ಕೈಗೆಟಕುವ ದರದಲ್ಲಿ ಸೂಪರ್ ಫೋನ್! ಊಹಿಸಿರದ ಫೀಚರ್‌ಗಳು

By Web DeskFirst Published Nov 10, 2018, 3:51 PM IST
Highlights

ಹೇಗಾದರೂ ಮಾಡಿ ಎಲ್ಲರನ್ನೂ ತನ್ನತ್ತ ಸೆಳೆಯಬೇಕು ಅನ್ನುವ ಉದ್ದೇಶದಿಂದಲೇ ಇನ್‌ಫಿನಿಕ್ಸ್ ಈ ಮೊಬೈಲ್ ಅನ್ನು ಜಗತ್ತಿಗೆ ಅರ್ಪಿಸಿದಂತಿದೆ. ಕಡಿಮೆ ಬಜೆಟ್‌ನ ಒಳ್ಳೆಯ ಮೊಬೈಲ್ ಇನ್‌ಫಿನಿಕ್ಸ್ ಹಾಟ್ S3
 

ಹತ್ತು ಸಾವಿರ ರೂಪಾಯಿ ಆಸುಪಾಸಿನ ಬೆಲೆ ಇರುವ ಮೊಬೈಲ್‌ಗಳಿಗೆ ಬೇರೆ ಮೊಬೈಲ್‌ಗಿಂತ ಜಾಸ್ತಿ ಮರ್ಯಾದೆ. ಅದರಲ್ಲೂ ಒಳ್ಳೊಳ್ಳೆ ಫೀಚರ್ ಇದ್ದು, ವೇಗವಾಗಿ ಕೆಲಸ ಮಾಡುತ್ತಿದ್ದರಂತೂ ಎಲ್ಲರ ಕಣ್ಣು ಅದರ ಮೇಲೆ. ಸದ್ಯ ಈಗ ಕಣ್ಣು ಹಾಕಬೇಕಾದ ಸುಂದರಿ ಇನ್‌ಫಿನಿಕ್ಸ್ ಹಾಟ್ S3. ಇದರ ಬೆಲೆ ₹8999. 

ನೋಡಿದ ತಕ್ಷಣ ಮರುಳಾಗುವ 5.65 ಇಂಚಿನ ಎಚ್ಡಿ ಪ್ಲಸ್ ಡಿಸ್ಪ್ಲೇ. ಇಷ್ಟು ಬೆಲೆಯ ಮೊಬೈಲ್‌ಗಳಲ್ಲೇ ಚೆಂದ ಅನ್ನಿಸುವ ರಚನೆ. ಕೈಯಲ್ಲಿ ಹಿಡಿದುಕೊಂಡರೆ ಜಾರಿ ಹೋಗದು. ನುಣುಪಾದ ದೇಹ ಇಲ್ಲದೇ ಇರುವುದರಿಂದ ಕೈಯಿಂದ ಜಾರಿ ಹೋಗದು. ಕೈಯಲ್ಲೇ ಸೇಫಾಗಿರುತ್ತದೆ.

ಸಾಫ್ಟ್‌ವೇರ್ ಕಾಲ ಎಷ್ಟು ಬದಲಾಗಿದೆ ಎಂದರೆ ಹತ್ತು ಸಾವಿರದ ಒಳಗೆ 3ಜಿಬಿ ರ್ಯಾಮ್‌ನ ಮೊಬೈಲ್ ಸಿಗುವಷ್ಟು ಬದಲಾಗಿದೆ. ಇನ್‌ಫಿನಿಕ್ಸ್ ಹಾಟ್ S3ಯಲ್ಲಿ ಎರಡು ಶ್ರೇಣಿ ಇದ್ದು, ಒಂದು 3ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಹೊಂದಿದೆ. ವಿಮರ್ಶೆ ಮಾಡಲು ಸಿಕ್ಕಿದ್ದು ಇದೇ ಮೊಬೈಲು. ಇನ್ನೊಂದು 4ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಇರುವಂತದ್ದು. ಅದರ ಬೆಲೆ ಸ್ವಲ್ಪ ಜಾಸ್ತಿ.

