ಭಾರತೀಯ ರೈಲ್ವೆ ICF ಕೋಚ್‌ಗಳನ್ನು LHB ಕೋಚ್‌ಗಳೊಂದಿಗೆ ಬದಲಾಯಿಸುತ್ತಿದೆ. ಹಳೆಯ ತಂತ್ರಜ್ಞಾನದ ICF ಕೋಚ್‌ಗಳ ಬದಲಿಗೆ ಸುಧಾರಿತ ತಂತ್ರಜ್ಞಾನದ LHB ಕೋಚ್‌ಗಳನ್ನು ಬಳಸಲಾಗುವುದು.
ನವದೆಹಲಿ: ನೀವು ರೈಲುಗಳಲ್ಲಿ ನಿರಂತರವಾಗಿ ಪ್ರಯಾಣ ಮಾಡತ್ತಿದ್ದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ಹೊರತುಪಡಿಸಿ ಬಹುತೇಕ ರೈಲುಗಳು ನೀಲಿ ಮತ್ತು ಕೆಂಪು ಬಣ್ಣದ ಕೋಚ್‌ಗಳನ್ನು ಹೊಂದಿರುತ್ತವೆ. ಸಾಮಾನ್ಯ ಜನರಿಗೆ ಇದು ಕೇವಲ ಬಣ್ಣ ಆಗಿದ್ದರೆ, ಇವುಗಳ ಹಿಂದೆ ಕೋಚ್‌ಗಳ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ. ರೈಲುಗಳ ಪ್ರತಿಯೊಂದು ಬಣ್ಣವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತವೆ. ನೀಲಿ ಕೋಚ್‌ಗಳು ಹಳೆಯದಾಗಿದ್ದು, ಕೆಂಪು ಕೋಚ್‌ಗಳು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿವೆ. ಇದೀಗ ಭಾರತೀಯ ರೈಲ್ವೆ ನೀಲಿ ಬಣ್ಣದ ಕೋಚ್‌ಗಳನ್ನು ನಿಲ್ಲಿಸಲು ಮುಂದಾಗಿದೆ. ನೀಲಿಯಿಂದ ಕೆಂಪು ಬಣ್ಣಕ್ಕೆ ರೈಲುಗಳು ಬದಲಾಗಲಿವೆ.
ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಮತ್ತು ಲಿಂಕ್ ಹಾಫ್ಮನ್ ಬುಶ್ (LHB) ಎಂಬ ಎರಡು ರೀತಿಯ ಕೋಚ್‌ಗಳು ಚಲಿಸುತ್ತಿವೆ. ಹಳೆಯ ತಂತ್ರಜ್ಞಾನ ಹೊಂದಿರುವ ICF ಕೋಚ್‌ಗಳು ನೀಲಿ ಬಣ್ಣವನ್ನು ಹೊಂದಿರುತ್ತವೆ. LHB ಕೋಚ್‌ಗಳು ಹೊಸ ತಂತ್ರಜ್ಞಾನ ಹೊಂದಿದ್ದು, ಕೆಂಪು ಬಣ್ಣದಿಂದ ಮಾಡಲ್ಪಟ್ಟಿರುತ್ತವೆ. ಇದೀಗ ಭಾರತೀಯ ರೈಲ್ವೆ ಹಳೆಯ ತಂತ್ರಜ್ಞಾನದ LHB ಕೋಚ್‌ಗಳನ್ನು ಕ್ರಮೇಣವಾಗಿ ಹೊಸ ತಂತ್ರಜ್ಞಾನದೊಂದಿಗೆ ಬದಲಾಯಿಸಲು ಯೋಜಿಸಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನೀಲಿ ಬಣ್ಣದ ಕೋಚ್‌ಗಳು ಮಾಯವಾಗಲಿವೆ.
ಮಾರ್ಚ್ ಅಂತ್ಯದೊಳಗೆ ಭಾರತೀಯ ರೈಲ್ವೆ ಸುಮಾರು 2,000 LHB ಕೋಚ್‌ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈ ಕೋಚ್‌ಗಳು ಸ್ಲೀಪರ್ ಮತ್ತು ಜನರಲ್ ಮಾದರಿಯ ಬೋಗಿಗಳಾಗಿರಲಿವೆ. ಈ ಬೋಗಿಗಳು ರೈಲುಗಳಿಗೆ ಹಂತ ಹಂತವಾಗಿ ಜೋಡಣೆ ಮಾಡಲಾಗುವುದು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಕನಿಷ್ಠ 1,300 ಕೋಚ್ ಜೋಡಣೆ ಮಾಡುವ ಗುರಿಯನ್ನು ತಲುಪಲು ಡಿಸೆಂಬರ್ 2023 ನೀಡಲಾಗಿದೆ. ಇನ್ನುಳಿದ 700 LHB ಕೋಚ್‌ಗಳನ್ನು ICF ಬೋಗಿಗಳೊಂದಿಗೆ ಅಳವಡಿಸಲು ಮಾರ್ಚ್ 2024ರವರೆಗೆ ಗಡವು ನೀಡಲಾಗಿದೆ. ಈಗಾಗಲೇ ನೀಲಿ ಬಣ್ಣದ ಕೋಚ್‌ಗಳ ಸಂಖ್ಯೆ ಇಳಿಮುಖವಾಗಿದೆ.
