50 ವರ್ಷಗಳ ಹಿಂದೆ ಮರದಲ್ಲಿ ಸಿಲುಕಿದ ನಾಯಿ ಕೊಳೆತಿಲ್ಲ ಹೇಗೆ?

By Suvarna NewsFirst Published Dec 11, 2019, 12:05 PM IST
Highlights

ಮರ ಕಡಿಯುವವರ ಕಣ್ಣಿಗೆ ಬಿತ್ತು, 20 ವರ್ಷ ಹಿಂದೆಯೇ ಸತ್ತು ಹಲ್ಲು ಕಡಿಯುತ್ತಾ ಕುಳಿತಂತಿದ್ದ ನಾಯಿ. ಈ ನಾಯಿ ಮರದಲ್ಲಿ ಸಿಲುಕಿದ್ದಾದರೂ ಹೇಗೆ?  ಯಾರು ಅದನ್ನಲ್ಲಿಟ್ಟರು? ಇಂದಿಗೆ ನಾಯಿ ಸತ್ತು 50 ವರ್ಷಗಳೇ ಆಗಿದ್ದರೂ ಅದು ಕೊಳೆಯದೆ ಉಳಿದಿದ್ದು ಹೇಗೆ?

ಅಂದು 1980ರ ಒಂದು ದಿನ. ದಕ್ಷಿಣ ಜಾರ್ಜಿಯಾದ ಓಕ್ ಮರಕ್ಕೆ ಕೊಡಲಿ ಏಟು ಕೊಡಲು ಹೋದ ಆ ಜನ ಒಂದು ಕ್ಷಣ ಬೆಚ್ಚಿ ಬಿದ್ದದ್ದು ಸುಳ್ಳಲ್ಲ. ಮರವನ್ನು ದಿಮ್ಮಿಗಳಾಗಿ ಕಡಿದು ಟ್ರಕ್‌ಗೆ ತುಂಬುವಾಗ ಅದರೊಳಗಿನಿಂದ 
ಕಣ್ಗಳೆರಡು ತಮ್ಮನ್ನೇ ದಿಟ್ಟಿಸಿ ನೋಡಿದಂತಾಗಿ ಅದೇನೆಂದು ನೋಡಹೋದರೆ, ಅದಾಗಲೇ ಬೆದರಿಸುವಂತೆ ಹಲ್ಲುಗಳನ್ನು ಕಡಿದುಕೊಂಡು ಕೂತಿದ್ದು ಒಂದು ನಾಯಿ. ಅಂದರೆ ಮರ ನಿಂತಾಗ ಸುಮಾರು 28 ಅಡಿ ಎತ್ತರದಲ್ಲಿ ಮರದೊಳಗೆ ಇತ್ತು ಅದು. ಅರೆ, ಮರದ ಇಷ್ಟೊಂದು ಮೇಲೆ ನಾಯಿ ಬಂದಿದ್ದು ಹೇಗೆಂದು ನೋಡಿದವರಿಗೆ ತಿಳಿದದ್ದೇನೆಂದರೆ ಆ ನಾಯಿ ಸತ್ತು ಹಲವಾರು ವರ್ಷಗಳೇ ಆಗಿವೆ ಎಂದು!  
ಇದರಿಂದ ಆಶ್ಚರ್ಯಗೊಂಡ ಮರ ಕಡಿಯುವವರು, ಈ ಅಚ್ಚರಿಯನ್ನು ಜಗತ್ತೇ ನೋಡಲಿ ಎಂಬ ಆಸೆಯಿಂದ ಆ ನಾಯಿಯ ಮಮ್ಮಿಯಂತಾಗಿದ್ದ ದೇಹವನ್ನು ಮರದ ದಿಮ್ಮಿ ಸಮೇತ ತೆಗೆದುಕೊಂಡು ಹೋಗಿ ಸದರ್ನ್ ಫಾರೆಸ್ಟ್ ವರ್ಲ್ಡ್ ಮ್ಯೂಸಿಯಂಗೆ ನೀಡಿದರು. ಸಧ್ಯ ಮ್ಯೂಸಿಯಂನಲ್ಲಿ ಕೂಡಾ ಮರದ ಮಧ್ಯೆಯೇ ನಾಯಿಯ ದೇಹ ಸಿಲುಕಿದೆ. ಮರದ ಮಧ್ಯೆ ಸ್ಟಕ್ ಆಗಿರುವ ಆ ನಾಯಿಗೆ ಈಗ ಪ್ರೀತಿಯಿಂದ 'ಸ್ಟಕ್ಕೀ' ಎಂದೇ ಹೆಸರಿಡಲಾಗಿದೆ. 
ಇಷ್ಟಕ್ಕೂ ಅದು ಮರದ ಮೇಲೆ ಹೋಗಿದ್ದಾದರೂ ಹೇಗೆ, ಅಲ್ಲಿ ಜೀವ ಕಳೆದುಕೊಳ್ಳಲು ಕಾರಣವೇನು? ಸತ್ತ ಮೇಲೆ ಅದರ ದೇಹ ಕೆಡದೆ ಯಥಾಸ್ಥಿತಿಯಲ್ಲಿ 50 ವರ್ಷಗಳ ಕಾಲ ಇರಲು ಕಾರಣವೇನು ಎಂಬ ಪ್ರಶ್ನೆಗಳು ಕಾಡುತ್ತಿವೆಯಲ್ಲವೇ? ಇದೇ ಪ್ರಶ್ನೆಗಳು ವಿಜ್ಞಾನಿಗಳನ್ನು ಕೂಡಾ ಕಾಡಿತ್ತು. ಅವರದಕ್ಕೆ ಉತ್ತರ ಹುಡುಕಿಕೊಂಡು ಹೊರಟಾಗ ಸಿಕ್ಕದ್ದೇನು ಗೊತ್ತಾ?

