ಗೇರುಸೊಪ್ಪ ಅಂದರೆ ಜಲಪಾತವಾ ಅಂತ ಕಣ್ಣರಳಿಸುತ್ತೇವೆ. ಹಾಗೆ ನೋಡಿದರೆ ವಿಶ್ವಪ್ರಸಿದ್ಧ ಜೋಗ ಜಲಪಾತಕ್ಕೂ ಗೇರುಸೊಪ್ಪ ಜಲಪಾತ ಎಂದೇ ಹೇಳುತ್ತಾರೆ. ಶರಾವತಿ ಕಣಿವೆಯ ನಯನಮನೋಹರ ಸೌಂದರ್ಯದ ಜಾಗವಿದು. ಲಯನ್ ಟೇಲ್ಡ್ ಮೆಕಾಕೋದಂಥಾ ಅಪರೂಪದ ವನ್ಯ ಮೃಗಗಳು, ಐತಿಹಾಸಿಕ ತಾಣಗಳು ಈ ಊರಲ್ಲಿ..
ವಸಂತಕುಮಾರ ಕತಗಾಲ
ದಟ್ಟ ಕಾಡು. ಸೂರ್ಯನ ಕಿರಣವೂ ಬೇಧಿಸದಂತೆ ಒತ್ತೊತ್ತಾಗಿ ಬೆಳೆದು ಮರಗಳು. ರೆಂಬೆಗಳ ನಡುವೆ ಸಣ್ಣ ಅಲುಗಾಟ. ನೋಡಿದರೆ ಮರದ ಮೇಲೆ ಸಿಂಹ! ಸ್ವಲ್ಪ ಹೊತ್ತಲ್ಲೇ ಕಡುಗಪ್ಪು ಶರೀರದ ಸಿಂಹದ ಮುಖದ ಕೋತಿಯೊಂದು ದಪ್ಪ ಎಲೆಗಳ ನಡುವೆ ಕಾಣಿಸಿಕೊಳ್ಳುತ್ತದೆ. ಮತ್ತೆ ನೋಡಿದರೆ ಇದು ಸಿಂಹ ಬಾಲದ ಕೋತಿ. (ಲಯನ್ ಟೇಲ್ಡ್ ಮೆಕಾಕೋ) ಕ್ಯಾಮರಾ ತೆಗೆಯಹೊರಟರ ಮರಗಳೆಡೆಯಲ್ಲಿ ಮರೆಯಾಗುತ್ತದೆ. ಇಂಥಾ ಕೋತಿಗಳಿಗೆ ಸಿಂಗಳೀಕ ಎಂಬ ಹೆಸರೂ ಇದೆ. ಇಡೀ ರಾಜ್ಯದಲ್ಲಿ ಈ ನಮೂನೆಯ ಕೋತಿಗಳು ಕಾಣಸಿಗುವುದು ಶರಾವತಿ ಕಣಿವೆಯಲ್ಲಿ ಮಾತ್ರ. ಈಚೆಗೆ ಪತ್ತೆ ಮಾಡಿದ ಕುಂಬಾರಕಪ್ಪೆ ಎಂಬ ಹೊಸ ಬಗೆಯ ಕಪ್ಪೆ ಇಲ್ಲಿದೆ. ಇದು ಗೇರುಸೊಪ್ಪಾ. ಹೊನ್ನಾವರ ತಾಲ್ಲೂಕಿನಲ್ಲಿದೆ. ಒಂದು ಕಾಲದಲ್ಲಿ ಸಾಳ್ವ ರಾಣಿ ಚೆನ್ನಭೈರಾದೇವಿಯ ರಾಜಧಾನಿಯಾಗಿದ್ದು ವೈಭವದಿಂದ ಮೆರೆದ ಸ್ಥಳ. ಅಲೆಮಾರಿಯೊಬ್ಬ ಒಂದೆರಡು ದಿನದಲ್ಲಿ ಈ ಊರು ತಿರುಗಿದರೆ ಏನೆಲ್ಲ ನೋಡ್ಬಹುದು..
ಎಲ್ಲಿದೆ?
ಗೇರುಸೊಪ್ಪ ಜೀವ ವೈವಿಧ್ಯತೆಯ ಮಡಿಲು. ಐತಿಹಾಸಿಕ ತಾಣಗಳ ಒಡಲು. ಮಾನವ ನಿರ್ಮಿತ ಅಚ್ಚರಿಗಳೂ ಇಲ್ಲಿವೆ. ಹೊನ್ನಾವರ ತಾಲೂಕು ಕೇಂದ್ರದಿಂದ ಸಾಗರ ರಸ್ತೆಯಲ್ಲಿ 30 ಕಿ.ಮೀ.ದೂರದಲ್ಲಿದೆ. ಬೆಂಗಳೂರಿನಿಂದ 420 ಕಿ.ಮೀ.ದೂರದಲ್ಲಿದೆ.
