5G ಇಂಟರ್ನೆಟ್ ಹೇಗಿರುತ್ತೆ?

By ಪ್ರವೀಣ್ ಮಾವಿನಸರ  |  First Published Oct 2, 2017, 3:40 PM IST

4ಜಿ-ಗಿಂತ ಸಾವಿರ ಪಟ್ಟು ವೇಗ!

ದಕ್ಷಿಣ ಕೊರಿಯಾ ಮುಂಚೂಣಿ

ಯಾವ್ಯಾವ ದೇಶದಲ್ಲಿ 5ಜಿ?

ಬೆಂಗಳೂರಲ್ಲೇ ಮೊದಲು 5ಜಿ

5ಜಿಯಿಂದ ನಮಗೇನು ಲಾಭ?


2ಜಿ, 3ಜಿ, 4ಜಿ ಆಯ್ತು ಈಗ ೫ಜಿ ಯುಗ. ಜಾಗತಿಕ ರಂಗದಲ್ಲಿ ಹೊಸ ಕ್ರಾಂತಿಗೆ 5ಜಿ ದೂರಸಂಪಕ ಸೇವೆ ಮುನ್ನುಡಿ ಬರೆಯಲಿದೆ. ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ದಕ್ಷಿಣ ಕೊರಿಯಾದಲ್ಲಿ ಈಗಾಗಲೇ 5ಜಿ ದೂರ ಸಂಪರ್ಕ ಪರೀಕ್ಷಾ ಸಿಗ್ನಲ್‌ಗಳನ್ನು ನೀಡಲಾಗಿದೆ. 5ಜಿ ತಂತ್ರಜ್ಞಾನದಡಿ ಎರಡು ಜಿಬಿಯ ಸಿನಿಮಾ ಡೌನ್‌ಲೋಡ್ ಮಾಡಲು ಬರೀ ಒಂದೇ ಸೆಕೆಂಡ್ ಸಾಕು. ಅಮೆರಿಕ, ಚೀನಾ, ಜಪಾನ್ ಈಗಾಗಲೇ 5ಜಿ ಸೇವೆ ಕೊಡುವ ಸಿದ್ಧತೆಯಲ್ಲಿ ನಿರತವಾಗಿವೆ. ಭಾರತ ಕೂಡ ಮೊನ್ನೆಯಷ್ಟೇ ಈ ಸಂಬಂಧ ಉನ್ನತ ಸಮಿತಿಯೊಂದನ್ನು ರಚಿಸಿದ್ದು 2020ಕ್ಕೆ ದೇಶದಲ್ಲಿ 5ಜಿ ಸೇವೆ ನೀಡುವ ಗುರಿ ಹೊಂದಿದೆ. ದೂರ ಸಂಪರ್ಕ ರಂಗದಲ್ಲಿ 5ಜಿ ಹೊಸಕ್ರಾಂತಿಯನ್ನೇ ಮಾಡುವುದರ ಜತೆಗೆ ದೇಶಗಳ ಆರ್ಥಿಕ ಅಭಿವೃದ್ಧಿ ದರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.

4ಜಿ-ಗಿಂತ ಸಾವಿರ ಪಟ್ಟು ವೇಗ!

Tap to resize

Latest Videos

5ನೇ ಜನರೇಷನ್ ಮೊಬೈಲ್ ನೆಟ್‌ವರ್ಕ್ ಅಥವಾ 5ನೇ ಜನರೇಷನ್ ವೈರ್‌ಲೆಸ್. ಸರಳವಾಗಿ ಹೇಳುವುದಾದರೆ 5ಜಿ, ಈಗಿನ 4ಜಿ ಎಲ್‌ಟಿಇಗಿಂತ ಸಾವಿರಪಟ್ಟು ವೇಗ ಹೊಂದಿರಲಿದೆ. ಈಗ 5ಜಿ ತಂತ್ರಜ್ಞಾನದಡಿ 2 ಜಿಬಿಯ ಒಂದು ಸಿನಿಮಾ ಡೌನ್’ಲೋಡ್ ಮಾಡಲು ಬರೋಬ್ಬರಿ ಒಂದು ಗಂಟೆ ಬೇಕು. ಆದರೆ, 5ಜಿ ತಂತ್ರಜ್ಞಾನದಡಿ ಒಂದೇ ಸೆಕೆಂಡ್ ಸಾಕು. ಭಾರತದಂತಹ ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ದೇಶಗಳಲ್ಲಿ ಟೆಲಿ ಹೆಲ್ತ್, ಟೆಲಿ ಶಿಕ್ಷಣ ಕ್ಷೇತ್ರದಲ್ಲಿ 5ಜಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ. 2026ಕ್ಕೆ ಅಂದಾಜು 123 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು 5ಜಿ ಹೊಂದಿರಲಿದೆ. ಅಲ್ಲದೇ 2035ರ ಸುಮಾರಿಗೆ 2.20 ಕೋಟಿ ಜನರಿಗೆ 5ಜಿ ತಂತ್ರಜ್ಞಾನದಿಂದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಅಂದಾಜು ಮಾಡಲಾಗಿದೆ.

