ಸಹಸ್ರಾರು ವರ್ಷಗಳ ಶಿಲಾ ಶಾಸನ ರಕ್ಷಣೆಗೆ 3ಡಿ ಸ್ಕ್ಯಾನ್‌

By Govindaraj SFirst Published Jul 18, 2022, 5:00 AM IST
Highlights

ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಜೀವನ ಶೈಲಿ, ಆಡಳಿತ ಇತ್ಯಾದಿ ಮಾಹಿತಿಯನ್ನೊಳಗೊಂಡ ಸಾವಿರಾರು ವರ್ಷಗಳ ಶಿಲಾ ಶಾಸನಗಳನ್ನು 3ಡಿ ತಂತ್ರಜ್ಞಾನದಲ್ಲಿ ಸ್ಕ್ಯಾನ್‌ ಮಾಡಿ ಡಿಜಿಟಲ್‌ ವ್ಯವಸ್ಥೆಯಲ್ಲಿ ಸಂರಕ್ಷಿಸುವ ಯೋಜನೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ನಗರದ ‘ದಿ ಮಿಥಿಕ್‌ ಸೊಸೈಟಿ’ ಆರಂಭಿಸಿದೆ. 

ಸಂಪತ್‌ ತರೀಕೆರೆ

ಬೆಂಗಳೂರು (ಜು.18): ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಜೀವನ ಶೈಲಿ, ಆಡಳಿತ ಇತ್ಯಾದಿ ಮಾಹಿತಿಯನ್ನೊಳಗೊಂಡ ಸಾವಿರಾರು ವರ್ಷಗಳ ಶಿಲಾ ಶಾಸನಗಳನ್ನು 3ಡಿ ತಂತ್ರಜ್ಞಾನದಲ್ಲಿ ಸ್ಕ್ಯಾನ್‌ ಮಾಡಿ ಡಿಜಿಟಲ್‌ ವ್ಯವಸ್ಥೆಯಲ್ಲಿ ಸಂರಕ್ಷಿಸುವ ಯೋಜನೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ನಗರದ ‘ದಿ ಮಿಥಿಕ್‌ ಸೊಸೈಟಿ’ ಆರಂಭಿಸಿದೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿನ ಸುಮಾರು 1500ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು 3ಡಿ ತಂತ್ರಜ್ಞಾನದಲ್ಲಿ ಸ್ಕ್ಯಾನ್‌ ಮಾಡಿ ಸಂರಕ್ಷಿಸುವ ಕಾಯಕ ಆರಂಭಗೊಂಡಿದೆ. ಅದಕ್ಕಾಗಿ ಸುಮಾರು 3ರಿಂದ 4 ಕೋಟಿ ರು.ಗಳನ್ನು ದಿ ಮಿಥಿಕ್‌ ಸೊಸೈಟಿ ಮೀಸಲಿಟ್ಟಿದೆ. ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣಾ ಯೋಜನಾ ತಂಡವನ್ನು ಸಿದ್ಧಪಡಿಸಿದ್ದು, ಈ ತಂಡದಲ್ಲಿ ಐವರು ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ.

Latest Videos

ಈವರೆಗೂ ಶಿಲಾ ಶಾಸನಗಳ ಪಡಿಯಚ್ಚು ಪಡೆಯುವ ಮೂಲಕ ಅದನ್ನು ಅಧಿಕೃತ ದಾಖಲೆಗೊಳಿಸುವ ಪದ್ಧತಿ ಜಾರಿಯಲ್ಲಿತ್ತು. ಇದೀಗ ಕಳೆದೊಂದು ವರ್ಷದಿಂದ ಈ ತಂಡ ಮೂರು ಜಿಲ್ಲೆಗಳಲ್ಲಿ ದೊರೆತ 1500ಕ್ಕೂ ಹೆಚ್ಚು ಶಾಸನಗಳನ್ನು ಹೈ ರೆಸಲ್ಯೂಶನ್‌ನಲ್ಲಿ ಡಿಜಿಟಲ್‌ ಸಂರಕ್ಷಣೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಂಡವು 500ಕ್ಕೂ ಹೆಚ್ಚು ಶಾಸನಗಳ ಕ್ಷೇತ್ರ ಕಾರ್ಯ ಮಾಡಿದ್ದು, ಇದುವರೆಗೆ ಅಂದಾಜು 250 ಶಿಲಾ ಶಾಸನಗಳ ಸ್ಕ್ಯಾನ್‌ ಪೂರ್ಣಗೊಳಿಸಿದೆ. ಈ ಪೈಕಿ 100ಕ್ಕೂ ಹೆಚ್ಚು ಶಿಲಾ ಶಾಸನಗಳು ಬೆಂಗಳೂರು ನಗರ ಜಿಲ್ಲೆಗೆ ಸೇರಿದ್ದು ಎಂಬುದು ವಿಶೇಷ.

