* ಭಾರತೀಯ ಯುದ್ಧ ವಿಮಾನಗಳ ಸುರಕ್ಷತೆಗೆ ಐವಿಎಚ್ಎಂ ತಂತ್ರಜ್ಞಾನ ಸಹಕಾರಿ
* ಬಿಎಂಎಸ್ ಕಾಲೇಜು ವಜ್ರ ಮಹೋತ್ಸವ ಕಾರ್ಯಕ್ರಮ
* ದೋಷ ಕಂಡರೆ ವಿಮಾನ ಹಾರಾಟದಲ್ಲಿ ಇರುವಾಗಲೆ ದುರಸ್ತಿ
ಬೆಂಗಳೂರು (ಡಿ. 17 ) ಭಾರತೀಯ ವಾಯುಪಡೆಯ (Indian Air Force) ಯುದ್ಧ ವಿಮಾನಗಳ ಸುರಕ್ಷತಾ ಪರಿಶೀಲನೆ ಹಾಗೂ ನಿರ್ವಹಣಾ ವೆಚ್ಚ ಕಡಿಮೆಗೊಳಿಸುವಲ್ಲಿ ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಇಂಟಿಗ್ರೇಟೆಡ್ ವೆಹಿಕಲ್ ಹೆಲ್ತ್ ಮ್ಯಾನೇಜ್ಮೆಂಟ್-IVHM) ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ನೀತಿ ಆಯೋಗದ (NITI Aayog) ಸದಸ್ಯ ಡಾ.ವಿ.ಕೆ.ಸಾರಸ್ವತ್ ಅಭಿಪ್ರಾಯಪಟ್ಟಿದ್ದಾರೆ.
ಬಿಎಂಎಸ್ (BMS) ಕಾಲೇಜು ಹಾಗೂ ವೈಬ್ರೇಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಗುರುವಾರ ಆಯೋಜಿಸಿದ್ದ ಬಿಎಂಎಸ್ಸಿಇ ವಜ್ರ ಮಹೋತ್ಸವ ಹಾಗೂ ಪ್ರೊ.ಜೆ.ಎಸ್.ರಾವ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ವೆಟೋಮ್ಯಾಕ್’ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.
undefined
ಇವಿಎಚ್ಎಂ (EVHM)ತಂತ್ರಜ್ಞಾನದ ಅಳವಡಿಕೆ, ಯುದ್ಧ ವಿಮಾನಗಳಲ್ಲಿನ ಲೋಪದೋಷಗಳನ್ನು ಸ್ಥಳದಲ್ಲಿಯೇ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಇದರಿಂದ ವಿಮಾನ ಹಾರಾಡುವಾಗಲೇ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಇದರಿಂದ ವಿಮಾನ ಅಪಘಾತದಂತಹ ಅವಘಡಗಳು ಕಡಿಮೆಯಾಗುತ್ತವೆ ಎಂದು ಅವರು ಹೇಳಿದರು.
ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!
ಭಾರತೀಯ ವಾಯುಪಡೆ (IAF)ಈಗಾಗಲೇ ಸಣ್ಣ ಪ್ರಮಾಣದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಯುದ್ಧ ವಿಮಾನಗಳಾದ ಎಲ್ಸಿಎ ಎಂಕೆ1, ಎಂಕೆ2, ಎಎಂಸಿಎ, ಯುಸಿಎವಿ, ಆರ್ಟಿಎ90 ಈ ತಂತ್ರಜ್ಞಾನ ಹೊಂದಿದೆ. ಸದ್ಯ ಪ್ರಗತಿಯಲ್ಲಿರುವ ನಿಶಾಂತ್, ತೇಜಸ್ ಹಾಗೂ ಸರಾಸ್ ವಿಮಾನಗಳಲ್ಲಿ ಕೂಡ ಈ ಐವಿಎಚ್ಎಂ ಅಳವಡಿಕೆಯಾಗಲಿದೆ ಎಂದರು.
ಈ ತಂತ್ರಜ್ಞಾನ ಸುರಕ್ಷತಾ ಕ್ರಮಗಳಲ್ಲಿ ರಾಜಿಯಾಗದೆ ವಿಮಾನಗಳು ಮಾತ್ರವಲ್ಲ ಇತರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಆದರೆ, ಎಲ್ಲಾ ವಿಮಾನಗಳಲ್ಲಿ ಇದನ್ನು ಬಳಕೆ ಮಾಡುವ ಕುರಿತು ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ಇದು ಸೆನ್ಸಾರ್ ನಿರ್ವಹಣೆ, ಕಾರ್ಯಕ್ಷಮತೆ ಮತ್ತು ದತ್ತಾಂಶಗಳನ್ನು ನಿರ್ವಹಿಸುತ್ತದೆ.
