾಣದಲ್ಲಿ ಬಳಸುತ್ತಿದ್ದುದೇ ಇವುಗಳ ಸಂತತಿ ತೀವ್ರÜ ಪ್ರಮಾಣದಲ್ಲಿ ಕುಸಿಯಲು ಕಾರಣವಾಯಿತು.

2006ರಲ್ಲಿ ಡೈಕ್ಲೊಫೆನಾಕ್‌ ಔಷಧವನ್ನು ಜಾನುವಾರುಗಳ ಚಿಕಿತ್ಸೆಗೆ ಬಳಸುವುದನ್ನು ಭಾರತದಾದ್ಯಂತ ನಿಷೇಧಿಸಲಾಯಿತು. ಇದರಿಂದಾಗಿ ಸಾವಿನ ಪ್ರಮಾಣ ಕಡಿಮೆ ಆಯಿತಾದರೂ, ಈ ಹಕ್ಕಿಗೆ ಮಾರಕವಾಗಿರುವ ಅಸೆಕ್ಲೋಫೆನಾಕ್‌, ನಿಮೆಸ್ಯುಲಿಡ್‌, ಕೆಟೊಪೊ›ಫೆನ್‌ ಮತ್ತು ಫ್ಲುನಿಕ್ಸಿನ್‌ ಎನ್ನುವ ಔಷಧಗಳು ಈಗಲೂ ವ್ಯಾಪಕ ಬಳಕೆಯಲ್ಲಿವೆ. ಇದರಿಂದಾಗಿ ರಣಹದ್ದುಗಳ ಸಂತತಿಗೆ ಅಪಾಯ ಇನ್ನೂ ಕಡಿಮೆ ಆಗಿಲ್ಲ.

ಋಷಿಗಳು ಹದ್ದುಗಳ ರೂಪದಲ್ಲಿ ಕಾಣಿಸುವ ಐತಿಹ್ಯ ಹೊಂದಿದೆ ಈ ದೇವಾಲಯ!

ಇವುಗಳ ನಡುವೆಯೇ ಭರವಸೆಯ ಬೆಳಕೊಂದು ಮೂಡಿದೆ. ರಣಹದ್ದುಗಳಿಗೆ ಯಾವುದೇ ಅಪಾಯ ಉಂಟು ಮಾಡದ ಆದರೆ, ಜಾನುವಾರುಗಳಿಗೆ ನೋವು ನಿವಾರಕವಾಗಿ ಬಳಸಬಹುದಾದ ಮೆಲೊಕ್ಸಿಕ್ಯಾಮ್‌ ಮತ್ತು ಟೊಫೆನಾಮಿಕ್‌ ಆಸಿಡ್‌ ಎನ್ನುವ ಎರಡು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಬಳಕೆಯನ್ನು ಹೆಚ್ಚಳ ಮಾಡಬೇಕಿದೆ.

ಸದ್ಯಕ್ಕೆ ಅತಿ ಕಡಿಮೆ ಸಂಖ್ಯೆಯಲ್ಲಿರುವ ರಣಹದ್ದುಗಳು ತಮ್ಮ ಜೀವನೋಪಾಯಕ್ಕೆ ಕಾಡನ್ನೇ ಅವಲಂಬಿಸಿವೆ. ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಸತ್ತ ಜಾನುವಾರುಗಳನ್ನು ಬಿಸಾಡುವುದು ತೀರಾ ಕಡಿಮೆಯಾಗಿದೆ. ಹಾಗಾಗಿ ಇವುಗಳು ಆಹಾರಕ್ಕಾಗಿ ಕಾಡಿನಲ್ಲಿ ಸಾಯುವ ಪ್ರಾಣಿಗಳನ್ನೇ ಅವಲಂಬಿಸಿವೆ. ಸದ್ಯಕ್ಕೆ ಕಾಡಿನಲ್ಲಿ ಸಿಗುವ ಆಹಾರದಲ್ಲಿ ಮಾರಕ ವಿಷ ಇಲ್ಲದೇ ಇರುವುದರಿಂದ ಹದ್ದುಗಳಿಗೆ ಹೆಚ್ಚಿನ ಸಮಸ್ಯೆ ಉದ್ಭವಿಸುತ್ತಿಲ್ಲ.

