ಭೂಕುಸಿತವೆಂದು ಗುಡ್ಡಗಳೇ ಕುಸಿಯುತ್ತಿರೋದೇಕೆ?: ಮಾನವ ಕುಲಕ್ಕೆ ಪ್ರಕೃತಿಯ ಪ್ರತೀಕಾರ

By Kannadaprabha News  |  First Published Jul 19, 2024, 9:15 AM IST

ಪಶ್ಚಿಮ ಘಟ್ಟದಿಂದ ಉಗಮವಾಗುವ ನದಿಗಳ ಮೇಲೆ ಅದರ ಧಾರಣಾ ಶಕ್ತಿಗೂ ಮೀರಿ ಮಾಡಿರುವ ನೀರಾವರಿ ಎಂಬ ಯೋಜನೆಗಳು ಜನರಿಗೆ ಪೂರಕವಾದ್ದರೂ ಪ್ರಕೃತಿಗೆ ಮಾರಕವಾಗಿವೆ.


ದಿನೇಶ್ ಹೊಳ್ಳ, ಮಂಗಳೂರು

ಮೊನ್ನೆ ಮೊನ್ನೆ ರಾಜ್ಯವೇ ಬರಗಾಲವೆಂಬ ಹೊದಿಕೆಯನ್ನು ಹೊದ್ದುಕೊಂಡಿದ್ದು, ಇದೀಗ ಜಲ ಪ್ರವಾಹದೊಂದಿಗೆ ಗುಡ್ಡ, ಗುಡ್ಡಗಳೇ ಕುಸಿಯುತ್ತಿವೆ. ಎಲ್ಲಿ, ಯಾವಾಗ, ಯಾವ ಗುಡ್ಡ ಕುಸಿಯುತ್ತದೆ ಎಂಬ ಆತಂಕ. ಒಂದು ಕಡೆ ನೀರೇ ಇಲ್ಲದ ಬರಗಾಲ ವಾದರೆ, ಅದರ ಮುಂದಿನ ಹೆಜ್ಜೆಗಳಲ್ಲೇ ಊರಿಡೀ ನೀರೇ ತುಂಬಿ, ನೀರು ಇಂಗಿಸುವ ಕಾಡು, ಬೆಟ್ಟಗಳೇ ಧರೆಗುರುಳುತ್ತವೆ ಅಂದರೆ ಈ ಪ್ರಾಕೃತಿಕ ದುರಂತಗಳ ಹಿನ್ನೆಲೆಯನ್ನು ಒಮ್ಮೆ ಅವಲೋಕಿಸಬೇಕು. ಆಗ ಇಲ್ಲಿ ಪ್ರಕೃತಿಯ ಯಾವ ಅತಿರೇಕವೂ ಕಾಣಿಸದೇ ಮಾನವನ ಅತಿ ಆಸೆಯ ಛಾಪನ್ನು ಕಾಣಬಹುದು. ತನ್ನ ದುರಾಸೆ ಮತ್ತು ಸ್ವಾರ್ಥಕ್ಕೆ ಪ್ರಕೃತಿಯ ಒಡಲಿಗೆ ಸತತವಾಗಿ ಗೀರು ಗಾಯಗಳನ್ನು ಮಾಡುತ್ತಾ ಬಂದಿರುವ ಮಾನವ ಕುಲಕ್ಕೆ ಪ್ರಕೃತಿಯ ಪ್ರತೀಕಾರವೇ ಇಂದಿನ ದುರಂತಗಳಿಗೆ ನೇರ ಕಾರಣವಾಗಿರುತ್ತದೆ. ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ ಅಂದರೆ ಅದು ಪಶ್ಚಿಮ ಘಟ್ಟದ ಗಿರಿ, ಕಣಿವೆ, ಕಾನನ, ಕಂದರಗಳು. ಪಶ್ಚಿಮ ಘಟ್ಟದ ನೆಮ್ಮದಿಗೆ ಸಮಸ್ಯೆ ಆದರೆ ಅದು ಇಡೀ ದಕ್ಷಿಣ ಭಾರತದ ನೆಲ, ಜಲ, ಪರಿಸರಕ್ಕೆ ಸಮಸ್ಯೆಯಾಗುತ್ತದೆ.

