ಕುತುಬ್ ಮಿನಾರ್ ಪ್ರವಾಸಿ ತಾಣ. ಅಲ್ಲಿಗೆ ಹೋಗಿದ್ರೆ ಅಥವಾ ಹೋಗುವ ಪ್ಲಾನ್ ನಲ್ಲಿದ್ದರೆ ಕುತುಬ್ ಮಿನಾರ್ ಬಗ್ಗೆ ಕೆಲ ವಿಷ್ಯ ತಿಳಿದುಕೊಳ್ಳಿ. ಕುತುಬ್ ಮಿನಾರ್ ಒಳಗೆ ಹೋಗಿ, ಮೆಟ್ಟಿಲು ಹತ್ತಿ ಮೇಲೆ ಹೋಗಲು ಸಾಧ್ಯವಿಲ್ಲ. ಯಾಕೆಂದ್ರೆ ಮುಖ್ಯ ದ್ವಾರ ಬಂದ್ ಆಗಿದೆ. ಇದಕ್ಕೆ ಅನೇಕ ಕಾರಣವಿದೆ.
ಇಟ್ಟಿಗೆಯಿಂದ ಮಾಡಿದ ಅತಿ ಎತ್ತರದ ಕಟ್ಟಡ ಕುತುಬ್ ಮಿನಾರ್. ಇದು ಐತಿಹಾಸಿಕ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಸಾಕಷ್ಟು ರಹಸ್ಯಗಳನ್ನು ಹೊಂದಿದ್ದು, ಕುತುಬ್ ಮಿನಾರ್ ಬಗ್ಗೆ ವಿವಾದಗಳು ಆಗಾಗ ನಡೆಯುತ್ತಿರುತ್ತವೆ. ಕುತುಬ್ ಮಿನಾರ್ ಬಗ್ಗೆ ನಾವು ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಕುತುಬ್ ಮಿನಾರ್ (Qutub Minar) ಅನ್ನು 1199 ರಿಂದ 1220 ರ ಅವಧಿಯಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾಣವನ್ನು ಕುತ್ಬುದ್ದೀನ್-ಐಬಕ್ ಪ್ರಾರಂಭಿಸಿದರು, ನಂತರ ಉತ್ತರಾಧಿಕಾರಿ ಇಲ್ತುಮಿಶ್ ಇದನ್ನು ಪೂರ್ಣಗೊಳಿಸಿದರು. ಕುತುಬ್ ಮಿನಾರ್ ಹೆಸರು ಹೇಗೆ ಬಂತು ಎನ್ನುವ ಬಗ್ಗೆ ಇತಿಹಾಸಕಾರರಲ್ಲಿ ವಿವಾದವಿದೆ. ಭಾರತ (India )ದ ಮೊದಲ ಮುಸ್ಲಿಂ ಆಡಳಿತಗಾರ ಕುತುಬುದ್ದೀನ್ ಐಬಕ್ ನಂತರ ಇದಕ್ಕೆ ಈ ಹೆಸರು ಬಂದಿದೆ ಎಂದು ಕೆಲವು ಇತಿಹಾಸಕಾರರು ನಂಬುತ್ತಾರೆ. ಮತ್ತೊಂದೆಡೆ ಕುತುಬ್ ಮಿನಾರ್ ಅನ್ನು ಖ್ವಾಜಾ ಕುತುಬುದ್ದೀನ್ ಭಕ್ತಿಯಾರ್ ಕಾಕಿ ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ ಎಂದು ಹೇಳಲಾಗುತ್ತದೆ. ಅದೇನೇ ಇರಲಿ ಕುತುಬ್ ಮಿನಾರ್ ಸೌಂದರ್ಯಕ್ಕೆ ಮಾತ್ರ ಮರುಳಾಗದವರಿಲ್ಲ. ಈಗ್ಲೂ ಕಟ್ಟಡ ಹೊಸದಾಗಿ ನಿರ್ಮಾಣವಾದಂತೆಯೇ ಇದೆ. ಕುತುಬ್ ಮಿನಾರ್ ಸುತ್ತಲೂ ಅನೇಕ ಐತಿಹಾಸಿಕ ಮತ್ತು ಭವ್ಯವಾದ ಕಟ್ಟಡಗಳಿವೆ. ಈ ಸ್ಥಳವನ್ನು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳಲ್ಲಿ ಸೇರಿಸಿದೆ. ಕುತುಬ್ ಮಿನಾರ್ ವೀಕ್ಷಣೆ ಮಾಡಲು ದೇಶ, ವಿದೇಶಗಳಿಂದ ಪ್ರವಾಸಿಗರು ಬರ್ತಾರೆ.