ಕಾಡಿನಲ್ಲಿರುವ ಬೇಟೆ ಪ್ರಾಣಿಗಳಿಗೂ ಆಕಾಶದಲ್ಲಿ ಹಾರಾಡುವ ರಣಹದ್ದುಗಳ ಸಂತತಿಗೂ ನೇರ ಸಂಬಂಧವಿದೆ. ಕಾಡಿನಲ್ಲಿ ನಡೆಯುವ ಪ್ರತಿ ಬೇಟೆಯೂ ಸಹ ಈ ಪಕ್ಷಿಗಳಿಗೆ ಆಹಾರದ ಮೂಲ. ಹೀಗಾಗಿ ಪರಿಸರ ವ್ಯವಸ್ಥೆಯು ಸರಿಯಾಗಿದ್ದಲ್ಲಿ ಮಾತ್ರ ಪ್ರತಿ ಜೀವಿಯೂ ಸುರಕ್ಷಿತವಾಗಿರುತ್ತದೆ ಎನ್ನುವುದಕ್ಕೆ ರಣಹದ್ದುಗಳು ಉದಾಹರಣೆಯಾಗುತ್ತವೆ.

ಈ ವಿಶಿಷ್ಟಪಕ್ಷಿಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಿಲ್ಲ. ವಿಜ್ಞಾನಿಗಳು ಮತ್ತು ಸರ್ಕಾರಗಳು ರಣಹದ್ದುಗಳನ್ನು ದಶಕಗಳಿಂದಲೂ ನಿರ್ಲಕ್ಷಿಸಿಕೊಂಡೇ ಬಂದಿದ್ದಾರೆ. ಹಠಾತ್ತಾಗಿ ಇವುಗಳ ಸಂಖ್ಯೆ ಕಡಿಮೆಯಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಆದರೆ, ನಂತರವೂ ರಣಹದ್ದುಗಳ ಸಂರಕ್ಷಣೆ ಮತ್ತು ಅವುಗಳ ಸಂತತಿ ವೃದ್ಧಿಗೆ ಸಮರೋಪಾದಿಯ ಕ್ರಮಗಳನ್ನು ಕೈಗೊತ್ತಿಕೊಳ್ಳುತ್ತಿಲ್ಲ ಎನ್ನುವುದು ಖೇದಕರ.

ಆಗಬೇಕಿರುವ ಕೆಲಸಗಳು

ಮೊಟ್ಟಮೊದಲನೆಯದಾಗಿ ಸಂಶೋಧನೆಗೆ ಆದ್ಯತೆ ನೀಡಬೇಕು. ರಣಹದ್ದುಗಳು ಸಾಮಾನ್ಯವಾಗಿ ವಾಸಿಸುವ/ಹಾರಾಡುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ರಣಹದ್ದು ಸುರಕ್ಷಿತ ವಲಯ ಎಂದು ಘೋಷಿಸಬೇಕು. ರಣಹದ್ದುಗಳ ಗೂಡುಗಳನ್ನು ಗುರುತಿಸಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ನೀಡುವ ಹಾಗೂ ರಣಹದ್ದುಗಳಿಗೆ ಅಪಾಯಕಾರಿಯಾದ ಔಷಧಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು. ರಾಷ್ಟ್ರೀಯ ಮಟ್ಟದಲ್ಲಿ ಸಂರಕ್ಷಿತ ಸಂತಾನೋತ್ಪತ್ತಿ ಕ್ರಮಗಳನ್ನು ಕೈಗೊಳ್ಳಬೇಕು. ಕೃತಕ ಆವಾಸಸ್ಥಾನಗಳಲ್ಲಿ ಸಂತತಿ ವೃದ್ಧಿಸಿ ಆನಂತರ ನೈಸರ್ಗಿಕ ವಾತಾವರಣದಲ್ಲಿ ಅವುಗಳನ್ನು ಬಿಡುಗಡೆ ಮಾಡಬಹುದು.

