ಕಾಲುದಾರಿಯ ಕಲರವ;ಅನೂಹ್ಯ ವಿಸ್ಮಯವೊಂದು ತಬ್ಬಿಕೊಳ್ಳುತ್ತದೆ!

By Kannadaprabha News  |  First Published Jan 3, 2021, 8:59 AM IST

ಬೆಂಗಳೂರಿಂದ ಎಲ್ಲಾ ಊರುಗಳಿಗೂ ಹೆದ್ದಾರಿಗಳಿವೆ. ವೇಗವಾಗಿ ಹೋದಷ್ಟೂಗುರಿ ಬೇಗ ಮುಟ್ಟುತ್ತೇವೆ. ಕೊಂಚ ಸಾವರಿಸಿ, ಕಾರನ್ನು ಸೈಡ್‌ಗೆ ಹಾಕಿ ಕಾಲುದಾರಿಯುದ್ದ ಕಾಲು ಹಾಕಿದರೆ ಅನೂಹ್ಯ ವಿಸ್ಮಯವೊಂದು ಕಾದು ಕೂತು ತಬ್ಬಿಕೊಳ್ಳುತ್ತದೆ. ಆ ಬಿಸುಪೇ ಕೊನೇವರೆಗೆ ಉಳಿಯೋದು.


- ಪ್ರಿಯಾ ಕೆರ್ವಾಶೆ

ನೀ ಕಾಣುವೆ ಈ ಕಾಡಿನ ರಮಣೀಯ ನೋಟ

Tap to resize

Latest Videos

ಹೆದ್ದಾರಿಯ ತೊರೆದಾಗಲೇ

ನೀ ಕೇಳುವೆ ನಿನ್ನಾಳದ ಅಪರೂಪ ಹಾಡು

ಒಳದಾರಿಯ ಹಿಡಿದಾಗಲೇ

-ಜಯಂತ ಕಾಯ್ಕಿಣಿ

ಬೆಂಗಳೂರಿಂದ ಹೊಗೇನಕಲ್‌ಗೆ ಮೂರೂವರೆ ಗಂಟೆ ದಾರಿ. ನಾವು ಬೆಳಗ್ಗೆ ಆರು ಗಂಟೆಗೆ ಬೆಂಗಳೂರು ಬಿಟ್ಟವರು ಹೊಗೇನಕಲ್‌ ತಲುಪಿದಾಗ ಗಂಟೆ ಹನ್ನೆರಡು ಕಳೆದಿತ್ತು. ಈಗ ಯೋಚಿಸಿದರೆ ಹೊಗೇನಕಲ್‌ ಫಾಲ್ಸ್‌ಗಿಂತ ಹೆಚ್ಚಾಗಿ ನೆನಪಾಗೋದು ಉಳಿದ ಎರಡೂವರೆ ಗಂಟೆಗಳ ಅನುಭವ.

ಪರ್ವತಗಳು ಅಪಾಯದಲ್ಲಿವೆ; ಹೇಗೆ?

