ಬಹುತೇಕ 2014 ರಲ್ಲೇ ಕಾಂಗ್ರೆಸ್‌ನ ಅಂತ್ಯದ ಆರಂಭ ಆಗಿತ್ತು. ಈಗ ಆ ಅಂತ್ಯದ ಅಂತ್ಯ ಹತ್ತಿರ ಬರುತ್ತಿದೆ ಅನ್ನಿಸತೊಡಗಿದೆ. ಆಕರ್ಷಣೆಯಿಲ್ಲದ ಗಾಂಧಿ ಪರಿವಾರ ಹಾಗೆ ನೋಡಿದರೆ ಕಾಂಗ್ರೆಸ್‌ನಿಂದ ಬಿಜೆಪಿವರೆಗೆ ಆಮ್ ಆದ್ಮಿ ಪಾರ್ಟಿಯಿಂದ ಎಡ ಪಕ್ಷಗಳವರೆಗೆ ಭಾರತದ ಯಾವುದೇ ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ.
ದೇಶವನ್ನು 70 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ಗೆ ಇನ್ನು ಭವಿಷ್ಯ ಇಲ್ಲ, ಅದು ಮುಳುಗುತ್ತಿರುವ ಹಡಗು ಎಂದು ಹಳ್ಳಿಯಲ್ಲಿ ಕುಳಿತಿರುವ ರೈತನಿಂದ ಹಿಡಿದು ಮೆಟ್ರೋಗಳಲ್ಲಿ ವಾಸಿಸುವ ಮಧ್ಯಮ ವರ್ಗದವರೆಗೆ ಎಲ್ಲರೂ ನಂಬತೊಡಗಿದ್ದಾರೆ. ಸರ್ಕಾರ ಇದ್ದಾಗ ಅಧಿಕಾರದ ಊಟ ಉಂಡ ವಂದಿ ಮಾಗಧರಿಂದ ಹಿಡಿದು ರಾಹುಲ್ ಗಾಂಧಿಯ ಮಿತ್ರರು ಎಂದು ಹೇಳಿಕೊಳ್ಳುತ್ತಿದ್ದ ಅಪ್ಪಂದಿರ ಮಕ್ಕಳವರೆಗೆ ಎಲ್ಲರಿಗೂ ಇದು ಅರ್ಥವಾಗಿ ಹಡಗಿನಿಂದ ಹೊರಗೆ ಹಾರುತ್ತಿದ್ದಾರೆ.
ಆದರೆ ಮಹಾತ್ಮ ಗಾಂಧಿ ಕಟ್ಟಿ ಬೆಳೆಸಿದ ಪಕ್ಷವನ್ನು ಸ್ವಂತ ಮಾಡಿಕೊಂಡ ಗಾಂಧಿ ಕುಟುಂಬಕ್ಕೆ ಮಾತ್ರ ಮುಳುಗುತ್ತಿರುವ ಹಡಗು ರಿಪೇರಿ ಮಾಡುವುದು ಹೇಗೆ ಎಂಬುದು ಅರ್ಥ ಆಗುತ್ತಿಲ್ಲ. 1977 ರಲ್ಲಿ ಸೋತಿದ್ದ ಕಾಂಗ್ರೆಸ್ಸನ್ನು ಇಂದಿರಾ ಗಾಂಧಿ ಮರಳಿ ತಂದರು. 1989 ರಲ್ಲಿ ಸೋತಿದ್ದ ಕಾಂಗ್ರೆಸ್‌ಗೆ ರಾಜೀವ್ ಗಾಂಧಿ ಹತ್ಯೆ ಮರಳಿ ಅಧಿಕಾರ ಕೊಡಿಸಿತು. 1998 ರಲ್ಲಿ ಸೋತಿದ್ದ ಕಾಂಗ್ರೆಸ್‌ಗೆ 2004 ರಲ್ಲಿ ಸೋನಿಯಾ ಗಾಂಧಿ ಮರುಜೀವ ಕೊಡಿಸಿದರು. ಆದರೆ ಮೋದಿ ಉಚ್ಛ್ರಾಯದ 8 ವರ್ಷಗಳ ನಂತರವೂ ಕಾಂಗ್ರೆಸ್ ಲೋಕಸಭೆಯಲ್ಲಿ ಬಿಡಿ ವಿಧಾನಸಭಾ ಚುನಾವಣೆಗಳಲ್ಲಿ ಕೂಡ ಜನರಿಗೆ ಬೇಡ ಅನ್ನಿಸುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಲ್ಲಿ ಆಮ್ ಆದ್ಮಿಗೆ ಅವಕಾಶ ಕೊಟ್ಟ ಜನ ಬಿಜೆಪಿ ವಿರುದ್ಧ ಸಿಟ್ಟು ಇದ್ದರೂ ಕಾಂಗ್ರೆಸ್ ಬೇಡ ಅಂದಿದ್ದಾರೆ. ಬಹುತೇಕ 2014 ರಲ್ಲೇ ಕಾಂಗ್ರೆಸ್‌ನ ಅಂತ್ಯದ ಆರಂಭ ಆಗಿತ್ತು.