ದಕ್ಷಿಣ ಕೊರಿಯಾ ಮುಂಚೂಣಿ

2014ರಲ್ಲೇ ದಕ್ಷಿಣ ಕೊರಿಯಾ 5ಜಿ ತಂತ್ರಜ್ಞಾನ ಜಾರಿಯ ಬಗ್ಗೆ ಘೋಷಿಸಿದೆ. ಅಲ್ಲಿನ ಸೌತ್ ಕೊರಿಯಾ ಟೆಲಿಕಾಂ (ಎಸ್‌ಕೆಟಿ), ಕೊರಿಯಾ ಟೆಲಿಕಾಂ (ಕೆಟಿ) ದೂರಸಂಪರ್ಕ ಕಂಪನಿಗಳು ಈಗಾಗಲೇ ಜನರಿಗೆ ಟೆಸ್ಟ್ ಸಿಗ್ನಲ್‌ಗಳನ್ನು ನೀಡುತ್ತಿವೆ. ಜತೆಗೆ ಎಲ್‌ಜಿ ಯುಪ್ಲಸ್ ಕಂಪನಿ ಕೂಡ ೫ಜಿಗೆ ಕೈಜೋಡಿಸಿದೆ. ಈಗಾಗಲೇ ಕೆಟಿ ಕಂಪನಿ 2018ರಲ್ಲಿ ಪಿಯಾಂಗ್‌ಚಂಗ್‌ನಲ್ಲಿ ನಡೆಯುವ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪ್ರಾಯೋಗಿಕ 5ಜಿ ಸೇವೆಯನ್ನು ನೀಡುವುದಾಗಿ ಬಾರ್ಸಿಲೋನಾ ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಘೋಷಿಸಿದೆ. 2019ಕ್ಕೆ ದಕ್ಷಿಣ ಕೊರಿಯಾದಲ್ಲಿ ವಾಣಿಜ್ಯ 5ಜಿ ಸೇವೆ ಕೊಡಲು ಅಲ್ಲಿನ ಕಂಪನಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈ ಮೂಲಕ ದಕ್ಷಿಣ ಕೊರಿಯಾ ವಿಶ್ವದ ಮೊದಲ 5ಜಿ ತಂತ್ರಜ್ಞಾನ ಹೊಂದಿದ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ 5ಜಿ ತಂತ್ರಜ್ಞಾನ ಹೊಂದಿರುವ ಸೆಲ್ಫ್ ಡ್ರೈವಿಂಗ್ ಬಸ್‌ಅನ್ನು ಮುಂದಿನ ತಿಂಗಳು ಪ್ರದರ್ಶನಕ್ಕೆ ಇಡಲಿದೆ. ಇಂದು ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಓಡಲಿದೆ.

ಯಾವ್ಯಾವ ದೇಶದಲ್ಲಿ 5ಜಿ?