ಬೆಂಗಳೂರಿನ ಹೊರವಲಯ ದಾಟಿ ಆಂಧ್ರದ ಗಡಿಯೊಳಗೆ ಬಂದಾಗಿತ್ತು. ಹುಣಸೇಮರ ಮರ ನೋಡಿದ್ರೆ ಕೆಲವರ ಕಾರಿನ ವೇಗ ಹೆಚ್ಚಾಗುತ್ತೆ. ಆದರೆ ನಮ್ಮ ಕಾರಿನ ವೇಗ ಕಡಿಮೆಯಾಗಿ ನಿಂತೇಹೋಯ್ತು. ಕಾರಣ ಹುಣಸೇಕಾಯಿ ನೋಡಿ ಕಾರು ಚಲಾಯಿಸುತ್ತಿದ್ದವರಿಗೆ ಬಾಲ್ಯದ ನೆನಪಾದದ್ದು, ಮತ್ತೆ ಹುಣಸೇಹಣ್ಣು ತಿನ್ನುವ ಚಪಲವಾದದ್ದು. ಸರಿ ಕಾರಿಂದಿಳಿದು ಹುಣಸೇಹಣ್ಣು ತಿಂದು ಮುಂದಕ್ಕೆ ಹೋಗಿದ್ದರೆ ಅಷ್ಟಕ್ಕೇ ಮುಗಿಯುತ್ತಿತ್ತು. ಅಲ್ಲೊಂದು ಕಾಲು ದಾರಿ ಕಂಡಿತು. ನಮ್ಮ ಗುಂಪಿನಲ್ಲಿ ಒಬ್ಬರಿಗೆ ಹುಣಸೆ ಮರ ಕಂಡಲ್ಲಿ ಕಾರು ನಿಲ್ಲಿಸುವ ಚಾಳಿಯಾದರೆ, ನನಗೆ ಕಾಲುದಾರಿ ಕಂಡಲ್ಲೆಲ್ಲ ನಡೆಯುವ ತೆವಲು. ಕಾರಲ್ಲಿರುವವರ ದುರಾದೃಷ್ಟಕ್ಕೆ, ನನ್ನ ಅದೃಷ್ಟಕ್ಕೆ ಆ ಹುಳಿಮರದ ಬುಡದಿಂದಲೇ ಒಂದು ಕಾಲು ದಾರಿ. ಉಳಿದವರ ಮಾತಿಗೆ ಕಿವಿಗೊಡದೇ ಆ ದಾರಿಯಲ್ಲೇ ಮುಂದೆ ಹೋದೆ. ಕುರುಚಲು ಕಾಡಿನ ನಡುವೆ ಹೋಗುತ್ತಿದ್ದ ಕಿರಿದಾದ ದಾರಿದಲ್ಲಿ ಒಂಚೂರು ಮುಂದೆ ಹೋಗಿರಬಹುದು, ನೀರಿನ ಸದ್ದು ಕೇಳಿತು. ಮುಂದೆ ಹೋದರೆ ಚೆಂದದ ಪುಟ್ಟಝರಿ, ಸಣ್ಣ ನದಿಯಾಗಿ ಆ ಕಾಡಿನ ನಡುವೆ ಹರಿಯುತ್ತಿತ್ತು. ಅದರ ನಡು ನಡುವೆ ದ್ವೀಪದಂತೆ ಹಬ್ಬಿದ ಗಿಡಗಳ ತುಂಬ ಕೊಕ್ಕರೆಗಳ ಹಿಂಡು. ಕಣ್ಣಮುಂದಿರುವುದನ್ನೆಲ್ಲ ಕಣ್ತುಂಬಿಕೊಳ್ಳಬೇಕು ಅಂದರೆ ಒಂದಿಷ್ಟುಹೊತ್ತು ಕಣ್ಮುಚ್ಚಿ ಕೂರಬೇಕು. ಎಷ್ಟೋ ದಿನಗಳ ಬಳಿಕ ಅಂಥದ್ದೊಂದು ದಿವ್ಯ ಅನುಭವ ಪಡೆದ ಖುಷಿ.

ಮುಂದೆ ಕಾರು ಚಲಿಸುತ್ತಿದ್ದ ದಾರಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯದ ಜೊತೆಗೆ ಇಂಥ ಅನೇಕ ಕಾಲುದಾರಿಗಳು, ಅಲ್ಲೊಮ್ಮೆ ಇಳೀಬೇಕು, ಇಲ್ಲೊಮ್ಮೆ ಕಾರು ನಿಲ್ಲಿಸಬೇಕು ಅಂತನಿಸಿದರೂ ಕಾಲದ ಹಿಂದೆ ಬಿದ್ದವರು ಕಠೋರವಾಗಿದ್ದರು.

