ಗಂಡನ ತೊರೆದು ಬೇರೆಡೆ ವಾಸಿಸುವ ಪತ್ನಿ ಜೀವನಾಂಶಕ್ಕೆ ಅರ್ಹ: ಕೋರ್ಟ್‌

By Kannadaprabha News  |  First Published May 8, 2022, 4:34 AM IST

ಕಿರುಕುಳದಿಂದ ಬೇರೆ ವಾಸಿಸುವ ಪತ್ನಿ ಜೀವನಾಂಶಕ್ಕೆ ಅರ್ಹ: ಹೈಕೋರ್ಚ್‌

ಸ್ವ ಇಚ್ಛೆ ಹಾಗೂ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪ್ರತಿಪಾದಿಸಲು ಪತಿಗೆ ಅವಕಾಶವಿಲ್ಲ 

-ಒಪ್ಪಂದದಂತೆ ದೂರವಿದ್ದಾಳೆ ಎಂದು ಜೀವನಾಂಶ ನಿರಾಕರಿಸಲಾಗದು


ಬೆಂಗಳೂರು(ಮೇ.08): ಕಿರುಕುಳಕ್ಕೆ ಬೇಸತ್ತು ಗಂಡನ ಮನೆ ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇಂತಹ ಪ್ರಕರಣದಲ್ಲಿ ಸ್ವ ಇಚ್ಛೆ ಹಾಗೂ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪ್ರತಿಪಾದಿಸಲು ಪತಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಜೀವನಾಂಶ ಕೋರಿ ಪತ್ನಿ ರಾಧಿಕಾ ಸಲ್ಲಿಸಿರುವ ಅರ್ಜಿ ಕುರಿತ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ಕೋರ್ಚ್‌ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಪತಿ ರವಿ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Tap to resize

Latest Videos

ಅಧೀನ ನ್ಯಾಯಾಲಯಕ್ಕೆ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ, ಪತಿ ರವಿ ಹಾಗೂ ಅತ್ತೆ ತನಗೆ ತುಂಬಾ ಕಿರುಕುಳ ನೀಡುತ್ತಿದ್ದರು. ತಾಯಿ ಸೂಚನೆ ಮೇರೆಗೆ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಅವರ ಕಿರುಕುಳ ಸಹಿಸಲಾಗದೆ ಪತಿಯ ಮನೆ ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿರುವುದಾಗಿ ರಾಧಿಕಾ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿಯು ಪತಿಯ ಮನೆ ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿರುವುದಾಗಿ ಹೇಳಲಾಗದು ಎಂದು ಹೈಕೋರ್ಚ್‌ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇಂತಹ ಪ್ರಕರಣದಲ್ಲಿ ಪತ್ನಿಗೆ ಜೀವನಾಂಶ ನೀಡಲು ಗಂಡ ನಿರಾಕರಿಸುವಂತಿಲ್ಲ. ಗಂಡನಿಂದ ಜೀವನಾಂಶ ಪಡೆಯಲು ಪತ್ನಿ ಅರ್ಹಳಾಗಿರುತ್ತಾರೆ ಎಂದು ಸ್ಪಷ್ಟವಾಗಿ ನುಡಿದ ಹೈಕೋಟ್‌, ರವಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ವಿವರ

ರಾಧಿಕಾ ಮತ್ತು ರವಿ 2016ರ ನ.1ರಂದು ವಿವಾಹವಾಗಿದ್ದರು. ಕ್ರಮೇಣ ವೈವಾಹಿಕ ಸಂಬಂಧ ಹಳಸಿತ್ತು. ಕಿರುಕುಳ ನೀಡುತ್ತಿರುವುದಾಗಿ ಪತಿ ವಿರುದ್ಧ 2020ರ ಡಿ.7ರಂದು ಪೊಲೀಸರಿಗೆ ರಾಧಿಕಾ ದೂರು ದಾಖಲಿಸಿದ್ದರು. ನಂತರ ಜೀವನಾಂಶ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿಗೆ ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರಿಂದ ಹೈಕೋರ್ಚ್‌ ಮೆಟ್ಟಿಲೇರಿದ್ದ ರವಿ, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 125(4)ರ ಪ್ರಕಾರ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಗಂಡನಿಂದ ಜೀವನಾಶ ಪಡೆಯಲು ಪತ್ನಿ ಅರ್ಹಳಾಗಿರುವುದಿಲ್ಲ. ಅದರಂತೆ ಪತ್ನಿ ರಾಧಿಕಾ ಸಹ ಸ್ವ ಇಚ್ಛೆಯಿಂದ ಮನೆ ತೊರೆದಿದ್ದು, ಆಕೆಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು.

click me!