ವಿಶ್ವದ ಅತಿ ಉದ್ದದ ಐಷಾರಾಮಿ ನದಿಯಾನ ಗಂಗಾ ವಿಲಾಸ..! ಕ್ರೂಸ್ ಹಡಗು ಯಾನದ ವೈಶಿಷ್ಟ್ಯ ಹೀಗಿದೆ..
ಕುತುಬ್ ಮಿನಾರ್ ಬಾಗಿಲು ಮುಚ್ಚಿದ್ದೇಕೆ? : ಆರಂಭದಲ್ಲಿ ಕುತುಬ್ ಮಿನಾರ್ ಬಾಗಿಲನ್ನು ತೆರೆಯಲಾಗುತ್ತಿತ್ತು, ಜನರಿಗೆ ಕುತುಬ್ ಮಿನಾರ್ ಒಳಗೆ ಪ್ರವೇಶಿಸುವ ಅವಕಾಶವಿತ್ತು. 1974 ರಲ್ಲಿ ಕೂಡ ಕುತುಬ್ ಮಿನಾರ್‌ಗೆ ಸಾಮಾನ್ಯ ಜನರ ಪ್ರವೇಶವಿತ್ತು. ಡಿಸೆಂಬರ್ 4, 1984 ರಂದು ಅಲ್ಲಿ ಭೀಕರ ಅಪಘಾತ ಸಂಭವಿಸಿತು. ಅದರ ನಂತರ ಒಳಗೆ ನೂಕುನುಗ್ಗಲು ಉಂಟಾಯಿತು. ಈ ಕಾಲ್ತುಳಿತದಲ್ಲಿ ಸುಮಾರು 45 ಜನರು ಸಾವನ್ನಪ್ಪಿದ್ದರು. ಈ ಅವಗಢದ ನಂತರ ಕುತುಬ್ ಮಿನಾರ್‌ನ ಬಾಗಿಲನ್ನು ಮುಚ್ಚಲಾಯಿತು. ಕುತುಬ್ ಮಿನಾರ್ ಒಳಗಿನಿಂದ ಮೇಲಕ್ಕೆ ಹೋಗುವ ದಾರಿ ತುಂಬಾ ಕಿರಿದಾಗಿದೆ. ಮೆಟ್ಟಿಲುಗಳು ತುಂಬಾ ಕಡಿದಾಗಿದೆ. ಕೆಲವು ಕಡೆ ಮೆಟ್ಟಿಲುಗಳು ಮುರಿದುಹೋಗಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಈ ಮೆಟ್ಟಲಿನಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಮೆಟ್ಟಿಲು ಹತ್ತಲು ಮತ್ತು ಇಳಿಯಲು ಸಮಸ್ಯೆಯಾಗುತ್ತದೆ. ಮೆಟ್ಟಿಲುಗಳಿಂದ ಜಾರಿಬೀಳುವ ಭಯವಿದೆ.
