ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

By Kannadaprabha News  |  First Published Oct 17, 2022, 1:30 AM IST

ಮಲೆನಾಡು, ಕರಾವಳಿಯಲ್ಲಿ ಪ್ರತಿವರ್ಷ ಕಾಡುವ ಮಂಗನಕಾಯಿಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗುವ ಲಸಿಕೆಯಲ್ಲಿ ಭಾರಿ ಕೊರತೆ ಎದುರಾಗಲಿದೆ. ಸದ್ಯ ಸರ್ಕಾರದ ಬಳಿ ಯಾವುದೇ ವ್ಯಾಕ್ಸಿನ್‌ ಸಂಗ್ರಹವಿಲ್ಲ.


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಅ.17): ಮಲೆನಾಡು, ಕರಾವಳಿಯಲ್ಲಿ ಪ್ರತಿವರ್ಷ ಕಾಡುವ ಮಂಗನಕಾಯಿಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗುವ ಲಸಿಕೆಯಲ್ಲಿ ಭಾರಿ ಕೊರತೆ ಎದುರಾಗಲಿದೆ. ಸದ್ಯ ಸರ್ಕಾರದ ಬಳಿ ಯಾವುದೇ ವ್ಯಾಕ್ಸಿನ್‌ ಸಂಗ್ರಹವಿಲ್ಲ. ವೈರಸ್‌ನ್ನು ನಿಷ್ಕ್ರಿಯಗೊಳಿಸಿ ವ್ಯಾಕ್ಸಿನ್‌ ತಯಾರಿಸುವ ಸಾಂಪ್ರದಾಯಿಕ ಪದ್ಧತಿ ಕೈಬಿಡುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಓ) ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಕ್ಸಿನ್‌ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಭಾರಿ ಗಂಡಾಂತರ ಎದುರಾಗುವ ಸಾಧ್ಯತೆಯಿದೆ.

Tap to resize

Latest Videos

ಏನಿದು ಸಮಸ್ಯೆ?: 1957ರಿಂದ ಮಲೆನಾಡಿನ ಕಾಡಂಚಿನ ಗ್ರಾಮಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆಗೆ ಇದುವರೆಗೆ ನಿರ್ದಿಷ್ಟಔಷಧ ಕಂಡುಹಿಡಿಯಲಾಗಿಲ್ಲ. ಈ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿ ನಡೆದ ಸಂಶೋಧನೆಯಲ್ಲಿ ಆಗಿನ ತಂತ್ರಜ್ಞಾನದಲ್ಲಿ ಸಾಂಪ್ರದಾಯಿಕವಾಗಿ ತಯಾರಾದ ವ್ಯಾಕ್ಸಿನ್‌ನ್ನು ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗುತ್ತಿತ್ತು. ಪ್ರತಿ ವರ್ಷ ಅಕ್ಟೋಬರ್‌ನಿಂದ ಆರಂಭವಾಗಿ ಕೆಲವು ವರ್ಷಗಳಲ್ಲಿ ಎರಡು ಬಾರಿ ಮತ್ತು ಕೆಲವೊಮ್ಮೆ ಒಂದೇ ಬಾರಿ ವ್ಯಾಕ್ಸಿನ್‌ನ್ನು ಕಾಡಂಚಿನ ಜನರಿಗೆ ನೀಡಲಾಗುತ್ತಿತ್ತು. ಇದರ ಜೊತೆಗೆ ಜನರು ಕಾಡಿಗೆ ಹೋಗುವ ಉಣ್ಣೆಯಿಂದ ಪಾರಾಗಲು ಡಿಎಂಪಿ ಆಯಿಲ್‌ನ್ನು ಮೈಗೆ ಲೇಪಿಸಿಕೊಳ್ಳಲು ನೀಡಲಾಗುತ್ತಿತ್ತು. ಇದರ ನಡುವೆಯೂ ಪ್ರತಿ ವರ್ಷ ಅನೇಕರು ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದರು.

