14 ದಿನ ಟೈಮಿದೆ, ಈಗಲೂ ಲ್ಯಾಂಡರ್‌ ಸಂಪರ್ಕಕ್ಕೆ ಯತ್ನಿಸುತ್ತೇವೆ: ಇಸ್ರೋ ಮುಖ್ಯಸ್ಥ

By Web Desk  |  First Published Sep 8, 2019, 8:18 AM IST

ವೈಫಲ್ಯ ಆಗಿಲ್ಲ, ಯಶಸ್ಸೇ ಸಿಕ್ಕಿದೆ: ಶಿವನ್‌| 14 ದಿನ ಟೈಮಿದೆ, ಈಗಲೂ ಲ್ಯಾಂಡರ್‌ ಸಂಪರ್ಕಕ್ಕೆ ಯತ್ನಿಸುತ್ತೇವೆ| ವಿಜ್ಞಾನ ವಿಷಯದಲ್ಲಿ ನಾವು ಗೆದ್ದಿದ್ದೇವೆ: ಇಸ್ರೋ ಮುಖ್ಯಸ್ಥ


ಬೆಂಗಳೂರು[ಸೆ.08]: ವಿಕ್ರಮ್‌ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿರುವುದರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವೈಫಲ್ಯ ಅನುಭವಿಸಿಲ್ಲ. ಹಿನ್ನಡೆಯೂ ಆಗಿಲ್ಲ. ಅಲ್ಪ ಮಾಹಿತಿಯನ್ನಷ್ಟೇ ನಾವು ಕಳೆದುಕೊಂಡಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಹೇಳಿದ್ದಾರೆ.

ವಿಕ್ರಮ್‌ ಲ್ಯಾಂಡರ್‌ 14 ದಿನಗಳ ಜೀವಿತಾವಧಿ ಹೊಂದಿದೆ. ಅಲ್ಲಿವರೆಗೂ ನಾವು ಅದನ್ನು ಸಂಪರ್ಕಿಸಲು ಯತ್ನಿಸುತ್ತಿವೆ. ಸಂಪರ್ಕಕ್ಕೆ ಸಿಕ್ಕರೆ ಅದರಲ್ಲಿರುವ ಸಾಧನಗಳನ್ನು ಬಳಸಿ ಸಂಶೋಧನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Latest Videos

undefined

‘ಡಿಡಿ ನ್ಯೂಸ್‌’ ಜತೆ ಮಾತನಾಡಿರುವ ಅವರು, 30 ಕಿ.ಮೀ. ಎತ್ತರದಿಂದ ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯಲ್ಲಿ 4 ಹಂತಗಳು ಇದ್ದವು. ಆ ಪೈಕಿ ಮೂರರಲ್ಲಿ ನಾವು ಯಶಸ್ವಿಯಾದೆವು. ಆದರೆ ನಾಲ್ಕನೇ ಹಂತ ಸರಿಯಾಗಿ ಅನುಷ್ಠಾನವಾಗಲಿಲ್ಲ. ಆಗ ಸಂಪರ್ಕ ಕಳೆದುಕೊಂಡಿದ್ದೇವೆ. ಆದಾಗ್ಯೂ ಲ್ಯಾಂಡರ್‌ ಅನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

ಚಂದ್ರಯಾನ ಯೋಜನೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಅನಾವರಣ ಎಂಬ ಎರಡು ಉದ್ದೇಶಗಳು ಇದ್ದವು. ಲ್ಯಾಂಡರ್‌, ರೋವರ್‌ಗಳು ತಂತ್ರಜ್ಞಾನ ಅನಾವರಣದ ಉದ್ದೇಶದವಾದರೆ, ಆರ್ಬಿಟರ್‌ ಸಂಪೂರ್ಣ ವಿಜ್ಞಾನಕ್ಕೆ ಸಂಬಂಧಿಸಿದ್ದು. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆರ್ಬಿಟರ್‌ನಲ್ಲಿರುವ ಸಾಧನಗಳು ಚಂದ್ರನ 10 ಮೀಟರ್‌ ದೂರದವರೆಗೂ ಸಂಶೋಧನೆ ನಡೆಸುತ್ತವೆ. ಚಂದ್ರನ ಧ್ರುವಗಳಲ್ಲಿ ಮಂಜುಗಡ್ಡೆಯುಕ್ತ ನೀರಿನ ಬಗ್ಗೆ ಶೋಧಿಸುತ್ತವೆ. ಇದರಿಂದಾಗಿ ಆ ಭಾಗದ ಮಾಹಿತಿ ಇದೇ ಮೊದಲ ಬಾರಿಗೆ ಸಿಗಲಿದೆ. ಆರ್ಬಿಟರ್‌ನಲ್ಲಿರುವ ಹೈರೆಸಲ್ಯೂಷನ್‌ ಕ್ಯಾಮೆರಾದಿಂದ ಅತ್ಯುತ್ತಮ ಫೋಟೋ ಸಿಗುತ್ತದೆ. ಆರ್ಬಿಟರ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರಿಂದ ಸಿಗುವ ಮಾಹಿತಿಯನ್ನು ಜಗತ್ತಿನ ಜತೆ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.

ಲ್ಯಾಂಡರ್‌ ವಿಚಾರದಲ್ಲಿ 3 ಹಂತ ದಾಟಿದ್ದರಿಂದ ಶೇ.90ರಿಂದ ಶೇ.95ರಷ್ಟು ಯಶಸ್ಸು ಸಿಕ್ಕಿದೆ. ಒಟ್ಟಾರೆ ಚಂದ್ರಯಾನ ಬಹುತೇಕ ಶೇ.100ರಷ್ಟುಯಶಸ್ವಿಯಾಗಿದೆ. ಆರ್ಬಿಟರ್‌ 1 ವರ್ಷ ಜೀವಿತಾವಧಿ ಹೊಂದಿತ್ತಾದರೂ, ಅದರಲ್ಲಿರುವ ಹೆಚ್ಚುವರಿ ಇಂಧನದಿಂದ 7.5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಆರ್ಬಿಟರ್‌ ಬಳಸಿ ಲ್ಯಾಂಡರ್‌ ಶೋಧಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಲ್ಯಾಂಡರ್‌ ಸಂಪರ್ಕ ಕಡಿದುಕೊಂಡ ಬಳಿಕ ವಿಜ್ಞಾನಿಗಳು ಎದೆಗುಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣದಾಯಕ ಮಾತುಗಳು ನಮ್ಮನ್ನು ಮತ್ತೆ ಹಳಿಗೆ ತಂದವು. ಪ್ರಧಾನಿ ಅವರು ನಮಗೆ ಪ್ರೇರಣೆಯ ಮೂಲ. ವಿಜ್ಞಾನವನ್ನು ಪ್ರಯೋಗ ದೃಷ್ಟಿಯಿಂದ ನೋಡಬೇಕೇ ಹೊರತು ಫಲಿತಾಂಶಕ್ಕಾಗಿ ಅಲ್ಲ. ಪ್ರಯೋಗ ಮಾಡಿದರೆ ಫಲಿತಾಂಶ ಬರುತ್ತದೆ ಎಂಬ ಅವರ ಮಾತುಗಳು ನಮ್ಮನ್ನು ತಾಕಿವೆ ಎಂದು ವಿವರಿಸಿದ್ದಾರೆ. ಚಂದ್ರಯಾನ ಲ್ಯಾಂಡರ್‌ ಸಂಪರ್ಕ ಕಡಿತದಿಂದ ನಮ್ಮ ಮುಂದಿನ ಯೋಜನೆಗಳಿಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

click me!