2016ರಲ್ಲಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಪ್ರಸ್ತಾಪ ಸಲ್ಲಿಸಲಾಗಿತ್ತು. ಇದಕ್ಕೆ ಇದೀಗ ಅನುಮೋದನೆ ನೀಡಲಾಗಿದೆ.
ಬೆಂಗಳೂರು [ನ.01]: ಕೈಗಾರಿಕೆಗಳಲ್ಲಿನ ಸಿ ಮತ್ತು ಡಿ ವೃಂದದ ಹುದ್ದೆಗಳ ನೇಮಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಸಂಬಂಧ ಔದ್ಯೋಗಿಕ ನಿಯಮಾವಳಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ. 2016ರಲ್ಲಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಪ್ರಸ್ತಾಪ ಸಲ್ಲಿಸಲಾಗಿತ್ತು. ಇದಕ್ಕೆ ಇದೀಗ ಅನುಮೋದನೆ ನೀಡಲಾಗಿದೆ.
undefined
ಸಭೆಯ ನಂತರ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಅಂಗವಿಕಲರಿಗೆ ಶೇ.5ರಷ್ಟುಮೀಸಲಾತಿ ನೀಡಬೇಕು ಎಂಬುದನ್ನು ಸಹ ನಿಯಮಾವಳಿಯಲ್ಲಿ ಸೇರಿಸಲಾಗಿದೆ ಎಂದರು.
ರಾಜ್ಯದಲ್ಲಿನ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಕಡಮೆಯಾಗುತ್ತಿದ್ದು, ಅನ್ಯ ರಾಜ್ಯಗಳ ವಲಸಿಗರು ಹೆಚ್ಚಿನ ಪ್ರಮಾಣದ ಉದ್ಯೋಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳ ನೇಮಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಕುರಿತ ಈ ತಿದ್ದುಪಡಿಗೆ ನಿರ್ಧಾರ ಕೈಗೊಂಡಿರುವುದು ಮಹತ್ವ ಪಡೆದುಕೊಂಡಿದೆ.
ಮತ್ತೊಂದು ಜೊತೆ ಸಮವಸ್ತ್ರ ವಿತರಣೆ
ರಾಜ್ಯದಲ್ಲಿನ 37 ಲಕ್ಷ ವಿದ್ಯಾರ್ಥಿಗಳಿಗೆ ತಲಾ 250 ರು. ವೆಚ್ಚದಲ್ಲಿ ಮತ್ತೊಂದು ಜೊತೆ ಸಮವಸ್ತ್ರ ವಿತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಶೂ, ಬೆಲ್ಟ್ ಸೇರಿದಂತೆ ಇತರೆ ವಸ್ತುಗಳನ್ನು ನೀಡಲು 11.75 ಕೋಟಿ ರು. ಬಿಡುಗಡೆಗೆ ಸಮ್ಮತಿಸಲಾಗಿದೆ. ರಾಯಚೂರು, ಕೊಡಗು ಮತ್ತು ಕಾರವಾರ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 18 ಕೋಟಿ ರು. ನೀಡಲು ಒಪ್ಪಿಗೆ ಮತ್ತು ಚಾಮರಾಜನಗರ ಜಿಲ್ಲೆ ಗಾಳಿಪುರದ ಧೀನಬಂಧು ಟ್ರಸ್ಟ್‌ಗೆ 3 ಎಕರೆ ಭೂಮಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒಪ್ಪಿಗೆ ಸೂಚಿಸಲಾಗಿದೆ. 83 ಪಶು ವೈದ್ಯಕೀಯ ಸಹಾಯಕರು ಮತ್ತು 61 ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅಂತೆಯೇ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಎಂಜಿನಿಯರಿಂಗ್ ಹುದ್ದೆಗೆ ರಾಜ್ಯಮಟ್ಟದ ಸಮಿತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅದನ್ನು ಕೈಬಿಟ್ಟು ಇದೀಗ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರಸಕ್ತ ವರ್ಷಕ್ಕೆ 160 ಕೋಟಿ ರು. ನೀಡಲು ಮತ್ತು ಮೂರು ವರ್ಷಕ್ಕೆ 900 ಕೋಟಿ ರು. ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಮಾವಳ್ಳಿಪುರ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೇರಿದ 46 ಎಕರೆ ಪೈಕಿ 20 ಎಕರೆ ಭೂಮಿಯನ್ನು ಎನ್‌ಇಜಿ ಸಂಸ್ಥೆಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಗೆ 25 ವರ್ಷಕ್ಕೆ ಭೋಗ್ಯಕ್ಕೆ ನೀಡಲು ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.