ಈಗ ಆ ಅಂತ್ಯದ ಅಂತ್ಯ ಹತ್ತಿರ ಬರುತ್ತಿದೆ ಅನ್ನಿಸತೊಡಗಿದೆ. ಆಕರ್ಷಣೆಯಿಲ್ಲದ ಗಾಂಧಿ ಪರಿವಾರ ಹಾಗೆ ನೋಡಿದರೆ ಕಾಂಗ್ರೆಸ್‌ನಿಂದ ಬಿಜೆಪಿವರೆಗೆ ಆಮ್ ಆದ್ಮಿ ಪಾರ್ಟಿಯಿಂದ ಎಡ ಪಕ್ಷಗಳವರೆಗೆ ಭಾರತದ ಯಾವುದೇ ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಯಾರ ಕೈಯಲ್ಲಿ ಬಾರುಕೋಲು ಇರುತ್ತದೋ ಅವರದೇ ಚಾಟಿ ನಡೆಯುತ್ತದೆ. ಕಾಂಗ್ರೆಸ್‌ನಿಂದ ಹಿಡಿದು ರಾಷ್ಟ್ರವಾದಿ, ಡಿಎಂಕೆ, ಶಿವಸೇನೆ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಆರ್‌ಎಲ್‌ಡಿ, ಅಕಾಲಿದಳ, ವೈಎಸ್‌ಆರ್, ತೆಲಗು ದೇಶಮ್, ಟಿಆರ್‌ಎಸ್, ತೃಣಮೂಲ ಕಾಂಗ್ರೆಸ್, ಬಿಜು ಜನತಾ ದಳ, ಎಂಐಎಂವರೆಗೆ ಎಲ್ಲವೂ ಕುಟುಂಬ ಆಧಾರಿತ ಪಕ್ಷಗಳೇ. ಆದರೆ ೨೦೧೪ರಿಂದ ಹೇಗೋ ಏನೋ ಕಾಂಗ್ರೆಸ್ 70 ವರ್ಷ ಆಳಿದ್ದು ಸಾಕು, ಗಾಂಧಿ ಕುಟುಂಬದ ಯಜಮಾನಿಕೆಗೆ ಪ್ರಸ್ತುತತೆ ಇಲ್ಲ ಎಂಬ ಅನಿಸಿಕೆ ದೇಶದ ಹಳ್ಳಿ ಹಳ್ಳಿಗೂ ತಲುಪಿಬಿಟ್ಟಿದೆ.
ಮೋದಿ ಮತ್ತವರ ತಂಡ ಈ ವ್ಯವಸ್ಥಿತ ಪ್ರಚಾರದ ಹಿಂದೆ ಇದೆ ಎಂದು ಒಪ್ಪಿಕೊಂಡರೂ ಕೂಡ ಅದನ್ನು ತಡೆಯುವ ಶಕ್ತಿ, ಸಾಮರ್ಥ್ಯ, ಪ್ರತಿಭೆ, ಪರಿಶ್ರಮ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಪಂಡಿತ್ ನೆಹರು, ಇಂದಿರಾ, ರಾಜೀವ್‌ರಂತೆ ಲಕ್ಷಾಂತರ ಜನರನ್ನು ಸೆಳೆಯುವ ಸಾಮರ್ಥ್ಯ ಇವತ್ತಿನ ಗಾಂಧಿ ಪೀಳಿಗೆಗೆ ಇಲ್ಲ. ಎದುರುಗಡೆ ಇರುವ ಮೋದಿ, ಕೇಜ್ರಿವಾಲ್‌ರಂಥ ಚಾಣಾಕ್ಷರನ್ನು ಚಿತ್ ಮಾಡುವ ತಯಾರಿ ಮತ್ತು ಪರಿಶ್ರಮ ಕೂಡ ಗಾಂಧಿಗಳು ತೋರಿಸುತ್ತಿಲ್ಲ. ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡುವವನು ಸಹಜವಾಗಿ ಮಾಲಿಕನಾಗುತ್ತಾನೆ. ರಾಜಕಾರಣದಲ್ಲಿ ತನ್ನ ಹೆಸರಲ್ಲಿ ವೋಟು ಗಳಿಸುವವನೇ ರಾಜನಾಗುತ್ತಾನೆ. ಆದರೆ ಇವತ್ತಿನ ಗಾಂಧಿಗಳಿಗೆ ಆ ವೋಟು ಹಾಕಿಸುವ ಶಕ್ತಿ ಹೋಗಿದೆ. ಇದು ಗೊತ್ತಿದ್ದೇ ಕೆಲವರು ಬಂಡಾಯ ಏಳುತ್ತಿದ್ದರೆ, ಇನ್ನು ಕೆಲ ಅವಕಾಶವಾದಿಗಳು ಹೊಸ ಹಡಗು ಹತ್ತಿ ಅಧಿಕಾರ ಹಿಡಿಯುತ್ತಿದ್ದಾರೆ.