ಕತ್ತಲೆಕಾನು, ಸಿಂಗಳೀಕಗಳ ನೆಲೆ
ಶರಾವತಿ ಕಣಿವೆಯಲ್ಲಿರುವ ಕತ್ತಲೆಕಾನು ಅಲ್ಲಿನ ಪರಿಸರಕ್ಕೆ ಅನ್ವರ್ಥ. ದಟ್ಟ ಅರಣ್ಯ, ಉಭಯವಾಸಿಗಳು, ಸರೀಸೃಪಗಳು, ಹಲವು ವಿಧದ ಸಸ್ತನಿಗಳು, ಅಕಶೇರುಕಗಳು, ಕಾಳಿಂಗ ಸರ್ಪಗಳು...ಜೀವ ರಾಶಿಯ ತೊಟ್ಟಿಲು ಎಂದರೂ ತಪ್ಪಾಗದು. ಅಪರೂಪದ ಗಿಡಮೂಲಿಕೆಗಳು, ಸಸ್ಯ ವೈವಿಧ್ಯತೆ ಇಲ್ಲಿದೆ. ಬಾನೆತ್ತರಕ್ಕೆ ನೆಗೆದ ಶತಮಾನ ಕಂಡ ಮರಗಳೂ ಇವೆ. ಇಲ್ಲಿ ಬಲು
ಅಪರೂಪದ ಸಿಂಗಳೀಕಗಳಿವೆ.
ಈ ವಾನರದ ಬಾಲ ಹಾಗೂ ಮುಖದ ಚಹರೆ ಸಿಂಹವನ್ನೇ ಹೋಲುವುದರಿಂದ ಸಿಂಹ ಬಾಲದ ಕೋತಿ ಲಯನ್ ಟೇಲ್ಡ್ ಮೆಕಾಕೋ ಎಂದು ಕರೆಯುತ್ತಾರೆ. ರಾಜ್ಯದಲ್ಲಿ ಇವು ಗೇರಸೊಪ್ಪೆ ಹಾಗೂ ಅಘನಾಶಿನಿ ತೀರದಲ್ಲಷ್ಟೇ ಇವೆ. ಉಳಿದಂತೆ ಕೇರಳ ಹಾಗೂ ತಮಿಳುನಾಡಿನಲ್ಲಿ ಮಾತ್ರ ಕಾಣಲು ಸಾಧ್ಯ. ಇಡೀ ದೇಶದಲ್ಲಿ ಸಿಂಗಳೀಕಗಳ ಸಂತತಿ ಕೇವಲ 2000. ಉಳಿದೆಡೆಗಿಂತ ಗೇರುಸೊಪ್ಪೆಯಲ್ಲಿ ಸಂಖ್ಯೆ ಹೆಚ್ಚಿದೆ.
ಐತಿಹಾಸಿಕ ಹಿನ್ನೆಲೆ
ಗೇರುಸೊಪ್ಪ ವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಸಾಳ್ವ ಅರಸರು ಸುಮಾರು 250 ವರ್ಷಗಳ ಕಾಲ ಆಳಿದರು. ಈ ಸಾಮ್ರಾ ಜ್ಯದ ರಾಣಿ ಚೆನ್ನಭೈರಾದೇವಿ ಇಲ್ಲಿ ಚತುರ್ಮುಖ ಬಸದಿಯನ್ನು ನಿರ್ಮಿಸುತ್ತಿದ್ದಾಗ ಕೆಳದಿ ಅರಸರು ದಾಳಿ ಮಾಡಿದರು. ಚೆನ್ನಭೈರಾದೇವಿ ಪರಾಭವಗೊಂಡಿದ್ದರಿಂದ ಚತುರ್ಮುಖ ಬಸದಿ ಸೇರಿದಂತೆ ಹಲವು ಬಸದಿ, ಕಟ್ಟಡಗಳು ಅರೆಬರೆಯಾಗೇ ಉಳಿದವು. ಸಾಳ್ವ ಅರಸರು ಆಳಿದ ಕಾನೂರು ಕೋಟೆ ಇನ್ನೊಂದು ಐತಿಹಾಸಿಕ ತಾಣ. ಗೇರಸೊಪ್ಪದಿಂದ 18 ಕಿ.ಮೀ.ಗುಡ್ಡ ಏರಬೇಕು. ಸುಮಾರು 1560ರಿಂದ
1605ರ ತನಕ ಚೆನ್ನಭೈರಾದೇವಿ ಇಲ್ಲಿ ಆಡಳಿತ ನಡೆಸಿದ್ದಾಳೆ. ಪೋರ್ಚುಗೀಸರು ಚೆನ್ನಭೈರಾದೇವಿಗೆ ಕಾಳುಮೆಣಸಿನ ರಾಣಿ ಎಂದೇ ಹೆಸರಿಟ್ಟರು. ಕಾಳುಮೆಣಸು, ಏಲಕ್ಕಿಗಳ ಬೀಡು ಇದಾಗಿತ್ತು. ಬೇರೆ ಬೇರೆ ದೇಶಗಳಿಗೂ ಕಾಳುಮೆಣಸನ್ನು ಕಳುಹಿಸಲಾಗುತ್ತಿತ್ತು.