ಸೂಪರ್ ಬ್ಯಾಟರಿ
ಈ ಮೊಬೈಲ್‌ನ ಸೂಪರ್ಮ್ಯಾನ್ ಎಂದರೆ ಬ್ಯಾಟರಿ. 4000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ದಿನವಿಡೀ ದಣಿಯುವುದಿಲ್ಲ. ಬೇಗ ಖಾಲಿಯಾಗದ ಅಕ್ಷಯಪಾತ್ರೆಯಂತೆ ಕಾಣಿಸುತ್ತದೆ. ಆದರೆ ಚಾರ್ಜ್ ಮಾಡುವುದು ದುಬಾರಿ ಸಮಯ ಬೇಡುತ್ತದೆ. ಒಳ್ಳೆಯ ಡಿಸ್ಪ್ಲೇ ಇರುವುದರಿಂತ ವಿಡಿಯೋ ನೋಡುವುದು ಕೂಡ ಖುಷಿ ಕೊಡುತ್ತದೆ. ಕೆಳಭಾಗದಲ್ಲಿ ಸ್ಪೀಕರ್ ಇದ್ದು, ಸೌಂಡು ಕೂಡ ಪರವಾಗಿಲ್ಲ. 

ಆಂಡ್ರಾಯ್ ಓರಿಯೋ ಇದರ ಆತ್ಮ. ದುಬಾರಿ ಮೊಬೈಲ್‌ಗಳಲ್ಲಿರುವ 1.4 ಗಿಗಾ ಹರ್ಟ್ಜ್ ಆಕ್ಟಾ ಕೋರ್ ಪ್ರೊಸೆಸರ್ ಇದರ ಜೀವಾಳ. ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಬೇಗನೆ ಶರಣಾಗುವುದಿಲ್ಲ. ನಿಂತು ಹೋಗುವುದೋ, ಕೆಲಸ ಮಾಡುವಾಗ ಸ್ಟಕ್ ಆಗುವುದೋ, ಇದ್ದಕ್ಕಿದ್ದಂತೆ ಕೈ ಕೊಡುವುದೋ ಇತ್ಯಾದಿ ಸಮಸ್ಯೆಗಳು ಇಲ್ಲ. ದೊಡ್ಡ ಸಾಮರ್ಥ್ಯದ ಗೇಮ್ ಆಡಿದರೂ ಏನೂ ಆಗದ ತಾಕತ್ತು ಇದಕ್ಕಿದೆ. ಹಾಗಾಗಿ ಮೊಬೈಲ್‌ನ ಹೆಸರು ಹೊಸತು ಅನ್ನುವ ಕಾರಣಕ್ಕೆ ತಾತ್ಸಾರ ಮಾಡುವ ಹಾಗಿಲ್ಲ. ಅಂದಕ್ಕಿಂತ ಗುಣ ಮುಖ್ಯ ಅನ್ನುವವರೂ ಆರಾಮಾಗಿ ಮರುಳಾಗಬಹುದಾದ ಗುಣವಂತೆ ಈ ಇನ್‌ಫಿನಿಕ್ಸ್ ಹಾಟ್ S3. 

ಕ್ಯಾಮೆರಾ:
ಕ್ಯಾಮೆರಾ ಲೆವೆಲ್ ಕೂಡ ಬೇರೆಯೇ. 20 ಮೆಗಾ ಪಿಕ್ಸೆಲ್  ಫ್ರಂಟ್ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ. ಜೊತೆಗೆ ಫ್ಲ್ಯಾಶ್ ಬೇರೆ. ಪೋರ್ಟ್ರೇಟ್ ಆಪ್ಷನ್ನಂತಹ ವಿಶಿಷ್ಟ ಆಯ್ಕೆಗಳೂ ಆ ಕಡಿಮೆ ಬೆಲೆಯ ಮೊಬೈಲ್ನಲ್ಲಿ ಇದೆ. ಭಯಂಕರ ಕ್ವಾಲಿಟಿ ಅಂತ ಇಲ್ಲವಾದರೂ ನೋಡದರೆ ಚೆಂದ ಅನ್ನಿಸುವಂತಹ ಫೋಟೋಗಳನ್ನು ತೆಗೆಯಬಹುದು.