ಕಾಂಗ್ರೆಸ್ಸಿಗರ ಸಮಸ್ಯೆ ಏನು? ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಒಂದು ಬದಿಯಲ್ಲಿ ಪ್ರಪಾತ ಇದ್ದರೆ ಇನ್ನೊಂದು ಬದಿಯಲ್ಲಿ ಮೌಂಟ್ ಎವರೆಸ್ಟ್ ಇದೆ. ಒಂದನ್ನು ಹತ್ತುವುದಕ್ಕೆ ಪ್ರತಿಭೆ ಮತ್ತು ಪರಿಶ್ರಮ ಬೇಕು. ಪ್ರಪಾತದಲ್ಲಿ ಒಮ್ಮೆ ಜಾರಿದರೆ ಹತ್ತುವುದು ಕಷ್ಟ. ಬಿಜೆಪಿಯನ್ನು ಹೇಗೆ ಸಂಘದ ಹಿಡಿತ ಇಲ್ಲದೆ ಏಕ ಸೂತ್ರದಲ್ಲಿ ಹಿಡಿದಿಡುವುದು ಕಷ್ಟವೋ ಹಾಗೆಯೇ ಗಾಂಧಿ ಕುಟುಂಬದ ನೇತೃತ್ವ ಇಲ್ಲದೆ ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿಯುವುದು ಕಷ್ಟ. ಒಮ್ಮೆ ಹಾಗೆಯೇ ಗಾಂಧಿ ಕುಟುಂಬದ ಹೊರಗಿನವರು, ಉದಾಹರಣೆಗೆ ಗುಲಾಂ ನಬಿ, ಮುಕುಲ್ ವಾಸ್ನಿಕ್, ಕಮಲನಾಥರನ್ನು ಅಧ್ಯಕ್ಷ ಮಾಡಿಯೇಬಿಟ್ಟರು ಅಂದುಕೊಳ್ಳೋಣ. ಆಗ ಒಬ್ಬರ ಮಾತು ಒಬ್ಬರು ಕೇಳೋದಿಲ್ಲ. ಪರಿಣಾಮ, ಪಕ್ಷ ರಾಜ್ಯವಾರು ಒಡೆಯುವ ಸಾಧ್ಯತೆ ಹೆಚ್ಚು.
