ಕೋವಿಡ್‌ನಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉಲ್ಬಣ..!

By Kannadaprabha News  |  First Published Oct 22, 2021, 12:25 PM IST

*   ಹಠ ಸ್ವಭಾವ, ಅಕ್ರಮಣಕಾರಿ ಮನೋಭಾವ, ಮನೆ ಬಿಟ್ಟು ಓಡಿ ಹೋಗಲು ಯತ್ನ
*   ಆಸ್ಪತ್ರೆಗಳಿಗೆ ತಡತಾಕುತ್ತಿರುವ ಪೋಷಕರು
*   ದೊಡ್ಡವರಲ್ಲೂ ಮಾನಸಿಕ ಸಮಸ್ಯೆ ಅಧಿಕ
 


ರಾಕೇಶ್‌ ಎನ್‌.ಎಸ್‌

ಬೆಂಗಳೂರು(ಅ.22):  ಮಹಾಮಾರಿ ಕೊರೋನಾ(Coronavirus) ಅಬ್ಬರ ಕಡಿಮೆಯಾಗುತ್ತಿರಬಹುದು. ಆದರೆ, ಮಕ್ಕಳಲ್ಲಿ(Children) ಮಾನಸಿಕ ಸಮಸ್ಯೆ(Psychological Problem) ಹಲವು ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿ(Karnataka) ಈವರೆಗೆ ಒಟ್ಟು 29.82 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದರೆ, ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿರುವ ಮಾನಸಿಕ ಆರೋಗ್ಯ ಸಮಾಲೋಚನೆಯಲ್ಲಿ ಈವರೆಗೆ 23.85 ಲಕ್ಷ ಮಂದಿ ಆಪ್ತ ಸಮಾಲೋಚನೆಗೆ ಒಳಪಟ್ಟಿದ್ದಾರೆ. ಖಾಸಗಿ ವೈದ್ಯರ ಜೊತೆ ನಡೆಸಿದ ಆಪ್ತ ಸಮಾಲೋಚನೆ ಲೆಕ್ಕ ಹಾಕಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

Tap to resize

Latest Videos

ಕೋವಿಡ್‌ ಪೂರ್ವ ಕಾಲಕ್ಕೆ ಹೋಲಿಸಿದರೆ ಮಾನಸಿಕ ಸಮಸ್ಯೆಗಳಿಂದಾಗಿ ವೈದ್ಯರನ್ನು(Doctors) ಸಂಪರ್ಕಿಸುವವರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಆತ್ಮಹತ್ಯೆಗೆ ಮುಂದಾಗುವುದು, ಗಾಯ ಮಾಡಿಕೊಳ್ಳುವುದು, ಮನೆ ಬಿಟ್ಟು ಓಡಿ ಹೋಗಲು ಪ್ರಯತ್ನಿಸುತ್ತಿರುವ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿವೆ. ಜೊತೆಗೆ ನಡವಳಿಕೆಯಲ್ಲಿ ನಾನಾ ರೀತಿಯ ಬದಲಾವಣೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ(Hospitals) ಮಕ್ಕಳನ್ನು ಕರೆದುಕೊಂಡು ಬರುವ ಪೋಷಕರ(Paretnts) ಸಂಖ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಉದಾಹರಣೆ ನೀಡಿದ ಯಲಹಂಕದ ಪೀಪಲ್‌ಟ್ರೀ ಆಸ್ಪತ್ರೆ ನಿರ್ದೇಶಕ ಡಾ. ಸತೀಶ್‌ರಾಮಯ್ಯ, 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮಧ್ಯ ರಾತ್ರಿ 1ರ ಹೊತ್ತಿಗೆ ಟೆರೇಸ್‌ಮೇಲೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಬಾಲಕ ಪ್ರಯತ್ನಿಸಿದ್ದ. ಆತನ ಮನೆಯವರೆಲ್ಲರೂ ವೈದ್ಯರು. ಕಳೆದ ಎರಡು ವರ್ಷಗಳಿಂದ ಮನೆಯಲ್ಲೇ ಇದ್ದ ಬಾಲಕ ಕೀಳರಿಮೆಯಿಂದ ಬಳಲುತ್ತಿದ್ದ ಎಂದು ಹೇಳುತ್ತಾರೆ.

