ರೈತರ ಸಲುವಾಗಿ ಭಾರತ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಂಟಿಯಾಗಿ ಮೇಘದೂತ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದೆ. ಆ್ಯಪ್‌ನಲ್ಲೇನಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಚಿಕ್ಕಮಗಳೂರು(ಜೂ.10): ಹವಾಮಾನ ವೈಪರಿತ್ಯ ಮತ್ತು ಬೆಳೆ ಹಾನಿಗಳಿಂದಾಗಿ ಮುಕ್ತಿ ಪಡೆಯಲು ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಭಾಗಿತ್ವದಲ್ಲಿ ‘ಮೇಘದೂತ್’ ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ.
ಈ ಅಪ್ಲಿಕೇಷನ್ ಮೊದಲ ಹಂತದಲ್ಲಿ ದೇಶದ 150 ಜಿಲ್ಲೆಗಳ ಹವಾಮಾನ ಮುನ್ಸೂಚನೆ ಮತ್ತು ಬೆಳೆ ಸಲಹೆಗಳ ಕುರಿತು ಕಾರ್ಯನಿರ್ವಹಿಸಲಿದೆ. ರೈತರು ಇದರ ಸದುಪಯೊಗ ಪಡೆದುಕೊಳ್ಳಬೇಕು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಭರತ್‌ಕುಮಾರ್ ತಿಳಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಭಾರತೀಯ ಹವಾಮಾನ ಇಲಾಖೆ ಸಹಭಾಗಿತ್ವದಲ್ಲಿ ಮೂಡಿಗೆರೆಯಲ್ಲಿ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಮಹತ್ವಕಾಂಕ್ಷಿ ಯೋಜನೆಯಾದ ‘ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆ’ ಅಡಿಯಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಗಿಲು ತೆರೆದ ದೇಗುಲಗಳು: ದೇವರುಂಟು, ಭಕ್ತರೇ ಇಲ್ಲ!
ಅತಿವೃಷ್ಟಿ ಮತ್ತು ಅನಾವೃಷ್ಟಿಯಂತ ವಿಕೋಪಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಇಂತಹ ಸಮಸ್ಯೆಗಳಿಂದ ರೈತರು ದೂರವಾಗಲು ಹವಾಮಾನ ಆಧಾರಿತ ಕೃಷಿಯನ್ನು ಆದಷ್ಟು ಬೇಗನೆ ಅಳವಡಿಸಿಕೊಳ್ಳುವುದು ಉತ್ತಮ. ರೈತರ ಸಲುವಾಗಿ ಭಾರತ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಂಟಿಯಾಗಿ ಮೇಘದೂತ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದೆ.
ಈ ಆ್ಯಪ್ ಅನ್ನು ರೈತರು ತಮ್ಮ ಸ್ಮಾರ್ಟ್ ಪೋನ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ರೈತನ ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನೋಂದಾಯಿಸಬೇಕು. ನಂತರ ನೋಂದಾಯಿತ ಬಳಕೆದಾರರು ತಮ್ಮ ಜಿಲ್ಲೆಯ ಹವಾಮಾನ ಮುನ್ಸೂಚನೆ ಹಾಗೂ ಕೃಷಿ ಆಧಾರಿತ ಮಾಹಿತಿಯನ್ನು ಪಡೆಯಬಹುದು. ಆ್ಯಪ್‌ನಲ್ಲಿ ಹಿಂದಿನ ದಿನಗಳ ಆಯಾ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ (ವಾರಕ್ಕೆ 2 ಬಾರಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಮಾಹಿತಿ ಪಡೆಯಲು ಕೃಷಿ ವಿಜ್ಞಾನ ಕೇಂದ್ರದ ಹವಾಮಾನಶಾಸ್ತ್ರದ ವಿಷಯ ತಜ್ಞ ಕೆ.ಎಂ. ಮತ್ತು ಹವಾಮಾನ ವೀಕ್ಷಕರಾದ ಹೊಯ್ಸಳ ಅವರನ್ನು ಸಂಪರ್ಕಿಸಬಹುದು.
ಈ ಆ್ಯಪ್‌ನ್ನು ಕೇವಲ ಕೃಷಿಗೆ ಮೀಸಲಿಡದೇ ತೋಟಗಾರಿಕೆ, ಮೀನು, ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮತ್ತು ಇನ್ನಿತರ ಕೃಷಿ ಸಲಹೆಗಳನ್ನು (ಮಣ್ಣು ಪರೀಕ್ಷೆ, ಕೃಷಿ ಹೊಂಡ, ಮಳೆನೀರು ಕೊಯ್ಲು) ನೀಡಲು ಬಳಸಲಾಗುತ್ತಿದೆ. ರೈತರು ಈ ಆ್ಯಪ್‌ನ್ನು ಬಳಸಿಕೊಂಡು ಕೃಷಿ ಮಾಡಿದ್ದಲ್ಲಿ ತಮಗಾಗುವ ನಷ್ಟವನ್ನು ತಗ್ಗಿಸಿ ಲಾಭ ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರೈತರು ಹೆಚ್ಚಿನ ಮಾಹಿತಿಗೆ ಮೊ: 9632894144, ದೂ.08263- 228198 ಇಲ್ಲಿಗೆ ಸಂಪರ್ಕಿಸಬಹುದು.