ಕರ್ನಲ್ ಪೀಟನ್ ಪ್ಲಾಟ್, ಜಲಪಾತ
ನಗರಬಸದಿ ಕೇರಿಯಿಂದ ಕೇವಲ 1 ಕಿ.ಮೀ.ದೂರದಲ್ಲಿ ಕರ್ನಲ್ ಪೀಟನ್ ಪ್ಲಾಟ್ ಇದೆ. 1865ರಲ್ಲಿ 16 ಎಕರೆ ಪ್ರದೇಶದಲ್ಲಿ ಬ್ರಿಟೀಶ್ ಅಧಿಕಾರಿ ಕರ್ನಲ್ ಪೀಟನ್ ಇಲ್ಲಿ ಸಾಗವಾನಿ ಪ್ಲಾಂಟೇಶನ್ ಮಾಡಿದ್ದಾರೆ. ಒಂದೊಂದು ಮರ10-15ಅಡಿ ಅಗಲವಾಗಿದೆ. ಬೃಹದಾಕಾರದ ಮರಗಳನ್ನು ನೋಡುವುದೆ ಒಂದು ಅಚ್ಚರಿ.
ಬಂಗಾರಕುಸುಮ ಜಲಪಾತ ಇನ್ನೊಂದು ಇಲ್ಲಿನ ಹೆಗ್ಗಳಿಕೆ. 10 ಕಿ.ಮೀ.ಚಾರಣ ಮಾಡಿದರೆ ನೂರಾರು ಅಡಿ ಎತ್ತರದ ಬಂಡೆಗಳಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಸವಿಯಬಹುದು. ಆದರೆ ಜೂನ್‌ದಿಂದ ಡಿಸೆಂಬರ್ ತನಕ ಈ ಜಲಪಾತದಲ್ಲಿ ಹೆಚ್ಚು ನೀರು ಇರಲಿದೆ. ಬ್ರಿಟೀಶರು ಜೋಗ ಜಲಪಾತವನ್ನೂ ಗೇರುಸೊಪ್ಪೆ ಜಲಪಾತ ಎಂದೆ ಕರೆಯುತ್ತಿದ್ದರು. ಗೇರುಸೊಪ್ಪೆ ಅಂದಿನ ಕಾಲದಲ್ಲೆ ಅಷ್ಟು ಪ್ರಸಿದ್ಧಿ ಪಡೆದಿತ್ತು.
ಕಾಳುಮೆಣಸಿನ ರಾಣಿಯ ಸಾಮ್ರಾಜ್ಯ
ಗೇರುಸೊಪ್ಪ ಆಣೆಕಟ್ಟಿನ ಕೆಳಭಾಗದ ಸೇತುವೆ ಮೂಲಕ 6ಕಿ.ಮೀ. ಕ್ರಮಿಸಿದರೆ ಗತ ವೈಭವಕ್ಕೆ ಸಾಕ್ಷಿಯಾಗಿರುವ ನಗರ ಬಸದಿ ಕೇರಿಯಲ್ಲಿರುತ್ತೀರಿ. ನೋಡಿದಲ್ಲೆಲ್ಲ ಭಗ್ನಾವಶೇಷಗಳು. ಅಸಂಖ್ಯಾತ ಬಾವಿಗಳು, ವಿಗ್ರಹಗಳು, ಅಲ್ಲಲ್ಲಿ ಧುತ್ತನೆ ಕಾಣುವ ಪುರಾತನ ಗೋಡೆಗಳು.