ಹಾಗೆಂದು ಗಾಂಧಿಗಳ ಕೈಗೆ ಕಮಾನು ಕೊಟ್ಟರೆ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಮೋದಿ, ಯೋಗಿ, ಅಮಿತ್ ಶಾ ಎದುರು ಪೇಲವವಾಗಿ ಕಾಣುತ್ತಿದ್ದಾರೆ, ಜೊತೆಗೆ ಅಣ್ಣ ತಂಗಿ ಹೆಸರಲ್ಲಿ ವೋಟು ಕೂಡ ಬೀಳುತ್ತಿಲ್ಲ. ರಾಹುಲ್ ಗಾಂಧಿ ಸಮಸ್ಯೆ ಏನು? ಕಾಂಗ್ರೆಸ್‌ನ ಇವತ್ತಿನ ಸ್ಥಿತಿಗೆ ವಂಶವಾದ, ಚಮಚಾಗಿರಿ, ಹೈಕಮಾಂಡ್ ಸಂಸ್ಕೃತಿ ಕಾರಣ ಎಂದು ವಿಶ್ಲೇಷಣೆ ಮಾಡಿದರೂ ಕೂಡ ಅವೆಲ್ಲ ಇಂದಿರಾ ಕಾಲದಿಂದ ಅಂದರೆ 1967 ರಿಂದಲೇ ಆರಂಭ ಆಗಿತ್ತು. ಅದಾದ ಮೇಲೂ ಕಾಂಗ್ರೆಸ್ ಅದನ್ನೇ ಮಾಡುತ್ತಾ ಅಧಿಕಾರ ಗಳಿಸಿ ಅನುಭವಿಸಿದೆ. ಆದರೆ ಈಗಿನ ಕಾಂಗ್ರೆಸ್‌ಗೆ ಐಡಿಯಾ ಇಲ್ಲ, ಐಡಿಯಾಲಜಿ ಕೂಡ ಇಲ್ಲ. ನರೇಂದ್ರ ಮೋದಿಗೆ ಆರ್‌ಎಸ್‌ಎಸ್‌ನ ಐಡಿಯಾಲಜಿ ಇದೆ ಮತ್ತು ಸ್ವತಃ ಸಾಕಷ್ಟು ಹೊಸ ಐಡಿಯಾಗಳಿವೆ. ಕೇಜ್ರಿವಾಲ್‌ಗೆ ಪಕ್ಕಾ ಐಡಿಯಾಲಜಿ ಏನೂ ಇಲ್ಲ, ಆದರೆ ಆಡಳಿತ ಸುಧಾರಣೆಯ ಒಳ್ಳೆ ಐಡಿಯಾಗಳಿವೆ.
ಅಧಿಕಾರ ಸಿಕ್ಕಾಗ ಅದನ್ನು ಜಾರಿಗೊಳಿಸುವ ಸಾಮರ್ಥ್ಯ ಕೂಡ ಇದೆ. ಆದರೆ ರಾಹುಲ್‌ಗೆ ಆ ರೀತಿಯ ಐಡಿಯಾಗಳೂ ಇಲ್ಲ, ಪಕ್ಕಾ ಐಡಿಯಾಲಜಿ ಕೂಡ ಇಲ್ಲ. ಬರೀ ಮೋದಿಯನ್ನು ಏನಕೇನ ವಿರೋಧಿಸುವುದು ವಿಚಾರಧಾರೆ ಅನ್ನಿಸಿಕೊಳ್ಳುವುದಿಲ್ಲ. ಮನಸ್ಸು ಬಂದಾಗ ಜಾತ್ಯತೀತತೆ, ನಾಗರಿಕ ಕಾಯಿದೆಗೆ ವಿರೋಧ, ಆರ್ಟಿಕಲ್ 370 ಕ್ಕೆ, ತ್ರಿವಳಿ ತಲಾಖ್‌ಗೆ, ಹಿಜಾಬ್‌ಗೆ ಬೆಂಬಲ, ಇನ್ನೊಮ್ಮೆ ಸಾಫ್ಟ್ ಹಿಂದುತ್ವ, ಮಂದಿರಗಳ ಪ್ರವಾಸ, ಶಿವಸೇನೆ ಜೊತೆ ಮೈತ್ರಿ, ನಾನು ಜನಿವಾರಧಾರಿ ಬ್ರಾಹ್ಮಣ ಎನ್ನುವುದು ಹೀಗೆ ಹತ್ತಾರು ವೈರುಧ್ಯಗಳನ್ನು ತೋರಿಸುವುದರಿಂದಲೇ ರಾಹುಲ್ ಗಾಂಧಿ ರಾಜಕೀಯಕ್ಕೆ ಬಂದು 18 ವರ್ಷಗಳಾದರೂ ಕೂಡ ಜನಮಾನಸದ ಪ್ರೀತಿ ಗಳಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ವಿಧಾನಸಭಾ ಚುನಾವಣೆಯಲ್ಲಿ 38 ರಿಂದ 40 ಪ್ರತಿಶತ ವೋಟು ಗಳಿಸುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಮಾತ್ರ 50ರ ಆಸುಪಾಸು ತಲುಪುತ್ತದೆ.
