
- ರವಿಶಂಕರ್ ಭಟ್
ಲಡಾಖ್. ಹೆಸರೇ ರೋಮಾಂಚಕ. ಮುಗಿಲೆತ್ತರದ ಪರ್ವತ ಶಿಖರಗಳು, ಅವುಗಳ ತಪ್ಪಲಲ್ಲಿ ತಣ್ಣಗೆ ಹರಿಯುವ ನದಿ-ತೊರೆಗಳು. ಅಲ್ಲಲ್ಲಿ ಹುಲ್ಲುಗಾವಲು. ಕೆಲವೆಡೆ ಮರಳುಗಾಡು. ಹಾಗೆಂದರೆ, ರಾಜಸ್ಥಾನದಲ್ಲಿ ಕಾಣಸಿಗುವ ಥಾರ್ ಮರುಭೂಮಿಯಂತಲ್ಲ, ಅದು ಪರ್ವತಗಳ ನಡುವೆ ಬಟಾಬಯಲಿನ ಮರಳುಮಿಶ್ರಿತ ಬಂಜರು ನೆಲ. ಶೀತ ಮರುಭೂಮಿಯೆಂದೇ (ಕು)ಖ್ಯಾತಿ ಇವುಗಳದ್ದು. ಹೇಳಿಕೊಳ್ಳುವಂಥ ನೈಸರ್ಗಿಕ ಸಂಪನ್ಮೂಲ ಏನಿಲ್ಲ ಇಲ್ಲಿ.
ಒಂದೊಮ್ಮೆ ಜಮ್ಮು-ಕಾಶ್ಮೀರದ ಭಾಗವಾಗಿದ್ದ, ಈಗ ಸ್ವತಂತ್ರ ಕೇಂದ್ರಾಡಳಿತ ಪ್ರದೇಶ ಲಡಾಖ್. ದೇಶದ ಉತ್ತರೀಶಾನ್ಯ ತುದಿಯಲ್ಲಿರುವ ಈ ಪ್ರಾಂತ್ಯ ಈಗ ನಮ್ಮ ನಕ್ಷೆಯಲ್ಲಿರುವಂತಿಲ್ಲ. ಅದರ ಅರ್ಧದಷ್ಟು ಭಾಗವನ್ನು ಚೀನಾ ಗುಳುಂ ಸ್ವಾಹಾ ಮಾಡಿ ಅಕ್ಸಾಯ್ ಚಿನ್ ಎಂದು ಹೆಸರಿಟ್ಟು 6 ದಶಕಗಳೇ ಕಳೆದಿವೆ. ಲೆಕ್ಕಕ್ಕೆ 60 ಸಾವಿರ ಚದರ ಕಿ.ಮೀ. ವಿಸ್ತೀರ್ಣವಿದ್ದರೂ ಅದರ ಶೇ.40ರಷ್ಟು ಚೀನಾ ತೆಕ್ಕೆಯಲ್ಲಿದೆ.
ವಿಶ್ವಪ್ರಸಿದ್ಧ ಸಿಂಧೂ ನದಿ ಹರಿದು ಹೋಗುವ ಲಡಾಖ್
ಇಲ್ಲಿನ ಹೆಚ್ಚಿನ ಭಾಗದಲ್ಲಿ ಮೈನಸ್ 15 ಡಿಗ್ರಿವರೆಗೂ ಹೆಪ್ಪುಗಟ್ಟುವ ಚಳಿ. ಮೈನಸ್ 60 ಡಿಗ್ರಿ ಸೆಲ್ಷಿಯಸ್ ವರೆಗೂ ಇರುವ ರಷ್ಯಾದ ಸೈಬೀರಿಯಾವನ್ನು ಹೊರತುಪಡಿಸಿದರೆ 2ನೇ ಅತಿ ಕಡಿಮೆ ತಾಪ (ಮೈನಸ್ 30 ಡಿಗ್ರಿ) ಇರುವ, ಮನುಷ್ಯ ವಾಸ್ತವ್ಯ ಇರುವ ದ್ರಾಸ್ ಪ್ರದೇಶ ಇದೇ ಲಡಾಖ್ ಪ್ರಾಂತ್ಯಕ್ಕೆ ಸೇರಿದ್ದು. ಸಮುದ್ರ ಮಟ್ಟದಿಂದ 25400 ಅಡಿ ಎತ್ತರ, ಅಂದರೆ ವಿಶ್ವದ ಅತಿ ದೊಡ್ಡ ಪರ್ವತ ಎನಿಸಿಕೊಂಡ ಮೌಂಟ್ ಎವರೆಸ್ಟ್ ಗಿಂತ ಕೇವಲ 4000 ಅಡಿ ಕಡಿಮೆ ಇರುವ ಸಲ್ಟೋರೋ ಕಾಂಗ್ರಿ, ಲಡಾಖಿನ ಅತಿ ಎತ್ತರದ ಪ್ರದೇಶ. ಇದರ ಎತ್ತರ ಬೆಂಗಳೂರಿಗಿಂತ ಸುಮಾರು 9 ಪಟ್ಟು ಹೆಚ್ಚು. ಹಾಗೆಯೇ, ವಿಶ್ವಪ್ರಸಿದ್ಧ ಸಿಂಧೂ ನದಿ ಹರಿದು ಹೋಗುವುದೂ ಇದೇ ಲಡಾಖ್ ನಲ್ಲಿ. ಅದುವೇ ಬೆಂಗಳೂರಿಗಿಂತ ಎರಡೂವರೆ ಪಟ್ಟು ಎತ್ತರದ ಪ್ರದೇಶ. ಇನ್ನು 134 ಕಿ.