Bengaluru: ಎಲೆಕ್ಟ್ರಿಕ್‌ ವಾಹನಗಳತ್ತ ಜನರ ಚಿತ್ತ: ಎಕ್ಸ್‌ಪೋಗೆ ಭಾರಿ ಸ್ಪಂದನೆ

By Govindaraj SFirst Published Jul 3, 2022, 10:26 AM IST
Highlights

ದುಬಾರಿಯಾಗುತ್ತಿರುವ ಪೆಟ್ರೋಲ್‌, ಡೀಸೆಲ್‌ಗೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಲು ಪ್ರೇರೆಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದ ‘ಚಾಮರ ವಜ್ರ’ದಲ್ಲಿ ನಡೆಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಪ್ರದರ್ಶನದ ಎರಡನೇ ದಿನವಾದ ಶನಿವಾರ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಆಗಮಿಸಿದ್ದರು.

ಬೆಂಗಳೂರು (ಜು.03): ದುಬಾರಿಯಾಗುತ್ತಿರುವ ಪೆಟ್ರೋಲ್‌, ಡೀಸೆಲ್‌ಗೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಲು ಪ್ರೇರೆಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದ ‘ಚಾಮರ ವಜ್ರ’ದಲ್ಲಿ ನಡೆಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಪ್ರದರ್ಶನದ ಎರಡನೇ ದಿನವಾದ ಶನಿವಾರ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಆಗಮಿಸಿದ್ದರು. 

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಆಯೋಜಿಸಿರುವ ಮೇಳದಲ್ಲಿ ಟಾಟಾ, ಬಿವೈಡಿ, ಎಂ.ಜಿ, ಮೈ ಇವಿ ಸ್ಟೋರ್‌, ಬೋಲ್ಟ್‌, ಎಂಪೇರ್‌ ಮತ್ತು ಆಥರ್‌ ಸೇರಿದಂತೆ ದೇಶದ ಪ್ರತಿಷ್ಠಿತ 100 ಕ್ಕೂ ಹೆಚ್ಚು ವಿದ್ಯುತ್‌ ವಾಹನ ತಯಾರಕ ಮತ್ತು ಮಾರಾಟ ಮಳಿಗೆಗಳು ಮೇಳದಲ್ಲಿ ಭಾಗವಹಿಸಿವೆ. ವಿದ್ಯುತ್‌ನಿಂದ ಸಂಚರಿಸುವ ದ್ವಿಚಕ್ರ ವಾಹನ, ಕಾರು, ಸರಕು ವಾಹನ, ಆಟೋ ರಿಕ್ಸಾ, ಬ್ಯಾಟರಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ವಾರಾಂತ್ಯವಾದ ಹಿನ್ನೆಲೆ ಶನಿವಾರ ಬೆಳಿಗ್ಗೆಯಿಂದಲೇ ಹೆಚ್ಚಿನ ಮಂದಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಿದರು. 

ಹೆಚ್ಚು ಸುರಕ್ಷಿತ, ಸುಲಭ ಚಾರ್ಜಿಂಗ್, ಅತ್ಯಾಕರ್ಷಕ ಒಬೆನ್ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಆರಂಭ!