ಅಮೆರಿಕೆ, ಚೀನಾ, ಜಪಾನ್, ಬ್ರಿಟನ್, ಬ್ರೆಜಿಲ್, ಸ್ವೀಡನ್, ಆಸ್ಟ್ರೇಲಿಯಾದಲ್ಲಿ 5ಜಿ ತಂತ್ರಜ್ಞಾನದ ಸೇವೆ ನೀಡುವ ಭರದ ಸಿದ್ಧತೆಯಲ್ಲಿ ತೊಡಗಿವೆ. ಅಮೆರಿಕದಲ್ಲಿ ವೆರಿರೆನ್ ಕಂಪನಿ, ಕ್ವಾಲಕಂ ಕಂಪನಿ, ದಕ್ಷಿಣ ಕೊರಿಯಾದಲ್ಲಿ ಕೊರಿಯಾದಲ್ಲಿ ಸ್ಯಾಮ್’ಸಂಗ್ 5ಜಿಗೆ ಸಪೋರ್ಟ್ ಮಾಡುವ ಉಪಕರಣಗಳ ತಯಾರಿಯಲ್ಲಿ ನಿರತವಾಗಿವೆ. ಅಲ್ಲದೆ ಚೀನಾ ಮೊಬೈಲ್, ಹುವಾಯಿ, ನೋಕಿಯಾ, ಎರಿಕ್ಸನ್ ಮುಂತಾದ ಕಂಪನಿಗಳು 5ಜಿ ತಂತ್ರಜ್ಞಾನಕ್ಕೆ ಸಿದ್ಧವಾಗಿವೆ. ವಿಶೇಷವೆಂದರೆ 3ಜಿ ಸೇವೆಯನ್ನೇ ನೀಡಲು ತಡಕಾಡುತ್ತಿರುವ ನಮ್ಮ ನೆರೆಯ ದೇಶ ಪಾಕಿಸ್ತಾನ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ತಾನೇ ಮೊದಲು 5ಜಿ ಸೇವೆ ನೀಡುವುದಾಗಿ ಏಪ್ರಿಲ್‌ನಲ್ಲಿ ಘೋಷಿಸಿದೆ. ಜೊತೆಗೆ ದ್ವೀಪ ರಾಷ್ಟ್ರ ಶ್ರೀಲಂಕಾದ ಶ್ರೀಲಂಕಾ ಟೆಲಿಕಾಂ ಕಂಪನಿ ಜೂನ್‌ನಲ್ಲಿ ಹುವಾಯಿ ಕಂಪನಿ ಜತೆ ಸೇರಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಇನ್ನು ಚೀನಾದಲ್ಲಿ ಆದಷ್ಟು ಬೇಗ 5ಜಿ ಸೇವೆ ಜಾರಿಗೆ ಬರಬಹುದು. ಬಹುತೇಕ ಎಲ್ಲಾ ರಾಷ್ಟ್ರಗಳೂ ಈ ಸೇವೆ ನೀಡಲು 2020ರ ಗಡುವನ್ನು ಹೊಂದಿವೆ.

ಬೆಂಗಳೂರಲ್ಲೇ ಮೊದಲು 5ಜಿ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ 5ಜಿ ಸೇವೆ ನೀಡುವುದಾಗಿ ಭಾರ್ತಿ ಏರ್‌ಟೆಲ್ ಕಳೆದ ವಾರ ಘೋಷಿಸಿದೆ. ಆದರೆ, ಇದು ಈಗಿನ 5ಜಿ ತಂತ್ರಜ್ಞಾನಕ್ಕಿಂತ 5ರಿಂದ 7 ಪಟ್ಟು ವೇಗವನ್ನು ಮಾತ್ರ ಹೊಂದಿರಲಿದೆ. ಬೆಂಗಳೂರಿನ ಜೊತೆಗೆ ಕೋಲ್ಕತಾದಲ್ಲೂ 5ಜಿ ತಂತ್ರಜ್ಞಾನ ಲಭ್ಯವಾಗಲಿದೆ. ಸದ್ಯ ೪ಜಿಯಲ್ಲಿ 16 ಎಂಬಿಪಿಎಸ್ ವೇಗದಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತಿದೆ. ಏರ್‌ಟೆಲ್‌ನ 5ಜಿ ತಂತ್ರಜ್ಞಾನದಲ್ಲಿ 40ರಿಂದ 45 ಎಂಬಿಪಿಎಸ್ ವೇಗ ಲಭ್ಯವಾಗಲಿದೆ. ಬೃಹತ್ ಮಲ್ಟಿಪಲ್ ಇನ್‌ಪುಟ್ ಮತ್ತು ಮಲ್ಟಿಪಲ್ ಔಟ್‌ಪುಟ್ ತಂತ್ರಜ್ಞಾನವನ್ನು ಏರ್‌ಟೆಲ್ ಬಳಸಿಕೊಳ್ಳಲಿದೆ.

5ಜಿಯಿಂದ ನಮಗೇನು ಲಾಭ?

