ವಿಕ್ರಂ ಲ್ಯಾಂಡರ್‌ ಸಂಪರ್ಕಿಸಲು ಇಸ್ರೋ ಹೇಗೆ ಯತ್ನಿಸ್ತಿದೆ? 14 ದಿನ ಡೆಡ್‌ಲೈನ್ ಯಾಕೆ?

By Web Desk  |  First Published Sep 13, 2019, 12:46 PM IST

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಗೆ ಕೇವಲ 400 ಮೀ. ಅಂತರದಲ್ಲಿ ಹಿನ್ನಡೆಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ಲ್ಯಾಂಡ್‌ ಆಗಬೇಕಿದ್ದ ವಿಕ್ರಮ್‌ ಲ್ಯಾಂಡರ್‌ ಬೇರೆ ಪಥದಲ್ಲಿ ಸಾಗಿ 400 ಮೀ. ದೂರದಲ್ಲಿ ಹಾರ್ಡ್‌ಲ್ಯಾಂಡ್‌ ಆಗಿದೆ ಎಂದು ಇಸ್ರೋ ಹೇಳಿದೆ. ಹಾಗಾಗಿ ವಿಕ್ರಮ್‌ ಸಂಪರ್ಕಕ್ಕೆ ಇಸ್ರೋ ಶತಪ್ರಯತ್ನ ನಡೆಸುತ್ತಿದೆ. ಇಸ್ರೋ ಲ್ಯಾಂಡರನ್ನು ಹೇಗೆ ಸಂಪರ್ಕಿಸಹುದು, ಇದಕ್ಕೆ ಡೆಡ್‌ಲೈನ್‌ ಏಕಿದೆ ಎಂಬ ಕುತೂಹಲದ ಮಾಹಿತಿ ಇಲ್ಲಿದೆ.


ಮತ್ತೆ ಸಂಪರ್ಕ ಸಾಧ್ಯವೇ?

ಸಂಪರ್ಕ ಕಳೆದುಕೊಂಡಿರುವ ವಿಕ್ರಮ್‌ ಲ್ಯಾಂಡರ್‌ ಮತ್ತೆ ಸಂಪರ್ಕಕ್ಕೆ ಸಿಕ್ಕೇ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇಲ್ಲ. ಆದರೆ ಅಂಥದ್ದೊಂದು ಸಾಧ್ಯತೆ ಇದೆ. ಆದರೆ ಅದಕ್ಕೆ ಸಮಯದ ಮಿತಿ ಇದೆ. ಇಸ್ರೋ ಉಳಿದ ಎರಡು ವಾರದಲ್ಲಿ ಅಂದರೆ ಸೆ.21ರ ಒಳಗೆ ವಿಕ್ರಮ್‌ನೊಂದಿಗೆ ಸಂಪರ್ಕ ಸಾಧಿಸಿದರೆ ಭಾರತದ ಚಂದ್ರಯಾನ-2 ಸಾಧನೆ ಇತಿಹಾಸದ ಪುಟ ಸೇರಲಿದೆ. ಇಲ್ಲದಿದ್ದಲ್ಲಿ ಲ್ಯಾಂಡರ್‌ ಚಂದ್ರನ ಸೇರುತ್ತದೆಂಬ ಕನಸನ್ನು ಬಿಟ್ಟು ಬಿಡಬೇಕು.

Latest Videos

undefined

ಆದಾಗ್ಯೂ ಭಾರತ ಚಂದ್ರಯಾನ-2 ವಿಫಲ ಎಂದು ಹೇಳಲಾಗದು. ಏಕೆಂದರೆ ಚಂದ್ರಯಾನದೊಂದಿಗೆ ಚಂದ್ರನ ಕಕ್ಷೆ ಸೇರಿರುವ ಆರ್ಬಿಟರ್‌ 7 ವರ್ಷ ಚಂದ್ರನ ಸುತ್ತ ಸುತ್ತುವರೆಯಲಿದೆ. ಇದು 8 ಪ್ಲೇಲೋಡ್ಸ್‌ಗಳನ್ನು ಒಳಗೊಂಡಿದ್ದು, ಚಂದ್ರನ ವಾತಾವರಣವನ್ನು ಅಧ್ಯಯನ ಮಾಡಲಿದೆ.