ವಾಹನಗಳ ದರ, ಸಾಮರ್ಥ್ಯ, ಮೈಲೇಜ್‌ ಸೇರಿದಂತೆ ವಾಹನಗಳ ಮಾಹಿತಿ ಪಡೆದುಕೊಂಡರು. ವಿದ್ಯುತ್‌ಚಾಲಿತ ವಾಹನಗಳು ಕುರಿತು ಇರುವ ಅನುಮಾನಗಳನ್ನು ಪರಿಹರಿಸಿಕೊಂಡರು. ವಿವಿಧ ಕಂಪನಿಗಳು ಹೊಸ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಟೆಸ್ಟ್‌ ರೈಡ್‌ ಅವಕಾಶ ಮಾಡಿಕೊಟ್ಟಿದ್ದ ಹಿನ್ನೆಲೆ ಟೆಸ್ಟ್‌ ಡ್ರೈವ್‌ಗೆ ನೂಕು-ನುಗ್ಗಲು ಏರ್ಪಟ್ಟಿತ್ತು. ಬ್ಯಾಟರಿ ಚಾಲಿತ ಮಡಚಬಹುದಾದ ಸೈಕಲ್‌, ಟ್ರಾಕ್ಟರ್‌ಗಳು, ಮೂರು ಚಕ್ರದ ಸರಕು ವಾಹನಗಳು, ದ್ವಿಚಕ್ರ ವಾಹನಗಳು, ಸೈಕಲ್‌, ವಿವಿಧ ಕಂಪನಿಗಳ ಇವಿ ಕಾರುಗಳು ಜನರನ್ನು ಆಕರ್ಷಿಸಿತು.

ತಾಂತ್ರಿಕ ಗೋಷ್ಠಿಗಳು: ಎಕ್ಸ್‌ಪೋನಲ್ಲಿ ಶನಿವಾರ ವಿದ್ಯುತ್‌ ಚಾಲಿತ ವಾಹನಗಳಿಗೆ ಸಂಬಂಧಿಸಿದ ತಾಂತ್ರಿಕಗೋಷ್ಠಿಗಳು ನಡೆದವು. ಪ್ರಮುಖವಾಗಿ ಬ್ಯಾಟರಿ ಮತ್ತು ವೈರ್‌ಲೆಸ್‌ ಬ್ಯಾಟರಿಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅಭಿವೃದ್ಧಿ ಬ್ಯಾಟರಿ ಸ್ವಾಪಿಂಗ್‌ ಮತ್ತು ಇವಿ ಚಾರ್ಜಿಂಗ್‌ನ ವ್ಯಾಪಾರ ವಿಧಾನಗಳು, ಮರುಬಳಕೆಯ ಇಂಧನದ ಉಪಯುಕ್ತತೆ ಕುರಿತು ತಾಂತ್ರಿಕಗೋಷ್ಠಿಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಜತೆ ವಿಚಾರ ವಿನಿಮಯವನ್ನು ಬೆಸ್ಕಾಂನ ನಿರ್ದೇಶಕರಾದ (ತಾಂತ್ರಿಕ) ಡಿ.ನಾಗಾರ್ಜುನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

9 ಕಂಪನಿಗಳೊಂದಿಗೆ ಬೆಸ್ಕಾಂ ಒಡಂಬಡಿಕೆ: ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣ ಕುರಿತು ಬೈಕ್‌ ಕೆಫೆ, ಮೈಲ್‌ ಬೋರ್ಕ್, ಬೊಲ್ಟ್‌, ಬೆನ್‌ಎಸ್‌ಸಿಎಲ್‌ , ಮೈ ಇವಿ ಸ್ಟೋರ್‌ ಎಲ್‌ಎಲ್‌ ಪಿ, ಮತ್ತು ಚಾಮುಂಡಿ ಹೋಟೆಲ್‌ ಪ್ರೈವೆಟ್‌ ಲಿಮಿಟೆಡ್‌ ಸೇರಿದಂತೆ ಒಂಬತ್ತು ಕಂಪನಿಗಳ ಜತೆ ಬೆಸ್ಕಾಂ ಒಪ್ಪಂದ ಮಾಡಿಕೊಂಡಿತು.