5ಜಿ ದೂರ ಸಂಪರ್ಕ ತಂತ್ರಜ್ಞಾನ ಕೇವಲ ಇಂಟರ್‌ನೆಟ್ ವೇಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. 3ಜಿಯಿಂದ 4ಜಿಗೆ ಆದ ಬದಲಾವಣೆ ಬಹುತೇಕರ ಅರಿವಿಗೆ ಬಂದೇ ಇಲ್ಲ. ಆದರೆ, 5ಜಿ ಹಾಗಲ್ಲ. ಜಾಗತಿಕ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಲಿದೆ. ಕೋಟ್ಯಂತರ ಜನರಿಗೆ ಉದ್ಯೋಗ ದೊರಕಲಿದೆ. ಹಲವು ದೇಶಗಳ ಜಿಡಿಪಿಗೆ 5ಜಿ ದೊಡ್ಡ ಕೊಡುಗೆ ನೀಡಲಿದೆ. ಈಗಾಗಲೇ ದಕ್ಷಿಣ ಕೊರಿಯಾ ತನ್ನ ಜಿಡಿಪಿಗೆ ಶೇ. 5ರಷ್ಟು ಆದಾಯವನ್ನು ನಿರೀಕ್ಷಿಸಿದೆ. ಸ್ಯಾಟ್‌ಲೈಟ್ ಉಡಾವಣೆಯಲ್ಲೂ 5ಜಿ ಮಹತ್ತರ ಪಾತ್ರ ವಹಿಸಲಿದೆ. ವರ್ಚುಯಲ್ ರಿಯಾಲಿಟಿ, ಸೆಲ್ಫ್ ಡ್ರೈವಿಂಗ್ ವಾಹನಗಳು, ಆ್ಯಪಲ್ ವಾಚ್‌ಗಳಿಗೂ 5ಜಿ ಬೇಕು. ಟೆಲಿ ಹೆಲ್ತ್, ಟೆಲಿ ಎಜುಕೇಷನ್ ಮಾತ್ರವಲ್ಲದೇ ಇಂಟರ್‌ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ಮಷಿನ್ ಟು ಮಷಿನ್ ಕಮ್ಯೂನಿಕೇಷನ್ ತಂತ್ರಜ್ಞಾನ ಕ್ಷೇತ್ರ 5ಜಿ ಇಲ್ಲದೇ ಕಾರ್ಯಗತವಾಗಲಾರದು. 5ಜಿ ತಂತ್ರಜ್ಞಾನ ಅಡಿ ಒಂದೇ ಡಿವೈಸ್‌ನಿಂದ ನೂರಾರು ಸಂಪರ್ಕಗಳನ್ನು ಪಡೆಯಬಹುದಾಗಿದೆ.

ನೀವು ಮತ್ತೆ ಹೊಸ ಮೊಬೈಲ್ ಕೊಳ್ಳಬೇಕು!

ಝಡ್‌ಟಿಇ ಗಿಗಾಬೈಟ್ ಫೋನ್ ಜಗತ್ತಿನ ಮೊದಲ 5ಜಿ ಆಧಾರಿತ ಫೋನ್ ಎಂದು ಘೋಷಿಸಲಾಗಿದೆ. ಬಾರ್ಸಿಲೋನ ವರ್ಲ್ಡ್ ಮೊಬೈಲ್ ಕಾಂಗ್ರೆಸ್‌ನಲ್ಲಿ ಈ ಫೋನ್‌ಅನ್ನು ಪ್ರದರ್ಶಿಸಲಾಗಿದೆ. ಹುವಾಲಿ ಕೂಡ ಇಂತಹದ್ದೇ ಸಾಧನವನ್ನು ಪರಿಚಯಿಸಿದೆ. ಸ್ಯಾಮ್‌ಸಂಗ್ ನೋಟ್ 8, ಆ್ಯಪಲ್ 8, ನೋಕಿಯಾ 5ಜಿ ಮೊಬೈಲ್ ಫೋನ್‌ಗಳು ಮಾರುಕಟ್ಟೆಗೆ ಆಗಮಿಸಲಿವೆ. ಆಲ್ಕಟೆಲ್-ಲೂಸೆಂಟ್, ಎರಿಕ್ಸನ್, ಹುವಾಯಿ ಟೆಕ್ನಾಲಜಿಸ್, ನೋಕಿಯಾ ಸಲ್ಯೂಷನ್ಸ್ ಆ್ಯಂಡ್ ನೆಟ್‌ವರ್ಕ್ಸ್, ಮೋಟೊರೋಲಾ ಸಲ್ಯೂಷನ್ಸ್, ಎನ್‌ಟಿಟಿ ಡೊಕೊಮೋ ಇಂಕ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಚೀನಾ ಮೊಬೈಲ್ಸ್, ವೆರಿರೆನ್ ಕಮ್ಯುನಿಕೇಷನ್ಸ್ 5ಜಿ ತಂತ್ರಜ್ಞಾನದ ಶೋಧನೆಯಲ್ಲಿ ತೊಡಗಿವೆ.

