ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಪುರುಷತ್ವ ಪರೀಕ್ಷೆಗೊಳಪಡಿಸಿದೆ. ಬೌರಿಂಗ್ ಆಸ್ಪತ್ರೆ ಆವರಣದಲ್ಲಿರುವ ಅಟಲ್ ಬಿಹಾರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಜ್ವಲ್ ಅವರಿಗೆ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ನಡೆದಿದೆ.
ಬೆಂಗಳೂರು (ಜೂ.06): ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಪುರುಷತ್ವ ಪರೀಕ್ಷೆಗೊಳಪಡಿಸಿದೆ. ಬೌರಿಂಗ್ ಆಸ್ಪತ್ರೆ ಆವರಣದಲ್ಲಿರುವ ಅಟಲ್ ಬಿಹಾರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಜ್ವಲ್ ಅವರಿಗೆ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ನಡೆದಿದೆ. ಈ ಪರೀಕ್ಷಾ ವರದಿ ಇನ್ನೊಂದು ವಾರದಲ್ಲಿ ಎಸ್‌ಐಟಿಗೆ ಸಲ್ಲಿಕೆಯಾಗ ಬಹದು ಎನ್ನಲಾಗಿದೆ.
ಈ ಪರೀಕ್ಷೆ ಸಂಬಂಧ ಪ್ರಜ್ವಲ್ ಅವರಿಂದ ವೀರ್ಯ, ರಕ್ತ ಮಾದರಿ ಸಂಗ್ರಹಿಸಲಾಗಿದೆ. ಇದಲ್ಲದೆ ಲೈಂಗಿಕ ಕ್ರಿಯೆ ನಡೆಸಲು ಸಾಮರ್ಥ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇತರೆ ವೈದ್ಯಕೀಯ ಪರೀಕ್ಷೆ ಸಹ ನಡೆದಿದೆ ಎನ್ನಲಾಗಿದೆ. ಪುರುಷತ್ವ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ಎಸ್‌ಐಟಿ ಅಧಿಕಾರಿಗಳು, ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಪ್ರಜ್ವಲ್ ಅವರನ್ನು ಭದ್ರತೆಯಲ್ಲಿ ಕರೆದೊಯ್ದರು. ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಅವರನ್ನು ಮತ್ತೆ ಸಿಐಡಿ ಕಚೇರಿಗೆ ಕರೆತಂದು ಎಸ್‌ಐಟಿ ವಿಚಾರಣೆಗೊಳಪಡಿಸಿದೆ.
ತಜ್ಞ ವೈದ್ಯರ ತಂಡ ರಚನೆ: ಎರಡು ದಿನಗಳ ಹಿಂದೆ ಪುರುಷತ್ವ ಪರೀಕ್ಷೆ ಸಲುವಾಗಿ ಬೌರಿಂಗ್ ಆಸ್ಪತ್ರೆಗೆ ಪ್ರಜ್ವಲ್ ಅವರನ್ನು ಎಸ್ ಐಟಿ ಕರೆದುಕೊಂಡು ಹೋಗಿತ್ತು. ಆದರೆ ಆ ವೇಳೆ ಎಸ್‌ಐಟಿ ಸೂಚಿಸಿದ ಕೆಲ ವೈದ್ಯಕೀಯ ಪರೀಕ್ಷೆಗಳಿಗೆ ಕಾನೂನು ತೊಡಕಿನ ಬಗ್ಗೆ ವೈದ್ಯರು ತಿಳಿಸಿದರು. ಕೊನೆಗೆ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ಪ್ರಜ್ವಲ್ ಅವರನ್ನು ಪುರುಷತ್ವ ಪರೀಕ್ಷೆಗೆ ಎಸ್‌ಐಟಿ ಕರೆದೊಯ್ದಿತು. ನ್ಯಾಯಾಲಯದ ಸಮ್ಮತಿ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆಗೆ ತಜ್ಞ ವೈದ್ಯರ ತಂಡವನ್ನು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರು ರಚಿಸಿದ್ದರು.
ಶಾಸಕ ಪ್ರದೀಪ್ ಈಶ್ವರ್ ಗೃಹ ಕಚೇರಿ ಮೇಲೆ ಕಲ್ಲುತೂರಾಟ: ಕಿಟಕಿಯ ಗಾಜು ಪುಡಿ ಪುಡಿ
ಇಂದು ನ್ಯಾಯಾಲಯಕ್ಕೆ ಹಾಜರು: ಎಸ್‌ಐಟಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮಾಜಿ ಸಂಸದ ಪ್ರಜ್ವಲ್ ಅವರನ್ನು ಅಧಿಕಾರಿಗಳು ಹಾರಜುಪಡಿಸಲಿದ್ದಾರೆ.