Tap to resize

Latest Videos

'ಅಭಿವೃದ್ಧಿ' ಎಂಬ ಮಾರಕಾಸ್ತ್ರ: ನಮ್ಮ ಸರ್ಕಾರಗಳು ಅಭಿವೃದ್ಧಿ' ಎಂಬ ನೆಪದಲ್ಲಿ ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಜೈವಿಕ ಪ್ರದೇಶಗಳಲ್ಲಿ ಅಸಂಬದ್ಧ ಯೋಚನೆಗಳ ಜೊತೆ ಅವೈಜ್ಞಾನಿಕ ಯೋಜನೆಗಳನ್ನು ಮಾಡುತ್ತಾ ಬಂದಿರುವುದೇ ಇಂದಿನ ಪ್ರಾಕೃತಿಕ ದುರಂತಗಳಿಗೆ ಕಾರಣ. ಪಶ್ಚಿಮ ಘಟ್ಟದಿಂದ ಉಗಮ ವಾಗುವನದಿಗಳಮೇಲೆ ಅದರ ಧಾರಣಾ ಶಕ್ತಿಗೂ ಮೀರಿ ಮಾಡಿರುವ ನೀರಾವರಿ ಎಂಬ ಯೋಜನೆಗಳು ಜನರಿಗೆ ಪೂರಕವಾಗುತ್ತಾ ಬಂದಿ ದ್ದರೂ ಪ್ರಕೃತಿಯ ಒಡಲಿಗೆ ಮಾರಕವಾಗಿಯೇ ಒಲಿದವು. ಪಶ್ಚಿಮ ಘಟ್ಟದ ನದೀ ಮೂಲಗಳೆಂಬ ಸೂಕ್ಷ್ಮ ಪ್ರದೇಶಗಳು ನಾಶವಾಗುತ್ತಾ ಬಂದವು. ನದೀ ಮೂಲಗಳು ನಾಶವಾಗುತ್ತಾ ಬರುತ್ತಿದ್ದಂತೆ ನದಿ ನೀರನ್ನೇ ಆಶ್ರಯಿಸಿಕೊಂಡು ಇರುತ್ತಿದ್ದ ಪಶ್ಚಿಮ ಘಟ್ಟದ ಶೋಲಾ ಅರಣ್ಯ (ಮಳೆ ಕಾಡು) ತನ್ನ ನೆಮ್ಮದಿಯನ್ನು ಕಳೆದುಕೊಂಡಿತು. 

ವಾಲ್ಮೀಕಿ ನಿಗಮ ಹಗರಣ, ನೈತಿಕತೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆವರೆಗೂ ಪ್ರತಿಭಟನೆ: ಬಿಜೆಪಿ

ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶಕ್ಕೂ, ಶೋಲಾ ಅಡವಿಗೂ ಇರುವ ನೈಸರ್ಗಿಕ ಸಂಬಂಧಗಳ ನಡುವೆ ಬಿರುಕಾಗುತ್ತಾ ಬಂದಿತು. ಈ ಸಂದರ್ಭದಲ್ಲಿ ಹುಲ್ಲುಗಾವಲು ಮತ್ತು ಶೋಲಾ ಅರಣ್ಯವನ್ನು ರಕ್ಷಿಸಲು ಸರ್ಕಾರದಿಂದ ಯಾವ ಚಿಂತನೆಗಳೂ ಆಗದೇ ಅಲ್ಲಿ ಇನ್ನಷ್ಟು ಪರಿಸರ ವಿನಾಶಕ ಯೋಜನೆಗಳಿಗೆ ಅನುಮತಿ ಸಿಕ್ಕಿದವು. ಯಾವ ಅಡವಿಯನ್ನು ಕಾಪಾಡಿಕೊಳ್ಳಬೇಕಿತ್ತೋ ಅಲ್ಲಿ ಟಿಂಬರ್‌ಮಾಫಿಯಾ, ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್, ಗಣಿಗಾರಿಕೆ, ಜಲ ವಿದ್ಯುತ್ ಯೋಜನೆ, ನದಿ ತಿರುವು ಯೋಜನೆಯಂತಹ ವನ ವಿನಾಶಕ ಯೋಜನೆಗಳ ಕಡತಗಳಿಗೆ ಸಹಿ ಬಿದ್ದವು. ಜೆಸಿಬಿ, ಬುಟ್ಟೋಜರ್ ನಂತಹ ಮೆಷಿನ್‌ಗಳು ಕಾಡಿನೊಳಗೆ ಅಟ್ಟಹಾಸ ಮೆರೆದವು. ನದೀ ಮೂಲಗಳಿಗೆ ಮಾರಣಾಂತಿಕ ಏಟು ಬಿದ್ದವು. ಸೂಕ್ಷ್ಮ ನಿಷಿದ್ಧ ಪ್ರದೇಶಗಳಿಗೆ ರಸ್ತೆಗಳಾದವು.

ಪ್ರಕೃತಿ ಒಡಲಿಗೆ ಡೈನಮೈಟ್: ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆಗೆ ಶೋಲಾರಣ್ಯದ ಒಳಗಿನ ಬೆಟ್ಟಗಳ ಬಂಡೆಗಳು ಡೈನಮೈಟ್ ಮೂಲಕ ಛಿದ್ರವಾದವು. ಅಲ್ಲಿ ರಸ್ತೆ, ಇಲ್ಲಿ ಕಟ್ಟಡ, ಒಂದು ಕಡೆ ಅಣೆಕಟ್ಟು, ಇನ್ನೊಂದು ಕಡೆ ಪೈಪ್‌ಲೈನ್, ಕರೆಂಟ್ ಲೈನ್, ಮೋಜು ಮಸ್ತಿಗಳ ಹೋಮ್ ಸ್ಟೇ, ರಸ್ತೆ ನಿರ್ಮಾಣಕ್ಕೆ ಗುಡ್ಡಗಳ ಅಗೆತ... ಇವೆಲ್ಲಾ ನಿರಂತರ ಆಗುತ್ತಾ ಬರುತ್ತಿದ್ದಂತೆ ಪಶ್ಚಿಮ ಘಟ್ಟದ ಮಣ್ಣಿನ ಒಳಮೈ ಪದರಗಳಲ್ಲಿ ನೀರನ್ನು ಶೇಖರಿಸಿಕೊಳ್ಳುವ, ಬೇರುಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ, ಸಾಮರ್ಥ್ಯಗಳು ಕಡಿಮೆಯಾಗುತ್ತಾ ಬಂದವು. ಹಸಿರು ಅಡವಿಯ ಕಡೆ ಗಮನ ಹರಿಸಿದವರು ಅಡವಿಯ ಮರಗಳ ಬೇರುಗಳ ಗೋಳು ಅಗೋಚರವಾಗಿಯೇ ಉಳಿಯಿತು. 