ರಾಜ್ಯದಲ್ಲಿ ರಾಮನಗರದ ರಾಮದೇವರ ಬೆಟ್ಟದ 856 ಎಕರೆ ಪ್ರದೇಶವನ್ನು 2012ರಲ್ಲಿ ದೇಶದ ಮೊದಲ ರಣಹದ್ದು ವನ್ಯಜೀವಿಧಾಮ ಎಂದು ಘೋಷಿಸಲಾಗಿದೆ. ಇಲ್ಲಿ ಉದ್ದ ಕೊಕ್ಕಿನ ರಣಹದ್ದು ಹಾಗೂ ಈಜಿಪ್ಷಿಯನ್‌ ರಣಹದ್ದು ಗೂಡು ಕಟ್ಟಿಸಂತಾನೋತ್ಪತ್ತಿ ನಡೆಸುತ್ತಿವೆæ. ಸತತ ಸಂರಕ್ಷಣಾ ಕ್ರಮಗಳಿಂದಾಗಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಮರಿಯೊಂದು ಆಗಿದೆ. ಇದರ ಜತೆಗೆ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಸುತ್ತಮುತ್ತ ಹಬ್ಬಿಕೊಂಡಿರುವ ಕಾವೇರಿ ವನ್ಯಜೀವಿಧಾಮ, ಬಂಡೀಪುರ, ನಾಗರಹೊಳೆಯ ಕೆಲ ಪ್ರದೇಶ, ಬಿಳಿಗಿರಿ ರಂಗನಾಥ ಬೆಟ್ಟಹಾಗೂ ಬಳ್ಳಾರಿ, ಚಿತ್ರದುರ್ಗ ಸುತ್ತಲಿನ ಕೆಲ ಪ್ರದೇಶಗಳಲ್ಲಿ ರಣಹದ್ದುಗಳ ಆವಾಸಸ್ಥಾನ ಇರುವುದು ಪತ್ತೆಯಾಗಿದೆ. ಬಂಡೀಪುರ, ನಾಗರಹೊಳೆ ಹಾಗೂ ಬಿಆರ್‌ಟಿ ಸುತ್ತಲಿನ ಭಾಗದಲ್ಲಿ ವೈಲ್ಡ್‌ಲೈಫ್‌ ಕನ್ಸರ್ವೇಶನ್‌ ¶ೌಂಡೇಷನ್‌ ಸಂಸ್ಥೆಯ ಡಿ. ರಾಜಕುಮಾರ್‌ ಹಾಗೂ ಕರ್ನಾಟಕ ವಲ್ಚರ್‌ ಕನ್ಸರ್ವೇಶನ್‌ ಟ್ರಸ್ಟ್‌ ಸಂಸ್ಥೆಯ ಶಶಿಕುಮಾರ್‌ ರಾಮನಗರದಲ್ಲಿ ರಣಹದ್ದುಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಕಿಡಿಗೇಡಿಗಳ ಕೌರ್ಯಕ್ಕೆ ಅಳವಿನಂಚಿನ ಹಾರ್ನ್‌ಬಿಲ್ ಹಕ್ಕಿ ಬಲಿ, ಕಾಲಿನಿಂದ ತುಳಿದುಕೊಂದು ವಿಕೃತಿ!

ಹರಾರ‍ಯಣ, ಪಶ್ಚಿಮ ಬಂಗಾಳ, ಅಸ್ಸಾಂ, ಹೈದರಾಬಾದ್‌ ಮತ್ತು ಮಧ್ಯಪ್ರದೇಶದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕೃತಕ ಪರಿಸರದಲ್ಲಿ ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಲಾಗಿದೆ. ಈ ಎಲ್ಲಾ ಕೇಂದ್ರಗಳಲ್ಲಿ ಈಗ 750 ರಣಹದ್ದುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಇವೆಲ್ಲದರ ಜತೆಗೆ ಈಗ ಬೆಂಗಳೂರು ಸಮೀಪದ ಬನ್ನೇರುಘಟ್ಟದಲ್ಲಿ ರಾಜ್ಯದ ಮೊದಲ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸಹ ಸದ್ಯದಲ್ಲೇ ತಲೆ ಎತ್ತಲಿದೆ.

ಪರಿಸರದಲ್ಲಿ ಆಗುವ ಅತಿ ಸೂಕ್ಷ್ಮ ಬದಲಾವಣೆಗಳನ್ನೂ ಸಹ ಗ್ರಹಿಸುವ ಹಾಗೂ ಎಚ್ಚರಿಸುವ ಜೀವಿಗಳು ಈ ರಣಹದ್ದುಗಳು. ಇವುಗಳು ಈಗ ಅಳಿವಿನ ಅಂಚಿನಲ್ಲಿವೆ. ಇವುಗಳ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ದಕ್ಷಿಣ ಭಾರತ ಭೂ ಪ್ರದೇಶದಿಂದ ಇವು ಸಂಪೂರ್ಣ ಅವನತಿ ಹೊಂದುವ ಅಪಾಯಗಳಿವೆ.

ಜಟಾಯುವಿನ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕಿದೆ.