14 ದಿನದ ಡೆಡ್‌ಲೈನ್‌ ಏಕೆ?

ವಿಕ್ರಂ ಪತ್ತೆಗೆ ವಿಜ್ಞಾನಿಗಳಿಗೆ ಸಮಯದ ಮಿತಿ ಇದೆ. ಏಕೆಂದರೆ ಸೆಪ್ಟೆಂಬರ್‌ 21ರ ನಂತರ ಚಂದ್ರನಲ್ಲಿ ರಾತ್ರಿ ಪ್ರಾರಂಭವಾಗುತ್ತದೆ. ಅಲ್ಲದೆ ಚಂದ್ರನ ಮೇಲೆ ಅಧ್ಯಯನಕ್ಕೆ ಸಿದ್ಧವಾಗಿದ್ದ ಲ್ಯಾಂಡರ್‌ ಮತ್ತು ರೋವರ್‌ನ ಆಯುಷ್ಯ ಕೇವಲ 14 ದಿನ. ಅಂದರೆ ಒಂದು ಲೂನಾರ್‌ ಡೇ (ಭೂಮಿಯ 14 ದಿನ). ಈ 14 ದಿನದ ಚಕ್ರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕು ಇರುತ್ತದೆ. ಲ್ಯಾಂಡರ್‌ನಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಿದ್ದು, ಸೂರ್ಯನ ಶಾಖದ ಮೂಲಕ ಅದರಲ್ಲಿ ವಿದ್ಯುತ್‌ ಉತ್ಪಾದನೆಯಾಗಿ ಲ್ಯಾಂಡರ್‌ ಕಾರ‍್ಯ ನಿರ್ವಹಿಸುತ್ತದೆ. ಈ ಚಕ್ರವು ಸೆ.7ರಿಂದ ಪ್ರಾರಂಭವಾಗಿದೆ.

ಈ 14 ದಿನದ ಬಳಿಕ ರಾತ್ರಿ ಹೊತ್ತು ಚಂದ್ರನ ಮೇಲ್ಮೈ ಅದರಲ್ಲೂ ದಕ್ಷಿಣ ಧ್ರುವ ಪ್ರದೇಶವು ತೀರಾ ಶೀತಮಯವಾಗಿರುತ್ತದೆ. ಅಲ್ಲಿನ ತಾಪಮಾನವು ಕನಿಷ್ಠದಲ್ಲಿ ಕನಿಷ್ಠ -200 ಡಿಗ್ರಿಗೆ ಇಳಿಯುತ್ತದೆ. ಅಂದರೆ ಭೂಮಿಯ ಅಂಟಾರ್ಟಿಕಾ ಖಂಡದಲ್ಲಿರುವುದಕ್ಕಿಂತಲೂ ಐದಾರು ಪಟ್ಟು ಹೆಚ್ಚು ಶೀತ ಇಲ್ಲಿರುತ್ತದೆ. ಲ್ಯಾಂಡರ್‌ ಒಳಗಿರುವ ತಂತ್ರಜ್ಞಾನವು ಈ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ ಹೊಂದಿಲ್ಲ. ಎಲೆಕ್ಟ್ರಾನಿಕ್‌ ಯಂತ್ರಗಳು ಈ ವೇಳೆ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಹಾಗಾಗಿ ಒಂದು ವೇಳೆ ಸೆ.21ರ ಒಳಗಾಗಿ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ಇಸ್ರೋಗೆ ಸಾಧ್ಯವಾಗದಿದ್ದಲ್ಲಿ ಈಗಿನ ಭರವಸೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಇಸ್ರೋ ಈಗ ಏನು ಮಾಡುತ್ತಿದೆ?