ಅಲ್ಲಿಂದ ಹೊಗೇನಕಲ್‌ಗೆ ಹದಿನೈದೋ ಇಪ್ಪತ್ತೋ ಕಿಮೀ ಇರಬೇಕು. ಪುಟ್ಟಹಳ್ಳಿಯೊಂದು ಎದುರಾಯ್ತು. ಅಲ್ಲೊಂದು ಕಡೆ ರೆಸ್ಟ್‌ಗೆ ಅಂತ ಕಾರು ನಿಲ್ಲಿಸಿದೆವು. ಅಚಾನಕ್‌ ಹಿಂದೆ ನೋಡಿದರೆ ಅದೇ ಟೈಮ್‌ಗೆ ಕರೆಕ್ಟಾಗಿ ಟಯರ್‌ ಪಂಕ್ಚರ್‌. ಕಾರು ತೆಗೆದುಕೊಂಡ ನಾಲ್ಕೈದು ವರ್ಷಗಳಲ್ಲಿ ಟಯರ್‌ ಪಂಕ್ಚರ್‌ ಆದ ಮೊದಲ ಅನುಭವ. ಸುತ್ತಮುತ್ತ ಜನರಿಲ್ಲ, ಟಯರ್‌ ಬದಲಿಸುವ ಬಗ್ಗೆ ಥಿಯರಿಯಲ್ಲಿ ಕಲಿತಿದ್ದು ಅರೆಬರೆ ತಲೆಯಲ್ಲಿತ್ತು. ಮೊದಲ ಪ್ರಾಕ್ಟಿಕಲ್‌ ಅನುಭವ. ನಮ್ಮ ಕಾರು ನಿಂತ ಜಾಗದ ಎದುರು ಬಾಗಿಲು ಮುಚ್ಚಿದ್ದ ಗೂಡಂಗಡಿ, ಅದರ ಹಿಂದೆ ವಿಸ್ತಾರವಾದ ಭತ್ತದ ಗದ್ದೆ. ಅದರಾಚೆಗೆಲ್ಲೋ ಮನೆ. ಇಂಥಾ ಪರಿಸ್ಥಿತಿಯಲ್ಲೂ ಹುಚ್ಚುಮನಸ್ಸು ಆ ಓಣಿಯಲ್ಲಿ ನಡೆಯಲು ಪ್ರಚೋದಿಸುತ್ತಿತ್ತು. ಭತ್ತದ ಘಮ ಆಘ್ರಾಣಿಸಿಕೊಂಡು, ಹೌದೋ ಅಲ್ಲವೋ ಅಂತ ಬೀಸುತ್ತಿದ್ದ ಎಳೇ ಗಾಳಿಗೆ, ಕಿವಿಗೆ ಗಾಳಿಹೊಕ್ಕಂತೆ ಆಡುತ್ತಿದ್ದಳ ಎದುರು ಬೈಕ್‌ ಪ್ರತ್ಯಕ್ಷವಾಯ್ತು. ಬದು ಎತ್ತರದಲ್ಲಿತ್ತು. ಆ ಬೈಕ್‌ಗೆ ದಾರಿ ಕೊಡಬೇಕು ಅಂದರೆ ನಾನು ನೀರಿಂದ ತುಂಬಿದ್ದ ಗದ್ದೆಗೆ ಇಳೀಬೇಕು. ಹಿಂದಿನ ದಾರಿ ದೂರವಿತ್ತು. ಬೈಕ್‌ನಲ್ಲಿದ್ದ ಆ ವ್ಯಕ್ತಿ ನಗುತ್ತಾ ತಮಿಳಿನಲ್ಲೇನೋ ಹೇಳಿದರು. ಎಲ್ಲಿ ಹೋಗ್ಬೇಕು ಅಂತ ಇರಬೇಕು. ನನ್ನ ನಟನಾ ಕೌಶಲ್ಯ ಎಲ್ಲವನ್ನೂ ತೋರಿಸಿ ಕಾರಿನ ಟಯರ್‌ ಪಂಕ್ಚರ್‌ ಆದದ್ದನ್ನು ಹೇಳಿದೆ. ಗದ್ದೆಯಂಚಲ್ಲಿ ನಿಂತಿದ್ದ ಆತ ನನ್ನನ್ನು ದಾಟಿ ಮುಂದೆ ಹೋದ. ಆಮೇಲೆ ಅಲ್ಲಿಂದ ಮೇಲೇರಿ ಕೊಂಚ ದೂರ ನಡೆದು ಕಾರಿನ ಕತೆ ಏನಾಯ್ತೋ ಏನೋ ಅಂತ ಮರಳಿ ಬಂದರೆ ಆ ವ್ಯಕ್ತಿ ನಮ್ಮವರ ಜೊತೆಗೆ ಸೇರಿ ಟಯರ್‌ ಬದಲಿಸುತ್ತಿದ್ದ.

