ಕಾಡಿಗೆ ಬೆಂಕಿ ಬಿದ್ದ ಕ್ಷಣದಲ್ಲೇ ಉಪಗ್ರಹದಿಂದ ಸಂದೇಶ!

By Web Desk  |  First Published Dec 2, 2019, 8:48 AM IST

ಕಾಡಿಗೆ ಬೆಂಕಿ ಬಿದ್ದ ಕ್ಷಣದಲ್ಲೇ ಉಪಗ್ರಹದಿಂದ ಸಂದೇಶ!| ಅರಣ್ಯಾಧಿಕಾರಿಗಳ ಮೊಬೈಲ್‌ಗೆ ಫಟಾಫಟ್‌ ವಿವರ ರವಾನೆ| 24*7 ಅರಣ್ಯ ಬೆಂಕಿ ಉಸ್ತುವಾರಿ, ವಿಶ್ಲೇಷಣಾ ಕೋಶ ಸ್ಥಾಪನೆ


ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು[ಡಿ.02]: ಉಪಗ್ರಹದ ನೆರವಿನೊಂದಿಗೆ ಅಭಯಾರಣ್ಯಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಬಗ್ಗೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಬೆಂಕಿ ನಂದಿಸಲು ಕ್ರಮ ಕೈಗೊಳ್ಳುವುದಕ್ಕೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯು ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದಲ್ಲಿ (ಕೆಎಸ್‌ಆರ್‌ಎಸ್‌ಎಸಿ) ಪ್ರತ್ಯೇಕ ಘಟಕ ಪ್ರಾರಂಭಿಸಿದೆ.

Latest Videos

undefined

ಬಂಡೀಪುರ ಅಭಯಾರಣ್ಯದಲ್ಲಿ ಮಾಚ್‌ರ್‍ ತಿಂಗಳಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚಿನಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಈಗ ಕೆಎಸ್‌ಆರ್‌ಎಸ್‌ಎಸಿಯ ಸಹಭಾಗಿತ್ವದಲ್ಲಿ ‘ಅರಣ್ಯ ಬೆಂಕಿ ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶ’ ಪ್ರಾರಂಭಿಸಿದೆ. ಈ ಕೋಶವು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಆ ಸ್ಥಳದ ಮಾಹಿತಿಯನ್ನು ಸಂಬಂಧಪಟ್ಟಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ರವಾನಿಸಿ ಎಚ್ಚರಿಸಲಿದೆ.

ರಾಜ್ಯದ ರಾಜ್ಯದ ಎಲ್ಲ ಭಾಗಗಳ ಅರಣ್ಯ ಪ್ರದೇಶದ ವ್ಯಾಪ್ತಿ, ಸರ್ವೇ ನಂಬರ್‌ಗಳ ವಿವರ, ಅರಣ್ಯದಂಚಿನಲ್ಲಿರುವ ಗ್ರಾಮಗಳ ನಕ್ಷೆಗಳ ಮಾಹಿತಿ ಕೆಎಸ್‌ಆರ್‌ಎಸ್‌ಎಸಿಯಲ್ಲಿದೆ. ಜೊತೆಗೆ, ಈ ಘಟಕದಲ್ಲಿ ಅರಣ್ಯದಲ್ಲಿನ ಉಷ್ಣಾಂಶ ಹೆಚ್ಚಾಗಿರುವ ಭಾಗಗಳನ್ನೂ ಪತ್ತೆ ಹಚ್ಚಬಹುದು. ಅಲ್ಲದೆ, ಬೆಂಕಿ ಕಾಣಿಸಿಕೊಳ್ಳುವ ಪ್ರದೇಶಗಳನ್ನು ಸುಲಭವಾಗಿ ಗುರುತಿಸಬಹುದು ಎಂದು ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್‌ ಮೋಹನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಹೈದ್ರಾಬಾದ್‌ನಲ್ಲಿರುವ ಇಸ್ರೋ ಕೇಂದ್ರದ ನೆರವಿನಿಂದ ಸ್ಯಾಟಲೈಟ್‌ನಿಂದ ಚಿತ್ರಗಳನ್ನು ಪಡೆದುಕೊಳ್ಳಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರದ ಸಂಸ್ಥೆಯಾದ ಫಾರೆಸ್ಟ್‌ ಸರ್ವೇ ಆಫ್‌ ಇಂಡಿಯಾ (ಎಫ್‌ಎಸ್‌ಐ) ಬೆಂಕಿ ಕಾಣಿಸಿಕೊಳ್ಳುವ ಕುರಿತು ಪ್ರತಿ ದಿನ ಮಾಹಿತಿ ನೀಡುತ್ತಿದೆ. ಈ ಎಲ್ಲ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳದಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಈ ಘಟಕದಲ್ಲಿ ಅರಣ್ಯದಲ್ಲಿನ ಬೆಂಕಿ ರೇಖೆಗಳನ್ನು ಪತ್ತೆ ಹಚ್ಚಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯದ ಯಾವ ಭಾಗದಲ್ಲಿ ಬೆಂಕಿ ರೇಖೆಗಳು (ಫೈರ್‌ ಲೈನ್‌) ಕಡಿಮೆ ಎಂಬುದನ್ನು ಪರಿಶೀಲಿಸಲು ಅವಕಾಶವಿದೆ. ಈ ಅಂಶ ಆಧರಿಸಿ ಬೆಂಕಿ ರೇಖೆಗಳನ್ನು ವಿಸ್ತರಿಸಬಹುದು ಎಂದರು.