ಸತ್ತು ವರ್ಷಗಳ ನಂತರ ಇಲ್ಲಿ ಶವಗಳು ವಾಕ್ ಮಾಡಲು ಆರಂಭಿಸುತ್ತವೆ

ಸ್ಟಕ್ಕಿಯ ಕತೆ
ತಜ್ಞರು ಅಧ್ಯಯನ ಮಾಡಿ ಊಹಿಸಿದ ಪ್ರಕಾರ ಸ್ಟಕ್ಕಿಯು ಬೇಟೆ ನಾಯಾಗಿದ್ದು, 1960ರ ಸಮಯದಲ್ಲಿ ಒಮ್ಮೆ ಅಳಿಲಿನಂಥ ಯಾವುದೋ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗಿದೆ. ಆ ಪ್ರಾಣಿ ಮರವೇರಲು ನಾಯಿ ಕೂಡಾ ಫುಲ್ ಎಕ್ಸೈಟ್‌ಮೆಂಟ್‌ನಲ್ಲಿ ಮರವೇರಿದೆ. ಆಗ ಮರದ ಮಧ್ಯೆ ಭಾಗ ಖಾಲಿ ಇದ್ದ ಜಾಗದಲ್ಲಿ ಸಿಕ್ಕಿಕೊಂಡಿದೆ. ಮರ ಮೇಲೇ ಹೋದಂತೆಲ್ಲ ತೆಳುವಾಗಿರುವುದರಿಂದ ನಾಯಿ ಸಣ್ಣ ಪೊಟರೆಯಲ್ಲಿ ಸಿಕ್ಕಿಕೊಂಡಿದ್ದು ಅಲ್ಲಿಂದ ಯಾವ ದಿಕ್ಕಿಗೆ ಕೂಡಾ ಅದಕ್ಕೆ ತಿರುಗಲು ಸಾಧ್ಯವಾಗಿಲ್ಲ. ತಪ್ಪಿಸಿಕೊಳ್ಳುವ ಸಲುವಾಗಿ ಹಲ್ಲನ್ನು ಕಡಿದು ತನ್ನ ದೇಹ ಎಳೆಯುತ್ತಿರುವಾಗಲೇ ನಾಯಿ ಸತ್ತು ಹೋಗಿದೆ. ಸಾಯುವಾಗ ನಾಯಿಗೆ 4 ವರ್ಷಗಳಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. 