ಆಮೇಲೆ ಹೊಗೇನಕಲ್‌ನಲ್ಲಿ ತೆಪ್ಪದಲ್ಲಿ ಫಾಲ್ಸ್‌ ಬಳಿ ಹೋಗಿದ್ದು, ನೀರಾಟ ಆಡಿದ್ದು ಎಲ್ಲ ಒಳ್ಳೆಯ ಅನುಭವಗಳೇ. ಆದರೆ ಮನಸ್ಸು ಬೇಯುತ್ತಿರುವಾಗ ತಂಗಾಳಿಯ ಹಾಗೆ ಹಾದು ಹೋಗೋದು ಆ ಎರಡು ಗಂಟೆಗಳ ಫಲಕು. ವಾಪಾಸ್‌ ಬರುವಾಗಲೂ ಎರಡೂ ಬದಿ ಗದ್ದೆ, ನಡುವೆ ದೊಡ್ಡ ಆಲದ ಮರವಿದ್ದಲ್ಲಿ ಕಾರು ನಿಲ್ಲಿಸಿ ಅಲ್ಲಿ ಇಸ್ಪೀಟಾಡುತ್ತಿದ್ದ ಮುದುಕರ ಕಣ್ಣಲ್ಲಿದ್ದ ಪ್ರಶ್ನೆಯನ್ನು ಹಾಗೇ ಉಳಿಸಿ ಸುಮ್ಮನೆ ನಡೆದದ್ದು. ಅಲ್ಲಲ್ಲಿ ಊರವರು ತಮಿಳಿನಲ್ಲಿ ರಾಗವೆಳೆದು ಮಾತನಾಡುತ್ತಿದ್ದರೆ ನಮ್ಮದು ಸಂಜ್ಞಾಭಿನಯ. ಅಪರಿಚಿತ ಊರಲ್ಲಿ ಅನಾಮಿಕರಾಗಿ ಓಡಾಡುವ ಖುಷಿ. ಹಾಗೆ ಮುಂದುವರಿದರೆ ಪಕ್ಕದಲ್ಲಿ ಬೃಹತ್‌ ಬೆಟ್ಟ, ತುದಿಯಲ್ಲೊಂದು ದೇವಸ್ಥಾನ. ಸಣ್ಣಗೆ ಕತ್ತಲಾವರಿಸುತ್ತಿದ್ದರೂ ಲೆಕ್ಕಿಸದೇ ಬೆಟ್ಟವೇರಿ, ತಣ್ಣನೆಯ ಗಾಳಿಗೆ ಮೈಯೊಡ್ಡಿದ್ದೆವು.