ಮಕ್ಕಳ ನೆನಪಿನ ಶಕ್ತಿ ಚೆನ್ನಾಗಿರಬೇಕು ಎಂದಾದರೆ ಪುಸ್ತಕಗಳನ್ನು ತಪ್ಪಿಯೂ ಹೀಗೆ ಇಡಬೇಡಿ

5-10 ವರ್ಷ ವಯಸ್ಸಿನ ಮಕ್ಕಳಲ್ಲಿ ಕಿರಿಕಿರಿ, ಆಕ್ರಮಣಕಾರಿ ಮನೋಭಾವ, ದುಸ್ವಪ್ನ, ಭಾವನಾತ್ಮಕವಾಗಿ ಅತಿ ಅವಲಂಬನೆ, ಶಾಲೆಗೆ ಹೋಗಲು ಹಿಂಜರಿಯುವುದು, ಏಕಾಗ್ರತೆಯ ಕೊರತೆ, ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತಿವೆ. ಹದಿಹರೆಯದ ಮಕ್ಕಳಲ್ಲಿ ಅತಿ ಚಟುವಟಿಕೆ, ನಿದ್ದೆ ಮತ್ತು ತಿನ್ನುವ ಸಮಸ್ಯೆ, ಹಿಂಜರಿಕೆ, ಕೀಳರಿಮೆ, ತೂಕದ ಸಮಸ್ಯೆ, ಮಾನಸಿಕ ಸಂಘರ್ಷ, ಏಕಾಗ್ರತೆಯ ಸಮಸ್ಯೆ ಕಂಡುಬರುತ್ತಿದೆ ಎಂದು ಬನ್ನೇರುಘಟ್ಟರಸ್ತೆಯ ಫೋರ್ಟಿಸ್‌ ಆಸ್ಪತ್ರೆಗಳ(Fortis Hospital) ಮಕ್ಕಳ ಮನೋರೋಗ ಚಿಕಿತ್ಸಕಿ ಡಾ. ಮೇಘಾ ಮಹಾಜನ್‌ ಹೇಳುತ್ತಾರೆ.

ಎರಡು-ಮೂರು ಪಟ್ಟು ಹೆಚ್ಚು:

ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಪೂರ್ವದಲ್ಲಿ ಪ್ರತಿ ದಿನ 10ಕ್ಕೂ ಹೆಚ್ಚು ಮಕ್ಕಳು ಮಾನಸಿಕ ಆರೋಗ್ಯ ಸಂಬಂಧ ಚಿಕಿತ್ಸೆಗೆ(Treatment) ಬರುತ್ತಿದ್ದರೆ ಈಗ ಪ್ರತಿ ದಿನ 30-40 ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಲ್ಲಿನ ಮನೋವೈದ್ಯ ಡಾ. ವೆಂಕಟೇಶ್‌ ಬಾಬು ಹೇಳುತ್ತಾರೆ. ಮಣಿಪಾಲ ಆಸ್ಪತ್ರೆಯಲ್ಲಿ(Manipal Hospital) 2019ರಲ್ಲಿ ದಿನಕ್ಕೆ 40-50 ಮಾನಸಿಕ ಸಮಸ್ಯೆಯ ಪ್ರಕರಣ ಬರುತ್ತಿದ್ದರೆ, ಸದ್ಯ ಪ್ರತಿದಿನ 60-70 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ಮಾನಸಿಕ ಆರೋಗ್ಯಗಳ ಆಸ್ಪತ್ರೆ ಪೀಪಲ್ಸ್‌ಟ್ರೀ ಮಾರ್ಗದಲ್ಲಿ ಕೋವಿಡ್‌ ಪೂರ್ವದಲ್ಲಿ ಪ್ರತಿದಿನ 50-60 ಪ್ರಕರಣ ಬರುತ್ತಿದ್ದರೆ ಸದ್ಯ 120ರಿಂದ 150 ಪ್ರಕರಣ ಬರುತ್ತಿದೆ ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡುತ್ತಾರೆ.