ರಣಹದ್ದುಗಳ ವೈಶಿಷ್ಟ್ಯ

1. ವರ್ಷಕ್ಕೆ ಒಂದೇ ಮೊಟ್ಟೆಇಡುವ ಹಕ್ಕಿಗಳು.

2. 5 ವರ್ಷದವರೆಗೆ ಪ್ರೌಢಾವಸ್ಥೆಗೆ ಬರುವುದಿಲ್ಲ.

3. ಒಟ್ಟು ಪಕ್ಷಿಯ ಸರಾಸರಿ ಆಯಸ್ಸು 30 ರಿಂದ 35 ವರ್ಷ.

4. ಸತ್ತ ಪ್ರಾಣಿಗಳನ್ನು ಮಾತ್ರ ಆಹಾರದ ರೂಪದಲ್ಲಿ ತಿನ್ನುತ್ತವೆ. ಅದರಲ್ಲೂ ಸತ್ತ ಜಾನುವಾರುಗಳೇ ಪ್ರಧಾನ ಆಹಾರ.

5. ಆಯಸ್ಸು ಹೆಚ್ಚು, ವಿಳಂಬ ಸಂತಾನೋತ್ಪತ್ತಿ ಮಾರಕವಾಗಿ ಪರಿಣಮಿಸುತ್ತಿದೆ.

6. ಗಂಡು ಅಥವಾ ಹೆಚ್ಚು ಹಕ್ಕಿ ಸತ್ತರೆ ಮತ್ತೊಂದರ ಜತೆ ಸೇರಲು ಸಹ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿ ಸಹ ವಿಳಂಬವಾಗುತ್ತದೆ.

ಟಿಕೆಟ್ ಇಲ್ಲದೆ ಬಸ್‌ನಲ್ಲಿ ಪ್ರಯಾಣಿಸಿದ ಪಕ್ಷಿಗಳು, ಅಮಾನತುಗೊಂಡ ಕೆಸ್ಸಾರ್ಟಿಸಿ ಕಂಡಕ್ಟರ್!

7. ಹಾರಾಟ ವ್ಯಾಪ್ತಿ 100 ಕಿಲೋ ಮೀಟರ್‌.

8. ಆಹಾರ ಕಂಡಾಗ ಗಂಟೆಗೆ 200 ಕಿಮೀ ವೇಗದಲ್ಲಿ ಕೆಳಕ್ಕೆ ಧಾವಿಸಿ ಬರುವ ಸಾಮರ್ಥ್ಯ ಹೊಂದಿದೆ.

9. 3000ದಿಂದ 5000 ಅಡಿ ಎತ್ತರಕ್ಕೆ ಹಾರಬಲ್ಲ ಶಕ್ತಿ ಇದೆ.

10. ಎತ್ತರದಿಂದ ಕೆಳಕ್ಕೆ ಬರುವಾಗ ಅದರ ದೃಷ್ಟಿಟೆಲಿಸ್ಕೋಪಿಕ್‌ ವಿಷನ್‌ನಿಂದ ಮೈಕ್ರೋಸ್ಕೋಪಿಕ್‌ ವಿಷನ್‌ಗೆ ಬದಲಾಗುತ್ತದೆ. ಅತಿ ಸೂಕ್ಷ್ಮ ವಸ್ತುವನ್ನೂ ರಣಹದ್ದುಗಳು ಕಾಣಬಲ್ಲವು.