ಮೇಳದ ಪ್ರಮುಖ ಆಕರ್ಷಣೆಗಳು
ನಿಮಿಷದಲ್ಲೇ ಬ್ಯಾಟರಿ ಬಲಾವಣೆ:
ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಒಂದು ನಿಮಿಷ ಮತ್ತು ತ್ರಿಚಕ್ರ ವಾಹನಗಳ ಬ್ಯಾಟರಿಗಳನ್ನು 2 ನಿಮಿಷಗಳ ಒಳಗೆ ಬದಲಾಯಿಸುವ ವ್ಯವಸ್ಥೆಯನ್ನು ‘ಸನ್‌ ಮೊಬಿಲಿಟಿ’ ಸಂಸ್ಥೆಯು ಪರಿಚಯಿಸಿದೆ. ದೇಶದಾದ್ಯಂತ 101 ಘಟಕಗಳನ್ನು ಸ್ಥಾಪಿಸಿದ್ದು, ಬೆಂಗಳೂರಿನಲ್ಲೂ 14 ಘಟಕಗಳಿವೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬದಲಾಯಿಸುವ ವ್ಯವಸ್ಥೆಯ ರೀತಿಯಲ್ಲಿ ಈ ಬ್ಯಾಟರಿಗಳನ್ನು ಬದಲಾಯಿಸಬಹುದಾಗಿದೆ. ಈಗಾಗಲೇ ಪೆಟ್ರೋಲ್‌ ಬಂಕ್‌ಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲು ಅನುಮತಿ ದೊರೆತಿದ್ದು, ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ದ್ವಿಚಕ್ರ ವಾಹನಗಳ ಬ್ಯಾಟರಿ ಮೌಲ್ಯ 40ರಿಂದ 60 ಸಾವಿರ ರು. ಮತ್ತು ತ್ರಿಚಕ್ರ ವಾಹನಗಳ ಬ್ಯಾಟರಿ ಮೌಲ್ಯ 1.5 ಲಕ್ಷ ರು.ಆಗಿದ್ದು, ಸಾಕಷ್ಟುವರ್ಷಗಳ ಕಾಲ ಬ್ಯಾಟರಿ ಬಳಕೆಗೆ ಬರಲಿವೆ ಎಂದು ಕಂಪನಿಯ ಪ್ರತಿನಿಧಿ ಪ್ರಜ್ವಲ್‌ ಹೆಗಡೆ ಅವರು ತಿಳಿಸಿದರು.

ದೇಶದ ಮೊದಲ ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌ ಆಕರ್ಷಣೆ: ಕೃಷಿ ಚಟುವಟಿಕೆಗಳಲ್ಲೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೆಲ್ಟಿಸ್ಟಿಯಲ್‌ ಮೊಬಿಲಿಟಿ ಕಂಪನಿ ಅಭಿವೃದ್ಧಿ ಪಡೆಸಿರುವ ದೇಶದ ಮೊದಲ ಇ-ಟ್ರ್ಯಾಕ್ಟರ್‌ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಈ ಟ್ರ್ಯಾಕ್ಟರ್‌ ಬ್ಯಾಟರಿ ಚಾಜ್‌ರ್‍ ಮಾಡಲು ಆರು ಗಂಟೆಗಳು ಸಾಕು. ಒಂದು ಬಾರಿ ಚಾಜ್‌ರ್‍ ಮಾಡಿದರೆ 75 ಕಿಲೋ ಮೀಟರ್‌ ದೂರದವರೆಗೆ ಸಂಚರಿಸುತ್ತದೆ, ಜಮೀನುಗಳಲ್ಲಿ ಆರು ಗಂಟೆಗಳ ಕಾಲ ಬಳಸಬಹುದಾಗಿದೆ. 6ರಿಂದ 8 ಟನ್‌ನಷ್ಟುಸಾಮಗ್ರಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು, ಬಿತ್ತನೆಯಿಂದ ಹಿಡಿದು ರಾಶಿಯನ್ನು ಮನೆಗೆ ತಂದು ಹಾಕುವವರೆಗಿನ ಎಲ್ಲ ಕೆಲಸವನ್ನೂ ಮಾಡಬಹುದಾಗಿದೆ. 6-8 ಲಕ್ಷ ರು. ದರವಿದ್ದು, ಈಗಾಗಲೇ 1,800 ಟ್ರ್ಯಾಕ್ಟರ್‌ ಮುಂಗಡ ಬುಕಿಂಗ್‌ ಆಗಿವೆ ಎಂದು ಕಂಪನಿ ಸಿಬ್ಬಂದಿ ತಿಳಿಸಿದರು.