ಆಪ್ತ ಸಮಾಲೋಚನೆ, ಚಿಕಿತ್ಸೆ

ನಿದ್ದೆಯ ತೀವ್ರ ಕೊರತೆ, ಆಕ್ರಮಣಕಾರಿ ಮನೋಭಾವ, ಸಾಯುವ ಬಯಕೆ, ಆತ್ಮಹತ್ಯೆಗೆ ಪ್ರಯತ್ನ, ಅಸಹಾಯಕತೆ, ಸ್ವಯಂ ಗಾಯ ಮಾಡಿಕೊಳ್ಳಲು ನೋಡುವುದು, ದುಶ್ಚಟಗಳ ಮೊರೆ ಹೋಗುವುದು ಮುಂತಾದವು ಮನೋರೋಗ ಉಲ್ಪಣಗೊಳ್ಳುತ್ತಿರುವ ಲಕ್ಷಣವಾಗಿದೆ. ಯಾವುದೇ ಮಾನಸಿಕ ತುಮುಲ ಅಥವಾ ಅಸಹಜ ವರ್ತನೆ ಒಂದು ವಾರಕ್ಕಿಂತ ಹೆಚ್ಚಿದ್ದರೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಗಂಭೀರ ಸ್ವರೂಪದ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಸಂಪರ್ಕಿಸಿ ಆಪ್ತ ಸಮಾಲೋಚನೆ(Counseling) ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಮನಃಶಾಸ್ತ್ರಜ್ಞರು(Psychologists) ಹೇಳುತ್ತಾರೆ.

ಕೊರೋನಾದಿಂದ ಮಕ್ಕಳು ಸದ್ಯಕ್ಕೆ ಸೇಫ್‌ ಝೋನ್‌ನಲ್ಲಿ : ಯಾರಿಗೂ ಪ್ರಾಣಾಪಾಯವಿಲ್ಲ

ಇತ್ತೀಚೆಗೆ ಆಸ್ಪತ್ರೆಗೆ ದೌಡಾಯಿಸುತ್ತಿರುವ ಕೋವಿಡ್‌ನಿಂದ ಗುಣಮುಖರಾದ ರೋಗಿಗಳಲ್ಲಿ ಶೇ.20ರಿಂದ ಶೇ.30 ಮಂದಿ ವಿವಿಧ ಮಾನಸಿಕ ತೊಂದರೆಗಳಿಂದ ಬಾಧಿತರಾಗಿರುವುದು ಕಂಡು ಬಂದಿದೆ. ಒಂದರಿಂದ ಐದನೇ ತರಗತಿ ಮಕ್ಕಳಲ್ಲಿ ಸಾಮಾಜಿಕ ಆತಂಕ ಹೆಚ್ಚು ಕಂಡುಬರುವ ಸಾಧ್ಯತೆಯಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮುಂಚಿತವಾಗಿ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು. ಈ ಹಿಂದೆ ಶಾಲೆಗೆ ಹೋಗುತ್ತಿದ್ದಾಗಿನ ಪ್ರಸಂಗಗಳನ್ನು, ಸ್ನೇಹಿತರನ್ನು ಪ್ರತಿದಿನ ನೆನಪು ಮಾಡಿಸಬೇಕು. ಮಕ್ಕಳಿಗೆ ಹಾಯ್‌, ಬೈ ಹೇಳುವುದನ್ನು ಕಲಿಸಿ ಕೊಡಬೇಕು. ಮನೆಗೆ ಹೊಸಬರು ಬಂದರೆ ಅವರೊಂದಿಗೆ ಬೆರೆಯಲು, ಮಾತನಾಡಲು ಪ್ರೋತ್ಸಾಹಿಸಬೇಕು ಎಂದು ಮಣಿಪಾಲ ಆಸ್ಪತ್ರೆ ಕನ್ಸಲ್ಟೆಂಟ್‌, ಕ್ಲಿನಿಕಲ್‌ಸೈಕಾಲಜಿ ಡಾ. ಸತೀಶ್‌ಕುಮಾರ್‌ ತಿಳಿಸಿದ್ದಾರೆ. 