ಇದಕ್ಕೆ ಪ್ರಮುಖ ಕಾರಣ ಮೋದಿ ವರ್ಸಸ್ ರಾಹುಲ್ ಸೆಣಸಾಟದಲ್ಲಿ ಮೋದಿಯ ವರ್ಚಸ್ಸಿನ ಮುಂದೆ ರಾಹುಲ್ ಕಳಾಹೀನರಾಗಿ ಕಾಣುವುದು. ಕಳೆದ ೮ ವರ್ಷಗಳ ಚುನಾವಣೆಯಲ್ಲಿ ವೋಟು ಸೀಟು ಅಂತರ ನೋಡಿದರೆ ಮೋದಿ ಎದುರು ರಾಹುಲ್ ಸಾಕಾಗುತ್ತಿಲ್ಲ. ಮಮತಾ, ಕೇಜ್ರಿವಾಲ್, ನವೀನ್ ಪಟ್ನಾಯಕ್, ಸ್ಟಾಲಿನ್, ಜಗನ್ ರೆಡ್ಡಿ, ಶರದ್ ಪವಾರ್ ಬಿಜೆಪಿ ಎದುರು ಗೆಲ್ಲಬಹುದಾದರೆ, ಕಾಂಗ್ರೆಸ್ ಮತ್ತು ರಾಹುಲ್‌ಗೆ ಯಾಕೆ ಸಾಧ್ಯ ಆಗುತ್ತಿಲ್ಲ ಎಂಬ ಪ್ರಶ್ನೆಯಲ್ಲೇ ಉತ್ತರವಿದೆ. ಅತಿಯಾದ ತುಷ್ಟೀಕರಣದ ಫಲ ಹಾಗೆ ನೋಡಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಆರ್ಥಿಕ ನೀತಿಗಳಲ್ಲಿ ದೊಡ್ಡ ಅಂತರಗಳಿಲ್ಲ. ಎರಡೂ ಪಕ್ಷಗಳು ದೊಡ್ಡ ಬಂಡವಾಳ ಆಕರ್ಷಿಸುತ್ತಲೇ ಬಡವರ ನೀತಿ ರೂಪಿಸುವಾಗ ಎಡದತ್ತ ಹೆಚ್ಚು ವಾಲುತ್ತವೆ.
ಭಾರತದಂಥ ಬಡತನ ಜಾಸ್ತಿ ಇರುವ ದೇಶದಲ್ಲಿ ಇದು ಅನಿವಾರ್ಯ ಕೂಡ ಹೌದು. ಆದರೆ 2004 ರಿಂದ 2014 ರ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಹೆಸರು ಕೆಡಿಸಿಕೊಂಡಿತು ಮತ್ತು ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಹಚ್ಚಿಕೊಂಡಿತು. 2001 ರ ಅಮೆರಿಕದ ಮೇಲಿನ ಅಲ್‌ಖೈದಾ ದಾಳಿ, 2002 ರ ಗುಜರಾತ್ ಘಟನೆಗಳು ಮತ್ತು ತಾಲಿಬಾನ್ ಐಸಿಸ್‌ಗಳ ಅತಿರೇಕದ ನಂತರ ಹಿಂದೂಗಳಲ್ಲಿ ಇಸ್ಲಾಮ್ ಫೋಬಿಯಾ ಜಾಸ್ತಿ ಆಗುತ್ತಿರುವಾಗಲೇ ಕಾಂಗ್ರೆಸ್ ಇನ್ನಷ್ಟು ಜಾಸ್ತಿ ಮುಸ್ಲಿಂ ತುಷ್ಟೀಕರಣ ದಲ್ಲಿ ಮುಳುಗಿದ್ದು ಕೂಡ ಇವತ್ತಿನ ಪಕ್ಷದ ಸ್ಥಿತಿಗೆ ಪ್ರಮುಖ ಕಾರಣ. ಜೆಎನ್‌ಯುನ ಕೆಲ ಮಾಜಿ ಕಮ್ಯುನಿಸ್ಟರನ್ನು ತನ್ನ ಸಲಹೆಗಾರನಾಗಿ ಇಟ್ಟುಕೊಂಡ ಕಾರಣದಿಂದಲೇ ಅಲ್ಲವೇ ರಾಹುಲ್ ಗಾಂಧಿ ‘ಭಾರತ್ ತೇರೆ ತುಕಡೆ ಹೊಂಗೆ ಇನ್‌ಶಾ ಅಲ್ಲಾ’ ಎಂದು ಕೂಗಿದವರ ದನಿಗೆ ದನಿಗೂಡಿಸಿದ್ದು.