ಚತುರ್ಮುಖ ಬಸದಿ ಪ್ರಮುಖ ಆಕರ್ಷಣೆ. ನಾಲ್ಕು ದಿಕ್ಕುಗಳಲ್ಲೂ ಹೆಬ್ಬಾಗಿಲುಗಳು. ಯಾವ ದಿಕ್ಕಿನಲ್ಲಿ ನಿಂತು ನೋಡಿದರೂ ಅದೇ ನೋಟ. ಗರ್ಭಗುಡಿಯಲ್ಲಿ ಆಕರ್ಷಕ ಜಿನ ವಿಗ್ರಹ. ಶಿಖರ ಮಂಟಪಗಳು, ತೀರ್ಥಂಕರರ ಮೂರ್ತಿಗಳು, ಆನೆ ಮತ್ತು ನವಿಲುಗಳ ಕೆತ್ತನೆಗಳು, ಇದೊಂದು ಅಪರೂಪ ಅಷ್ಟೇ ಅಲ್ಲ ಅಪೂರ್ವವಾಗಿ ಗೇರುಸೊಪ್ಪ ಆಣೆಕಟ್ಟಿನ ಕೆಳಭಾಗದ ಸೇತುವೆ ಮೂಲಕ ೬ ಕಿ.ಮೀ. ಕ್ರಮಿಸಿದರೆ ಗತ ವೈಭವಕ್ಕೆ ಸಾಕ್ಷಿಯಾಗಿರುವ ನಗರ ಬಸದಿ ಕೇರಿಯಲ್ಲಿರುತ್ತೀರಿ. ನೋಡಿದಲ್ಲೆಲ್ಲ ಭಗ್ನಾವಶೇಷಗಳು. ಅಸಂಖ್ಯಾತ ಬಾವಿಗಳು, ವಿಗ್ರಹಗಳು, ಅಲ್ಲಲ್ಲಿ ಧುತ್ತನೆ ಕಾಣುವ ಪುರಾತನ ಗೋಡೆಗಳು.
ಶರಾವತಿ ಟೇಲರೇಸ್
ಗೇರಸೊಪ್ಪದಲ್ಲಿ ಶರಾವತಿ ನದಿಗೆ ಆಣೆಕಟ್ಟು ನಿರ್ಮಿಸಲಾಗಿದೆ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆಣೆಕಟ್ಟು ನೋಡುವುದಿದ್ದರೆ ಕೆಪಿಸಿ ಅಧಿಕಾರಿಗಳ ಪರವಾನಿಗೆ ಅಗತ್ಯ. ಇಲ್ಲಿ ವಿಸ್ತಾರವಾಗಿ ವ್ಯಾಪಿಸಿದ ಹಿನ್ನೀರನ್ನು ನೋಡಬಹುದು. ಶರಾವತಿ ಕಣಿವೆಯ ವಿಹಂಗಮ ನೋಟ ಗೇರಸೊಪ್ಪದಿಂದ ಕೇವಲ 5 ಕಿ. ಮೀ.ದೂರದಿಂದ ವೀಕ್ಷಿಸಬಹುದು. ಮಲೆಮನೆ ಘಟ್ಟದ ನಡುವಿನಲ್ಲಿ ವೀಕ್ಷಣಾಗೋಪುರದಿಂದ ನಿಂತು ನೋಡಿದರೆ ಕಣ್ಣು ಹಾಯಿಸುವಷ್ಟು ಉದ್ದಕ್ಕೂ ಶರಾವತಿ ಕಣಿವೆಯ ಕಮನೀಯ ದೃಶ್ಯ ಕಾಣುತ್ತದೆ. ದಟ್ಟವಾದ ಮರಗಳಿಂದ ಆವೃತವಾದ ಕಾಡು, ಇಕ್ಕೆಲಗಳಲ್ಲೂ ಬೃಹತ್ ಪರ್ವತಗಳು, ನಡುವೆ ಹರಿದುಬರುವ ಶರಾವತಿ.. ಬೆರಗುಗೊಳಿಸುತ್ತ
ಅನೇಕ ದೇವಾಲಯಗಳು
ಬಂಗಾರಮಕ್ಕಿ ವೀರಾಂಜನೇಯ ದೇವಾಲಯವೂ ಗೇರಸೊಪ್ಪದಿಂದ 2 ಕಿ.ಮೀ.ಅಂತರದಲ್ಲಿದೆ. ಆಂಜನೇಯನ ಗುಡಿಗೆ ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಹವ್ಯಕರ ಮೂಲನೆಲೆ ಎಂದೇ ಗುರುತಿಸಲಾದ ಹೈಗುಂದ ಶರಾವತಿ ನದಿಯಲ್ಲಿನ ದ್ವೀಪ. ಈಚೆಗೆ ಈ ದ್ವೀಪಕ್ಕೆ ಕಾಲುಸೇತುವೆಯೂ ನಿರ್ಮಾಣವಾಗಿದೆ. ದುರ್ಗಾಂಬಾ ದೇವಾಲಯ, ಎದುರುಗಡೆ ಪ್ರಾಚೀನ ಪುಷ್ಕರಣಿ ಇದೆ. ಶತಮಾನಗಳ ಹಿಂದೆ ಯಜ್ಞಯಾಗಾದಿಗಳು ನಡೆದ ಬಗ್ಗೆ ಕುರುಹು ಇದೆ. ಹೈಗುಂದದ ಉನ್ನತ ಸ್ಥಳದಲ್ಲಿ ಬ್ರಿಟೀಶ್ ಬಂಗಲೆ ಇದೆ.