ಕುತುಬ್ ಮಿನಾರ್ ಮೇಲಕ್ಕೆ ಹೋಗಲು 379 ಮೆಟ್ಟಿಲುಗಳಿವೆ. ಘಟನೆ ನಡೆದ ದಿನ ಸುಮಾರು 400 ಮಂದಿ ಕುತುಬ್ ಮಿನಾರ್ ಒಳಗಿದ್ದರು. ಬಹುತೇಕ ಮಕ್ಕಳು ಅದ್ರೊಳಗಿದ್ದರು ಎನ್ನಲಾಗಿದೆ. ಎಲ್ಲರೂ ಮೆಟ್ಟಿಲು ಏರುತ್ತ, ಇಳಿಯುತ್ತಿದ್ದರು. ಇಲ್ಲಿ ಹೊರಗಡೆಯಿಂದ ಯಾವುದೇ ಬೆಳಕು ಬರೋದಿಲ್ಲ. ಕರೆಂಟ್ ವ್ಯವಸ್ಥೆ ಮಾಡಿ ಅಲ್ಲಲ್ಲಿ ಬಲ್ಬ್ ಹಾಕಲಾಗಿದೆ. ಏಕಾಏಕಿ ಕರೆಂಟ್ ಹೋಗಿದ್ದರಿಂದ ಅಲ್ಲಿ ಕತ್ತಲು ಆವರಿಸಿತ್ತು. ಇದ್ರಿಂದ ಭಯಗೊಂಡ ಮಕ್ಕಳು ಕೆಳಗಿಳಿಯಲು ಮುಂದಾದ್ರು. ಈ ವೇಳೆ ನೂಕುನುಗ್ಗಲು ಉಂಟಾಯ್ತು. ಸಣ್ಣ ಮೆಟ್ಟಿಲಿರುವ ಕಾರಣ ಕಾಲ್ತುಳಿತಕ್ಕೆ ಮಕ್ಕಳು ಬಲಿಯಾದ್ರು. ಆ ಘಟನೆ ನಂತ್ರ ಕುತುಬ್ ಮಿನಾರ್ ಬಾಗಿಲು ಮುಚ್ಚಲಾಯ್ತು. ಇನ್ನೊಂದು ಕಾರಣವೆಂದ್ರೆ ಪ್ರವಾಸಿಗರ ಆತ್ಮಹತ್ಯೆ ಯತ್ನ. ಸುಮಾರು ಮಂದಿ ಗೋಪುರದ ಮೇಲಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದರಂತೆ. ಹಾಗಾಗಿ ಕುತುಬ್ ಮಿನಾರ್ ಬಾಗಿಲನ್ನು ಮುಚ್ಚಲಾಗಿದೆ.
ಟಾಯ್ಲೆಟ್ ಮಾಡಿ ಫ್ಲಶ್ ಮಾಡೋ ಹಾಗಿಲ್ಲ, ಜಗತ್ತನ್ನು ಬೆರಗುಗೊಳಿಸುವ ವಿಚಿತ್ರ ಕಾನೂನುಗಳು
ಇಷ್ಟೇ ಅಲ್ಲ, ಕುತುಬ್ ಮಿನಾರ್ 900 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ನೋಡಲು ಬಂದ ಅನೇಕ ಜನರು, ಪಕ್ಕದಲ್ಲಿ ಯಾರೋ ಇದ್ದಂತೆ ಭಾಸವಾಗುತ್ತದೆ ಎಂದಿದ್ದರು. ರಾತ್ರಿಯ ಸಮಯದಲ್ಲಿ ತನಿಖಾಧಿಕಾರಿಗಳು ಈ ಸ್ಥಳದಲ್ಲಿ ಅಪರಿಚಿತ ಶಕ್ತಿಗಳ ಉಪಸ್ಥಿತಿಯನ್ನು ಪ್ರತಿಪಾದಿಸಿದ್ದರು. ಇದು ಕೂಡ ಬಾಗಿಲು ಮುಚ್ಚಲು ಕಾರಣ ಎನ್ನಲಾಗುತ್ತದೆ. ಕುತುಬ್ ಮಿನಾರ್ ಬಾಗಿಲು ತೆರೆದಾಗೆಲ್ಲ ಒಂದೊಂದು ಅನಾಹುತ ನಡೆದ ಕಾರಣ ಸರ್ಕಾರವೇ ಕುತುಬ್ ಮಿನಾರ್ ಬಾಗಿಲಿಗೆ ಬೀಗ ಹಾಕಿದ್ದು, ಪ್ರವಾಸಿಗರು ಅದನ್ನು ಹೊರಗಿನಿಂದ ವೀಕ್ಷಿಸಲು ಮಾತ್ರ ಅವಕಾಶವಿದೆ.
ಕುತುಬ್ ಮಿನಾರ್ ಸುತ್ತ ಇದೆ ಈ ಎಲ್ಲರ ಸಮಾಧಿ : ಕುತುಬ್ ಮಿನಾರ್ ಸುತ್ತಮುತ್ತ ನೀವು ನೋಡುವುದು ಬೇಕಷ್ಟಿದೆ. ಕುವ್ವಾತ್ ಉಲ್ ಇಸ್ಲಾಂ ಮಸೀದಿ, ಅಲೈ ದರ್ವಾಜಾ, ಇಲ್ತುಮಿಶ್ ಸಮಾಧಿ, ಅಲೈ ಮಿನಾರ್, ಅಲಾವುದ್ದೀನ್ ಸಮಾಧಿ, ಇಮಾಮ್ ಜಮೀನ್ ಅವರ ಸಮಾಧಿ ಇತ್ಯಾದಿಯನ್ನು ನೀವು ವೀಕ್ಷಣೆ ಮಾಡಬಹುದು.