*

ಮೊನ್ನೆ ಮೊನ್ನೆ ಗೋಕರ್ಣದಿಂದ ಯಾಣಕ್ಕೆ ಹೊರಟಿದ್ದೆವು. ಕೊಂಚ ದೂರದಲ್ಲಿ ಹೊಸ್ಕಟ್ಟಅನ್ನೋ ಊರು. ಒಂದು ಬದಿ ಸಂಪೂರ್ಣ ಹಿನ್ನೀರು, ಇನ್ನೊಂದು ಬದಿ ಚೌಕಾಕಾರದ ಗುರುತಿನಲ್ಲಿದ್ದ ಗದ್ದೆಗಳು. ಬಸ್‌ಸ್ಟಾಂಡ್‌ನಲ್ಲಿ ಊರಿನ ಹೆಂಗಸರು ಬಸ್ಸಿಗೆ ಕಾಯುತ್ತಾ ನಿಂತಿದ್ದರು. ಗಾಡಿ ನಿಲ್ಲಿಸಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ನಮ್ಮನ್ನು ಕಂಡು ಏನನಿಸಿತೋ, ಯಾವೂರು, ಏನು ಹುಡುಕುತ್ತಿದ್ದೀರಿ ಅಂತೆಲ್ಲ ಕೇಳಿದರು. ‘ಸುಮ್ನೆ ಊರು ನೋಡ್ತಿದ್ದೀವಿ’ ಅನ್ನೋದಷ್ಟೇ ಸಾಧ್ಯವಾಯ್ತು. ಈ ದಾರಿಯಲ್ಲಿ ಆಚೆ ಹೋದ್ರೆ ಉಪ್ಪಿನ ಗದ್ದೆ ಇದೆ ನೋಡಿ ಅಂದರು. ಆಮೇಲೆ ನೋಡಿದರೆ ಇವು ಪುರಾತನ ಮಾದರಿಯ ಉಪ್ಪಿನ ಗದ್ದೆಗಳು. ಸಮುದ್ರ ಉಪ್ಪುನೀರನ್ನು ಈ ಗದ್ದೆಗಳಿಗೆ ಹಾಯಿಸಿ ಅದರಿಂದ ಉಪ್ಪು ಪ್ರತ್ಯೇಕಿಸುತ್ತಾರೆ. ಸಾಣಿಕಟ್ಟಾಇಂಥಾ ಪಾರಂಪರಿಕ ಉಪ್ಪು ತಯಾರಿಕೆಗೆ ಫೇಮಸ್‌. ಅದು ಈ ಊರಿನ ಸಮೀಪದಲ್ಲೇ ಇದೆ.