ಭಾರತದಲ್ಲಿ 2020ಕ್ಕೆ ಆರಂಭ

5ಜಿ ವಿಚಾರದಲ್ಲಿ ಭಾರತ ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕಿಂತ ಹಿಂದಿದೆ. ಕಳೆದ ವಾರವಷ್ಟೇ ದೇಶದ ದೂರಸಂಪರ್ಕ ಸಚಿವರು 2020ರಲ್ಲಿ 5ಜಿ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿ 500 ಕೋಟಿ ರು. ಬಂಡವಾಳದೊಂದಿಗೆ ಕಾರ್ಯಾಚರಣೆ ನಡೆಸಲಿದೆ. 5ಜಿ ಸೇವೆ ನೀಡುವ ಸಂಬಂದ ರಿಲಯನ್ಸ್ ಜಿಯೋ ಕಂಪನಿ ಸ್ಯಾಮ್‌ಸಂಗ್ ಜತೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡು ಕಾರ್ಯಗತವಾಗಿದೆ. ಎರಿಕ್ಸನ್ ಕೂಡ ಭಾರತ ಕಂಪನಿಗಳ ಜತೆ ಮಾತುಕತೆಯಲ್ಲಿ ತೊಡಗಿದೆ. ಭಾರ್ತಿ ಏರ್‌ಟೆಲ್ ದೇಶದಲ್ಲಿ ಮೊದಲು ತಾನೇ 5ಜಿ ಸೇವೆ ನೀಡುವುದಾಗಿ ಕಳೆದವಾರ ಘೋಷಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಇನ್ನೂ 3ಜಿ ಮತ್ತು 4ಜಿ ಸೇವೆಯೇ ಸಿಕ್ಕಿಲ್ಲ. 1981ರಲ್ಲಿ 1ಜಿ ಬಂದ ಒಂದು ದಶಕದ ನಂತರ ಅಂದರೆ 1992ರಲ್ಲಿ 2ಜಿ ಸೇವೆ ಆರಂಭವಾಯಿತು. 2001ರಲ್ಲಿ 3ಜಿ ಸೇವೆ ಪ್ರಾರಂಭಿಸಲಾಯಿತು. ಮೊಬೈಲ್ ದೂರ ಸಂಪರ್ಕ ತಂತ್ರಜ್ಞಾನದ ವಿಷಯದಲ್ಲಿ ಭಾರತ ತುಂಬಾ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5ಜಿ ವಿಷಯದಲ್ಲಿ ಇನ್ನಷ್ಟು ಚುರುಕಾಗಬೇಕಿದೆ. ಈಗ 10 ಜಿಬಿಪಿಎಸ್ ವೇಗದಲ್ಲಿ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸುವ 5ಜಿ ಸೇವೆಯನ್ನು 2020ರೊಳಗೆ ದೇಶದಲ್ಲಿ ಆರಂಭಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. 2ಜಿ, 3ಜಿ ಹಾಗೂ 4ಜಿ ಸೇವೆಯನ್ನು ಈಗಾಗಲೇ ಬಳಸುತ್ತಿರುವ ಭಾರತೀಯರಿಗೆ 5ಜಿ ಹೊಸ ಅನುಭವ ನೀಡಲಿದ್ದು, ಸರ್ಕಾರದ ಡಿಜಿಟಲೀಕರಣ ಆಶಯಕ್ಕೆ ಸಹಕಾರಿಯಾಗಲಿದೆ. ಸ್ವಯಂ ಚಾಲನೆಯ ಕಾರು, ವೈದ್ಯಕೀಯ ಕ್ಷೇತ್ರಕ್ಕೆ 5ಜಿಯಿಂದ ಭಾರೀ ಉಪಯೋಗವಾಗಲಿದೆ. 5ಜಿ ತಂತ್ರಜ್ಞಾನದಡಿ ನಗರದ ಪ್ರದೇಶಗಳಲ್ಲಿ 10 ಸಾವಿರ ಎಂಬಿಪಿಎಸ್ (10 ಜಿಬಿಪಿಎಸ್) ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1000 ಎಂಬಿಪಿಎಸ್ (1 ಜಿಬಿಪಿಎಸ್) ವೇಗದ ಇಂಟರ್ನೆಟ್ ವೇಗ ಒದಗಿಸುವ ಗುರಿ ಸರ್ಕಾರದ್ದಾಗಿದೆ. ಸದ್ಯ ರಿಲಯನ್ಸ್ ಜಿಯೋ 18 ಎಂಬಿಪಿಎಸ್ ವೇಗದಲ್ಲಿ 5ಜಿ ಸೇವೆ ನೀಡುತ್ತಿದೆ.

click me!