ಮಮ್ಮಿಯಾದದ್ದು ಹೀಗೆ?
ಸಾಮಾನ್ಯವಾಗಿ ಮರದಲ್ಲಿ ಸಿಲುಕಿ ನಾಯಿ ಸತ್ತರೆ ಅದು ಕೊಳೆತುಹೋಗಬೇಕು ಇಲ್ಲವೇ ಬೇರೆ ಪ್ರಾಣಿಗಳಿಗೆ ಆಹಾರವಾಗಬೇಕು. ಆದರೆ, ಇಲ್ಲಿ ನಾಯಿ ಮರದೊಳಗೆ ಸತ್ತಿರುವುದರಿಂದ ಇತರೆ ಪ್ರಾಣಿಗಳಿಗೆ ನಾಯಿಯ ದೇಹ ಸಿಗಲಿಲ್ಲ. ಇದರ ಜೊತೆಗೆ ನಾಯಿಯು ಮರದಲ್ಲಿ ಬಹಳ ಎತ್ತರದಲ್ಲಿ ಸಿಲುಕಿರುವುದರಿಂದ ಅದರ ವಾಸನೆ ಬೇರೆ ಪ್ರಾಣಿಗಳ ಮೂಗಿಗೆ ಬಡಿದಿಲ್ಲ. 
ಇನ್ನು ಅದು ಕೊಳೆಯದಿರಲು ಕಾರಣ, ಅದು ಏರಿದ ಮರ. ಹೌದು, ಚೆಸ್ಟ್‌ನಟ್ ಓಕ್ ಎಂಬ ಈ ಮರದಲ್ಲಿ ಟ್ಯಾನಿನ್ಸ್ ಎಂಬ ಕೆಮಿಕಲ್ ಇರುತ್ತದೆ. ಸಾಮಾನ್ಯವಾಗಿ ಇವುಗಳನ್ನು ಟ್ಯಾಕ್ಸಿಡರ್ಮಿಯಲ್ಲಿ ಬಳಸಲಾಗುತ್ತದೆ. ಅಂದರೆ ಸತ್ತ ಪ್ರಾಣಿಯ ದೇಹದೊಳಕ್ಕೆ ಬೇರೆ ವಸ್ತುಗಳನ್ನು ತುಂಬಿ ಅದು ಇನ್ನೂ ಬದುಕಿದೆ ಎಂಬಂತೆ ನಿಲ್ಲಿಸುತ್ತಾರಲ್ಲ, ಆಗ ಪ್ರಾಣಿಯ ಚರ್ಮ ಕೊಳೆಯದಂತೆ ಇರಲು ಈ ಟ್ಯಾನಿನ್ ಬಳಕೆಯಾಗುತ್ತದೆ. ಅಂಥದರಲ್ಲಿ ಈ ಸ್ಟಕ್ಕಿ ಹುಡುಕಿ ಹೋದವರಂತೆ ಇದೇ ಮರದೊಳಗೆ ಸಿಲುಕಿಕೊಂಡಿದೆ. ಒಳಗಿದ್ದ ಟ್ಯಾನಿನ್ ನಾಯಿಯ ಮೃತದೇಹವನ್ನು ಕೊಳೆಯದಂತೆ ಕಾಪಾಡಿದೆ. ಇನ್ನು ಒಳಗಿನ ಒಣ ವಾತಾವರಣ ಹಾಗೂ ಹೊರಗಿನಿಂದ ಮಾಯಿಶ್ಚರ್ ತಲುಪಲಾಗದ ಕಾರಣ ನಾಯಿ ಅಲ್ಲಿಯೇ ಒಣಗಿ ಮಮ್ಮಿಯಾಗಿದೆ. 

ನಿತ್ಯಾನಂದನಂತೆ ದ್ವೀಪ ಖರೀದಿಸಬೇಕಾ? ಇಷ್ಟು ದುಡ್ಡಿದ್ದರೆ ಸಾಕು

ಹೆಸರಿಟ್ಟದ್ದು ಯಾರು?
ಸದರ್ನ್ ಫಾರೆಸ್ಟ್ ವರ್ಲ್ಡ್ ಮ್ಯೂಸಿಯಂನಲ್ಲಿ ಸ್ಟಕ್ಕಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮ್ಯೂಸಿಯಂಗೆ ಬಂದ ಬಳಿಕ ಸುಮಾರು 20 ವರ್ಷಗಳ ಕಾಲ ಮಮ್ಮಿಫೈಡ್ ಡಾಗ್ ಎಂದೇ ಇದನ್ನು ಕರೆಯಲಾಗುತ್ತಿತ್ತು. ಆದರೆ, ನಂತರ ಮ್ಯೂಸಿಯಂ ಅಡಳಿತ ಇದಕ್ಕೆ ಹೆಸರಿಡುವ ಉದ್ದೇಶದಿಂದ ಸ್ಪರ್ಧೆಯೊಂದನ್ನು ನಡೆಸಿದರು. ಆ ಸ್ಪರ್ಧೆಯಲ್ಲಿ ಬಂದ ನೂರಾರು ಹೆಸರುಗಳಲ್ಲಿ ಸ್ಟಕ್ಕಿ ಎಲ್ಲರ ಗಮನ ಸೆಳೆಯಿತು. ಅಂದಿನಿಂದ ಸ್ಟಕ್ಕಿ ಹಲವಾರು ಲೇಖನಗಳಲ್ಲಿ, ಡಾಕ್ಯುಮೆಂಟ್‌ಗಳಲ್ಲಿ, ಸುದ್ದಿಯಾಗಿ ಹೆಸರು ಮಾಡಿದೆ. 

click me!