ಹದ್ದುಗಳ ಸಂರಕ್ಷಕನಿಗೆ ಅತ್ಯುನ್ನತ ಪ್ರಶಸ್ತಿ

ರಣಹದ್ದುಗಳ ಸಂರಕ್ಷಕನಿಗೆ ಬ್ರಿಟನ್ನಿನ ಮಹಾರಾಣಿಯ ಹುಟ್ಟುಹಬ್ಬದ ಪ್ರಶಸ್ತಿಯ ಗೌರವ ಲಭಿಸಿದೆ. ಬ್ರಿಟನ್ನಿನಲ್ಲಿ ಹುಟ್ಟಿಸದ್ಯ ಕಳೆದ 9 ವರ್ಷಗಳಿಂದ ಬೆಂಗಳೂರಿನ ನಿವಾಸಿಯಾಗಿರುವ ಕ್ರಿಸ್ಟೋಫರ್‌ ಬೌಡೆನ್‌ಗೆ ಬ್ರಿಟಿಷ್‌ ಸರ್ಕಾರ ನೀಡುವ ಪ್ರತಿಷ್ಠಿತ ಮೆಂಬರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಬ್ರಿಟಿಷ್‌ ಎಂಪೈರ್‌ ಗೌರವ ಪ್ರಶಸ್ತಿ ಲಭಿಸಿದೆ. ಬ್ರಿಟನ್‌ ಸರ್ಕಾರ ಕಳೆದ ವಾರ ಈ ಪ್ರಶಸ್ತಿ ಘೋಷಣೆ ಮಾಡಿದೆ. ಬ್ರಿಟನ್ನಿನ ರಾಯಲ್‌ ಸೊಸೈಟಿ ಫಾರ್‌ ದಿ ಪೊ›ಟೆಕ್ಷನ್‌ ಆಫ್‌ ಬರ್ಡ್ಸ್ ಹಾಗೂ ಸೇವಿಂಗ್‌ ವಲ್ಚ​ರ್‍ಸ್ ಫ್ರಮ್‌ ಎಕ್ಸ್‌ಟಿಂಕ್ಷನ್‌(ಸೇವ್‌) ಸಂಸ್ಥೆಯ ಅಂತಾರಾಷ್ಟ್ರೀಯ ತಳಿ ಪುನರುತ್ಥಾನ ಅಧಿಕಾರಿಯಾಗಿರುವ ಕ್ರಿಸ್ಟೋಫರ್‌, ದೆಹಲಿ ಮೂಲದ ವಿಜ್ಞಾನಿ ಡಾ. ಫರಾ ಇಷ್ತಿಯಾಜ್‌ರನ್ನು ಮದುವೆಯಾಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ರಣಹದ್ದುಗಳ ಸಂರಕ್ಷಣೆ ಮತ್ತು ಸಂತತಿಯ ವೃದ್ಧಿಗೆ ಕ್ರಿಸ್ಟೋಫರ್‌ ತೀವ್ರವಾಗಿ ಶ್ರಮಿಸುತ್ತಿದ್ದಾರೆ. ಅದಕ್ಕಾಗಿಯೇ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಕರ್ನಾಟಕ ಅರಣ್ಯ ಇಲಾಖೆಯ ಜತೆಗೆ ರಣಹದ್ದುಗಳ ಸಂರಕ್ಷಣೆ ಮತ್ತು ಅಧ್ಯಯನದಲ್ಲಿ ತೊಡಗಿರುವ ಸಂಘ ಸಂಸ್ಥೆಗಳ ಜತೆಗೆ ಕೆಲಸ ಮಾಡುತ್ತಿರುವ ಕ್ರಿಸ್ಟೋಫರ್‌ ನೇಪಾಳ ಮಾದರಿಯಲ್ಲೇ ಕೆಲಸ ಮಾಡಿದಲ್ಲಿ ಭಾರತದಲ್ಲೂ ರಣಹದ್ದುಗಳ ಸಂತತಿಯನ್ನು ಹೆಚ್ಚಳ ಮಾಡಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಮಗೆ ಸಿಕ್ಕ ಪ್ರಶಸ್ತಿ ರಣಹದ್ದುಗಳ ಸಂರಕ್ಷಣೆಯ ಕಡೆಗೆ ಜನರ ಗಮನ ಸೆಳೆಯುವಂತೆ ಮಾಡಲಿದೆ ಎನ್ನುತ್ತಾರೆ ಕ್ರಿಸ್ಟೋಫರ್‌.

ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್‌, ಕಾಂಬೋಡಿಯಾ ಮತ್ತು ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಕ್ರಿಸ್ಟೋಫರ್‌ ಪ್ರಕಾರ, ರಣಹದ್ದುಗಳ ಅತಿ ಹೆಚ್ಚು ಅಂದರೆ ಶೇ.80ರಷ್ಟುಸಂತತಿ ಇರುವುದು ಭಾರತದಲ್ಲಿ. ಆದರೆ, ಆ ರಣಹದ್ದುಗಳ ಸಂತತಿಗೆ ಶೇ.90ರಷ್ಟುಅಪಾಯವಿರುವುದು ಸಹ ಭಾರತದಲ್ಲೇ. ಅಷ್ಟೇ ಅಲ್ಲ, ಈ ರಣಹದ್ದುಗಳ ಸಂರಕ್ಷಣೆ ಮತ್ತು ಸಂತತಿ ವೃದ್ಧಿಗೆ ಅತಿ ಹೆಚ್ಚು ಅವಕಾಶಗಳಿರುವುದು ಸಹ ಭಾರತದಲ್ಲೇ ಎನ್ನುತ್ತಾರೆ.

click me!