ಮೀ. ಉದ್ದ, 700 ಚದರ ಕಿ.ಮೀ. ಸುತ್ತಳತೆ ಇರುವ ಹೆಸರಾಂತ ಪ್ಯಾಂಗಾಗ್ ಸರೋವರ ಇರುವುದೂ ಇದೇ ಲಡಾಖ್ ಪ್ರಾಂತ್ಯದಲ್ಲಿ. ಆದರೆ, ಇದರ ಮುಕ್ಕಾಲು ಭಾಗ ಈಗ ಚೀನಾ ವಶದಲ್ಲಿದೆ ಎಂಬುದು ವಿಪರ್ಯಾಸ. ವಿಶ್ವದ ಅತಿ ಎತ್ತರದ ವಾಹನ ಸಂಚರಿಸಬಲ್ಲ ಉಮ್ಲಿಂಗ್ ಲಾ ಪಾಸ್, 90ರ ದಶಕದಲ್ಲಿ ಭಾರತ-ಪಾಕ್ ಯುದ್ಧ ನಡೆದ ಕಾರ್ಗಿಲ್ ಎಲ್ಲವೂ ಇಲ್ಲಿವೆ. ಹಾಗಾಗಿಯೇ, ಇದು ಸಾಹಸಿ ಪ್ರವಾಸಿಗರ ಸ್ವರ್ಗ. ಈ ಮೈನವಿರೇಳಿಸುವ ಸ್ಥಳಗಳೇ ಇಲ್ಲಿನ ಸಂಪನ್ಮೂಲ.
ಇಂತಿಪ್ಪ ಲಡಾಖ್ ಪ್ರಾಂತ್ಯಕ್ಕೆ ಭೇಟಿ ನೀಡುವುದು ಪ್ರವಾಸಾಸಕ್ತರಿಗೆ ಜೀವಮಾನದ ಕನಸುಗಳಲ್ಲೊಂದು. ಆಸ್ತಿಕರಿಗೆ ಕಾಶಿ ಭೇಟಿ ಹೇಗೋ, ಹಾಗೆ. ಲಡಾಖಿನ ನಿಸರ್ಗ ಸೌಂದರ್ಯ, ಸಾಹಸಾವಕಾಶಗಳಿಗೆ ಮನಸೋತು ಕೆಲವು ಉತ್ಸಾಹಿಗರು ಮತ್ತೆ ಮತ್ತೆ ಭೇಟಿ ನೀಡುವುದೂ ಉಂಟು. ಆದರೆ, ಹಾಗೆ ಮಾಡಲು ಆರೋಗ್ಯದ ಜೊತೆ ಕಿಸೆಯೂ ಗಟ್ಟಿ ಇರಬೇಕು.
ವರ್ಷದಲ್ಲಿ ಆರು ತಿಂಗಳು ಮಾತ್ರ ಪ್ರವಾಸಿಗರಿಗೆ ಲಡಾಖ್ ಮುಕ್ತ
ಲೇಹ್ ಪಟ್ಟಣ ಲಡಾಖ್ ಪ್ರಾಂತ್ಯದ ಕೇಂದ್ರ ಸ್ಥಾನ. ಈಚಿನ ವರ್ಷಗಳಲ್ಲಿ ಬಹಳಷ್ಟು ಮೂಲಸೌಕರ್ಯ ಅಭಿವೃದ್ಧಿ ಕಂಡಿರುವ ಲಡಾಖ್ ಗೆ ಈಗ ವರ್ಷಕ್ಕೆ ಏನಿಲ್ಲವೆಂದರೂ 3 ಲಕ್ಷ ಪ್ರವಾಸಿಗರು ದಾಂಗುಡಿಯಿಡುತ್ತಾರೆ. ಹಾಗಂತ ಇಲ್ಲಿಗೆ ವರ್ಷಪೂರ್ತಿ ಭೇಟಿ ನೀಡುವಂತಿಲ್ಲ. ವರ್ಷದಲ್ಲಿ ಆರು ತಿಂಗಳು ಮಾತ್ರ ಪ್ರವಾಸಿಗರಿಗೆ ಲಡಾಖ್ ಮುಕ್ತ. ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ಲಡಾಖ್ ಭೇಟಿಗೆ ಪ್ರಶಸ್ತ. ಸೆಪ್ಟೆಂಬರ್ ತಿಂಗಳ ವರೆಗೆ ಭೇಟಿ ನೀಡಬಹುದಾದರೂ, ಆಗೆಲ್ಲ ಚಳಿ ತೀವ್ರವಾಗತೊಡಗುತ್ತದೆ.