ಫ್ರಂಟ್ ಕ್ಯಾಮೆರಾದ ಹೈಲೈಟ್ ಎಂದರೆ ವೈಡ್ ಸೆಲ್ಫೀ. ಸದ್ಯ ಮೊಬೈಲ್ ಹೊಂದಿರುವ ನಾಡಿನ ಸಮಸ್ಯೆ ಎಂದರೆ ಗ್ರೂಪ್ ಸೆಲ್ಫೀ ತೆಗೆಯಲು ಒದ್ದಾಡುವುದು. ತುಂಬಾ ಜನರಿದ್ದರೆ ಸ್ವಲ್ಪ ಕಷ್ಟ ಪಟ್ಟು ಸೆಲ್ಫೀ ತೆಗೆಯಬಹುದು. ಕೆಲವರು ಕುಳ್ಳಗಾಗಿ, ಹಲವರು ಮೆತ್ತಗಾಗಿ, ತೆಳ್ಳಗಾಗಿ ಚಿತ್ರವಿಚಿತ್ರವಾಗಿ ನಿಲ್ಲಬೇಕಾಗುತ್ತದೆ. ಅವೆಲ್ಲಾ ಒದ್ದಾಟ ನೋಡಲಾಗದೆ ವೈಡ್ ಸೆಲ್ಫೀ ಆಪ್ಷನ್ ನೀಡಿದ್ದಾರೆ ಇನ್‌ಫಿನಿಕ್ಸ್.  ಪನೋರಮಾ ಆಯ್ಕೆಯಂತೆ ಈ ಆಯ್ಕೆ. 180 ಡಿಗ್ರಿಯ ಸೆಲ್ಫೀ ತೆಗೆಯಬಹುದು. ಕಡ್ಡಾಯವಾಗಿ ಝೂಮ್ ಮಾಡಿ ನೋಡಬಾರದು. ಇನ್ನು ಸಾಮಾನ್ಯವಾಗಿ ತೆಗೆಯುವ ಸೆಲ್ಫೀಗಳಲ್ಲಿ ಅಚ್ಚರಿ ಅನ್ನಿಸುವಷ್ಟು ಕ್ಲಾರಿಟಿ ಸಿಗುತ್ತದೆ.

ಫೀಚರ್‌ಗಳು: 
ಫಿಂಗರ್ ಪ್ರಿಂಗ್ ಸ್ಕ್ಯಾನರ್ ಸ್ಕ್ಯಾನರ್ ಒಳ್ಳೆಯ ಜಾಗದಲ್ಲಿದೆ. ಸುಲಭವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕ ಅನ್ಲಾಕ್ ಮಾಡಬಹುದು. 
ಫೇಸ್ ಅನ್ಲಾಕ್ ಸೌಲಭ್ಯ ಕೂಡ ಇದೆ. ಅದಕ್ಕೆ ಅಂತಲೇ ಆಪ್ ರೆಡಿ ಮಾಡಿದ್ದಾರೆ ಇನ್‌ಫಿನಿಕ್ಸ್‌ನವರು. ಇವೆರಡೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತದೆ. ಇವುಗಳ ಮೇಲೆ ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ. ಕಾರಲ್ಲಿ ಯಾವಾಗಲೂ ಸ್ಪೇರ್ ಚಕ್ರ ಇಟ್ಟಿರುವಂತೆ ಸ್ವೈಪ್ ಪಾಸ್ವರ್ಡ್ ಇರಲೇಬೇಕು.

ಒಂದೇ ಕೈಯಲ್ಲಿ ಬಳಸುವಂತಹ ಆಯ್ಕೆ, ಎರಡು ಸಲ ಡಿಸ್ಪ್ಲೇ ತಟ್ಟಿದರೆ ಲಾಕ್ ತೆರೆದುಕೊಳ್ಳುವ ಮತ್ತು ಮುಚ್ಚಿ ಕೊಳ್ಳುವ ಫೀಚರ್, ಫೋನ್ ಬಂದಾಗ ತಕ್ಷಣ ಸೈಲೆಂಟ್ ಮಾಡಲು ಮೊಬೈಲ್ ಡಿಸ್ಪ್ಲೆ ತಿರುಗಿಸುವ ಆಪ್ಷನ್ ಇವೆಲ್ಲವೂ ಈ ಮೊಬೈಲಿನಲ್ಲಿದೆ ಮತ್ತು ಖುಷಿ ಕೊಡುತ್ತದೆ. 

ಹೇಗೆ ನೋಡಿದರೂ ಈ ಬೆಲೆ ಒಳ್ಳೆಯ ಮೊಬೈಲ್ ಅನ್ನು ಇನ್‌ಫಿನಿಕ್ಸ್ ಜಗತ್ತಿಗೆ ಅರ್ಪಿಸಿದೆ. ಇಷ್ಟರವರೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಹೆಣಗುತ್ತಿದ್ದ ಇನ್‌ಫಿನಿಕ್ಸ್, ಹಾಟ್ S3 ಮೊಬೈಲಿನಿಂದ ಬೇರೆ ಲೆವೆಲ್ಗೆ ಹೋಗುವ ನಿರೀಕ್ಷೆ ಇದೆ. ಈ ಮೊಬೈಲ್‌ ನಮ್ಮ ರೇಟಿಂಗ್ 10ರಲ್ಲಿ 8.
 

click me!
Last Updated Nov 10, 2018, 4:00 PM IST
click me!