ಹಿಂದೂ ಸಮಾಜಕ್ಕೆ ಸಿದ್ದು ಕೊಡಲಿ ಕಾವು ಆಗದಿರಲಿ: ಸಿ.ಟಿ.ರವಿ

ಡಿಜಿಟಲ್‌ ರೂಪದಲ್ಲಿ ರಕ್ಷಣೆ: ತಂಡ ಸಾಕಷ್ಟುಸವೆದು ಹೋದ ಶಿಲಾ ಶಾಸನಗಳನ್ನು ಓದಲು ಸಹಾಯಕವಾಗುವಂತೆ ಅತ್ಯಾಧುನಿಕ 3ಡಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಆರ್ಟೆಕ್‌ ಸ್ಟುಡಿಯೋ ಸ್ಕ್ಯಾನರ್‌ 16 ಸಾಫ್‌್ಟವೇರ್‌ ಬಳಸಿ ಸ್ಕ್ಯಾನ್‌ ಮಾಡಲಾಗುತ್ತಿದೆ. ಅಂದಾಜಿನ ಪ್ರಕಾರ, ಗ್ರಾಮಾಂತರ ಪ್ರದೇಶದಲ್ಲಿ ಶೇ.30 ಮತ್ತು ನಗರ ಪ್ರದೇಶಗಳಲ್ಲಿ ಶೇ.40ರಷ್ಟುಶಾಸನಗಳು ಹಾಳಾಗಿವೆ. ಈಗ ಲಭ್ಯವಿರುವಂತಹ ಶಾಸನಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪದಲ್ಲಿ ಸಂರಕ್ಷಿಸುವ ಕೆಲಸವನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ತಂಡ ಹೊಂದಿದೆ.

ಇತರ ಜಿಲ್ಲೆಗೂ ಶೀಘ್ರ ವಿಸ್ತರಣೆ: ಮುಂದಿನ ದಿನಗಳಲ್ಲಿ ಇದನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸುವುದರಿಂದ ಸ್ಥಳೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಇತ್ಯಾದಿಗಳ ಮಾಹಿತಿ ಒಳಗೊಂಡ ಶಿಲಾ ಶಾಸನಗಳನ್ನು ಸಂರಕ್ಷಿಸಬಹುದಾಗಿದೆ. ಇದು ಕೇವಲ ಸರ್ಕಾರದ ಕಾರ್ಯವಲ್ಲ, ಪ್ರತಿಯೊಬ್ಬರೂ ಶಿಲಾ ಶಾಸನಗಳ ಮಹತ್ವ ಅರಿತು, ಸಂರಕ್ಷಿಸಲು ಮುಂದಾಗಬೇಕು ಎನ್ನುತ್ತಾರೆ ಯೋಜನಾ ನಿರ್ದೇಶಕ ಪಿ.ಎಲ್‌.ಉದಯಕುಮಾರ್‌.

ಪಡಿಯಚ್ಚು ವಿಧಾನ: ಬಹಳ ಹಿಂದಿನಿಂದಲೂ ಶಿಲಾ ಶಾಸನಗಳ ಬರವಣಿಗೆ, ಲಿಪಿಯ ಅಧ್ಯಯನಕ್ಕೆ ಪಡಿಯಚ್ಚು ವಿಧಾನವೇ ಬಳಕೆಯಲ್ಲಿದೆ. ನೀರಿನಿಂದ ಶಾಸನವನ್ನು ತೊಳೆದು ಶುಚಿಗೊಳಿಸಬೇಕು. ಆ ನಂತರ ಬಿಳಿಯಾದ ದಪ್ಪನೆಯ ಹಾಳೆಯನ್ನು ನೀರಿನಲ್ಲಿ ಅದ್ದಿ, ಅದನ್ನು ಶಿಲಾಶಾಸನದ ಮೇಲೆ ಹೊದಿಸಬೇಕು. ಈ ಕಾಗದಶಾಸನದ ಅಕ್ಷರಗಳಿರುವ ಎಲ್ಲ ಕಡೆಯು ಅಂಟಿಕೊಳ್ಳುವಂತೆ ಬ್ರಷ್‌ವೊಂದರಿಂದ ನಿಧಾನವಾಗಿ ಒತ್ತಬೇಕು. ಬಳಿಕ ಕಪ್ಪು ಮಸಿಯನ್ನು ಆ ಬಿಳಿಯ ಹಾಳೆಯ ಮೇಲೆ ನಿಧಾನವಾಗಿ ಒತ್ತುವ ಮೂಲಕ ಅಕ್ಷರಗಳು ಹಾಳೆಯ ಮೇಲೆ ಮೂಡುವಂತೆ ನೋಡಿಕೊಳ್ಳಬೇಕು. ಅಂತಿಮವಾಗಿ ಆ ಹಾಳೆಯನ್ನು ನಿಧಾನವಾಗಿ ಶಿಲಾ ಶಾಸನದಿಂದ ಬೇರ್ಪಡಿಸಿ, ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಕಾಗದದ ಮೇಲೆ ಮೂಡಿರುವ ಅಕ್ಷರಗಳನ್ನು ಓದಲು ಪ್ರಯತ್ನಿಸಬಹುದು. ಪಡಿಯಚ್ಚು ತೆಗೆದ ಹಾಳೆಯನ್ನು ಹಾಳಾಗದಂತೆ ಜಾಗ್ರತೆ ವಹಿಸಬೇಕೆಂದು ಲಿಪಿ ತಜ್ಞರು ಮಾಹಿತಿ ನೀಡಿದ್ದಾರೆ.

