17 ಬೆಳೆಗಳ ಬೆಂಬಲ ಬೆಲೆ ಏರಿಸಿ: ಮೋದಿಗೆ ಸಿದ್ದು ಪತ್ರ

By Kannadaprabha NewsFirst Published Jun 8, 2020, 9:43 AM IST
Highlights

17 ಬೆಳೆಗಳ ಬೆಂಬಲ ಬೆಲೆ ಏರಿಸಿ: ಮೋದಿಗೆ ಸಿದ್ದು ಪತ್ರ | ಕೇಂದ್ರ ನಿಗದಿಪಡಿಸಿದ ಬೆಲೆ ವಾಸ್ತವಕ್ಕೆ ಹತ್ತಿರವಾಗಿಲ್ಲ | ರೈತರ ಎಲ್ಲ ಖರ್ಚು ಪರಿಗಣಿಸಿ ಬೆಂಬಲ ಬೆಲೆ ಪರಿಷ್ಕರಿಸಿ

ಬೆಂಗಳೂರು (ಜೂ. 08):  ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅನುಮೋದಿಸಿರುವ ರೈತರ 17 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವಾಸ್ತವಕ್ಕೆ ಹತ್ತಿರವಾಗಿಲ್ಲ. ಹೀಗಾಗಿ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಪರಿಷ್ಕೃತ ಮಾನದಂಡದೊಂದಿಗೆ ದರ ನಿಗದಿ ಮಾಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿಗೆ ಬರೆದ ಪತ್ರದಲ್ಲಿ 2022-23ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಿರಿ. ಆದರೆ, ನೀವು ಕೃಷಿ ಚಟುವಟಿಕೆ ಹಾಗೂ ರೈತರಿಗೆ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಅದಕ್ಕೆ ಪೂರಕವಾಗಿಲ್ಲ. ಬದಲಿಗೆ ರೈತರನ್ನು ಮತ್ತಷ್ಟುಕಷ್ಟಗಳಿಗೆ ತಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Latest Videos

ಕನಿಷ್ಟ ಬೆಂಬಲ ಬೆಲೆ ನಿಗದಿಗೆ ರೈತಸಂಘ ಆಗ್ರಹ

2018-19ನೇ ಬಜೆಟ್‌ನಲ್ಲಿ ರೈತರಿಗೆ ಬೆಳೆ ಬೆಳೆಯಲು ತಗಲುವ ವೆಚ್ಚದ 1.5 ರಷ್ಟುಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದಿರಿ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಪಿಸಿ) ಇದಕ್ಕೆ ತಕ್ಕನಾದ ಮಾನದಂಡ ಅನುಸರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿಲ್ಲ.

ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ವೇಳೆ ಸಿ-2 ಮಾನದಂಡದ ಪ್ರಕಾರ ಕೇವಲ ಕೃಷಿ ವೆಚ್ಚ ಮಾತ್ರವಲ್ಲದೆ ಹೊಲದಲ್ಲಿ ದುಡಿಯುವ ಕುಟುಂಬ ಸದಸ್ಯರ ಕೂಲಿ, ನೆಲದ ಬಾಡಿಗೆ, ಬಂಡವಾಳದ ಮೇಲಿನ ಬಡ್ಡಿ ಸೇರಿ ಪ್ರತಿಯೊಂದನ್ನೂ ಗಣನೆಗೆ ತೆಗೆದುಕೊಂಡು ಉತ್ಪಾದನಾ ವೆಚ್ಚ ಅಂದಾಜಿಸಬೇಕು. ಇದರಂತೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಉದಾಹರಣೆಗೆ ಆಯೋಗದ ಶಿಫಾರಸಿನ ಪ್ರಕಾರ ಕಡಲೆಕಾಯಿ ಬೆಳೆಯಲು ಆಗುವ ವೆಚ್ಚ 3,515 ರು. ಹಾಗೂ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ 5,275 ರು. ಆದರೆ ಕಡಲೆಕಾಯಿ ಬೆಳೆಯಲು ಉತ್ಪಾದನೆ ವೆಚ್ಚವೇ 6,509ರಷ್ಟಾಗುತ್ತದೆ. ಕೇಂದ್ರ ಘೋಷಿಸಿದಂತೆ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಷಿಸುವುದಾದರೆ ಪ್ರತಿ ಕ್ವಿಂಟಲ್‌ಗೆ 9,763 ರು. ನೀಡಬೇಕು. ಹೀಗಾಗಿ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾನದಂಡವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

click me!