ನಿದ್ದೆಯಲ್ಲಿ ವ್ಯತ್ಯಯ, ನಿದ್ದೆಯೇ ಬಾರದಿರುವುದು, ಊಟ ಸೇರದಿರುವುದು, ತೆಳ್ಳಗೆ ಆಗುವುದು, ಕೋಪ ಮಾಡಿಕೊಳ್ಳುವುದು, ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿರುವಂತೆ ವರ್ತಿಸುವುದು, ಸಾಮಾನ್ಯ ವರ್ತನೆಗಿಂತ ಭಿನ್ನ ವರ್ತನೆ ಕಂಡುಬಂದರೆ ಮಕ್ಕಳು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರ್ಥ. ಈವರೆಗೆ ಶಾಲೆಗೆ ಹೋಗದಿರುವ ಮಕ್ಕಳು ತಂದೆ ತಾಯಿಯನ್ನು ಬಿಟ್ಟು ಇರುವ ಬಗ್ಗೆ ಆತಂಕ ಹೊಂದಿರಬಹುದು. ಆದರೆ ಈಗಾಗಲೇ ಶಾಲೆಗೆ ಹೋಗಿರುವ ಮಕ್ಕಳ ಸಮಸ್ಯೆ ಭಿನ್ನವಾಗಿರುತ್ತದೆ ಎಂದು ಪೀಪಲ್ಸ್‌ಟ್ರೀ ಮಾರ್ಗ ಹಿರಿಯ ಮನೋವೈದ್ಯೆ ಡಾ. ದಿವ್ಯಾ ಗಣೇಶ್‌ನಲ್ಲೂರ್‌ ಹೇಳಿದ್ದಾರೆ. 

ಶಾಲೆ ಹೋಗುವ ಮಕ್ಕಳ ಬಗ್ಗೆ ಹೀಗೆ ಎಚ್ಚರ ವಹಿಸಿ

*ಮಕ್ಕಳ ಕಲಿಕೆಯ ಮಟ್ಟಗಮನಿಸಿ ವಿಶೇಷ ಗಮನ ನೀಡುವ ಅಗತ್ಯ ಇದ್ದರೆ ನೀಡಬೇಕು.
*9, 10 ಮತ್ತು ಪಿಯುಸಿ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದರೆ ಅವರನ್ನು ಈ ವರ್ಷ ಪರೀಕ್ಷೆ ಬರೆಸಬೇಡಿ.
*ಮಕ್ಕಳನ್ನು ಒಮ್ಮೆಗೆ 5-6 ಗಂಟೆ ಶಾಲೆಯಲ್ಲಿ ಬಿಡಬೇಡಿ.
*ಎರಡ್ಮೂರು ಗಂಟೆ ಅಥವಾ ವಾರದಲ್ಲಿ ಮೂರು ದಿನ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಿ.
*ಸಾಮಾಜಿಕ ವರ್ತನೆಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ
*ಓದು, ಬರಹದ ಒತ್ತಡ ಹೆಚ್ಚು ಹಾಕಬೇಡಿ
*ಆಕ್ರಮಣಕಾರಿ ಪ್ರವೃತ್ತಿ ಕಂಡುಬಂದರೆ ಆಪ್ತ ಸಮಾಲೋಚನೆಗೆ ಒಳಪಡಿಸಿ.
 

click me!