ಲಡಾಖ್ ಗೆ ಬಹಳ ಪ್ರವಾಸಿಗರು ಪ್ಯಾಕೇಜ್ ಟೂರು ಬರುತ್ತಾರೆ. ಇದ್ದುದರಲ್ಲಿ ಸರಳ ಎನಿಸುವಂಥ ಪ್ರದೇಶದಲ್ಲಿ ಸುತ್ತಾಡುತ್ತಾರೆ. ಕೆಲವರು ತಮ್ಮದೇ ಅಥವಾ ಬಾಡಿಗೆಯ ಬೈಕು, ಜೀಪು, ವಿಶೇಷೋಪಯೋಗಿ ವಾಹನಗಳಂಥ ಗಟ್ಟಿ ಯಂತ್ರಗಳನ್ನೇರಿ ಸಾಹಸ ಸವಾರಿ ಮಾಡುತ್ತಾರೆ. ಇನ್ನು ಅನೇಕರು ಹವಾಯಿ ಜಹಾಜಿನಲ್ಲಿ ಬಂದು ಲೇಹ್ ಬಳಿ ಇರುವ ಕುಶೋಕ್ ಬಕುಲಾ ರಿಂಪೋಚಿ ವಿಮಾನನಿಲ್ದಾಣದಲ್ಲಿ ಇಳಿದು, ನಂತರ ಬಾಡಿಗೆ ವಾಹನಗಳಲ್ಲಿ ಲಡಾಖ್ ಸೌಂದರ್ಯ ಸವಿಯುವುದೂ ಉಂಟು.
ಆಗಸ್ಟ್ 11ರಿಂದ ಆಗಸ್ಟ್ 23ರ ವರೆಗೆ ನಮ್ಮ ಲಡಾಖ್ ಪಯಣ
ಇಷ್ಟು ವಿಕಲ್ಪಗಳ ನಡುವೆ ನಾವು ಆರು ಜನ ಆಯ್ದುಕೊಂಡದ್ದು ಸ್ವತಂತ್ರ ವಾಹನ ಯಾನ. ಎರಡು ಗುಡು ಗುಡು ರಾಯಲ್ ಎನ್ ಫೀಲ್ಡ್ ಬೈಕುಗಳು, ಮತ್ತೊಂದು ಜೀಪು ನಮ್ಮನ್ನು ಹೊತ್ತೊಯ್ಯುವ ಯಂತ್ರಗಳು. ಇದೇ ಗುರುವಾರ ಆಗಸ್ಟ್ 11ರಿಂದ ಆಗಸ್ಟ್ 23ರವರೆಗೆ ನಮ್ಮ ಲಡಾಖ್ ಪಯಣ ಅಥವಾ ಚಾರಣ. ಪಯಣ ಅಥವಾ ಚಾರಣ ಎಂದುದು ಏಕೆಂದರೆ, ನಾವು ಯೋಜಿಸಿರುವುದು ಎಲ್ಲರೂ ಮಾಡುವಂಥ ಲಡಾಖ್ ಯಾನವಲ್ಲ. ಇದು ದಕ್ಷಿಣ, ಪಶ್ಚಿಮ, ಉತ್ತರ, ಪೂರ್ವ ಲಡಾಖ್ ಭಾಗವನ್ನು ಸುತ್ತುವ ಅಪರೂಪದ ಪ್ರಯಾಣ. ಟಾರ್ ರಸ್ತೆ, ಕಚ್ಚಾ ರಸ್ತೆ, ರಸ್ತೆಯೇ ಇಲ್ಲದ ಕಣಿವೆ, ನದೀಪಾತ್ರಗಳು... ಹೀಗೆ ವೈವಿಧ್ಯಮಯ ಪ್ರದೇಶಗಳಲ್ಲಿ ಸಂಚರಿಸುವ ಯೋಚನೆ ನಮ್ಮದು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಅಮೃತ ಮಹೋತ್ಸವದ ಶುಭವಸರದಲ್ಲಿ ಕಾಕತಾಳೀಯವೆಂಬಂತೆ ಈ ಯಾತ್ರೆ ಕೈಗೂಡುತ್ತಿದೆ. ಹಾಗಾಗಿಯೇ ಇದರ ಹೆಸರು ಲಡಾಖ್ ಅಮೃತಯಾತ್ರೆ - 2022.
ಮುಂದಿನ ಕಂತಿನಲ್ಲಿ: ಯಾರೆಲ್ಲ ಹೊರಟಿರುವುದು? ಹೇಗೆ ಹೊರಟಿರುವುದು? ಎಲ್ಲೆಲ್ಲಿ ಹೋಗುವ ಯೋಜನೆ? ಎಷ್ಟು ದಿನಗಳ ಪ್ರವಾಸ? ಏನೇನು ತಯಾರಿ ಅಗತ್ಯ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ...ನಿರೀಕ್ಷಿಸಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.