ಗೂಗಲ್‌ ನಕ್ಷೆಯಲ್ಲಿ ಶಿಲಾ ಶಾಸನ: ಬೆಂಗಳೂರಿನಲ್ಲಿ ದೊರೆತ ಶಿಲಾ ಶಾಸನಗಳಿರುವ ಸ್ಥಳಗಳು, ಶಾಸನದ ಸದ್ಯದ ಸ್ಥಿತಿ, ಶಾಸನ ರಚಿಸಲಾದ ವರ್ಷ, ಕಲ್ಲಿನ ಆಳತೆ ಇತ್ಯಾದಿ ಮಾಹಿತಿಯನ್ನು ಇನ್ನು ಮೇಲೆ ಗೂಗಲ್‌ ನಕ್ಷೆಯಲ್ಲಿಯೇ ಕಾಣಬಹುದು. ಶಿಲಾಶಾಸನ ಸ್ಥಿತಿಯ ಬಗ್ಗೆ ಗೂಗಲ್‌ ನಕ್ಷೆಯಲ್ಲಿ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳಿಂದ ಗುರುತು ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ದೊರೆತ ಎಲ್ಲ ಶಾಸನಗಳ ಮಾಹಿತಿಯನ್ನು ನಕ್ಷೆಯಲ್ಲಿ ಸೇರಿಸಲಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಪಿ.ಎಲ್‌.ಉದಯಕುಮಾರ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. 

ಕೋವಿಡ್‌ ಮೃತ ಕುಟುಂಬಗಳಿಗೆ ಇನ್ನೂ ದೊರಕದ ಪೂರ್ಣ ಪರಿಹಾರ

ಶಾಸನಗಳ ಸಂರಕ್ಷಣೆಯ ಅರಿವು ಬಂದಾಗಿನಿಂದ ಪಡಿಯಚ್ಚು ಮೂಲಕವೇ ಶಿಲಾ ಶಾಸನಗಳನ್ನು ಓದಲಾಗುತ್ತಿದೆ. ಇದೀಗ ದೇಶದಲ್ಲಿ ಇದೇ ಮೊದಲ ಬಾರಿಗೆ 3ಡಿ ಡಿಜಿಟಲ್‌ ಸಂರಕ್ಷಣೆ ಮೂಲಕ ಶಿಲಾ ಶಾಸನಗಳನ್ನು ಸಂರಕ್ಷಿಸುವ ಯೋಜನೆಗೆ ಆರಂಭಿಸಿದ್ದೇವೆ. ದೇಶದೆಲ್ಲೆಡೆ ಇಂತದ್ದೇ ಯೋಜನೆ ಪ್ರಾರಂಭಗೊಂಡರೆ ಐತಿಹಾಸಿ ಹಿನ್ನೆಲೆಯುಳ್ಳ ಲಕ್ಷಾಂತರ ಶಿಲಾ ಶಾಸನಗಳನ್ನು ಶಾಶ್ವತವಾಗಿ ಸಂರಕ್ಷಿಸಬಹುದು.
-ಪಿ.ಎಲ್‌.ಉದಯಕುಮಾರ್‌, ಯೋಜನಾ ನಿರ್ದೇಶಕ, ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣಾ ಯೋಜನೆ

click me!