ಅತಿಯಾದ ಅಭಿವೃದ್ಧಿ ಕಾಮಗಾರಿಗಳಿಂದ ಪ್ರಾಕೃತಿಕ ಸೊಬಗು ಕಣ್ಮರೆ: ಸುರೇಶ್‌ ಹೆಬ್ಳಿಕರ್‌

ಮೂರು ವರ್ಷಗಳ ಹಿಂದೆ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆಗೆ ಸುಮಾರು 23ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಸರ್ಕಾರ ಸ್ವಲ್ಪ ಎಚ್ಚರಗೊಂಡಿತ್ತು. ಆರಂಭದಲ್ಲಿ ಶಿವಮೊಗ್ಗದಲ್ಲಿಯೇ ಲಸಿಕೆ ತಯಾರಿಕೆ ಪ್ರಯೋಗಾಲಯ ಇತ್ತಾದರೂ, ಸರಿಯಾದ ನಿರ್ವಹಣೆ, ಆಧುನಿಕ ಯಂತ್ರೋಪಕರಣಗಳು ಇಲ್ಲದ ಕಾರಣ ಲಸಿಕೆ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿತ್ತು. ಇದಾದ ಬಳಿಕ ಇದನ್ನು ಬೆಂಗಳೂರಿನ ಹೆಬ್ಬಾಳದ ಐಹೆಚ್‌ವಿ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸದ್ಯ ಅಲ್ಲಿಯೇ ಉತ್ಪಾದನೆಯಾಗುತ್ತಿತ್ತು.

ಡಬ್ಲ್ಯೂಎಚ್‌ಓ ಆದೇಶವೇನು?: ಆದರೆ, ವೈರಸ್‌ನ್ನು ನಿಷ್ಕ್ರಿಯಗೊಳಿಸಿ ವ್ಯಾಕ್ಸಿನ್‌ ತಯಾರಿಸುವ ಸಾಂಪ್ರದಾಯಿಕ ಪದ್ಧತಿ ಕೈಬಿಟ್ಟು, ಹೊಸ ತಂತ್ರಜ್ಞಾನ ಬಳಸಿ ವ್ಯಾಕ್ಸಿನ್‌ ಉತ್ಪಾದಿಸುವಂತೆ ಡಬ್ಲ್ಯೂಎಚ್‌ಓ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನ್‌ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸದ್ಯ ಐಎಚ್‌ವಿ ಬಳಿ ಯಾವುದೇ ಲಸಿಕೆ ಸಂಗ್ರಹವಿಲ್ಲ. ಹೊಸ ತಂತ್ರಜ್ಞಾನ ಬಳಸಿ ವ್ಯಾಕ್ಸಿನ್‌ ಉತ್ಪಾದಿಸುವ ಕುರಿತಾದ ಸಂಶೋಧನೆಯನ್ನು ಐಸಿಎಂಆರ್‌ ಅಥವಾ ಪುಣೆಯ ಎನ್‌ಐವಿ ಮಾಡಬೇಕು. ಅಥವಾ ಖಾಸಗಿ ಔಷಧ ಉತ್ಪಾದನಾ ಸಂಸ್ಥೆಗಳು ಮಾಡಬೇಕು.

ಮಂಗನ ಕಾಯಿಲೆ ಸೀಮಿತ ಪ್ರದೇಶದ ಸಮಸ್ಯೆ ಆಗಿರುವುದರಿಂದ ಮತ್ತು ವರ್ಷಕ್ಕೆ ಸರಿ ಸುಮಾರು 2.3 ಲಕ್ಷ ಡೋಸ್‌ಗಳಷ್ಟುಮಾತ್ರ ಅಗತ್ಯ ಇರುವುದರಿಂದ ಖಾಸಗಿ ಸಂಸ್ಥೆಗಳು ಈ ಕುರಿತು ಸಂಶೋಧನೆಗೆ ಆಸಕ್ತಿ ತೋರುತ್ತಿಲ್ಲ. ಇನ್ನು, ಸರ್ಕಾರಿ ಸಂಶೋಧನಾ ಸಂಸ್ಥೆಗಳು ತಕ್ಷಣಕ್ಕೆ ಸಂಶೋಧನೆ ಆರಂಭಿಸಿ ಫಲಿತಾಂಶ ನೀಡುವುದು ಸಾಧ್ಯವಿಲ್ಲದ ಮಾತು. ಹೀಗಾಗಿ, ಸದ್ಯಕ್ಕೆ ಕೆಎಫ್‌ಡಿ ಲಸಿಕೆ ಜನರ ಪಾಲಿಗೆ ಮರೀಚಿಕೆಯಾಗುವ ಎಲ್ಲ ಸಾಧ್ಯತೆ ಇದೆ.