ಹೆಂಗಸರ ಮಾತಿಗೆ ಉಘೇ ಅಂದು ಮುಖ್ಯರಸ್ತೆಯ ಬಿಟ್ಟು ಪಕ್ಕದ ದಾರಿಗೆ ಶಿಫ್ಟ್‌ ಆದೆವು. ನೂರಾರು ಎಕರೆ ಉಪ್ಪಿನ ಗದ್ದೆಗಳು. ಅವುಗಳ ಮೇಲ್ಮೈಯಲ್ಲಿ ಬೆಳ್ಳನೆಯ ಉಪ್ಪಿನ ಅಂಶ. ಅವುಗಳ ಮಧ್ಯೆ ‘ನಳಿನಿ ಸಾಲ್ಟ್‌ ಇಂಡಸ್ಟ್ರಿ’ ಎಂಬ ಕಲ್ಲಿನ ದೊಡ್ಡ ಕಟ್ಟಡ. ಅಲ್ಲಿ ಆಗಲೂ ಉಪ್ಪಿನ ಸಂಸ್ಕರಣೆ ಕೆಲಸ ನಡೆಯುತ್ತಿತ್ತು. ಅದರ ಎದುರು ಬದಿ ಹಸಿರುಗದ್ದೆಯಲ್ಲಿ ನೂರಾರು ಕಾಡುಗುಬ್ಬಿಗಳು ಕೊಕ್ಕರೆಗಳ ಜೊತೆಗೆ ಪಟ್ಟಾಂಗ ಹೊಡೆಯುತ್ತಿದ್ದವು. ಮುಂದೆ ಬಹಳ ದೂರದವರೆಗೆ ಆವರಿಸಿದ್ದ ಹಿನ್ನೀರು, ಅದರ ಬದಿಗೆ ನೂರಾರು ಕಾಂಡ್ಲಾ ಗಿಡಗಳು. ಕಾಂಡ್ಲಾ ಗಿಡಗಳ ಬೃಹತ್‌ ಬೇರುಗಳನ್ನು ನೋಡಿದ್ದು ಅದೇ ಮೊದಲು. ಮೀನುಗಾರರ ಮನೆಗಳು, ಅವರ ಮನೆ ಮುಂದಿದ್ದ ದೋಣಿಗಳನ್ನು ನೋಡುತ್ತಾ, ಹಿತವಾಗಿ ವಾತಾವರಣದಲ್ಲಿ ಸೇರಿಕೊಂಡ ಕಟ್ಟಿಗೆ ಒಲೆ ಅಡುಗೆಯ ಘಮವನ್ನು ಉಸಿರಲ್ಲಿ ತುಂಬಿಕೊಳ್ಳುತ್ತಾ, ಮುಂದಿನ ದಾರಿಯನ್ನೇ ಮರೆತಿದ್ದ ನಮ್ಮನ್ನು ಮತ್ತೆ ಕೆರಳಿಸಿದ್ದು ಗೋಡಂಬಿಯ ಪರಿಮಳ. ಅಲ್ಲೆಲ್ಲೋ ಗೇರುಬೀಜದ ಫ್ಯಾಕ್ಟರಿ ಇರಬೇಕು, ಸಿಕ್ಕಿದ್ರೆ ಒಂಚೂರು ತಗೊಳ್ಬಹುದಿತ್ತು ಅಂತ ಬೆಂಗಳೂರು ಬುದ್ಧಿಯಲ್ಲಿ ಹುಡುಕಾಡಿದರೆ ಅಂಥಹದ್ದು ನಮ್ಮೂರಲ್ಲೇನೂ ಇಲ್ಲ ಎಂದ ಎದುರು ಸಿಕ್ಕ ಹುಡುಗ. ಯಾರದೋ ಮನೆಯಲ್ಲಿ ಗೋಡಂಬಿ ಸುಟ್ಟಿರಬೇಕು ಅಂದುಕೊಳ್ಳದೇ ವಿಧಿ ಇರಲಿಲ್ಲ.

*

ಮುಖ್ಯದಾರಿ ಬಿಟ್ಟು ನಡೆದರೆ ಇಂಥಾ ಅನುಭವಗಳು ಟೂರಿಗೊಂದರ ಹಾಗೆ ಸಿಗುತ್ತವೆ. ನಮ್ಮ ಗಡಿಬಿಡಿ, ಇಷ್ಟೊತ್ತಿಗೆ ಅಲ್‌ ರೀಚ್‌ ಆಗ್ಬೇಕ್‌ ಅನ್ನೋ ಧಾಡಸಿತನಕ್ಕೆ ಕೊಂಚ ಬ್ರೇಕ್‌ ಹಾಕಬೇಕು. ಈ ಎಲ್ಲ ಅಡ್ಡದಾರಿಗಳಲ್ಲಿ ಅಡ್ಡಾಡಿ ಗುರಿ ತಲುಪುವಾಗ ಲೇಟ್‌ ಆಗಿಯೇ ಆಗುತ್ತೆ. ಸುಸ್ತು ದುಪ್ಪಟ್ಟಾಗುತ್ತೆ. ಆದರೆ ಲೈಫ್‌ನ ಲಾಂಗ್‌ ಡಿಸ್ಟೆನ್ಸ್‌ ಜರ್ನಿಯಲ್ಲಿ ಇಂಥವು ಹೆಚ್ಚು ಅಪ್ಯಾಯಮಾನ.

click me!