ರಿಮೋಟ್‌ ಸಾಧನ ಬಳಸಿ ಎಲೆಕ್ಟ್ರೋ ಮ್ಯಾಗ್ನಟಿಕ್‌ ವೇವ್‌ ಮುಖಾಂತರ ಮತ್ತೊಮ್ಮೆ ವಿಕ್ರಮ್‌ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನಿಸುತ್ತಿದೆ. ಬಾಹ್ಯಾಕಾಶ ಸಂವಹನ ಉದ್ದೇಶಕ್ಕಾಗಿ, ವಿದ್ಯುತ್ಕಾಂತೀಯ ವರ್ಣಪಟಲದ ಎಸ್‌-ಬ್ಯಾಂಡ್‌ (ಮೈಕ್ರೊವೇವ್‌) ಮತ್ತು ಎಲ್‌ ಬ್ಯಾಂಡ್‌ (ರೇಡಿಯೋ ತರಂಗಗಳು)ನಲ್ಲಿನ ಆವರ್ತನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಲ್ಯಾಂಡರ್‌ ಏಕೆ ಸಂಪರ್ಕ ಕಳೆದುಕೊಂಡಿತು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ವಿದ್ಯುತ್‌ ಸಮಸ್ಯೆಯೇ ಸಂಪರ್ಕ ಕಡಿತಕ್ಕೆ ಕಾರಣವಿರಬಹುದು. ಜೊತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆಗಬೇಕಿದ್ದ ಲ್ಯಾಂಡರ್‌ ಹಾರ್ಡ್‌ ಲ್ಯಾಂಡ್‌ ಆಗಿದೆ. ಆದಾಗ್ಯೂ ಲ್ಯಾಂಡರ್‌ ಛಿದ್ರ ಛಿದ್ರವಾಗಿಲ್ಲ ಎಂಬುದು ಸಮಾಧಾನದ ಸಂಗತಿ.

ಒಂದು ವೇಳೆ ಲ್ಯಾಂಡರ್‌ ಒಳಗೆ ಅಳವಡಿಸಲಾಗಿರುವ ಸಾಧನಗಳಿಗೆ ಹಾನಿಯಾಗಿರದಿದ್ದರೆ ಸಂಪರ್ಕ ಸಾಧ್ಯವಿದೆ. ಹಾಗೆಯೇ ಇಸ್ರೋ ಸಂಪರ್ಕ ಕೇಂದ್ರ ಮತ್ತು ಆರ್ಬಿಟರ್‌ ಎರಡರೊಂದಿಗೂ ಸಂಪರ್ಕ ಸಾಧಿಸುವಂತೆ ಲ್ಯಾಂಡರನ್ನು ವಿನ್ಯಾಸಗೊಳಿಸಲಾಗಿದೆ. ಈಗ ಮತ್ತೆ ಸಂಪರ್ಕ ಸಾಧಿಸಿಲು ಎಲ್ಲಾ ಹಾದಿಗಳಿಂದಲೂ ಪ್ರಯತ್ನಿಸಲಾಗುತ್ತಿದೆ. ಡೀಪ್‌ ಸ್ಪೇಸ್‌ ನೆಟ್‌ವರ್ಕ್ನ ಕ್ಯಾಲಿಪೋರ್ನಿಯಾ ಸ್ಟೇಷನ್‌ನಿಂದ ವಿಕ್ರಂ ಲ್ಯಾಂಡರ್‌ ಸಂಪರ್ಕಕ್ಕೆ ಯತ್ನಿಸಲಾಗುತ್ತಿದೆ.

ಹಾರ್ಡ್‌ ಲ್ಯಾಂಡ್‌ ಎಂದರೇನು?

ಹಾರ್ಡ್‌ಲ್ಯಾಂಡ್‌ ಎಂದರೆ ಸಾಫ್ಟ್‌ಲ್ಯಾಂಡ್‌ಗೆ ವಿರುದ್ಧವಾದುದು. ಅಂದರೆ ನಿಗದಿಪಡಿಸಿದ್ದ ವೇಗಕ್ಕಿಂತ ಹೆಚ್ಚು ರಭಸವಾಗಿ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡರ್‌ ಇಳಿದಿದೆ.

ಇಸ್ರೋಗೆ ಇನ್ನೂ ಭರವಸೆ ಇದೆಯೇ?

ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್‌ನೊಂದಿಗೆ ಮತ್ತೊಮ್ಮೆ ಸಂಪರ್ಕ ಸಾಧಿಸಬಹುದು ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಲು ಇರುವ ಏಕೈಕ ಕಾರಣ ಲ್ಯಾಂಡರ್‌ನಲ್ಲಿರುವ ಆ್ಯಂಟೆನಾದ ಸ್ಥಾನ (ಪೊಸಿಶನ್‌). ಒಂದು ವೇಳೆ ಆ್ಯಂಟೆನಾ ನೇರವಾಗಿ ನಿಂತಿದ್ದರೆ ಮತ್ತು ಸಿಗ್ನಲ್‌ಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದ್ದರೆ ದೂರದ ಪ್ರದೇಶದಲ್ಲಿರುವ ಸಿಗ್ನಲ್‌ಗಳನ್ನೂ ಸ್ವೀಕರಿಸುವ ಸಾಧ್ಯತೆ ಇದೆ. ಉದಾಹರಣೆಗೆ ಬ್ಯಾಟರಿ ಬೆಳಕನ್ನು ಶಂಕುವಿನಾಕಾರದಲ್ಲಿ ಬಿಟ್ಟಾಗ ಬೆಳಕು ಅಂದಾಜು 180 ಡಿಗ್ರಿವರೆಗೂ ತಲುಪುತ್ತದೆ.

ಲಂಬಾಕಾರದ ಆ್ಯಂಟೆನಾ ಕೂಡ ಶಂಕುವಿನಾಕಾರದಲ್ಲಿಯೇ ಇದ್ದು, ಅದೂ ಇಷ್ಟೇ ದೂರದಿಂದ ಸಿಗ್ನಲ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಆದರೆ ಆ್ಯಂಟೆನಾಗೆ ಹಾನಿಯಾಗಿದ್ದರೆ, ಭೂಮಿಯ ಕಡೆಗೆ ಮುಖ ಮಾಡಿದ್ದರೆ ಸಿಗ್ನಲ್‌ಗಳನ್ನು ಸ್ವೀಕರಿಸುವ ಸಾಧ್ಯತೆ ಕಡಿಮೆ. ಮತ್ತು ಒಂದು ವೇಳೆ ಸಿಗ್ನಲ್‌ ಸ್ವೀಕರಿಸಿದರೂ ಅದು ಸಿಗ್ನಲ್‌ ಸ್ಕ್ಯಾನ್‌ ಮಾಡುವ ಪ್ರದೇಶವೂ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಇನ್ನೊಂದು ಸಾಧ್ಯತೆ ಎಂದರೆ, ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್‌, ಲ್ಯಾಂಡರನ್ನು ದಾಟಿ ಬರುವಾಗಲೆಲ್ಲಾ ಸಿಗ್ನಲ್‌ಗಳನ್ನು ರವಾನಿಸುತ್ತದೆ. ಇದು ಮರು ಸಂಪರ್ಕಕ್ಕೆ ನೆರವಾಗಬಹುದು.

ರೋವರ್‌ ಪ್ರಜ್ಞಾನ್‌ ಕತೆ ಏನು?

ಲ್ಯಾಂಡರ್‌ ಒಳಗಿರುವ ಪ್ಲೇಲೋಡ್ಸ್‌ಗಳು, ಮುಖ್ಯವಾಗಿ ರೋವರ್‌, ಈಗಲೂ ಸಮರ್ಥವಾಗಿ ಕಾರ‍್ಯನಿರ್ವಹಿಸುವಷ್ಟುಸುಸ್ಥಿತಿಯಲ್ಲಿದೆಯೇ ಎಂದು ಊಹಿಸುವುದು ಕಷ್ಟ. ಲ್ಯಾಂಡರ್‌ ವಿಕ್ರಮ್‌ ಎಷ್ಟುರಭಸವಾಗಿ ಚಂದ್ರನ ಮೇಲೆ ಇಳಿದಿದೆ ಎಂಬುದರ ಮೇಲೆ ಇವು ಚಲನಶೀಲವಾಗಿವೆಯೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ.

click me!