50 ಸಾವಿರ ಇವಿ ತ್ರಿಚಕ್ರ ವಾಹನಗಳ ಮಾರಾಟದ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ

ಒಂದು ರು.ನಲ್ಲಿ ನಾಲ್ಕು ಕಿ.ಮೀ ಸಂಚರಿಸುವ ಆಟೋ: ಸದ್ಯ ಆಟೋದಲ್ಲಿ ಒಂದು ಕಿ.ಮೀ ಸಂಚರಿಸಿದರೇ 15 ರು. ಶುಲ್ಕವಿದೆ. ಆದರೆ, ನವೋದ್ಯಮ ಕಂಪನಿ ಅಭಿವೃದ್ಧಿ ಪಡೆಸಿದರುವ ‘ಇ-ರಿಕ್ಷಾ’ ಆಟೋದಲ್ಲಿ ಒಂದು ರು.ನಲ್ಲಿ ನಾಲ್ಕು ಕಿ.ಮೀ ಸಂಚರಿಸಬಹುದು. ಐದು ಮಂದಿ ಪ್ರಯಾಣಿಸಬಹುದಾಗಿದೆ. ಅತ್ಯಂತ ಅಗ್ಗದ ಸಾರಿಗೆ ವಾಹನವಾಗಿದ್ದು, ಹೆಚ್ಚಿನ ಬೇಡಿಕೆ ಹೊಂದಿದೆ.

ಮಡಚುವ ಇ-ಸೈಕಲ್‌: ಸ್ವಿಚ್‌ ಕಂಪನಿಯು ಮಡಚಿಕೊಂಡು ಒಯ್ಯುವ ಎಲೆಕ್ಟ್ರಿಕ್‌ ಬೈಸಿಕಲ್‌ ಅಭಿವೃದ್ಧಿಪಡಿಸಿದೆ. ಈ ಬೈಸಿಕಲ್‌ಗಳು ಎಕ್ಸ್‌ಪೋದಲ್ಲಿ ಎಲ್ಲರ ಗಮನಸೆಳೆದವು. 50 ಸಾವಿರ ರು,ನಿಂದ 1 ಲಕ್ಷ ರು.ವರೆಗೂ ವಿವಿಧ ಮಾದರಿಯಲ್ಲಿ ಲಭ್ಯವಿವೆ. ಒಮ್ಮೆ ಚಾಜ್‌ರ್‍ ಮಾಡಿದರೆ, 60 ಕಿ.ಮೀ.ಗಿಂತಲೂ ಹೆಚ್ಚು ದೂರ ಚಲಿಸಲಿವೆ. ಗಂಟೆಗೆ 40ರಿಂದ 60 ಕಿ.ಮೀ. ಚಲಿಸಲಿದ್ದು, ಗೇರ್‌ಗಳೂ ಇದ್ದು, ಸವಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಬಳಸಿಕೊಳ್ಳಬಹುದು. ಜತೆಗೆ ಪೆಡಲ್‌ ಮಾಡುವ ಸೌಲಭ್ಯವನ್ನು ಈ ಬೈಸಿಕಲ್‌ಗಳು ಹೊಂದಿವೆ. ಒಂದು ಕಡೆಯಿಂದ ಮತ್ತೊಂದೆಡೆ ಸುಲಭವಾಗಿ ಕೊಂಡೊಯ್ಯಬಹುದು ಎಂದು ಕಂಪನಿ ಪ್ರತಿನಿಧಿಗಳು ತಿಳಿಸಿದರು.

click me!