ಹಿಂದುಗಳ ಧ್ರುವೀಕರಣ ಬಿಜೆಪಿ ಪರವಾಗಿ ಆಗುತ್ತಿರುವುದು ಬಹುತೇಕ ಇವೆಲ್ಲ ಕಾರಣಗಳಿಂದ. ಮೋದಿ ಮತ್ತು ಆರ್‌ಎಸ್‌ಎಸ್ ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಮಾತು, ನೀತಿ, ವಿಚಾರಗಳನ್ನು ಜನರಿಗೆ ನೇರವಾಗಿ ತಲುಪಿಸುವುದು ಒಂದು ಕಲೆ. ಅದಕ್ಕೆ ಗಟ್ಟಿ ನಾಯಕತ್ವ ಬೇಕು, ಬೇರು ಆಳದಲ್ಲಿ ಬಿಟ್ಟಿರುವ ಸಂಘಟನೆ ಬೇಕು. ಕಾಂಗ್ರೆಸ್‌ಗೆ ಇವೆರಡೂ ಇಲ್ಲ. ಮೋದಿ ಎದುರು ರಾಹುಲ್ ಸಾಕಾಗುತ್ತಿಲ್ಲ. ಆರ್‌ಎಸ್‌ಎಸ್ ಎದುರು ಕಾಂಗ್ರೆಸ್ ಸಂಘಟನೆ ಯಾವುದಕ್ಕೂ ಸರಿಸಾಟಿ ಅಲ್ಲ. ಮೋದಿ ಬಳಿ ನೀತಿ, ವಿಚಾರಧಾರೆ, ದುಡ್ಡು, ಸಂಘಟನೆ, ಜಾಲ, ಪರಿಶ್ರಮ ಎಲ್ಲವೂ ಇದೆ. ಅದನ್ನು ಎದುರಿಸಿ ರಾಹುಲ್ ಚುನಾವಣೆ ಗೆಲ್ಲೋದು ಇವತ್ತಿನ ಸ್ಥಿತಿಯಲ್ಲಿ ಸುಲಭವಿಲ್ಲ.
ಕೈಕೊಡುತ್ತಿರುವ ವಂದಿ ಮಾಗಧರು ಬಹುಪರಾಕ್ ಹೇಳೋದು, ಚಮಚಾಗಿರಿ ಮತ್ತು ಬೆನ್ನಿಗೆ ಚೂರಿ ಭಾರತೀಯ ರಾಜಕಾರಣದಲ್ಲಿ ಹಾಸುಹೊಕ್ಕಾಗಿದೆ. ಇಂದಿರಾ ಅಂದರೆ ಇಂಡಿಯಾ ಎನ್ನುತ್ತಿದ್ದ ದೇವಕಾಂತ ಬರುವಾ ಅದಾದ ಒಂದು ವರ್ಷದಲ್ಲಿ ಶಾ ಆಯೋಗದ ಎದುರು ಇಂದಿರಾ ವಿರುದ್ಧ ಹೇಳಿಕೆ ನೀಡಿ ಬಂದಿದ್ದರು. ಅವ್ಯಾಹತ ಅಧಿಕಾರ ಅನುಭವಿಸಿದ ಗುಲಾಂ ನಬಿ, ಕಪಿಲ್ ಸಿಬಲ್, ಆನಂದ ಶರ್ಮ, ಭೂಪಿಂದರ್ ಹೂಡಾ ತರಹದವರು ತಿರುಗಿ ಬಿದ್ದು, ರಾಹುಲ್‌ರ ಮಿತ್ರರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಆರ್‌ಪಿಎನ್ ಸಿಂಗ್, ಜಿತಿನ್ ಪ್ರಸಾದ್ ೧೦ ವರ್ಷ ಮಳೆಗಾಲ ಅನುಭವಿಸಿ ಈಗ ಕಾಂಗ್ರೆಸ್‌ಗೆ ಬರಗಾಲ ಇದ್ದಾಗ ಬಿಜೆಪಿಗೆ ಗುಳೆ ಹೋಗಿದ್ದಾರೆ. ಜಿ-೨೩ಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಬಿಟ್ಟರೆ ಉಳಿದ ಯಾರಿಗೂ ಜನಮಾನಸದ ಜೊತೆ ಸಂಬಂಧಗಳು ಇಲ್ಲ, ಸಂಪರ್ಕವೂ ಇಲ್ಲ. ಆದರೆ ಒಳಗಿನವರು ಮಾಡುತ್ತಿರುವ ಶಬ್ದ ಮತ್ತು ಹೊರಗಿನವರು ಕೊಡುತ್ತಿರುವ ಉಳಿ ಪೆಟ್ಟು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಹೈರಾಣ ಮಾಡುತ್ತಿವೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
-