ದೀಪಾ ಆಯಿಲ್‌ ಪರಿಣಾಮಕಾರಿ: ಸಾಮಾನ್ಯವಾಗಿ ಅಕ್ಟೋಬರ್‌ ಮಧ್ಯ ಭಾಗದಿಂದ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್‌ ನೀಡಲಾಗುತ್ತಿತ್ತು. ಆರಂಭದಲ್ಲಿ ಎರಡು ಡೋಸ್‌ ನೀಡಲಾಗುತ್ತಿತ್ತು. ಕೆಲವೊಮ್ಮೆ ಬೂಸ್ಟರ್‌ ಡೋಸ್‌ ನೀಡಿದ್ದೂ ಇದೆ. ಕೆಲವು ವರ್ಷಗಳಲ್ಲಿ ಒಂದೇ ಡೋಸ್‌ ನೀಡಲಾಗಿದೆ. ಆದರೆ, ಈ ಬಾರಿ ಅಕ್ಟೋಬರ್‌ ಮಧ್ಯ ಭಾಗಕ್ಕೆ ಬಂದರೂ ಇಲಾಖೆಯಿಂದ ಯಾವುದೇ ಚಟುವಟಿಕೆ ಕಾಣಿಸದೆ ಇರುವುದು ಕಾಡಂಚಿನ ಗ್ರಾಮಸ್ಥರಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬ ಸಂಶಯ ಮೂಡಲು ಕಾರಣವಾಗಿದೆ. ವ್ಯಾಕ್ಸಿನ್‌ ಜೊತೆಗೆ ಕಾಡಿಗೆ ತೆರಳುವ ಜನರಿಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್‌ನ್ನು ಪೂರೈಸಲಾಗುತ್ತಿದೆ. ಇದರಿಂದ ರೋಗ ಹರಡುವ ಉಣ್ಣೆಗಳು ಮೈಗೆ ಹತ್ತುವುದಿಲ್ಲ. ಸದ್ಯ ಈ ಎಣ್ಣೆಯ ಬದಲಿಗೆ ದೀಪಾ ಆಯಿಲ್‌ ಎಂಬ ಹೊಸ ಆಯಿಲ್‌ ನೀಡಲಾಗುತ್ತಿದ್ದು, ಇದು ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್‌

ಸುತ್ತೋಲೆ: 2022ರ ಅಕ್ಟೋಬರ್‌ 10ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಾಲಯದಿಂದ ಶಿವಮೊಗ್ಗ ವೈರಾಣು ರೋಗ ಸಂಶೋಧನಾ ಕೇಂದ್ರ(ವಿಡಿಎಲ್‌)ದ ನಿರ್ದೇಶಕರು ಮತ್ತು ಸೋಂಕು ವ್ಯಾಪ್ತಿಯ ಜಿಲ್ಲೆಗಳಲ್ಲಿ ಡಿಹೆಚ್‌ಓಗಳಿಗೆ ಸುತ್ತೋಲೆಯೊಂದು ಬಂದಿದೆ. ಇದು ಪರಿಸ್ಥಿತಿಯ ಸ್ಪಷ್ಟತೆಯನ್ನು ವಿವರಿಸಿದೆ. ಈ ಸುತ್ತೋಲೆ ಹೀಗಿದೆ. ‘ಈ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ದಿಷ್ಟಔಷಧ/ಚಿಕಿತ್ಸೆ ಇರುವುದಿಲ್ಲ. ಪ್ರಸ್ತುತ ಕೆಎಫ್‌ಡಿ ಲಸಿಕೆ ತಯಾರಿಕೆಯನ್ನು ನಿಲ್ಲಿಸಿದ್ದು, ದಾಸ್ತನು ಲಭ್ಯವಿರುವುದಿಲ್ಲ. ಲಸಿಕೆ ತಯಾರಿಕಾ ಕಾರ್ಯ ಪ್ರಗತಿಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಸಂಭವಿಸುವ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೆಎಫ್‌ಡಿ ರೋಗಕ್ಕೆ ಸಂಬಂಧಸಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಆದ್ಯ ಜವಾಬ್ದಾರಿಯಾಗಿರುತ್ತದೆ.’

ಶಿವಮೊಗ್ಗಕ್ಕೆ ವಿಎಲ್‌ಆರ್‌ಸಿ (ವೆಕ್ಟರ್‌ ಕಂಟ್ರೋಲ್‌ ರಿಸರ್ಚ್‌ ಸೆಂಟರ್‌) ಬರಲಿದೆ. ಇದು ಐಸಿಎಂಆರ್‌ನ ಶಾಖೆಯಾಗಿದೆ. ಇದರಿಂದ ಈ ಭಾಗದಲ್ಲಿ ಕೆಎಫ್‌ಡಿ ಕುರಿತು ಇನ್ನಷ್ಟುಸಂಶೋಧನೆ ಮಾಡಲು ಸಾಧ್ಯವಾಗುತ್ತದೆ.
- ಡಾ.ಹರ್ಷವರ್ಧನ್‌, ಉಪನಿರ್ದೇಶಕ, ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗ ಶಾಲೆ.

click me!