ಪ್ರಸ್ತುತ ಐಸಿಎಫ್ ಬೋಗಿಗಳೊಂದಿಗೆ 740 ರೈಲುಗಳು ಚಲಿಸುತ್ತಿವೆ. 2026-27 ಆರ್ಥಿಕ ವರ್ಷದೊಳಗೆ ಈ ಎಲ್ಲಾ ಕೋಚ್‌ಗಳನ್ನು ಬದಲಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ.
ಇದನ್ನೂ ಓದಿ: ಇದು ದೇಶದ ಅತಿ ದೀರ್ಘ ಪ್ರಯಾಣದ ವಂದೇ ಭಾರತ್ ರೈಲು; ಟಿಕೆಟ್ ಬೆಲೆ, ಟೈಮ್ ಮಾಹಿತಿ ಇಲ್ಲಿದೆ
ನೀಲಿ ಬಣ್ಣದ ಐಸಿಎಫ್ ಕೋಚ್ ಹೇಗಿರುತ್ತೆ?
ನೀಲಿ ಬಣ್ಣದ ಐಸಿಎಫ್ ಕೋಚ್ ನಿರ್ಮಾಣ ಕಾರ್ಯ ಚೆನ್ನೈನಲ್ಲಿ 1952ರಿಂದ ಶುರುವಾಗಿತ್ತು. ಈ ಕೋಚ್‌ಗಳು ಸ್ಟೀಲ್‌ನಿಂದ ತಯಾರಿಸಿದ್ದರೂ ಅಧಿಕ ತೂಕವನ್ನು ಹೊಂದಿರುತ್ತವೆ. ಇದರಲ್ಲಿ ಏರ್‌ಬ್ರೇಕ್ ಒಳಗೊಂಡಿದ್ದು, ಇವುಗಳ ನಿರ್ವಹಣೆ ಹೆಚ್ಚು ವೆಚ್ಚದಾಯಕವಾಗಿತ್ತು. ಈ ಕೋಚ್‌ಗಳ ಸಾಮಾರ್ಥ್ಯ ಕಡಿಮೆಯಾಗಿದೆ. ಸ್ಲೀಪರ್ 72 ಮತ್ತು ಥರ್ಡ್ ಎಸಿ ಕೋಚ್ 64 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಈ ಕೋಚ್‌ಗಳು ಎಲ್‌ಬಿಎಚ್‌ಗಿಂತ 1.7 ಮೀಟರ್ ಕಡಿಮೆ ಉದ್ದ ಹೊಂದಿರುತ್ತವೆ. ಅಪಘಾತದ ಸಮಯದಲ್ಲಿ ಐಸಿಎಫ್ ಕೋಚ್‌ಗಳು ಒಂದರ ಮೇಲೊಂದರಂತೆ ಏರುತ್ತವೆ. ಪ್ರತಿ 18 ತಿಂಗಳಿಗೊಮ್ಮೆ ಐಸಿಎಫ್ ಕೋಚ್‌ಗಳು ಎಲ್ಲಾ ಭಾಗದಲ್ಲಿಯೂ ಪರೀಕ್ಷೆ ನಡೆಸಬೇಕಾಗುತ್ತದೆ.
ಕೆಂಪು ಬಣ್ಣದ ಎಲ್‌ಬಿಎಚ್ ಕೋಚ್ ಹೇಗಿರುತ್ತೆ?
2000ರಿಂದ ಜರ್ಮನಿ ತಂತ್ರಜ್ಞಾನ ಒಳಗೊಂಡಿರುವ ಎಲ್‌ಬಿಎಚ್ ಕೋಚ್ ನಿರ್ಮಾಣಗಳ ಕಾರ್ಯ ಪಂಜಾಬ್‌ನಲ್ಲಿ ಶುರುವಾಯ್ತು. ಸ್ಟೇನ್‌ಲೆಸ್ ಸ್ಟೀಲ್ ಬಳಕೆ ಮಾಡೋದರಿಂದ ಕೋಚ್‌ಗಳು ಹಗುರವಾಗಿದ್ದು, ಡಿಸ್ಕ್ ಬ್ರೇಕ್ ಬಳಸಲಾಗುತ್ತದೆ. ಪ್ರತಿ ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸ್ಲೀಪರ್‌ನಲ್ಲಿ 80, ಥರ್ಡ್ ಎಸಿಯಲ್ಲಿ 72 ಸೀಟ್‌ಗಳನ್ನು ಹೊಂದಿರುತ್ತವೆ. ಐಸಿಎಫ್‌ಗಿಂತ 1.7 ಮೀಟರ್ ಉದ್ದವಾಗಿದ್ದು, ಅಪಘಾತದ ಸಂದರ್ಭದಲ್ಲಿ ಒಂದರ ಮೇಲೊಂದು ಏರಲ್ಲ. ಪ್ರತಿ 24 ತಿಂಗಳಿಗೊಮ್ಮೆ ಎಲ್‌ಬಿಎಚ್ ಕೋಚ್‌ಗಳ ಪರಿಶೀಲನೆ ನಡೆಸಬೇಕಾಗುತ್ತದೆ.
ಇದನ್ನೂ ಓದಿ: 1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?