ಇಂತಹ ಸಂದರ್ಭದಲ್ಲಿ ಪಶ್ಚಿಮ ಘಟ್ಟದಲ್ಲಿ ಮಳೆ ಬೀಳುವ ಸಂದರ್ಭದಲ್ಲಿ ಬೆಟ್ಟಗಳ ಒಳಗೆ ಇರುವ ಜಲನಾಡಿಗಳಲ್ಲಿ ಮಳೆ ನೀರಿನ ಜೊತೆ ಕಲ್ಲು, ಮಣ್ಣು, ರಾಡಿ, ಇನ್ನಿತರ ಕಾಮಗಾರಿಯ ವಸ್ತುಗಳು ಸೇರಿಕೊಂಡಾಗ ಜಲನಾಡಿಗಳು ಸ್ಫೋಟವಾಗಿ ಒಮ್ಮೆಲೇ ಬೆಟ್ಟದ ಕಣಿವೆ ಪ್ರದೇಶಕ್ಕೆ ಧುಮುಕಿದಾಗ ಭೂಕುಸಿತವಾಗುತ್ತದೆ. ಪರ್ವತದ ಮೇಲ್ಗಡೆ ನೀರನ್ನು ಇಳುವರಿ ಮಾಡಿಕೊಳ್ಳಬಹುದಾದ ಹುಲ್ಲುಗಾವಲು ಕಾಳಿಚ್ಚಿನಿಂದ ನಾಶವಾಗುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಅದರಿಂದಾಗಿ ಪಶ್ಚಿಮ ಘಟ್ಟದ ಶಿಖರ ಪ್ರದೇಶದ ಮಣ್ಣಿನ ಸವಕಳಿಯಿಂದ ಕೂಡಾ ಭೂಕುಸಿತವಾಗುತ್ತವೆ. ಪಶ್ಚಿಮ ಘಟ್ಟದ ಸೂಕ ಪ್ರದೇಶಗಳಲ್ಲಿ ಭೂಕುಸಿತ ಆಗುತ್ತಿದ್ದರೆ ಮುಂದಿನ ಮಳೆಗಾಲದಲ್ಲಿ ನೀರಿನ ಇಳುವರಿ ಪ್ರದೇಶ ಕಡಿಮೆಯಾಗುತ್ತಾ ಹೊಳೆಗಳು ಬಡಕಲಾಗುತ್ತವೆ.

ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು: ಶಾಸಕ ಪುಟ್ಟಣ್ಣ

ನಿಸರ್ಗದ ಸೂತ್ರ ಅರಿಯಿರಿ: ಒಟ್ಟಾರೆ ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಪ್ರಾಕೃತಿಕ ದುರಂತಗಳಿಗೆ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಪ್ರಕೃತಿಯ ಮೇಲೆ ಯಾವುದೇ ಅಭಿಮಾನ, ಕಾಳಜಿ ಇಲ್ಲದೇ ಇರುವ ಜನತೆ ಕೂಡಾ ಮೂಲ ಕಾರಣ. ನಗರ ಬೆಳೆಯುತ್ತಾ ಇದ್ದ ಹಾಗೆ ನಗರಗಳಿಗೆ ಪೂರಕವಾಗುವ ಅಂಶಗಳನ್ನು ನಾವು ಪ್ರಕೃತಿಯ ಮೇಲೆ ಹೇರುತ್ತಿದ್ದೇವೆ. ಇಂತಹ ವ್ಯಾವಹಾರಿಕ ದೃಷ್ಟಿಕೋನವನ್ನು ಇಟ್ಟುಕೊಳ್ಳದೇ ನಮ್ಮ ನಿಸರ್ಗವನ್ನು ಸಂರಕ್ಷಣೆ ಮಾಡುತ್ತಾ, ಬದುಕುವ ಸೂತ್ರವನ್ನು ಅರಿಯುತ್ತಾ ಹೋದರೆ ಮಾತ್ರ ಭವಿಷ್ಯದಲ್ಲಿ ಆಗಲಿರುವ ಇನ್ನಷ್ಟು ಘೋರ ದುರಂತಗಳಿಂದ ತಪ್ಪಿಸಿಕೊಂಡು ನೆಮ್ಮದಿಯಾಗಿ ಇರಬಹುದು. ಎಲ್ಲದಕ್ಕೂ ಸೂಕ್ಷ್ಮ, ಸಹ್ಯ ಮನಸು ಅಗತ್ಯ.

click me!