ಜಿಐಎಸ್‌ ಮೂಲಕ ದತ್ತಾಂಶ ಸಂಗ್ರಹ:

ಅರಣ್ಯ ಇಲಾಖೆ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಭಾಗಗಳ ಕುರಿತು ಮಾಹಿತಿಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮೂಲಕ ಸಂಗ್ರಹಿಸಲಾಗಿದೆ. ಇದರಿಂದ ಸರ್ವೇ ಸಂಖ್ಯೆಯ ಆಧಾರದಲ್ಲಿ ಅರಣ್ಯ ವ್ಯಾಪ್ತಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆ ಜೊತೆಗೆ ಹಂಚಿಕೊಳ್ಳಲಾಗುವುದು. ಆ ಮೂಲಕ ಅರಣ್ಯದಲ್ಲಿ ಕಾಣಿಸಿಕೊಳ್ಳುವ ಬೆಂಕಿ ನಂದಿಸಲು ಸುಲಭವಾಗುತ್ತದೆ ಎಂದು ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರ ನಿರ್ದೇಶಕ ಡಾ.ಡಿ.ಕೆ.ಪ್ರಭುರಾಜ್‌ ವಿವರಿಸಿದರು.

ಅರಣ್ಯ ಅಧಿಕಾರಿಗಳಿಗೆ ತರಬೇತಿ

ಕಾಳ್ಗಿಚ್ಚು ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶದ ಮಾಹಿತಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಬೆಂಗಳೂರು, ಕೊಡಗು ಚಾಮರಾಜನಗರದ ಅರಣ್ಯ ಸಂರಕ್ಷಣಾಧಿಕಾರಿಗಳು, ಬನ್ನೇರುಘಟ್ಟ, ಕಾವೇರಿ ವನ್ಯಜೀವಿ ಧಾಮ, ಬಂಡೀಪುರ, ಮಲೆಮಹದೇಶ್ವರ ವನ್ಯ ಜೀವಿಧಾಮ, ಬಿಳಿಗಿರಿ ರಂಗನಾಥಸ್ವಾಮಿ ವನ್ಯಜೀವಿ ಧಾಮ ಮತ್ತು ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೂರ ಸಂವೇದಿ ಘಟಕದ ಮಾಹಿತಿ ಆಧರಿಸಿ ಬೆಂಕಿ ಕಾಣಿಸಿಕೊಳ್ಳುವ ಸಂಬಂಧ ಸಂದೇಶ ರವಾನೆಯಾಗುತ್ತಿದ್ದಂತೆ ಕ್ರಮಕ್ಕೆ ಮುಂದಾಗಲು ಸೂಚನೆ ನೀಡಲಾಗುತ್ತಿದೆ ಎಂದು ಸಂಜಯ್‌ ಮೋಹನ್‌ ಹೇಳಿದ್ದಾರೆ.

ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಕಾಳ್ಗಿಚ್ಚು ಉಸ್ತುವಾರಿ ಮತ್ತು ವಿಶ್ಲೇಷಣಾ ಕೋಶವು ವರ್ಷದ ಎಲ್ಲ ದಿನವೂ ಕಾರ್ಯಾಚರಣೆ ನಡೆಸಲಿದೆ. ಅರಣ್ಯದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ಆ ಸ್ಥಳದ ಕುರಿತು ನಕ್ಷೆಯ ಲಿಂಕ್‌ನೊಂದಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಈ ನಕ್ಷೆಯನ್ನು ಆಧರಿಸಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಸಾಧ್ಯವಾಗುತ್ತದೆ ಎಂದು ಕೆಎಸ್‌ಆರ್‌ಎಸ್‌ಎಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

10 ಸಾವಿರ ಎಕರೆ ಅರಣ್ಯ ನಾಶ

ಕಳೆದ ಮಾಚ್‌ರ್‍ ತಿಂಗಳಲ್ಲಿ ಬಂಡೀಪುರದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚಿನಿಂದಾಗಿ ಸುಮಾರು 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿ ಬೆಂಕಿಗೆ ಆಹುತಿಯಾಗಿತ್ತು. ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಾಕಷ್ಟುಸಾಹಸಪಟ್ಟಿತ್ತು. ಅಂತಿಮವಾಗಿ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಂಕಿ ನಂದಿಸಲಾಗಿತ್ತು.

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!