ಲೈಸನ್ಸ್‌, ಎಫ್‌ಸಿ ಇಲ್ಲದಿದ್ದರೂ ವಿಮಾ ಪರಿಹಾರ ನೀಡಿ: ಹೈಕೋರ್ಟ್‌

By Kannadaprabha News  |  First Published Oct 9, 2024, 6:00 AM IST

ಮುಂದಿನ ಎಂಟು ವಾರಗಳಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಆದೇಶಿಸಿದೆ. ಎಂದು ಇದೇ ವೇಳೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು 18 ಲಕ್ಷ ರು. ಹೆಚ್ಚಿಸಿ ಹೈಕೋರ್ಟ್ ಆದೇಶಿಸಿದೆ.


ಬೆಂಗಳೂರು(ಅ.09):  ಅಪಘಾತ ಉಂಟು ಮಾಡಿದ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರ (ಫಿಟೈಸ್ ಸರ್ಟಿಫಿಕೇಟ್) ಇಲ್ಲದಿದ್ದರೂ ಆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿರುವ ಕಂಪನಿಯು ಮೊದಲು ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಿ, ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. 

ಅಪಘಾತ ಉಂಟು ಮಾಡಿದ ಸರಕು ಸಾಗಣೆ ವಾಹನಕ್ಕೆ ಸದೃಢ ಪ್ರಮಾಣ ಪತ್ರ ಇಲ್ಲದಿದ್ದರೂ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ತನಗೆ ಸೂಚಿಸಿದ ಅಧೀನ ನ್ಯಾಯಾಲಯ ಆದೇಶ ರದ್ದು ಕೋರಿ ಶ್ರೀರಾಮ ಜನರಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರ ನ್ಯಾಯಪೀಠ ಈ ಆದೇಶ ನೀಡಿದೆ. 

Latest Videos

undefined

ಎಷ್ಟು ವರ್ಷ ಜನರ ಪ್ರಾಣ ತೆಗಿತೀರಿ: ಬೆಸ್ಕಾಂಗೆ ಹೈಕೋರ್ಟ್‌ ಕಿಡಿ

ಪ್ರಕರಣದ ವಿವರ: 

2013ರ ಜೂ.17ರಂದು ಹೊಸ ಕೋಟೆ ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸೈಕಲ್ ಸವಾರ ನಂದೀಶಪ್ಪ ಎಂಬುವರಿಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಪ್ರಕ ರಣದ ವಿಚಾರಣೆ ನಡೆಸಿದ್ದ ಅಧೀನ ಕೋರ್ಟ್‌ಮೃತನ ಕುಟುಂಬದವರಿಗೆ 13.88 ಲಕ್ಷ ರು. ಪರಿಹಾರ ನೀಡಲು ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿ ಸೂಚಿಸಿತ್ತು. 

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಕಂಪನಿ, ಅಪಘಾತ ಉಂಟು ಮಾಡಿರುವ ಸರಕು ಸಾಗಣೆ ವಾಹನಕ್ಕೆ ರಹದಾರಿ ಪರವಾನಿಗೆ ಮತ್ತು ಸದೃಢ ಪ್ರಮಾಣ ಪತ್ರವೇ ಚಾಲ್ತಿಯಲ್ಲಿ ಇರಲಿಲ್ಲ. ಈ ಪ್ರಮಾಣ ಪತ್ರ ನವೀಕರಣ ಮಾಡದಿರುವುದು ವಾಹನ ಮಾಲೀಕನ ತಪ್ಪು. ಇದರಿಂದ ಅವರೇ ಘಟನೆಯ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕಿದ್ದು, ಆ ಸಂಬಂಧ ಆದೇಶಿಸುವಂತೆ ಕೋರಿದರು.

ಮಸೀದಿ ಮುಂದೆ ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಿದರೆ ತಪ್ಪಲ್ಲ: ಹೈಕೋರ್ಟ್‌

ವಿಚಾರಣೆ ನಡೆಸಿದ ಹೈಕೋರ್ಟ್, ಸದೃಢ ಪ್ರಮಾಣ ಪತ್ರ ಮತ್ತು ನೋಂದಣಿ, ರಹದಾರಿ ಪರವಾನಗಿ ನವೀಕರಣ ಮಾಡದೆ ವಾಹನವನ್ನು ರಸ್ತೆಗಿಳಿಸಿರುವುದು ಮಾಲೀಕನ ತಪ್ಪು. ಆದರೆ, ಈ ಒಂದು ಕಾರಣಕ್ಕೆ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು. 

ಮುಂದಿನ ಎಂಟು ವಾರಗಳಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿ ಮಾಡಬೇಕು. ನಂತರ ಆ ಮೊತ್ತವನ್ನು ವಾಹನ ಮಾಲೀಕರಿಂದ ವಸೂಲಿ ಮಾಡಿಕೊಳ್ಳಬೇಕು ಆದೇಶಿಸಿದೆ. ಎಂದು ಇದೇ ವೇಳೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು 18 ಲಕ್ಷ ರು. ಹೆಚ್ಚಿಸಿ ಹೈಕೋರ್ಟ್ ಆದೇಶಿಸಿದೆ.

click me!