ನಂತರ ಮಾತನಾಡಿದ ಐಐಟಿ ವಾರಾಣಸಿಯ ಅಧ್ಯಕ್ಷ ಡಾ.ಕೋಟಾ ಹರಿನಾರಾಯಣ, “ಭಾರತ ನಾಗರಿಕ ಮತ್ತು ಸೇನಾ ವಿಮಾನಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ. ಎರಡು ಹಾಗೂ ಮೂರನೇ ಹಂತಗಳ ನಡುವೆ ಸಂಪರ್ಕ ಅಭಿವೃದ್ಧಿಪಡುತ್ತಿದ್ದಂತೆ, ಸುರಕ್ಷಿತ ಪ್ರಯಾಣದ ಬೇಡಿಕೆ ಹೆಚ್ಚುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ಸಾಕಷ್ಟು ತಾಂತ್ರಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯುವ ಅಗತ್ಯವಿದೆ. ಸರ್ಕಾರ ಇದರತ್ತ ಹೆಚ್ಚಿನ ಗಮನ ಹರಿಸಿದಲ್ಲಿ, ಶೀಘ್ರದಲ್ಲೇ ಭಾರತ ಈ ತಂತ್ರಜ್ಞಾನದ ರಫ್ತುದಾರರಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಮುಂದಿನ ಹತ್ತು ವರ್ಷಗಳಲ್ಲಿ ಈ ಉದ್ಯಮ 1 ಟ್ರಿಲಿಯನ್ ಡಾಲರ್ ಉದ್ಯಮ ನಡೆಸುವ ನಿರೀಕ್ಷೆಯಿದೆ. ಇದು ವಿಮಾನಗಳಲ್ಲಿನ ಯಾವುದೇ ವೈಫಲ್ಯದ ಕುರಿತು ಕಂಪನಗಳ ಮೂಲಕ ಸಂಕೇತ ನೀಡಲಿದೆ. ಇದು ಸೆನ್ಸಾರ್ (Sensor), ಅಲ್ಗೋರಿದಮ್ ಮತ್ತಿತರರ ತಂತ್ರಜ್ಞಾನಗಳನ್ನು ಅಗ್ಗವಾಗಿಸಲಿದೆ. ಪರಿಣಾಮವಾಗಿ ಉತ್ಪನ್ನಗಳ ಬೆಲೆ ಕೂಡ ಇಳಿಕೆಯಾಗಲಿದೆ. ಈ ತಂತ್ರಜ್ಞಾನ ಬಳಸಿ ಅಮೆರಿಕ, ಇದುವರೆಗೆ ಬಳಸುತ್ತಿದ್ದ ಎರಡು ಇಂಜಿನ್ ಬದಲಿಗೆ, ಈಗ ಏಕ ಇಂಜಿನ್ ಯುದ್ಧ ವಿಮಾನಗಳನ್ನು ತಯಾರಿಸುತ್ತಿದೆ. ಭಾರತ ಕೂಡ ಈ ನಿಟ್ಟಿನಲ್ಲಿ ಮಹತ್ವ ಹೆಜ್ಜೆಯಿಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಕಂಪನಾಂಕ ತಂತ್ರಜ್ಞಾನದ ಬಗ್ಗೆ ಹಲವ ಮಹತ್ವದ ಚರ್ಚೆಗಳು ನಡೆಯಲಿವೆ. ಮೆಕ್ಯಾನಿಕಲ್ ಕ್ಷೇತ್ರದ 118 ಸಂಶೋಧನಾ ವರದಿಗಳು ಮಂಡನೆಯಾಗಲಿವೆ. ಇದರಲ್ಲಿ ಸುಮಾರು 68 ಜನರು ಆನ್ಲೈನ್ ಮೂಲಕ ವರದಿಗಳನ್ನು ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವೆಟೋಮ್ಯಾಕ್ ಸಮ್ಮೇಳನದ ಅಧ್ಯಕ್ಷ ಡಾ.ನಳಿನಾಕ್ಷ್ ವ್ಯಾಸ್, ದಿ.ಪ್ರೊ.ಜೆ.ಎಸ್.ರಾವ್ ಅವರ ಪತ್ನಿ ಇಂದಿರಾ ರಾವ್, ಬಿಎಂಎಸ್ಸಿಇ ಪ್ರಾಂಶುಪಾಲರಾದ ಮುರಳೀಧರ, ಉಪ ಪ್ರಾಂಶುಪಾಲರಾದ ಕೆ.ಆರ್.ಸುರೇಶ್, ಟ್ರಸ್ಟಿ ಅವಿರಾಮ್ ಶರ್ಮಾ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರುದ್ರನಾಯಕ್ ಮತ್ತಿತರರು ಉಪಸ್ಥಿತರಿದ್ದರು.